ನಕಲಿ ಔಷಧ ಜಾಲ ಪ್ರಕರಣಕ್ಕೆ ಸಂಬಂಧಿಸಿದಂತೆ FDA ಅಧಿಕಾರಿ ಓಂಕಾರೇಶ್ವರ್ ಅವರನ್ನು ಅಮಾನತ್ತು ಮಾಡಲಾಗಿದೆ. ಸಸ್ಪೆಂಡ್ ಆದ ಅಧಿಕಾರಿಯನ್ನು ಸರ್ಕಲ್-1 ADC ಓಂಕಾರೇಶ್ವರ್ ಎಂದು ಹೇಳಲಾಗಿದ್ದು, ಚಾಮರಾಜ್‌ಪೇಟೆಯ ಕೃಪಾ ಹೆಲ್ತ್ ಕೇರ್ ಪ್ರಕರಣದಲ್ಲಿ ಹೆಲ್ತ್ ಕೇರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ಆರೋಪ ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಎಫ್‌ಡಿಎ ಅಧಿಕಾರಿಗೆ ಶಾಕ್ ನೀಡಲಾಗಿದ್ದು, ನಕಲಿ ಔಷಧ ಪ್ರಕರಣದಲ್ಲಿ ಅಧಿಕಾರಿಯ ವಿರುದ್ಧ ಸರ್ಕಾರದ ಕಠಿಣ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ. ಇದಲ್ಲದೆ, ಬಿಡದಿಯ ಫಾರ್ಮ್‌ಹೌಸ್‌ನಲ್ಲಿ ನಡೆಯುತ್ತಿದ್ದ ಪರವಾನಗಿ ರಹಿತ ನಕಲಿ ಔಷಧಿ ಮರು-ಪ್ಯಾಕಿಂಗ್ ಮತ್ತು ಲೇಬಲಿಂಗ್ ಜಾಲ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ 5.05 ಕೋಟಿ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು ಕೆಲವು ಔಷಧಿಗಳ ಪರವಾನಗಿಯನ್ನು ರದ್ದುಗೊಳಿಸಲಾಗಿದೆ.
ಖಚಿತ ಮಾಹಿತಿಯ ಆಧಾರದ ಮೇಲೆ ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ನಿಯಂತ್ರಣ ಇಲಾಖೆಯ (FDA) ಔಷಧ ಜಾರಿ ವಿಭಾಗದ ಅಧಿಕಾರಿಗಳ ತಂಡವು ದಿನಾಂಕ 18.08.2026 ರಂದು ನಡೆಸಿದ ಭಾರಿ ಜಂಟಿ ಕಾರ್ಯಾಚರಣೆಯಲ್ಲಿ, ಅಕ್ರಮವಾಗಿ ನಡೆಯುತ್ತಿದ್ದ ಬೃಹತ್ ನಕಲಿ ಔಷಧಿ ಮರು-ಪ್ಯಾಕಿಂಗ್ ಮತ್ತು ಮರು-ಲೇಬಲಿಂಗ್ ದಂಧೆಯನ್ನು ಯಶಸ್ವಿಯಾಗಿ ಪತ್ತೆಹಚ್ಚಿದೆ. ಬಿಡದಿಯ ಕುರುಬರಕೇರನಹಳ್ಳಿಯ ಫಾರ್ಮ್‌ಹೌಸ್ ಒಂದರ ಮೇಲೆ ದಾಳಿ ನಡೆಸಿ, ಅಂದಾಜು ರೂ. 5,05,49,575/- ಮೌಲ್ಯದ ನಕಲಿ ಔಷಧಿಗಳು ಹಾಗೂ ಯಂತ್ರೋಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಇತರ ರಾಜ್ಯಗಳಿಂದ ಅತ್ಯಂತ ಕಡಿಮೆ ಬೆಲೆಯ ಔಷಧಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದರು. ಆ ಔಷಧಿಗಳನ್ನು ಹೊಸ ವಯಲ್ಸ್ (ಸಣ್ಣ ಬಾಟಲಿಗಳು) ಗಳಿಗೆ ತುಂಬಿಸಿ, ನಂತರ 'ಫೈಜರ್' (Pfizer) ನಂತಹ ಜಾಗತಿಕ ಬಹುರಾಷ್ಟ್ರೀಯ ಕಂಪನಿಗಳ (MNC) ಅತ್ಯಂತ ದುಬಾರಿ ಹಾಗೂ ಆಮದು ಮಾಡಿದ ಜೀವರಕ್ಷಕ ಔಷಧಿಗಳ ಹೆಸರಿನಲ್ಲಿ ನಕಲಿ ಲೇಬಲ್ ಮತ್ತು ಸ್ಟ್ಯಾಂಪ್‌ಗಳನ್ನು ಅಂಟಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಸಾರ್ವಜನಿಕರನ್ನು ವಂಚಿಸಲು ಬಳಸಲಾಗುತ್ತಿದ್ದ ಲೇಬಲ್‌ಗಳ ಮೇಲಿನ ಕ್ಯೂಆರ್/ಸ್ಕ್ಯಾನಿಂಗ್ ಕೋಡ್‌ಗಳು ನಿಷ್ಕ್ರಿಯವಾಗಿದ್ದವು.
ಕನಿಷ್ಠ 10 ವರ್ಷದಿಂದ ಜೀವಾವಧಿ ಜೈಲು ಶಿಕ್ಷೆ, ಭಾರೀ ದಂಡ ವಿಧಿಸಲು ಅವಕಾಶ:
ಈ ಗಂಭೀರ ಅಪರಾಧಕ್ಕೆ ಸಂಬಂಧಿಸಿದಂತೆ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940 ರ ಅಡಿಯಲ್ಲಿ ಕಠಿಣ ಮೊಕದ್ದಮೆ ಹೂಡಲಾಗಿದೆ. ನಕಲಿ ಔಷಧಿಗಳ ಉತ್ಪಾದನೆ ಮತ್ತು ಮಾರಾಟವನ್ನು ಸೆಕ್ಷನ್ 17 B ಅಡಿಯಲ್ಲಿ ಗುರುತಿಸಲಾಗಿದ್ದು, ಈ ದಂಧೆಯಲ್ಲಿ ತೊಡಗಿರುವ ಅಪರಾಧಿಗಳಿಗೆ ಅದೇ ಕಾಯ್ದೆಯ ಸೆಕ್ಷನ್ 27 ರ ಅಡಿಯಲ್ಲಿ ಕನಿಷ್ಠ 10 ವರ್ಷಗಳಿಂದ ಹಿಡಿದು ಜೀವಾವಧಿ ಜೈಲು ಶಿಕ್ಷೆ ಹಾಗೂ ಭಾರಿ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ನಕಲಿ ಔಷಧಿ ಜಾಲಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದವರು ತನಿಖೆಯನ್ನು ಮುಂದುವರೆಸಿದ್ದು, ಈ ಜಾಲದ ಹಿಂದಿರುವ ಎಲ್ಲಾ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು. ವಶಪಡಿಸಿಕೊಂಡ ದಾಸ್ತಾನನ್ನು ಬೆಂಗಳೂರು ದಕ್ಷಿಣದ ಮಾನ್ಯ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಹೇಳಲಾಗಿದೆ.
ಸಾರ್ವಜನಿಕರು ಹಾಗೂ ರೋಗಿಗಳು ಜೀವರಕ್ಷಕ ಔಷಧಿಗಳನ್ನು ಅಧಿಕೃತ ಪರವಾನಗಿ ಹೊಂದಿರುವ ಔಷಧಾಲಯಗಳಿಂದಲೇ (Licensed Pharmacies) ಸರಿಯಾದ ತೆರಿಗೆ ರಶೀದಿ/ಬಿಲ್ (Valid Tax Invoices) ಪಡೆದು ಖರೀದಿಸಬೇಕು ಎಂದು ಇಲಾಖೆಯು ಬಲವಾಗಿ ಒತ್ತಾಯಿಸುತ್ತದೆ. ಔಷಧಿಗಳ ಪ್ಯಾಕಿಂಗ್‌ನಲ್ಲಿ ಯಾವುದೇ ರೀತಿಯ ಸಂಶಯಾಸ್ಪದ ವ್ಯತ್ಯಾಸಗಳು ಕಂಡುಬಂದಲ್ಲಿ ಅಥವಾ ಔಷಧಿಗಳ ಲೇಬಲ್ ಮೇಲಿರುವ ಕ್ಯೂಆರ್ ಕೋಡ್‌ಗಳು ಸ್ಕ್ಯಾನ್ ಆಗದಿದ್ದಲ್ಲಿ (Non-scanning QR codes), ತಕ್ಷಣವೇ ಔಷಧ ಅಮಲುಜಾರಿ ಅಧಿಕಾರಿಗಳ (Drug Enforcement Authorities) ಗಮನಕ್ಕೆ ತರಬೇಕಾಗಿ ವಿನಂತಿಸಲಾಗಿದೆ.
ವಶಪಡಿಸಿಕೊಳ್ಳಲಾದ ವಸ್ತುಗಳ ಪಟ್ಟಿ:
ದಾಳಿಯ ವೇಳೆ ಜಾರಿ ವಿಭಾಗದ ಅಧಿಕಾರಿಗಳು ಒಟ್ಟು ರೂ. 4,91,49,575 ಅಂದಾಜು ಮೌಲ್ಯದ ಕೆಳಗಿನ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ: ಅದರ ವಿವರ ಈ ಕೆಳಕಂಡಂತಿದೆ.

ಪತ್ತೆಯಾದ ಪ್ರಮುಖ ಉಲ್ಲಂಘನೆಗಳು
⦁ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940 ರ ಉಲ್ಲಂಘನೆ: ಯಾವುದೇ ಮಾನ್ಯತೆ ಪಡೆದ ಸರ್ಕಾರಿ ಪರವಾನಗಿ ಇಲ್ಲದೆ ಕಾನೂನುಬಾಹಿರವಾಗಿ ಔಷಧಿಗಳ ತಯಾರಿಕೆ, ದಾಸ್ತಾನು ಮತ್ತು ವಿತರಣೆಯನ್ನು ಮಾಡಲಾಗುತ್ತಿತ್ತು.
⦁ ತಪ್ಪು ಲೇಬಲಿಂಗ್ ಮತ್ತು ನಕಲಿ ಉತ್ಪನ್ನಗಳು: ಕಡಿಮೆ ಬೆಲೆಯ ಔಷಧಿಗಳಿಗೆ ಪ್ರೀಮಿಯಂ ಮತ್ತು ಎಂಎನ್‌ಸಿ ಬ್ರಾಂಡ್‌ಗಳ ನಕಲಿ ಲೇಬಲ್ ಹಚ್ಚುವ ಮೂಲಕ ಸಾರ್ವಜನಿಕರ ಆರೋಗ್ಯ ಮತ್ತು ಜೀವಕ್ಕೆ ತೀವ್ರ ಅಪಾಯವನ್ನು ಉಂಟುಮಾಡಲಾಗಿದೆ.
⦁ ಅವಧಿ ಮುಗಿದ ಔಷಧಿಗಳ ಬಳಕೆ: ದಾಳಿಯ ವೇಳೆ ಸಿಕ್ಕಿರುವ ಅವಧಿ ಮುಗಿದ (Expired) ಔಷಧಿಗಳನ್ನು, ಮತ್ತೆ ಮಾರುಕಟ್ಟೆಗೆ ಬಿಡುವ ಸಂಚನ್ನು ಸಾಬೀತುಪಡಿಸುತ್ತವೆ. ಇದು ರೋಗಿಗಳಿಗೆ ಅತ್ಯಂತ ಅಪಾಯಕಾರಿಯಾಗಿದೆ.
ಕೈಗೊಳ್ಳಲಾಗುವ ಮುಂದಿನ ಕಾನೂನು ಕ್ರಮಗಳು
1. ಸರಬರಾಜು ತಡೆಗಟ್ಟುವಿಕೆ: ವಶಪಡಿಸಿಕೊಳ್ಳಲಾದ ಔಷಧಿಗಳ ಬ್ಯಾಚ್ ಯಾವುದೇ ರೀತಿಯ ಮಾರಾಟ ಅಥವಾ ವಿತರಣೆಯನ್ನು ತಡೆಯಲು ಅವುಗಳ ಬ್ಯಾಚ್ ಸಂಖ್ಯೆಗಳನ್ನು ಇಲಾಖೆಯ FDA ಪೋರ್ಟಲ್‌ನಲ್ಲಿ ತಕ್ಷಣವೇ ಬ್ಲಾಕ್ ಮಾಡಲಾಗಿದೆ.
2. ರಾಸಾಯನಿಕ ಪರೀಕ್ಷೆ: ವಶಪಡಿಸಿಕೊಂಡ ಔಷಧಿಗಳ ರಾಸಾಯನಿಕ ಸಂಯೋಜನೆ, ಶುದ್ಧತೆ ಮತ್ತು ತೀವ್ರತೆಯನ್ನು ಪರೀಕ್ಷಿಸಲು ಮಾದರಿಗಳನ್ನು ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ತನಿಖೆಯನ್ನು ಮುಂದುವರೆಸಿ ಸದರಿ ಔಷಧಗಳ ಮಾರಾಟ ಹಾಗೂ ಸರಬರಾಜು ಮಾಡಿರುವ ಔಷಧ ಚಿಲ್ಲರೆ ಮಳಿಗೆಗಳು ಹಾಗೂ ಸಗಟು ಮಳಿಗೆಗಳ ಮೇಲೆ ಕ್ರಮ ಜರುಗಿಸಲಾಗಿದೆ, 16 ಔಷಧ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ ಹಾಗೂ 8 ಔಷಧ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ.


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿರುವ ಮೆ|| ಪೈಜರ್ ಸಿ & ಎಫ್ ಉಗ್ರಾಣಕ್ಕೆ ನೀಡಿದ, ಔಷಧ ಪರವಾನಗಿಯನ್ನು ಅಮಾನತ್ತುಗೊಳಿಸಲಾಗಿದೆ.