ಅಂಗಡಿ ಮುಂದೆ ನಿಂತಿದ್ದವನ ಮೇಲೆ ಲಾಂಗು-ಮಚ್ಚು ಬೀಸಿ ಹಲ್ಲೆ..!
ಜಯನಗರದಲ್ಲಿ ಲಾಂಗು-ಮಚ್ಚು ಬೀಸಿ ಅಟ್ಟಹಾಸ ಮೆರೆದಿದ್ದರು. ಸುಬ್ರಹ್ಮಣ್ಯಪುರದಲ್ಲೂ ಮಾರಕಾಸ್ತ್ರ ಜಳಪಿಸಿದ್ದಾರೆ. ಇದು ಪೊಲೀಸರಿಗೆ ಓಪನ್ ಚಾಲೆಂಜ್ ಮಾಡಿದಂತಿದೆ.
ಸಿಲಿಕಾನ್ ಸಿಟಿಯಲ್ಲಿ ಮಾರಕಾಸ್ತ್ರಗಳಿಂದ ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡೋದು ಕಾಮನ್ ಆಗಿಬಿಟ್ಟಿದೆ. ಇದರಿಂದ ಜನ ಆತಂಕದಲ್ಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊನ್ನೆ ಜಯನಗರದಲ್ಲಿ ಲಾಂಗು-ಮಚ್ಚು ಬೀಸಿ ಅಟ್ಟಹಾಸ ಮೆರೆದಿದ್ದರು. ಸುಬ್ರಹ್ಮಣ್ಯಪುರದಲ್ಲೂ ಮಾರಕಾಸ್ತ್ರ ಜಳಪಿಸಿದ್ದಾರೆ. ಇದು ಪೊಲೀಸರಿಗೆ ಓಪನ್ ಚಾಲೆಂಜ್ ಮಾಡಿದಂತಿದೆ.
ಕೈಯಲ್ಲಿ ರಕ್ತಸ್ರಾವವಾಗುತ್ತಿದ್ದು, ಬಟ್ಟೆ ಸುತ್ತಿಕೊಂಡು ನರಳಾಡುತ್ತಿರುವ ಯುವಕ. ಆಸ್ಪತ್ರೆ ಮುಂದೆ ಜಮಾಯಿಸಿರುವ ಜನ. ಇದಕ್ಕೆ ಕಾರಣ ಏಕಾಏಕಿ ಬಂದ ಪುಂಡರ ಗ್ಯಾಂಗ್ ಸಿಕ್ಕ ಸಿಕ್ಕವರ ಮೇಲೆ ಲಾಂಗು-ಮಚ್ಚು ಬೀಸಿ ಅಟ್ಟಹಾಸ ಮೆರೆದಿದ್ದು. ಹೌದು, ಕೆಂಗೇರಿ ಮುಖ್ಯ ರಸ್ತೆಯ ಅರೆಹಳ್ಳಿ ಗೇಟ್ ಬಳಿ ಕಳೆದ ಒಂದು ವರ್ಷದಿಂದ ಬಾಲಸುಬ್ರಹ್ಮಣ್ಯಂ ಎಂಬುವವರು ಮೀನು ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಸುಮಾರು ಎಂಟು ಗಂಟೆ ವೇಳೆಗೆ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರ ಗುಂಪು ಏಕಾಏಕಿ ಬೈಕ್‌ಗಳನ್ನು ನಿಲ್ಲಿಸಿ ಅಲ್ಲಿದ್ದವರ ಮೇಲೆ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿದೆ.ಇದನ್ನು ಕಂಡ ಜನ ದಿಕ್ಕಾಪಾಲಾಗಿ ಓಡಿಹೋಗಿದ್ದಾರೆ. ಘಟನೆಯಲ್ಲಿ ಅಂಗಡಿ ಮಾಲೀಕ ಬಾಲಸುಬ್ರಹ್ಮಣ್ಯಂ,ರವಿ ಸೇರಿದಂತೆ ಮೂವರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಇಲ್ಲಿ ಹಲ್ಲೆ ನಡೆಸುವುದಕ್ಕೂ ಮುನ್ನ ಸರ್ಕಲ್ ಮಾರಮ್ಮ ದೇವಾಲಯದ ಮುಂದೆ ನಿಂತಿದ್ದ ಕಿರಣ್ ಎಂಬ ಯುವಕನ ಮೇಲೂ ಇದೇ ಗುಂಪು ಹಲ್ಲೆ ಮಾಡಿದೆ ಎನ್ನಲಾಗಿದೆ. ಇಡೀ ಘಟನೆಯನ್ನು ಕಣ್ಣಾರೆ ಕಂಡ ಜನ ಹೆದರಿಕೊಂಡು ಸ್ಥಳದಿಂದ ಓಡಿಹೋಗಿದ್ದಾರೆ. ಸದ್ಯ ಘಟನೆಯಿಂದ ಸ್ಥಳೀಯರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಈಗಾಗಲೇ ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಸುಬ್ರಹ್ಮಣ್ಯಪುರ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಇಂತಹ ಪುಂಡ ಪೋಕರಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕದಿದ್ದರೆ ಜನ ನೆಮ್ಮದಿಯಾಗಿ ಓಡಾಡುವುದಕ್ಕೂ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗೋದು ಸತ್ಯ.ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು ಅನ್ನೋದು ಸ್ಥಳೀಯರ ಆಗ್ರಹವಾಗಿದೆ.