SOCIAL MEDIA

Newsletter

PARTNER SITES
Select Language Select State

ಸಿಎಂ ಜತೆ ಮಾತುಕತೆ ಯಶಸ್ವಿ: ಆಶಾ ಕಾರ್ಯಕರ್ತೆಯರ ವೇತನ ₹2,000 ಏರಿಕೆ, ಜನವರಿ 1ರಿಂದ ಜಾರಿ

ಕಳೆದ 12 ದಿನಗಳಿಂದ ನಡೆಸುತ್ತಿದ್ದ ಆಶಾ ಕಾರ್ಯಕರ್ತೆಯರ ಪ್ರತಿಭಟನೆಗೆ ಕೊನೆಗೂ ಮನ್ನಣೆ ಸಿಕ್ಕಿದ್ದು, ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಸಿಎಂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಆಶಾ ಕಾರ್ಯಕರ್ತೆಯರ ನಿಯೋಗದ ಜತೆ ನಡೆದ ಮೂರನೇ ಸುತ್ತಿನ ಮಹತ್ವದ ಮಾತುಕತೆಯ ಬಳಿಕ ಈ ಮಹತ್ವದ ತೀರ್ಮಾನ ಹೊರಬಿದ್ದಿದ್ದು, ಸಿಎಂ ಭರವಸೆಯ ಬೆನ್ನಲ್ಲೇ ಹೋರಾಟವನ್ನು ಹಿಂಪಡೆಯಲು ಕಾರ್ಯಕರ್ತೆಯರು ನಿರ್ಧರಿಸಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 28, 2026, 17:57 IST | Updated: Nov 28, 2026, 18:07 IST
Image Credit: ASHA workers
Join

ಬೆಂಗಳೂರು: ಹನ್ನೆರಡು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಗೆ ಕೊನೆಗೂ ಮನ್ನಣೆ ಸಿಕ್ಕಿದ್ದು, ಆಶಾ ಕಾರ್ಯಕರ್ತೆಯರ ಗೌರವಧನವನ್ನು ಎರಡು ಸಾವಿರ ರೂಪಾಯಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಸಿಎಂ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಆಶಾ ಕಾರ್ಯಕರ್ತೆಯರ ನಿಯೋಗದ ಜತೆ ನಡೆದ ಮಹತ್ವದ ಸಭೆಯ ಬಳಿಕ ಈ ತೀರ್ಮಾನ ಹೊರಬಿದ್ದಿದೆ.

ಆಶಾ ಕಾರ್ಯಕರ್ತೆಯರ ನಿಯೋಗದ ಜತೆ ಸಿಎಂ ಡಿಕೆ ಶಿವಕುಮಾರ್ ಅವರು ನಡೆಸಿದ ಮೂರನೇ ಸುತ್ತಿನ ಮಾತುಕತೆ ಇದಾಗಿದೆ. ಮಾತುಕತೆಗೂ ಮುನ್ನ ಸಿಎಂ ಅವರು ಆರ್ಥಿಕ ಇಲಾಖೆಯ ಅಧಿಕಾರಿಗಳ ಜತೆ ಪ್ರತ್ಯೇಕ ಸಭೆ ನಡೆಸಿ, ಆರ್ಥಿಕ ಸ್ಥಿತಿಗತಿ ಮತ್ತು ಬೇಡಿಕೆ ಈಡೇರಿಕೆಯ ಸಾಧಕ-ಬಾಧಕಗಳ ಬಗ್ಗೆ ಮಾಹಿತಿ ಪಡೆದರು. ಅಂತಿಮವಾಗಿ ಕಾರ್ಯಕರ್ತೆಯರ ಬೇಡಿಕೆಗೆ ಸ್ಪಂದಿಸಿದ ಸಿಎಂ, ಗೌರವಧನದಲ್ಲಿ ಎರಡು ಸಾವಿರ ರೂಪಾಯಿ ಏರಿಕೆ ಮಾಡುವುದಾಗಿ ಘೋಷಿಸಿದರು. ಸಭೆ ಮುಗಿಯುತ್ತಿದ್ದಂತೆ ಸಂತಸಗೊಂಡ ಆಶಾ ಕಾರ್ಯಕರ್ತೆಯರು ಸಿಎಂ ಡಿಕೆ ಶಿವಕುಮಾರ್ ಅವರಿಗೆ ಸನ್ಮಾನ ಮಾಡಿ ಕೃತಜ್ಞತೆ ಸಲ್ಲಿಸಿದರು. ಈ ಸಭೆ ಮುಗಿದ ಬಳಿಕ ಸಿಎಂ ದೆಹಲಿಗೆ ತೆರಳಲಿದ್ದಾರೆ.

ಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?
ಸಭೆಯ ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ಕಳೆದ ಹನ್ನೆರಡು ದಿನಗಳಿಂದ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಯುಟಿ ಖಾದರ್ ಅವರ ಜತೆ ಮಾತನಾಡುವಂತೆ ಹೇಳಿದ್ದೆ. ಕಳೆದ ಮೂರು ವರ್ಷಗಳಿಂದ ಗೌರವಧನ ಏರಿಕೆ ಆಗಿಲ್ಲ ಎಂಬುದು ಗಮನಕ್ಕೆ ಬಂದಿದೆ. ಹಿಂದೆ ಸಿದ್ದರಾಮಯ್ಯ ಅವರು ಮಾಡಿಕೊಡುವುದಾಗಿ ಹೇಳಿದ್ದರಂತೆ, ಆದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳು ಸಿಕ್ಕಿಲ್ಲ. ಅಲ್ಲದೆ, ಕೇಂದ್ರ ಸರ್ಕಾರ ಕೂಡ ತನ್ನ ಕಡೆಯ ವಂತಿಗೆಯನ್ನು ಜಾಸ್ತಿ ಮಾಡಿಲ್ಲ ಎಂದು ವಿವರಿಸಿದರು.

ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದಾಗ ಕೆಲವರು ಇವನ್ನು ಕಡಿಮೆ ಮಾಡಲು ಸಲಹೆ ಕೊಟ್ಟಿದ್ದರು. ಆದರೆ ನಾವು ಅದಕ್ಕೆ ಮಣಿಯಲಿಲ್ಲ. ಈಗ ಆಶಾ ಕಾರ್ಯಕರ್ತೆಯರ ಮನವಿಯನ್ನು ಒಪ್ಪಿಕೊಂಡು ಗೌರವಧನದಲ್ಲಿ ಎರಡು ಸಾವಿರ ರೂಪಾಯಿ ಏರಿಕೆ ಮಾಡಲು ತೀರ್ಮಾನ ಮಾಡಿದ್ದೇವೆ. ಜನವರಿ ಒಂದರಿಂದ ಈ ಏರಿಕೆ ಜಾರಿಗೆ ಬರಲಿದೆ. ಜತೆಗೆ ಇನ್ಸೆಂಟಿವ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನೂ ಕೊಡಲಿದ್ದೇವೆ ಎಂದು ಸಿಎಂ ಭರವಸೆ ನೀಡಿದರು.

ಪ್ರತಿಭಟನೆ ವೇಳೆ ಕಾರ್ಯಕರ್ತೆಯರಿಗೆ ಯಾವುದೇ ತೊಂದರೆ ಆಗಬಾರದು ಎಂದು ಪೊಲೀಸರಿಗೆ ಕಠಿಣವಾಗಿ ಸೂಚನೆ ನೀಡಿದ್ದೆ ಎಂದು ಇದೇ ವೇಳೆ ತಿಳಿಸಿದರು. ಇದೇ ವೇಳೆ, ಸರ್ಕಾರದಿಂದ ಲಿಖಿತ ಭರವಸೆ (ರಿಟನ್) ಕೊಟ್ಟಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, "ನಾನು ರಿಟನ್‌ನಲ್ಲಿ ಕೊಡುತ್ತಿಲ್ಲ. 'ವರ್ಡ್ ಪವರ್ ಈಸ್ ವರ್ಲ್ಡ್ ಪವರ್' (Word power is world power). ಅಧಿಕೃತ ಆದೇಶ ಹೊರಡಿಸುತ್ತೇನೆ. ಜನವರಿ ಒಂದನೇ ತಾರೀಖಿನಿಂದ ನಿಮಗೆ ಏರಿಕೆ ಹಣ ಸಿಗಲಿದೆ" ಎಂದು ಸ್ಪಷ್ಟಪಡಿಸಿದರು.

ಪ್ರತಿಭಟನೆ ಹಿಂಪಡೆಯಲು ನಿರ್ಧಾರ
ಸಿಎಂ ಅವರು ನೀಡಿದ ಈ ಭರವಸೆಯ ಬೆನ್ನಲ್ಲೇ ಪ್ರತಿಭಟನೆಗೆ ತೆರೆ ಎಳೆಯುವುದಾಗಿ ನಾಗಲಕ್ಷ್ಮೀ ತಿಳಿಸಿದ್ದಾರೆ. ಮುಖ್ಯಮಂತ್ರಿಗಳು ನೀಡಿರುವ ಆಶ್ವಾಸನೆಯ ಹಿನ್ನೆಲೆಯಲ್ಲಿ ಧರಣಿ ಹಾಗೂ ಪ್ರತಿಭಟನೆಯನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಇದರಿಂದ ಕಳೆದ ಸುಮಾರು ಎರಡು ವಾರಗಳಿಂದ ನಡೆಯುತ್ತಿದ್ದ ಆಶಾ ಕಾರ್ಯಕರ್ತೆಯರ ಹೋರಾಟ ಸುಖಾಂತ್ಯ ಕಂಡಂತಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES