SOCIAL MEDIA

Newsletter

PARTNER SITES
Select Language Select State

ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನ: ಮೂರು ದಿನಗಳ ಕಾಲ ನಿರಂತರ ಸ್ವಚ್ಛತಾ ಕಾರ್ಯಾಚರಣೆ

ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದಡಿ ವಾರ್ಡ್ ನಂ. 15ರಲ್ಲಿ ತೀವ್ರ ಸ್ವಚ್ಛತಾ ಕಾರ್ಯಾಚರಣೆ (Intensive Cleaning) ಹಮ್ಮಿಕೊಳ್ಳಲಾಗಿದ್ದು, ಬ್ಯಾಟರಾಯನಪುರದಲ್ಲಿ ಮೂರು ದಿನಗಳ ಕಾಲ ನಿರಂತರ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

Written By Yashaswini V
Published: Sep 23, 2026, 03:22 PM IST | Updated: Sep 23, 2026, 03:25 PM IST
Join

ಬೆಂಗಳೂರು: ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದ ಅಂಗವಾಗಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 15ರಲ್ಲಿ ಇಂದು (ಸೆ. 23) ತೀವ್ರ ಸ್ವಚ್ಛತಾ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಸ್ಥಳೀಯ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (RWA) ಸದಸ್ಯರೊಂದಿಗೆ ವಾರ್ಡ್‌ನ ಬ್ಯಾಟರಾಯಣಪುರ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ದಿನಾಂಕ 18-09-2026ರಂದು ನೀಡಿರುವ ನಿರ್ದೇಶನದಂತೆ, ವಾರ್ಡ್‌ ರಸ್ತೆಗಳ ಹಾಗೂ ಪ್ರಮುಖ ರಸ್ತೆಗಳಲ್ಲಿರುವ ಕಸ, ಪಾದಚಾರಿ ಮಾರ್ಗಗಳ ಮೇಲಿನ ತ್ಯಾಜ್ಯ ಹಾಗೂ ರಸ್ತೆ ಬದಿಗಳಲ್ಲಿರುವ ಕಸವನ್ನು ತ್ವರಿತವಾಗಿ ತೆರವುಗೊಳಿಸುವುದರ ಜೊತೆಗೆ, ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಿ ಅವರ ಸಹಭಾಗಿತ್ವವನ್ನು ಹೆಚ್ಚಿಸುವ ಉದ್ದೇಶದಿಂದ ತೀವ್ರವಾದ ಸ್ವಚ್ಛತಾ ಕಾರ್ಯಾಚರಣೆಯನ್ನು ಸಮಗ್ರವಾಗಿ ಕೈಗೊಳ್ಳಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಾರ್ಡ್ ನಂ. 15ರಲ್ಲಿ ಸ್ವಚ್ಛತಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವಂತೆ ಅರಿವು ಮೂಡಿಸಲಾಗುತ್ತಿದೆ.  ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಸ್ವಚ್ಛತಾ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಕ್ರಮ ವಹಿಸಲಾಗಿದೆ.

14 ಟ್ರ್ಯಾಕ್ಟರ್, ಜೆಸಿಬಿ ಹಾಗೂ ಕಸ ತೆರವು ಯಂತ್ರ ನಿಯೋಜನೆ: 
ಸ್ವಚ್ಛತಾ ಕಾರ್ಯಾಚರಣೆಗೆ ಒಟ್ಟು 14 ಟ್ರ್ಯಾಕ್ಟರ್‌ಗಳು, 1 ಜೆಸಿಬಿ ಯಂತ್ರ ಹಾಗೂ 1 ಕಸ ತೆರವು ಯಂತ್ರವನ್ನು ನಿಯೋಜಿಸಲಾಗಿದೆ. ಈಗಾಗಲೇ ವಾರ್ಡ್ ವ್ಯಾಪ್ತಿಯಲ್ಲಿ ಕಸ ಸಂಗ್ರಹವಾಗಿರುವ 192 ಸ್ಥಳಗಳನ್ನು ಗುರುತಿಸಲಾಗಿದ್ದು, ಪ್ರತಿ ಟ್ರ್ಯಾಕ್ಟರ್‌ಗೆ ಸುಮಾರು 15 ಸ್ಥಳಗಳಂತೆ ಕಾರ್ಯ ಹಂಚಿಕೆ ಮಾಡಿ ಸ್ವಚ್ಛತಾ ಕಾರ್ಯವನ್ನು ತೀವ್ರಗತಿಯಲ್ಲಿ ಕೈಗೊಳ್ಳಲಾಗಿದೆ.

ಈ ಅಭಿಯಾನದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಪೌರಕಾರ್ಮಿಕರು, ಸ್ಥಳೀಯ ಮುಖಂಡರು ಹಾಗೂ RWA ಸದಸ್ಯರು ಸಕ್ರಿಯವಾಗಿ ಕೈಜೋಡಿಸಿದ್ದು, ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೂ ಸಹ ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವ ಜೊತೆಗೆ ಎಲ್ಲೆಂದರಲ್ಲಿ ಕಸ ಹಾಕದಂತೆ ಸಹಕರಿಸುವಂತೆ ಮನವಿ ಮಾಡಲಾಗಿದೆ.

ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ಅಡೆತಡೆಗಳ ತೆರವು:
BESCOM ಅಧಿಕಾರಿಗಳ ಸಹಯೋಗದಲ್ಲಿ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಿಗೆ ಅಡ್ಡಿಯಾಗಿರುವ ಅನುಪಯುಕ್ತ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳನ್ನು ಗುರುತಿಸಿ ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗಿದೆ.

BWSSB ಅಧಿಕಾರಿಗಳ ಸಹಯೋಗದಲ್ಲಿ ರಸ್ತೆಯ ಮಟ್ಟಕ್ಕಿಂತ ಎತ್ತರದಲ್ಲಿರುವ ಮ್ಯಾನ್‌ಹೋಲ್‌ಗಳನ್ನು ಗುರುತಿಸಿ, ಅವುಗಳನ್ನು ರಸ್ತೆ ಮಟ್ಟಕ್ಕೆ ಸಮರ್ಪಕವಾಗಿ ಪುನರ್‌ಸ್ಥಾಪಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಅದೇ ರೀತಿ, BNCC ಅರಣ್ಯ/ತೋಟಗಾರಿಕೆ ವಿಭಾಗದ ಅಧಿಕಾರಿಗಳು ಸಹ ಅಭಿಯಾನದಲ್ಲಿ ಭಾಗವಹಿಸಿದ್ದು, ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ಹಾಗೂ ಸುಮಾರು ಆರು ಅಡಿಗಿಂತ ಕೆಳಮಟ್ಟದಲ್ಲಿ ತಲೆಗೆ ತಾಗುವ ರೀತಿಯಲ್ಲಿ ಬೆಳೆದಿರುವ ಮರದ ಕೊಂಬೆಗಳನ್ನು ತೆರವುಗೊಳಿಸಿ ಪಾದಚಾರಿ ಮಾರ್ಗಗಳನ್ನು ಸುರಕ್ಷಿತಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.

ಮೂರು ದಿನಗಳ ಕಾಲ ನಿರಂತರ ಕಾರ್ಯಾಚರಣೆ: 
ವಾರ್ಡ್ ನಂ. 15, ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ತೀವ್ರ ಸ್ವಚ್ಛತಾ ಕಾರ್ಯಾಚರಣೆ ನಡೆಸಿ, ಪ್ರಮುಖ ರಸ್ತೆಗಳು, ಪಾದಚಾರಿ ಮಾರ್ಗಗಳು, ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಲಾಗಿದೆ.

ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಪೌರಕಾರ್ಮಿಕರು, ಸ್ಥಳೀಯ ಮುಖಂಡರು, RWA ಸದಸ್ಯರು ಹಾಗೂ ಸಾರ್ವಜನಿಕರು ತಂಡವಾಗಿ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿದ್ದು, ಸ್ವಚ್ಛ ಹಾಗೂ ಸುಂದರ ಬ್ಯಾಟರಾಯನಪುರ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES