SOCIAL MEDIA

Newsletter

PARTNER SITES
Select Language Select State

ಕೇವಲ ಐದು ಸಾವಿರ ರೂಪಾಯಿ ಆಸೆಗೆ ಕೊಲೆ; ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್!

ತಮಿಳುನಾಡಿನ ಸಾರಕ್ಕನಪಲ್ಲಿ ನಿವಾಸಿ 56 ವರ್ಷದ ಯಲ್ಲಪ್ಪ, ಅಂಬಾರಿ ನೋಡಿಕೊಂಡು ಮಗಳ ಮನೆಗೆ ಹೋಗುವ ಆಲೋಚನೆಯಲ್ಲಿದ್ದ.

Written By Chetana Devarmani
Published: Oct 24, 2026, 03:49 PM IST | Updated: Oct 24, 2026, 03:51 PM IST
Join

ಬೆಂಗಳೂರು: ಕೇವಲ ಐದು ಸಾವಿರ ರೂಪಾಯಿ ಹಣಕ್ಕಾಗಿ ವ್ಯಕ್ತಿಯೊಬ್ಬನನ್ನೇ ಬರ್ಬರವಾಗಿ ಕೊಂದು ಹಾಕಿದ್ದಾನೆ. ದಸರಾ ಜಂಬೂ ಸವಾರಿ ನೋಡಲು ಬಂದಿದ್ದ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡು, ಕುಡಿಯುವ ನೆಪದಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದಿದ್ದ ಆರೋಪಿ, ಹಣ ಕದಿಯಲು ಹೋಗಿ ಸಿಕ್ಕಿಬಿದ್ದಾಗ ರಪೀಸ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ತಾನೇ ಪೊಲೀಸರಿಗೆ ಕರೆ ಮಾಡಿ, ಏನೂ ಗೊತ್ತಿಲ್ಲದವನಂತೆ ನಾಟಕವಾಡಿದ್ದಾನೆ. ಆದರೆ ಪೊಲೀಸರ ತನಿಖೆಯ ಮುಂದೆ ಈತನ ಆಟ ನಡೆಯಲಿಲ್ಲ. ಸಿಡಿಆರ್ ಲೊಕೇಶನ್ ಮತ್ತು ಧ್ವನಿಯ ಸುಳಿವು ಆಧರಿಸಿ ಕೊಲೆ ಆರೋಪಿಯನ್ನು ಆನೇಕಲ್ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಐದು ಸಾವಿರ ರೂಪಾಯಿಗಾಗಿ ನಡೆದ ಈ ಭೀಕರ ಕೊಲೆಯ ಹಿಂದಿನ ರಹಸ್ಯವೇನು, ಇಲ್ಲಿದೆ ನೋಡಿ ಕಂಪ್ಲೀಟ್ ಸ್ಟೋರಿ.

ದಸರಾ ಜಂಬೂ ಸವಾರಿ ನೋಡಲು ಬಂದಿದ್ದ ಯಲ್ಲಪ್ಪನಿಗೆ ಸಾವಿನ ರೂಪದಲ್ಲಿ ಎದುರಾಗಿದ್ದಾನೆ ಈ ಆರೋಪಿ ಸಾಗರ್. ತಮಿಳುನಾಡಿನ ಸಾರಕ್ಕನಪಲ್ಲಿ ನಿವಾಸಿ 56 ವರ್ಷದ ಯಲ್ಲಪ್ಪ, ಅಂಬಾರಿ ನೋಡಿಕೊಂಡು ಮಗಳ ಮನೆಗೆ ಹೋಗುವ ಆಲೋಚನೆಯಲ್ಲಿದ್ದ. ಅಷ್ಟೇ ಅಲ್ಲ ಪತ್ನಿಗೆ ಫೋನ್ ಮಾಡಿ ಅಂಬಾರಿ ನೋಡಲು ಬಂದಿರುವುದಾಗಿಯೂ ತಿಳಿಸಿದ್ದ. ಆದರೆ ಅಂದು ರಾತ್ರಿ ನಡೆದ ಒಂದು ಸಣ್ಣ ಹಣದ ವಿಚಾರ ಯಲ್ಲಪ್ಪನ ಪ್ರಾಣವನ್ನೇ ಬಲಿ ಪಡೆದಿದೆ. ಕಳೆದ 21 ರಂದು ಮಧ್ಯರಾತ್ರಿ ಆನೇಕಲ್ ಪಟ್ಟಣದ ಚಿಕ್ಕಕೆರೆ ಸ್ಟೇಡಿಯಂನಲ್ಲಿ ಯಲ್ಲಪ್ಪ ರಕ್ತದ ಮಡುವಿನಲ್ಲಿ ಬಿದ್ದಿದ್ದ. ತಲೆಗೆ ಗಂಭೀರ ಗಾಯವಾಗಿದ್ದ ಯಲ್ಲಪ್ಪನನ್ನು ಗಮನಿಸಿದ ಪೊಲೀಸರು, ಜೀವ ಉಳಿಸಬಹುದು ಎಂಬ ಆಶಯದೊಂದಿಗೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟರಲ್ಲಾಗಲೇ ಯಲ್ಲಪ್ಪ ಕೊನೆಯುಸಿರೆಳೆದಿದ್ದ. ಪ್ರಕರಣ ದಾಖಲಿಸಿಕೊಂಡ ಆನೇಕಲ್ ಪೊಲೀಸರು ಕೊಲೆಗಾರನಿಗಾಗಿ ಬಲೆ ಬೀಸಿದ್ದರು. ಆದರೆ ಈ ಕೊಲೆ ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಎದುರಾಗಿದ್ದೇ ಒಂದು ದೊಡ್ಡ ಸವಾಲು. ಯಾಕಂದ್ರೆ ಕೊಲೆ ಮಾಡಿದವನೇ ಪೊಲೀಸರಿಗೆ ಕರೆ ಮಾಡಿ, ಯಾರೋ ವ್ಯಕ್ತಿ ಸ್ಟೇಡಿಯಂನಲ್ಲಿ ಬಿದ್ದಿದ್ದಾರೆ ಎಂದು ಮಾಹಿತಿ ನೀಡಿದ್ದ. ಪೊಲೀಸರೇ ಸ್ಥಳಕ್ಕೆ ಬಂದು ಯಲ್ಲಪ್ಪನನ್ನು ಆಸ್ಪತ್ರೆಗೆ ಸಾಗಿಸುವವರೆಗೂ ಆರೋಪಿ ಅಲ್ಲೇ ಇದ್ದು, ಎಲ್ಲವನ್ನೂ ಗಮನಿಸುತ್ತಿದ್ದ. ಕೊನೆಗೆ ಪೊಲೀಸರ ಕಣ್ಣಿಗೆ ಮಣ್ಣೆರಚಿ ಅಲ್ಲಿಂದ ಎಸ್ಕೇಪ್ ಆಗಿದ್ದ.

ಇನ್ನು ಬಂಧಿತ ಆರೋಪಿ ಜಿಗಣಿ ನಿವಾಸಿ 19 ವರ್ಷದ ಸಾಗರ್. ಕಸದ ಮಡುವುನಲ್ಲಿ ಬಿದ್ದಿದ್ದ ಈತನನ್ನು ಗಂಡು ಮಕ್ಕಳಿಲ್ಲದ ಒಂದು ದಂಪತಿ, ತಂದು ಸಾಕಿಕೊಂಡಿದ್ದರು ಎನ್ನಲಾಗಿದೆ. ಎಲ್ಲವು ಚೆನ್ನಾಗೆ ನಡೆದುಕೊಂಡು ಬರುತ್ತಿತ್ತು.ಆದರೆ ಈ ಖತರ್ನಾಕ್ ಸಾಗರ ಕಳೆದ ಮೂರು ವರ್ಷದಿಂದ ತನ್ನ ಕರ್ಚಿಗಾಗಿ ಮನೆಯಲ್ಲೆ ಕಳ್ಳತನ ಮಾಡಲು ಶುರು ಮಾಡಿಕೊಂಡಿದ್ದ ಎನ್ನಲಾಗಿದೆ. ಇನ್ನು ಪೊಲೀಸರ ವಿಚಾರಣೆ ವೇಳೆ ಈತ ಬಾಯ್ಬಿಟ್ಟಿರುವ ಮಾಹಿತಿ ಬೆಚ್ಚಿಬೀಳಿಸುವಂತಿದೆ. ಪರಿಚಯವಿಲ್ಲದವರನ್ನು ಮಾತನಾಡಿಸಿ ಮದ್ಯ ಕುಡಿಯುವ ನೆಪದಲ್ಲಿ ಹತ್ತಿರವಾಗುತ್ತಿದ್ದ ಸಾಗರ್, ಬಳಿಕ ಅವರ ಹಣ ಕದಿಯಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಅದೇ ರೀತಿ ಅಂದು ಬಸ್ ನಿಲ್ದಾಣದಲ್ಲಿದ್ದ ಯಲ್ಲಪ್ಪನನ್ನು ಪರಿಚಯ ಮಾಡಿಕೊಂಡು ಎಣ್ಣೆ ಹಾಕೋಣ ಎಂದು ಸ್ಟೇಡಿಯಂ ಬಳಿಗೆ ಕರೆದೊಯ್ದಿದ್ದ. ಇಬ್ಬರೂ ಮದ್ಯ ಸೇವಿಸುತ್ತಿದ್ದ ವೇಳೆ ಯಲ್ಲಪ್ಪನ ಜೇಬಿನಲ್ಲಿದ್ದ ಹಣದ ಮೇಲೆ ಸಾಗರ್ ಕಣ್ಣಿಟ್ಟಿದ್ದ. ಹಣ ಕದಿಯಲು ಮುಂದಾದಾಗ ಯಲ್ಲಪ್ಪ ಪ್ರತಿರೋಧ ವ್ಯಕ್ತಪಡಿಸಿದ್ದ. ಈ ವೇಳೆ ಸಿಟ್ಟಿಗೆದ್ದ ಸಾಗರ್, ಅಲ್ಲೇ ಇದ್ದ ರಿಫೀಸ್‌ನಿಂದ ಯಲ್ಲಪ್ಪನ ತಲೆಗೆ ಬಲವಾಗಿ ಹೊಡೆದಿದ್ದಾನೆ ಎನ್ನಲಾಗಿದೆ. ತೀವ್ರ ಗಾಯಗೊಂಡ ಯಲ್ಲಪ್ಪ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೆ, ಆತನ ಬಳಿಯಿದ್ದ ಹಣ, ಮೊಬೈಲ್ ಮತ್ತು ಎಟಿಎಂ ಕಾರ್ಡ್ ತೆಗೆದುಕೊಂಡು ಸಾಗರ್ ಅಲ್ಲಿಂದ ಪರಾರಿಯಾಗಿದ್ದ.

ಇನ್ನು ಕೊಲೆ ಮಾಡಿದ ಬಳಿಕವೂ ಆರೋಪಿ ಸಾಗರ್ ತಲೆಕೆಡಿಸಿಕೊಳ್ಳದೆ ಅಲ್ಲೇ ಇದ್ದ ಪಲ್ಲಕ್ಕಿ ವಾಹನದಲ್ಲಿ ಕುಳಿತುಕೊಂಡಿದ್ದ. ನಂತರ ಕೊಲೆಯಾದ ಯಲ್ಲಪ್ಪನ ಮೊಬೈಲ್ ನಿಂದಲೆ 112ಕ್ಕೆ ಕರೆ ಮಾಡಿ, ಯಾರೋ ಬಿದ್ದಿದ್ದಾರೆ ಎಂದು ಮಾಹಿತಿ ನೀಡಿದ್ದ. ಪೊಲೀಸರು ಬಂದು ಯಲ್ಲಪ್ಪನನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕವೂ ಅಲ್ಲೇ ಕುಳಿತು ಪರಿಸ್ಥಿತಿಯನ್ನು ಗಮನಿಸಿದ್ದ. ಬಳಿಕ ಯಲ್ಲಪ್ಪನ ಮೊಬೈಲ್ ಬಳಸಿ ಉಬರ್ ಬುಕ್ ಮಾಡಿ, ಹಳೆ ಚಂದಾಪುರದ ಆರ್.ಕೆ. ಡಾಬಾಗೆ ತೆರಳಿ ಮದ್ಯ ಸೇವಿಸಿದ್ದ. ಅಲ್ಲಿಂದ ಮತ್ತೆ ಆನೇಕಲ್‌ಗೆ ಬಂದು, ಬಿಎಂಟಿಸಿ ಬಸ್‌ನಲ್ಲಿ ಬೆಂಗಳೂರಿನ ಕಡೆಗೆ ತೆರಳಿದ್ದ. ಇತ್ತ ಕೊಲೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಯಲ್ಲಪ್ಪನ ಮೊಬೈಲ್ ನಂಬರ್ ಮಹತ್ವದ ಸುಳಿವು ನೀಡಿತ್ತು. ಆ ನಂಬರ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ್ದ ವ್ಯಕ್ತಿ, ತಾನು ಕೊಲೆ ಮಾಡಿಲ್ಲ ಎಂದು ಹೇಳಿ ಬೇರೆಯವರ ಹೆಸರನ್ನು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.ಸಿಡಿಆರ್ ಲೊಕೇಶನ್ ಆಧರಿಸಿ ತನಿಖೆ ಮುಂದುವರಿಸಿದ ಪೊಲೀಸರು, ಆರೋಪಿಯ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಈ ವೇಳೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯ ಧ್ವನಿ ಪೊಲೀಸರಿಗೆ ಪರಿಚಿತವೆನಿಸಿತ್ತು. ಈ ಹಿಂದೆ ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಸಿಕ್ಕಿಬಿದ್ದು, ಆನೇಕಲ್ ಪೊಲೀಸರಿಂದ ಎಚ್ಚರಿಕೆ ಪಡೆದು ಹೋಗಿದ್ದ ಸಾಗರ್ ಮೇಲೆಯೇ ಪೊಲೀಸರಿಗೆ ಅನುಮಾನ ಮೂಡಿತ್ತು. ಆತನ ಧ್ವನಿಯ ಆಡಿಯೋವನ್ನು ಸ್ನೇಹಿತರಿಗೆ ಕೇಳಿಸಿದಾಗ, ಅದು ಸಾಗರ್‌ನ ಧ್ವನಿಯೇ ಎಂದು ಅವರು ಗುರುತಿಸಿದ್ದರು ಎನ್ನಲಾಗಿದೆ.ಇದೇ ಸುಳಿವನ್ನು ಆಧರಿಸಿ ಸಾಗರ್‌ನ ಬೆನ್ನುಬಿದ್ದ ಆನೇಕಲ್ ಪೊಲೀಸರು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣದ ರಹಸ್ಯ ಬಯಲಾಗಿದೆ. ಹಣದ ಆಸೆಗೆ ಯಲ್ಲಪ್ಪನನ್ನು ಕೊಲೆ ಮಾಡಿರುವುದಾಗಿ ಆರೋಪಿ ಬಾಯ್ಬಿಟ್ಟಿದ್ದಾನೆ. ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಹೆತ್ತವರಲ್ಲದಿದ್ದರೂ ಕಸದ ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಮನೆಗೆ ತಂದು, ಸ್ವಂತ ಮಗನಿಗಿಂತಲೂ ಕಡಿಮೆಯಿಲ್ಲದಂತೆ ಪ್ರೀತಿಯಿಂದ ಸಾಕಿ, ಬೆಳೆಸಿ ದೊಡ್ಡವನನ್ನಾಗಿ ಮಾಡಿದ ತಂದೆ-ತಾಯಿಗೆ ವಯಸ್ಸಾದಾಗ ಆಸರೆಯಾಗಬೇಕಿದ್ದ ಮಗ, ಅವರ ಪ್ರೀತಿಗೆ ಬೆಲೆ ಕೊಡದೆ ನಡೆದುಕೊಳ್ಳುವ ಇಂತಹ ಘಟನೆಗಳು ಸಮಾಜದ ಮುಂದೆ ಹಲವು ಪ್ರಶ್ನೆಗಳನ್ನು ಎತ್ತುತ್ತವೆ. ಹೆತ್ತವರ ಪ್ರೀತಿ, ಅವರು ಮಾಡಿದ ತ್ಯಾಗ, ತಮ್ಮ ಬದುಕನ್ನೇ ಮಕ್ಕಳಿಗಾಗಿ ಮುಡಿಪಾಗಿಟ್ಟ ಅವರ ಶ್ರಮಕ್ಕೆ ಕೃತಜ್ಞತೆ ತೋರಬೇಕಾದ ಜಾಗದಲ್ಲಿ, ಮಾನವೀಯತೆಯನ್ನೇ ಮರೆತು ವರ್ತಿಸುವುದು ನಿಜಕ್ಕೂ ದುರಂತ. ಹಣಕ್ಕಿಂತ ಜೀವ ದೊಡ್ಡದು, ಆಸೆಗಿಂತ ಮಾನವೀಯತೆ ದೊಡ್ಡದು ಎಂಬ ಸತ್ಯವನ್ನು ಮರೆತಾಗ ಇಂತಹ ದುರಂತಗಳು ಸಂಭವಿಸುತ್ತವೆ. ಕ್ಷಣಿಕ ಲಾಭಕ್ಕಾಗಿ ಇನ್ನೊಬ್ಬರ ಜೀವವನ್ನೇ ಕಸಿದುಕೊಳ್ಳುವ ಮನಸ್ಥಿತಿ ಸಮಾಜಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES