SOCIAL MEDIA

Newsletter

PARTNER SITES
Select Language Select State

ಸಚಿವರ ದಿಢೀರ್‌ ಭೇಟಿ ಎಫೆಕ್ಟ್‌.. ಪಾಲಿಕೆ ಕಾಮಗಾರಿಗಳ ಪರಿಶೀಲನೆಗೆ ಇಳಿದ ಲೋಖಂಡೆ ಸ್ನೇಹಲ್‌ ಸುಧಾಕರ್‌

ವರ್ತೂರು ಫ್ಲೈಓವರ್ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗಳಿಗೆ ಅಡ್ಡಿಯಾಗಿರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಬಾಕಿ ಉಳಿದಿರುವ ಕಡತಗಳನ್ನು ಪರಿಶೀಲಿಸಲಾಯಿತು.

Written By Bhimappa
Published: Oct 07, 2026, 12:20 PM IST | Updated: Oct 07, 2026, 12:28 PM IST
Image Credit: Municipal
Join

Municipal Commissioner Lokhande Snehal Sudhakar: ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ನಗರದ ವಿವಿಧ ಪ್ರದೇಶಗಳಿಗೆ ಇತ್ತೀಚೆಗೆ ನೀಡಿದ ದಿಢೀರ್ ಭೇಟಿಗಳು ಮತ್ತು ಸಾರ್ವಜನಿಕರ ದೂರುಗಳ ಬೆನ್ನಲ್ಲೇ, ಪಾಲಿಕೆ ಅಧಿಕಾರಿಗಳು ಸಂಪೂರ್ಣವಾಗಿ ಎಚ್ಚೆತ್ತುಕೊಂಡಿದ್ದಾರೆ. ಇದರ ಭಾಗವಾಗಿ ಇಂದು ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ನೇರವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುರ್ತು ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ವಿಳಂಬ ಧೋರಣೆಗೆ ಅವಕಾಶ ನೀಡದೆ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

ವರ್ತೂರು ಹಾಗೂ ಗುಂಜೂರು ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ತೀವ್ರ ತೊಂದರೆ ಆಗುತ್ತಿರುವ ರಸ್ತೆ ಮತ್ತು ಫ್ಲೈಓವರ್ ಕಾಮಗಾರಿಗಳ ಪ್ರಗತಿಯನ್ನು ಅಪರ ಆಯುಕ್ತರು ಕೂಲಂಕಷವಾಗಿ ಪರಿಶೀಲನೆ ಮಾಡಿದರು. ಈ ಕಾಮಗಾರಿಗಳು ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ನಿಗದಿತ ಅವಧಿಯೊಳಗೆ ಮುಗಿಸಬೇಕು ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಮಳೆಯಿಂದ ಹಾಗೂ ಗುಂಡಿಗಳಿಂದಾಗಿ ವಾಹನ ಸವಾರರು ಪಡುತ್ತಿರುವ ಪಾಡನ್ನು ಮನಗಂಡು, ರಸ್ತೆ ಗುಂಡಿಗಳನ್ನು ತಕ್ಷಣವೇ ದುರಸ್ತಿಪಡಿಸಿ ಸುಗಮ ಹಾಗೂ ಸುರಕ್ಷಿತ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.

ರಸ್ತೆ ಅಭಿವೃದ್ಧಿ ಕಾರ್ಯಗಳಲ್ಲಿ ಸಮಯವನ್ನು ಉಳಿಸುವ ನಿಟ್ಟಿನಲ್ಲಿ ಪ್ರಮುಖ ನಿರ್ದೇಶನಗಳನ್ನು ನೀಡಿದ ಅವರು, ರಸ್ತೆ ಅಗಲೀಕರಣ ಅಥವಾ ಅಭಿವೃದ್ಧಿಗಾಗಿ ಭೂಸ್ವಾಧೀನ ಪ್ರಕ್ರಿಯೆ ಅಗತ್ಯವಿಲ್ಲದ ಕಡೆಗಳಲ್ಲಿ, ಬೇರೆ ಭೂಸ್ವಾಧೀನ ಪ್ರಕರಣಗಳಿಗಾಗಿ ಕಾಯುತ್ತಾ ಕಾಲಹರಣ ಮಾಡಬಾರದು ಎಂದು ಸೂಚಿಸಿದರು. ಬದಲಾಗಿ, ಈಗಾಗಲೇ ಲಭ್ಯವಿರುವ ರಸ್ತೆಯ ಅಗಲವನ್ನೇ ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡು ರಸ್ತೆ ಅಭಿವೃದ್ಧಿ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ತಿಳಿಸಿದರು. ಅಲ್ಲದೆ, ಅಗತ್ಯವಿರುವ ಕಡೆಗಳಲ್ಲಿ ತಾತ್ಕಾಲಿಕವಾಗಿ ಜಲ್ಲಿ ಕಲ್ಲುಗಳನ್ನು ಹಾಕಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನು ಕಲ್ಪಿಸಿಕೊಡುವಂತೆ ಅವರು ಸ್ಪಷ್ಟಪಡಿಸಿದರು.

ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆ ಮತ್ತು ಒಳಚರಂಡಿ ಅವ್ಯವಸ್ಥೆಯನ್ನು ತಪ್ಪಿಸಲು ರಸ್ತೆ ಕಾಮಗಾರಿಗಳ ಜೊತೆಜೊತೆಗೆ ಸಮನ್ವಯ ಸಾಧಿಸಿ ಸೈಡ್ ಡ್ರೈನ್ ಚರಂಡಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸೂಚಿಸಲಾಯಿತು. ವಿಶೇಷವಾಗಿ ಅವಶ್ಯವಿರುವ ಕಡೆಗಳಲ್ಲಿ ದೊಡ್ಡ ಪೈಪ್‌ಲೈನ್‌ಗಳು ಹಾಗೂ ಪೈಪ್ ಕಲ್ವರ್ಟ್‌ಗಳನ್ನು ಅಳವಡಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಶಾಶ್ವತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಸ್ಥಳದಲ್ಲಿದ್ದ ಇಂಜಿನಿಯರ್‌ಗಳಿಗೆ ನಿರ್ದೇಶನ ನೀಡಲಾಯಿತು.

ವರ್ತೂರು ಫ್ಲೈಓವರ್ ಸೇರಿದಂತೆ ವಿವಿಧ ರಸ್ತೆ ಕಾಮಗಾರಿಗಳಿಗೆ ಅಡ್ಡಿಯಾಗಿರುವ ಭೂಸ್ವಾಧೀನ ಪ್ರಕ್ರಿಯೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ಬಾಕಿ ಉಳಿದಿರುವ ಕಡತಗಳನ್ನು ಪರಿಶೀಲಿಸಲಾಯಿತು. ಯಾವ ಸ್ಥಳಗಳಲ್ಲಿ ಭೂಮಾಲೀಕರು ಸ್ವಯಂಪ್ರೇರಿತರಾಗಿ ಭೂಮಿ ಬಿಟ್ಟುಕೊಡಲು ಸಿದ್ಧರಿದ್ದಾರೋ, ಅಂತಹ ಕಡೆಗಳಲ್ಲಿ ತಕ್ಷಣವೇ ಜಾಗವನ್ನು ಸ್ವಾಧೀನಕ್ಕೆ ಪಡೆದುಕೊಂಡು ಕಾಮಗಾರಿಯನ್ನು ಆರಂಭಿಸಬೇಕು. ಗುಂಜೂರುಪಾಳ್ಯ ವ್ಯಾಪ್ತಿಯಲ್ಲಿ ಟಿ.ಡಿ.ಆರ್ TDR - Transfer of Development Rights ಗೆ ಸಂಬಂಧಿಸಿದ ಬಾಕಿ ವಿಷಯಗಳನ್ನು ಗಂಭೀರವಾಗಿ ಪರಿಶೀಲಿಸಿ, ನಿಯಮಾನುಸಾರ ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಇದಲ್ಲದೆ, ರಸ್ತೆ ಕಾಮಗಾರಿಗಳಿಗೆ ಅಡ್ಡಬರುತ್ತಿರುವ ವಿದ್ಯುತ್ ಕಂಬಗಳು, ಟ್ರಾನ್ಸ್‌ಫಾರ್ಮರ್‌ಗಳು, ಓವರ್‌ಹೆಡ್ ಕೇಬಲ್‌ಗಳು ಮತ್ತು ಇತರೆ ಉಪಯುಕ್ತತಾ ಸೇವೆಗಳ ಸ್ಥಳಾಂತರದ ಬಗ್ಗೆಯೂ ಚರ್ಚಿಸಲಾಯಿತು. ಬೆಸ್ಕಾಂ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳೊಂದಿಗೆ ಸೂಕ್ತ ಸಮನ್ವಯ ಸಾಧಿಸಿ, ಅಡೆತಡೆಗಳನ್ನು ಶೀಘ್ರವಾಗಿ ತೆರವುಗೊಳಿಸುವ ಮೂಲಕ ಕಾಮಗಾರಿಗೆ ವೇಗ ನೀಡುವಂತೆ ತಿಳಿಸಲಾಯಿತು. ಗುಂಜೂರು ಹಾಗೂ ಪಣತ್ತೂರು ಭಾಗಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸಂಚಾರ ನಿರ್ವಹಣೆಯನ್ನು ಸುಧಾರಿಸಲು ವಿಶೇಷ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಲಾಯಿತು. ಲಭ್ಯವಿರುವ ಸ್ಥಳಾವಕಾಶದಲ್ಲಿ ಸರ್ವೀಸ್ ರಸ್ತೆಗಳು, ಫ್ರೀ ಲೆಫ್ಟ್ ತಿರುವುಗಳು ಹಾಗೂ ಸೂಕ್ತ ಸಂಪರ್ಕ ರಸ್ತೆಗಳ ವ್ಯವಸ್ಥೆಯನ್ನು ಕಲ್ಪಿಸಿ ಸಾರ್ವಜನಿಕರಿಗೆ ಓಡಾಟ ಸುಲಭವಾಗಿಸಲು ತಿಳಿಸಲಾಯಿತು.

ವರ್ತೂರು–ಎಚ್‌ಪಿ ಪೆಟ್ರೋಲ್ ಬಂಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ದೊಡ್ಡ ತಡೆಯಾಗಿರುವ ಕಟ್ಟಡ ನಿರ್ಮಾಣ ತ್ಯಾಜ್ಯ Debris, ಮಣ್ಣು ಹಾಗೂ ಸಂಗ್ರಹವಾಗಿರುವ ಹೂಳನ್ನು ಕೂಡಲೇ ತೆರವುಗೊಳಿಸುವಂತೆ ಎಚ್ಚರಿಕೆ ನೀಡಲಾಗಿದೆ. ಕಚೇರಿಯ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಆದೇಶ ನೀಡುವ ಬದಲು, ಸ್ವತಃ ಹಿರಿಯ ಅಧಿಕಾರಿಗಳೇ ಫೀಲ್ಡಿಗೆ ಸಮಸ್ಯೆ ಇರುವ ಸ್ಥಳಕ್ಕೆ ಹೋಗಿ ಕೆಲಸ ಮಾಡುವುದರಿಂದ ಕಾಮಗಾರಿಗಳ ವೇಗ ಗಣನೀಯವಾಗಿ ಹೆಚ್ಚಾಗಲಿದೆ ಎಂಬ ಸಂದೇಶವನ್ನು ಈ ದಿಢೀರ್ ಪರಿಶೀಲನೆಯು ನೀಡಿದೆ. ಅಪಾರ ಆಯುಕ್ತರ ಈ ಕಠಿಣ ಹಾಗೂ ಸಕ್ರಿಯ ಕ್ರಮದಿಂದಾಗಿ ಪಾಲಿಕೆ ಅಧಿಕಾರಿಗಳಲ್ಲಿಯೂ ಕಾರ್ಯವೈಖರಿಯಲ್ಲಿ ಚುರುಕು ಮೂಡಿದೆ. 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES