ಮೃ*ತದೇಹ ಸಿಗದಿದ್ದರೂ ಸಿಕ್ಕ ನ್ಯಾಯ.. ಇಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್, ಸೀತಾ ಏನಾದರು?
60ನೇ ಸಿಸಿಎಚ್ CCH ನ್ಯಾಯಾಲಯವು ಈ ಅಪರೂಪದ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದು, ಭೂ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಹತ್ಯೆಗೈದಿದ್ದ ನೂರ್ ಅಹ್ಮದ್ ಮತ್ತು ಸತ್ಯನಾರಾಯಣ್ ಎಂಬುವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರೂಪಾಯಿ ದಂಡ
Sita case: ಅಪರಾಧ ಜಗತ್ತಿನಲ್ಲಿ ಸಾಮಾನ್ಯವಾಗಿ ಶವವಿಲ್ಲದೆ ಸಾಕ್ಷ್ಯವಿಲ್ಲ, ಸಾಕ್ಷ್ಯವಿಲ್ಲದೆ ಶಿಕ್ಷೆಯಿಲ್ಲ ಎಂಬ ನಂಬಿಕೆ ಬಲವಾಗಿದೆ. ಆದರೆ, ಇಂತಹ ಕಠಿಣ ಸವಾಲನ್ನು ಎದುರು ಹಾಕಿಕೊಂಡು, ಮೃತದೇಹವೇ ಸಿಗದಿದ್ದರೂ ಕೇವಲ ತಾಂತ್ರಿಕ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಕಾಲ್ ರೆಕಾರ್ಡ್‌ಗಳು ಸಿಡಿಆರ್ ಮತ್ತು ನಿಖರವಾದ ತನಿಖೆಯ ಆಧಾರದ ಮೇಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಬೆಂಗಳೂರಿನ ಸುಬ್ರಮಣ್ಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ. 60ನೇ ಸಿಸಿಎಚ್ CCH ನ್ಯಾಯಾಲಯವು ಈ ಅಪರೂಪದ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದು, ಭೂ ವಿವಾದದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರನ್ನು ಹತ್ಯೆಗೈದಿದ್ದ ನೂರ್ ಅಹ್ಮದ್ ಮತ್ತು ಸತ್ಯನಾರಾಯಣ್ ಎಂಬುವರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಮಂತ್ರಾಲಯ ಮೂಲದ ಸೀತಾ (47) ಎಂಬ ಮಹಿಳೆ ತೀವ್ರವಾದ ಕೌಟುಂಬಿಕ ಮತ್ತು ಮಾನಸಿಕ ಸಂಕಷ್ಟದಲ್ಲಿದ್ದರು. ಗಂಡ ಮತ್ತು ತಾಯಿಯನ್ನು ಕಳೆದುಕೊಂಡು ಸೀತಾ ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಸೀತಾ ಸಾವಿನ ಘಟನೆಗೂ ನಾಲ್ಕು ತಿಂಗಳ ಮೊದಲು ಮಂತ್ರಾಲಯದಿಂದ ಬೆಂಗಳೂರಿನಲ್ಲಿದ್ದ ತಮ್ಮ ಅಕ್ಕನ ಮನೆಗೆ ಬಂದು ನೆಲೆಸಿದ್ದರು. ಆದರೆ, 2021ರ ಮಾರ್ಚ್ 25ರಂದು ಮನೆಯಿಂದ ಹೊರಗೆ ಹೋದ ಸೀತಾ ವಾಪಸ್ ಬಂದಿರಲಿಲ್ಲ. ದಿನವಿಡೀ ಹುಡುಕಾಡಿದರೂ ಪತ್ತೆಯಾಗದ ಕಾರಣ, ಆಕೆಯ ಸಹೋದರ ಮಾರ್ಚ್ 26ರಂದು ಸುಬ್ರಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಆಗಿನ ಇನ್‌ಸ್ಪೆಕ್ಟರ್ ಸಂಜೀವ್ ಗೌಡ ಮತ್ತು ಸಬ್ ಇನ್‌ಸ್ಪೆಕ್ಟರ್ ಲತಾ ಅವರ ನೇತೃತ್ವದಲ್ಲಿ ತನಿಖೆ ಆರಂಭವಾಯಿತು. ಎಷ್ಟೇ ಹುಡುಕಾಟ ನಡೆಸಿದರೂ ಸೀತಾಳ ಸುಳಿವು ಸಿಗಲಿಲ್ಲ. ಆಕೆಯ ಮೊಬೈಲ್ ಫೋನ್ ಕೂಡ ನಿರಂತರವಾಗಿ ಸ್ವಿಚ್ ಆಫ್ ಬಂದಿದ್ದರಿಂದ ಪೊಲೀಸರಿಗೆ ತೀವ್ರ ಅನುಮಾನ ಮೂಡಿತ್ತು. ತಕ್ಷಣವೇ ಸಕ್ರಿಯರಾದ ತನಿಖಾ ತಂಡವು ಸೀತಾಳ ಮೊಬೈಲ್ ಸಿಡಿಆರ್ CDR ಪರಿಶೀಲಿಸಿದಾಗ, ಆಕೆ ಕೊನೆಯದಾಗಿ ರಘು ಅಲಿಯಾಸ್ ಮೆಂಟಲ್ ರಘು ಎಂಬಾತನೊಂದಿಗೆ ಮಾತನಾಡಿದ್ದು ಬೆಳಕಿಗೆ ಬಂತು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ರಘುವನ್ನು ಮಂತ್ರಾಲಯದಲ್ಲಿ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದರು.
2.5 ಲಕ್ಷ ರೂಪಾಯಿ ಸುಪಾರಿ; ವಿಚಾರಣೆಯ ವೇಳೆ ರಘು ಬಾಯಬಿಟ್ಟ ಮಾಹಿತಿಯು ಪೊಲೀಸರಿಗೇ ಬೆಚ್ಚಿಬೀಳಿಸುವಂತಿತ್ತು. ಮಂತ್ರಾಲಯದ ಬಳಿ ಸೀತಾ ಅವರ ಸಹೋದರನಿಗೆ ಸೇರಿದ 2 ಎಕರೆ ಜಮೀನನ್ನು ನೂರ್ ಅಹ್ಮದ್ ಎಂಬಾತ ಖರೀದಿಸಿದ್ದನು. ಆದರೆ ಆ ಜಾಗದ ಅಧಿಕೃತ ರಿಜಿಸ್ಟ್ರೇಶನ್‌ಗೆ ಸಹಿ ಹಾಕಲು ಸೀತಾ ಒಪ್ಪಿರಲಿಲ್ಲ. ಈ ಆಸ್ತಿ ವಿವಾದವೇ ಕೊಲೆಗೆ ಮೂಲಕಾರಣವಾಗಿತ್ತು. ಜಾಗವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಅಡ್ಡಿಯಾಗಿದ್ದ ಸೀತಾರನ್ನು ಮುಗಿಸಲು ನೂರ್ ಅಹ್ಮದ್ ಬರೋಬ್ಬರಿ 2.5 ಲಕ್ಷ ರೂಪಾಯಿ ಸುಪಾರಿ ನೀಡಿದ್ದನು.
ಸುಪಾರಿ ಪಡೆದ ರಘು ಹಾಗೂ ಮತ್ತೊಬ್ಬ ಆರೋಪಿ ಸತ್ಯನಾರಾಯಣ, ತಮ್ಮ ಪರಿಚಯವಿದ್ದ ಸೀತಾಗೆ ಬಂಗಾರದ ಡೀಲ್ ಒಂದಿದೆ ಎಂದು ನಂಬಿಸಿ ಇಂಡಿಕಾ ಕಾರಿನಲ್ಲಿ ಮೆಜೆಸ್ಟಿಕ್‌ನಿಂದ ಹಾಸನ ಮಾರ್ಗವಾಗಿ ಕರೆದೊಯ್ದಿದ್ದರು. ದಾರಿಯಲ್ಲಿ ಹತ್ಯೆಗೆ ಸಂಚು ರೂಪಿಸಿದ್ದ ಅವರು, ಹಾಸನ ಟೋಲ್ ಬಳಿಯ ಎಂಪೈರ್ ಹೋಟೆಲ್‌ನಲ್ಲಿ ಸೀತಾ ನೀಡಿದ್ದ ಜ್ಯೂಸ್‌ಗೆ ಸೈನೆಡ್ ಬೆರೆಸಲು ಯತ್ನಿಸಿದ್ದರು. ಆದರೆ ಜ್ಯೂಸ್ ಹಸಿರು ಬಣ್ಣಕ್ಕೆ ತಿರುಗಿದ ಕಾರಣ ಸೀತಾ ಅದನ್ನು ಕುಡಿಯಲು ನಿರಾಕರಿಸಿದ್ದಳು.
ಬಳಿಕ ಕುಂದೂರು ಮಠದ ರಸ್ತೆಯಲ್ಲಿ ಕಾರು ನಿಲ್ಲಿಸಿ, ಸೀತಾ ನಿದ್ರಿಸುತ್ತಿದ್ದ ವೇಳೆ ಕಲ್ಲಿನಿಂದ ತಲೆಗೆ ಹಲ್ಲೆ ನಡೆಸಲಾಗಿತ್ತು. ಆದರೂ ಆಕೆ ಬದುಕುಳಿದಿದ್ದರಿಂದ ಯಾರೋ ಕಲ್ಲಿನಿಂದ ಹೊಡೆದು ಓಡಿಹೋದರು ಎಂದು ಆರೋಪಿಗಳು ಕಥೆ ಕಟ್ಟಿ ನಂಬಿಸಿದ್ದರು. ಅನುಮಾನ ಬಾರದಂತೆ ಬೇಲೂರು ಕ್ಲಿನಿಕ್‌ನಲ್ಲಿ ಆಕೆಗೆ ತಲೆಗೆ ಬ್ಯಾಂಡೇಜ್ ಕೂಡ ಹಾಕಿಸಿದ್ದರು. ಚಿಕ್ಕಮಗಳೂರು ಬಳಿಯ ಮಯೂರ ಹೋಟೆಲ್‌ನಲ್ಲಿ ಕಾರು ನಿಲ್ಲಿಸಿ, ಅಲ್ಲಿನ ಟಾಯ್ಲೆಟ್ ರೂಮ್‌ನಲ್ಲಿ ಪೇನ್ ಕಿಲ್ಲರ್ ಮಾತ್ರೆ ಒಳಗೆ ಸೈನೆಡ್ ವಿಷವನ್ನು ತುಂಬಿ ಸಿದ್ಧಪಡಿಸಿಕೊಂಡಿದ್ದರು. ದಾರಿ ಮಧ್ಯೆ ನೋವಿನ ಮಾತ್ರೆ ಎಂದು ನಂಬಿಸಿ ಸೀತಾಗೆ ಅದನ್ನು ತಿನ್ನಿಸಿದ್ದರು. ವಿಷ ಸೇವಿಸಿದ ಕೇವಲ ಒಂದು ನಿಮಿಷದೊಳಗೆ ಸೀತಾ ಸ್ಥಳದಲ್ಲೇ ಮೃತಪಟ್ಟಳು.
ಶವ ಮರೆಮಾಚಿದ ಕರಾಳ ಹಾದಿ ಮತ್ತು ಸಾಕ್ಷ್ಯಗಳ ಕೊರತೆಯ ಸವಾಲು; ಸೀತಾ ಮೃತಪಟ್ಟ ನಂತರ ಹೊಸಪೇಟೆಯ ಹುಲಿಗೆಮ್ಮ ರಸ್ತೆಯ ಬಳಿ ಕಾರು ನಿಲ್ಲಿಸಿದ್ದ ಆರೋಪಿಗಳು, ಆಕೆಯ ಕೈಯಲ್ಲಿದ್ದ 30 ಗ್ರಾಂ ಚಿನ್ನದ ಬಳೆಯನ್ನು ಕಳವು ಮಾಡಿದ್ದರು. ಬಳಿಕ ಸಾಕ್ಷಿ ಸಿಗದಂತೆ ಮೃತದೇಹಕ್ಕೆ ದೊಡ್ಡ ಕಲ್ಲುಗಳನ್ನು ಕಟ್ಟಿ, ಬೆಡ್‌ಶೀಟ್‌ನಲ್ಲಿ ಸುತ್ತಿ ತುಂಗಭದ್ರ ಕಾಲುವೆಗೆ ಎಸೆದರು. ಬಳಿಕ ನೇರವಾಗಿ ಮಂತ್ರಾಲಯಕ್ಕೆ ಪರಾರಿಯಾಗಿ, ಕಳವು ಮಾಡಿದ್ದ ಚಿನ್ನದ ಬಳೆಯನ್ನು ಮಾರಿ ಬಂದ ಹಣವನ್ನು ಹಂಚಿಕೊಂಡಿದ್ದರು.
ಆರೋಪಿ ರಘು ನೀಡಿದ ಈ ಸ್ಪಷ್ಟ ಸ್ಫೋಟಕ ಮಾಹಿತಿಯ ಆಧಾರದ ಮೇಲೆ ಪೊಲೀಸರು ತುಂಗಭದ್ರ ಕಾಲುವೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ಶೋಧ ನಡೆಸಿದರೂ, ಸೀತಾಳ ಮೃತದೇಹ ಮಾತ್ರ ಇದುವರೆಗೂ ಪತ್ತೆಯಾಗಲಿಲ್ಲ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿಗಳಾದ ರಘು ಮತ್ತು ಬೆಸ್ತನಾ ಕುಮಾರ್ ಅವರು ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ಮೃತಪಟ್ಟರು. ಆದರೆ, ಉಳಿದ ಪ್ರಮುಖ ಸಂಚುಕೋರ ಹಾಗೂ ಸಹ ಆರೋಪಿಗಳಾದ ನೂರ್ ಅಹ್ಮದ್ ಮತ್ತು ಸತ್ಯನಾರಾಯಣ್ ವಿರುದ್ಧದ ವಿಚಾರಣೆ ಮುಂದುವರಿಯಿತು.
ಮೃತದೇಹ ಸಿಗದೇ ಇದ್ದರೂ, ಪೊಲೀಸರು ಬಿಟ್ಟುಕೊಡದೆ ಸಂಗ್ರಹಿಸಿದ್ದ ಸಿಸಿಟಿವಿ ದೃಶ್ಯಾವಳಿಗಳು, ಮೊಬೈಲ್ ಸಿಡಿಆರ್ ವಿವರಗಳು, ಆರೋಪಿಗಳು ನೀಡಿದ ಸ್ವಯಂಪ್ರೇರಿತ ಒಪ್ಪಿಗೆ ಹೇಳಿಕೆಗಳು ಹಾಗೂ ಇತರೆ ಭದ್ರವಾದ ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯದ ಮುಂದೆ ಮಂಡಿಸಿದರು. ಸಾಕ್ಷ್ಯಗಳ ಸರಪಳಿಯನ್ನು ಪರಿಶೀಲಿಸಿದ 60ನೇ ಸಿಸಿಎಚ್ ನ್ಯಾಯಾಲಯವು ಆರೋಪಿಗಳ ದೋಷವನ್ನು ಗಂಭೀರವಾಗಿ ಪರಿಗಣಿಸಿ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಮೃತದೇಹವಿಲ್ಲದಿದ್ದರೂ ಅಚಲವಾದ ತನಿಖೆಯ ಮೂಲಕ ನ್ಯಾಯ ಒದಗಿಸಿದ ಸುಬ್ರಮಣ್ಯನಗರ ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಪ್ರಕರಣದಲ್ಲಿ ಮೃತದೇಹ ಸಿಗದೇ ಇದ್ದರೂ ಕೇವಲ ತಾಂತ್ರಿಕ ಹಾಗೂ circumstantial evidence ಪರಿಸ್ಥಿತಿ ಜನ್ಯ ಸಾಕ್ಷ್ಯಗಳು ಆಧಾರದ ಮೇಲೆ ಅಪರಾಧಿಗಳಿಗೆ ಶಿಕ್ಷೆ ಕೊಡಿಸಿರುವುದು ನ್ಯಾಯಾಂಗ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಎನ್ನಬಹುದು.