ಬೆಂಗಳೂರು: ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದ ಅಂಗವಾಗಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ. 15ರಲ್ಲಿ ಇಂದು (ಸೆ. 23) ತೀವ್ರ ಸ್ವಚ್ಛತಾ ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು. ಬೆಂಗಳೂರು ಉತ್ತರ ನಗರ ಪಾಲಿಕೆಯ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಸ್ಥಳೀಯ ಮುಖಂಡರು ಹಾಗೂ ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (RWA) ಸದಸ್ಯರೊಂದಿಗೆ ವಾರ್ಡ್‌ನ ಬ್ಯಾಟರಾಯಣಪುರ ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ದಿನಾಂಕ 18-09-2026ರಂದು ನೀಡಿರುವ ನಿರ್ದೇಶನದಂತೆ, ವಾರ್ಡ್ ರಸ್ತೆಗಳ ಹಾಗೂ ಪ್ರಮುಖ ರಸ್ತೆಗಳಲ್ಲಿರುವ ಕಸ, ಪಾದಚಾರಿ ಮಾರ್ಗಗಳ ಮೇಲಿನ ತ್ಯಾಜ್ಯ ಹಾಗೂ ರಸ್ತೆ ಬದಿಗಳಲ್ಲಿರುವ ಕಸವನ್ನು ತ್ವರಿತವಾಗಿ ತೆರವುಗೊಳಿಸುವುದರ ಜೊತೆಗೆ, ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಅರಿವು ಮೂಡಿಸಿ ಅವರ ಸಹಭಾಗಿತ್ವವನ್ನು ಹೆಚ್ಚಿಸುವ ಉದ್ದೇಶದಿಂದ ತೀವ್ರವಾದ ಸ್ವಚ್ಛತಾ ಕಾರ್ಯಾಚರಣೆಯನ್ನು ಸಮಗ್ರವಾಗಿ ಕೈಗೊಳ್ಳಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ವಾರ್ಡ್ ನಂ. 15ರಲ್ಲಿ ಸ್ವಚ್ಛತಾ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದ್ದು, ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವಂತೆ ಅರಿವು ಮೂಡಿಸಲಾಗುತ್ತಿದೆ. ವಿವಿಧ ಇಲಾಖೆಗಳು ಹಾಗೂ ಸಾರ್ವಜನಿಕರು ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ ಸ್ವಚ್ಛತಾ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಕ್ರಮ ವಹಿಸಲಾಗಿದೆ.
🧹🚜 Footpath Clearance & Debris Removal Drive
📍 Kodigehalli Gate to Kodigehalli Circle
Footpath clearance and debris removal work has commenced along the stretch from Kodigehalli Gate to Kodigehalli Circle in the Vidyaranyapura Division of Bengaluru North City Corporation.… pic.twitter.com/uLnBDR7D4E— Greater Bengaluru Authority (@GBA_office) September 23, 2026
14 ಟ್ರ್ಯಾಕ್ಟರ್, ಜೆಸಿಬಿ ಹಾಗೂ ಕಸ ತೆರವು ಯಂತ್ರ ನಿಯೋಜನೆ:
ಸ್ವಚ್ಛತಾ ಕಾರ್ಯಾಚರಣೆಗೆ ಒಟ್ಟು 14 ಟ್ರ್ಯಾಕ್ಟರ್‌ಗಳು, 1 ಜೆಸಿಬಿ ಯಂತ್ರ ಹಾಗೂ 1 ಕಸ ತೆರವು ಯಂತ್ರವನ್ನು ನಿಯೋಜಿಸಲಾಗಿದೆ. ಈಗಾಗಲೇ ವಾರ್ಡ್ ವ್ಯಾಪ್ತಿಯಲ್ಲಿ ಕಸ ಸಂಗ್ರಹವಾಗಿರುವ 192 ಸ್ಥಳಗಳನ್ನು ಗುರುತಿಸಲಾಗಿದ್ದು, ಪ್ರತಿ ಟ್ರ್ಯಾಕ್ಟರ್‌ಗೆ ಸುಮಾರು 15 ಸ್ಥಳಗಳಂತೆ ಕಾರ್ಯ ಹಂಚಿಕೆ ಮಾಡಿ ಸ್ವಚ್ಛತಾ ಕಾರ್ಯವನ್ನು ತೀವ್ರಗತಿಯಲ್ಲಿ ಕೈಗೊಳ್ಳಲಾಗಿದೆ.
ಈ ಅಭಿಯಾನದಲ್ಲಿ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು, ಪೌರಕಾರ್ಮಿಕರು, ಸ್ಥಳೀಯ ಮುಖಂಡರು ಹಾಗೂ RWA ಸದಸ್ಯರು ಸಕ್ರಿಯವಾಗಿ ಕೈಜೋಡಿಸಿದ್ದು, ತಂಡವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೂ ಸಹ ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವ ಜೊತೆಗೆ ಎಲ್ಲೆಂದರಲ್ಲಿ ಕಸ ಹಾಕದಂತೆ ಸಹಕರಿಸುವಂತೆ ಮನವಿ ಮಾಡಲಾಗಿದೆ.
ರಸ್ತೆ ಹಾಗೂ ಪಾದಚಾರಿ ಮಾರ್ಗಗಳಲ್ಲಿನ ಅಡೆತಡೆಗಳ ತೆರವು:
BESCOM ಅಧಿಕಾರಿಗಳ ಸಹಯೋಗದಲ್ಲಿ ರಸ್ತೆಗಳು ಮತ್ತು ಪಾದಚಾರಿ ಮಾರ್ಗಗಳಿಗೆ ಅಡ್ಡಿಯಾಗಿರುವ ಅನುಪಯುಕ್ತ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ತಂತಿಗಳನ್ನು ಗುರುತಿಸಿ ತೆರವುಗೊಳಿಸುವ ಕ್ರಮ ಕೈಗೊಳ್ಳಲಾಗಿದೆ.
BWSSB ಅಧಿಕಾರಿಗಳ ಸಹಯೋಗದಲ್ಲಿ ರಸ್ತೆಯ ಮಟ್ಟಕ್ಕಿಂತ ಎತ್ತರದಲ್ಲಿರುವ ಮ್ಯಾನ್‌ಹೋಲ್‌ಗಳನ್ನು ಗುರುತಿಸಿ, ಅವುಗಳನ್ನು ರಸ್ತೆ ಮಟ್ಟಕ್ಕೆ ಸಮರ್ಪಕವಾಗಿ ಪುನರ್‌ಸ್ಥಾಪಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.
ಅದೇ ರೀತಿ, BNCC ಅರಣ್ಯ/ತೋಟಗಾರಿಕೆ ವಿಭಾಗದ ಅಧಿಕಾರಿಗಳು ಸಹ ಅಭಿಯಾನದಲ್ಲಿ ಭಾಗವಹಿಸಿದ್ದು, ಪಾದಚಾರಿ ಮಾರ್ಗಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗುವ ಹಾಗೂ ಸುಮಾರು ಆರು ಅಡಿಗಿಂತ ಕೆಳಮಟ್ಟದಲ್ಲಿ ತಲೆಗೆ ತಾಗುವ ರೀತಿಯಲ್ಲಿ ಬೆಳೆದಿರುವ ಮರದ ಕೊಂಬೆಗಳನ್ನು ತೆರವುಗೊಳಿಸಿ ಪಾದಚಾರಿ ಮಾರ್ಗಗಳನ್ನು ಸುರಕ್ಷಿತಗೊಳಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ.
ಮೂರು ದಿನಗಳ ಕಾಲ ನಿರಂತರ ಕಾರ್ಯಾಚರಣೆ:
ವಾರ್ಡ್ ನಂ. 15, ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ ಮೂರು ದಿನಗಳ ಕಾಲ ನಿರಂತರವಾಗಿ ತೀವ್ರ ಸ್ವಚ್ಛತಾ ಕಾರ್ಯಾಚರಣೆ ನಡೆಸಿ, ಪ್ರಮುಖ ರಸ್ತೆಗಳು, ಪಾದಚಾರಿ ಮಾರ್ಗಗಳು, ರಸ್ತೆ ಬದಿಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವ ಗುರಿಯನ್ನು ಹೊಂದಲಾಗಿದೆ.
ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಪೌರಕಾರ್ಮಿಕರು, ಸ್ಥಳೀಯ ಮುಖಂಡರು, RWA ಸದಸ್ಯರು ಹಾಗೂ ಸಾರ್ವಜನಿಕರು ತಂಡವಾಗಿ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿದ್ದು, ಸ್ವಚ್ಛ ಹಾಗೂ ಸುಂದರ ಬ್ಯಾಟರಾಯನಪುರ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರವನ್ನು ಕೋರಲಾಗಿದೆ.