SOCIAL MEDIA

Newsletter

PARTNER SITES
Select Language Select State

ಬೆಂಗಳೂರಿನಿಂದ ಟೇಕಾಫ್ ಆದ ವಿಮಾನಕ್ಕೆ ಹೈಜಾಕ್ ಬೆದರಿಕೆ! ಏರ್‌ಪೋರ್ಟ್‌ನಲ್ಲಿ ಫುಲ್ ಅಲರ್ಟ್; ತುರ್ತು ಭೂಸ್ಪರ್ಶ!

ಬೆಂಗಳೂರಿನಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಅಪಹರಣದ ಬೆದರಿಕೆಯ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ವಿಮಾನ ಟೇಕಾಫ್ ಆದ ಸುಮಾರು 30 ನಿಮಿಷಗಳ ಬಳಿಕ ಶೌಚಾಲಯದಲ್ಲಿ ಬೆದರಿಕೆ ಸಂದೇಶ ಪತ್ತೆಯಾಗಿತ್ತು. ತಕ್ಷಣ ವಿಮಾನವನ್ನ ಬೆಂಗಳೂರಿಗೆ ವಾಪಸ್ ಕರೆತಂದು ತುರ್ತು ಭೂಸ್ಪರ್ಶ ಮಾಡಿಸಲಾಯಿತು. ಬಳಿಕ 178 ಪ್ರಯಾಣಿಕರನ್ನ ಕೆಳಗಿಳಿಸಿ ವಿಮಾನದಲ್ಲಿ ತೀವ್ರ ಭದ್ರತಾ ತಪಾಸಣೆ ನಡೆಸಲಾಯಿತು.

Written By Puttaraj K Alur
Published: Nov 08, 2026, 07:02 IST | Updated: Nov 08, 2026, 07:13 IST
Image Credit: IndiGo Flight
Join

IndiGo Flight 6E-451: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಅಪಹರಣದ ಬೆದರಿಕೆಯ ಸಂದೇಶವಿರುವ ಚೀಟಿ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಬೆದರಿಕೆ ಸಂದೇಶ ಪತ್ತೆಯಾಗುತ್ತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನ ಮತ್ತೆ ಬೆಂಗಳೂರಿಗೆ ವಾಪಸ್ ಕರೆತರಲಾಯಿತು. ಬಳಿಕ ವಿಮಾನವನ್ನ ಪ್ರತ್ಯೇಕವಾಗಿರಿಸಿ ಭದ್ರತಾ ತಪಾಸಣೆ ನಡೆಸಲಾಯಿತು.

ವಿಮಾನದಲ್ಲಿನ ಶೌಚಾಲಯದಲ್ಲಿ ಪತ್ತೆಯಾದ ಬೆದರಿಕೆ ಚೀಟಿ!

ನವೆಂಬರ್ 7ರಂದು ಬೆಂಗಳೂರಿನಿಂದ ಲಕ್ನೋಗೆ ತೆರಳುತ್ತಿದ್ದ ಇಂಡಿಗೋ ವಿಮಾನ 6E-451ರಲ್ಲಿ ಈ ಘಟನೆ ನಡೆದಿದೆ. ವಿಮಾನ ಟೇಕಾಫ್ ಆದ ಸುಮಾರು 30 ನಿಮಿಷಗಳ ಬಳಿಕ ಪ್ರಯಾಣಿಕರೊಬ್ಬರು ವಿಮಾನದ ಶೌಚಾಲಯಕ್ಕೆ ತೆರಳಿದ್ದಾಗ ಅಲ್ಲಿ ಕೈಬರಹದ ಬೆದರಿಕೆ ಸಂದೇಶವಿರುವ ಚೀಟಿಯನ್ನ ಗಮನಿಸಿದ್ದಾರೆ. ಅದರಲ್ಲಿ ನಿಗದಿತ ಸಮಯಕ್ಕೆ ವಿಮಾನವನ್ನ ಅಪಹರಣ ಮಾಡಲಾಗುತ್ತದೆ ಎಂಬ ಎಚ್ಚರಿಕೆ ನೀಡಲಾಗಿತ್ತು ಎನ್ನಲಾಗಿದೆ.

ಚೀಟಿಯಲ್ಲಿದ್ದ ಸಂದೇಶವನ್ನ ಗಮನಿಸಿದ ಪ್ರಯಾಣಿಕ ತಕ್ಷಣವೇ ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಈ ವಿಚಾರವನ್ನ ಪೈಲಟ್‌ಗೆ ತಲುಪಿಸಿದ್ದಾರೆ. ಪರಿಸ್ಥಿತಿಯ ಗಂಭೀರತೆಯನ್ನ ಪರಿಗಣಿಸಿದ ಪೈಲಟ್‌ಗಳು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ, ನಿಗದಿತ ಸುರಕ್ಷತಾ ಕಾರ್ಯವಿಧಾನದಂತೆ ವಿಮಾನವನ್ನ ಬೆಂಗಳೂರಿಗೆ ವಾಪಸ್ ತಿರುಗಿಸಿದ್ದಾರೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಫುಲ್ ಎಮರ್ಜೆನ್ಸಿ!

ವಿಮಾನದಲ್ಲಿ ಅಪಹರಣದ ಬೆದರಿಕೆ ಸಂದೇಶ ಪತ್ತೆಯಾದ ಮಾಹಿತಿ ಲಭ್ಯವಾಗುತ್ತಿದ್ದಂತೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ಪೂರ್ಣ ಪ್ರಮಾಣದ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ವಿಮಾನ ಸುರಕ್ಷಿತವಾಗಿ ವಾಪಸ್ ಬಂದಿಳಿದ ಬಳಿಕ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಹಾಗೂ ವಿಮಾನಯಾನ ಕಾನೂನು ಜಾರಿ ಅಧಿಕಾರಿಗಳು ಪರಿಶೀಲನೆಯ ಜವಾಬ್ದಾರಿ ವಹಿಸಿಕೊಂಡರು.

ವಿಮಾನವನ್ನ ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಿ, ಸಂಪೂರ್ಣ ತಪಾಸಣೆಗೆ ಒಳಪಡಿಸಲಾಯಿತು. ಯಾವುದೇ ಸ್ಫೋಟಕ ಅಥವಾ ಅಪಾಯಕಾರಿ ವಸ್ತುಗಳಿವೆಯೇ ಎಂಬುದನ್ನ ಪತ್ತೆಹಚ್ಚಲು ಭದ್ರತಾ ಸಿಬ್ಬಂದಿ ಆಂಟಿ-ಸಬೋಟೇಜ್ ಪರಿಶೀಲನೆ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನ ಕೈಗೊಂಡರು. ವಿಮಾನದೊಳಗಿನ ಪ್ರತಿಯೊಂದು ಭಾಗವನ್ನೂ ಪರಿಶೀಲಿಸುವ ಮೂಲಕ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳಲು ಕ್ರಮ ವಹಿಸಲಾಯಿತು.

178 ಪ್ರಯಾಣಿಕರಿದ್ದ ವಿಮಾನದಲ್ಲಿ ಆತಂಕ!

ವರದಿಗಳ ಪ್ರಕಾರ, ಈ ಇಂಡಿಗೋ ವಿಮಾನದಲ್ಲಿ 178 ಪ್ರಯಾಣಿಕರಿದ್ದರು. ಬೆದರಿಕೆ ಸಂದೇಶ ಪತ್ತೆಯಾದ ಬಳಿಕ ವಿಮಾನವನ್ನ ಬೆಂಗಳೂರಿಗೆ ವಾಪಸ್ ಕರೆತರಲಾಗಿದ್ದು, ಪ್ರಯಾಣಿಕರನ್ನ ಕೆಳಗಿಳಿಸಿ ಭದ್ರತಾ ಪರಿಶೀಲನೆ ನಡೆಸಲಾಯಿತು. ಈ ಘಟನೆಯಿಂದ ಪ್ರಯಾಣಿಕರಿಗೆ ಅನಾನುಕೂಲ ಉಂಟಾಯಿತು. ಈ ಬಗ್ಗೆ ಇಂಡಿಗೋ ಸಂಸ್ಥೆಯ ವಕ್ತಾರರು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನವೆಂಬರ್ 7ರಂದು ಬೆಂಗಳೂರಿನಿಂದ ಲಕ್ನೋಗೆ ತೆರಳುತ್ತಿದ್ದ 6E-451 ವಿಮಾನದಲ್ಲಿ ಭದ್ರತಾ ಬೆದರಿಕೆ ವರದಿಯಾಗಿದೆ. 

ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಪ್ರಮಾಣಿತ ಕಾರ್ಯವಿಧಾನದ ಪ್ರಕಾರ ಅಗತ್ಯ ಭದ್ರತಾ ಪರಿಶೀಲನೆ ನಡೆಸಲು ಪೈಲಟ್‌ಗಳು ವಿಮಾನವನ್ನ ಮೂಲ ನಿಲ್ದಾಣಕ್ಕೆ ವಾಪಸ್ ಕರೆತರಲು ನಿರ್ಧರಿಸಿದರು ಎಂದು ತಿಳಿಸಿದ್ದಾರೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲಕ್ಕಾಗಿ ವಿಷಾದ ವ್ಯಕ್ತಪಡಿಸಿರುವ ವಿಮಾನಯಾನ ಸಂಸ್ಥೆ, ಅವರಿಗೆ ಉಪಾಹಾರ ಮತ್ತು ಅಗತ್ಯ ನೆರವು ಒದಗಿಸುವುದರ ಜೊತೆಗೆ ನಿರಂತರವಾಗಿ ಮಾಹಿತಿಯನ್ನ ನೀಡಲಾಗುತ್ತಿದೆ ಎಂದು ತಿಳಿಸಿದೆ. ಅಗತ್ಯ ಭದ್ರತಾ ಅನುಮತಿಗಳು ದೊರೆತ ಬಳಿಕ ವಿಮಾನ ತನ್ನ ಪ್ರಯಾಣವನ್ನ ಮುಂದುವರಿಸಲಿದೆ ಎಂದೂ ಹೇಳಿದೆ.

ಬೆದರಿಕೆ ಸಂದೇಶದ ಮೂಲ ಪತ್ತೆಗೆ ತನಿಖೆ!

ವಿಮಾನದ ಶೌಚಾಲಯದಲ್ಲಿ ಬೆದರಿಕೆ ಸಂದೇಶವಿರುವ ಚೀಟಿಯನ್ನ ಇಟ್ಟವರು ಯಾರು? ಯಾವ ಉದ್ದೇಶದಿಂದ ಈ ಸಂದೇಶವನ್ನ ಬರೆಯಲಾಗಿದೆ? ಎಂಬುದನ್ನ ಪತ್ತೆಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಂಬಂಧಪಟ್ಟವರ ಮಾಹಿತಿಯನ್ನ ಪರಿಶೀಲಿಸುವ ಮೂಲಕ ಚೀಟಿಯ ಮೂಲವನ್ನ ಪತ್ತೆಹಚ್ಚುವ ಪ್ರಯತ್ನ ನಡೆದಿದೆ.

ನಂತರದ ವರದಿಗಳ ಪ್ರಕಾರ, ಭದ್ರತಾ ಪರಿಶೀಲನೆಯ ಬಳಿಕ ಈ ಬೆದರಿಕೆಯನ್ನ ಹುಸಿ ಬೆದರಿಕೆ ಎಂದು ಪರಿಗಣಿಸಲಾಗಿದ್ದು, ವಿಮಾನ ಮತ್ತೆ ಲಕ್ನೋಗೆ ತನ್ನ ಪ್ರಯಾಣವನ್ನ ಮುಂದುವರಿಸಿದೆ. ಬೆಂಗಳೂರಿನಿಂದ ಹೊರಟಿದ್ದ ವಿಮಾನದಲ್ಲಿ ಪತ್ತೆಯಾದ ಒಂದು ಚೀಟಿ ಕೆಲಕಾಲ ಆತಂಕ ಸೃಷ್ಟಿಸಿದ್ದು, ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯನ್ನೂ ತುರ್ತು ಕಾರ್ಯಾಚರಣೆಗೆ ಸಜ್ಜುಗೊಳಿಸಿತ್ತು.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES