SOCIAL MEDIA

Newsletter

PARTNER SITES
Select Language Select State

ಬೆಂಗಳೂರಿಗರಿಗೆ ಖುಷಿ ಸುದ್ದಿ; ಡಿಸೆಂಬರ್ 5ರಿಂದ ಬಸವನಗುಡಿಯಲ್ಲಿ ಕಡಲೆಕಾಯಿ ಪರಿಷೆ ಸಂಭ್ರಮ!

ಕರ್ನಾಟಕದ ವಿವಿಧ ಜಿಲ್ಲೆಗಳು ಹಾಗೂ ತಮಿಳುನಾಡು, ಆಂಧ್ರಪ್ರದೇಶದಿಂದ ರೈತರು ಮತ್ತು ವ್ಯಾಪಾರಿಗಳು ಆಗಮಿಸಲಿದ್ದಾರೆ. ಕಡಲೆಕಾಯಿ, ಸಾಂಪ್ರದಾಯಿಕ ತಿಂಡಿ-ತಿನಿಸುಗಳು, ಆಟಿಕೆಗಳ ಮಳಿಗೆಗಳು ಜಾತ್ರೆಯ ಆಕರ್ಷಣೆಯಾಗಲಿವೆ. ಈ ಬಾರಿ ಕಡಲೆಕಾಯಿ ಇಳುವರಿ ಕುಸಿತದಿಂದ ಬೆಲೆ ಏರಿಕೆಯಾಗುವ ಸಾಧ್ಯತೆಯಿದ್ದು, ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ಆದ್ಯತೆ ನೀಡಲಾಗುತ್ತಿದೆ.

Written By Puttaraj K Alur
Published: Nov 22, 2026, 14:11 IST | Updated: Nov 22, 2026, 14:33 IST
Image Credit: Kadlekai Parishe
Join

Bengaluru Kadlekai Parishe 2026: ಸಿಲಿಕಾನ್ ಸಿಟಿ ಬೆಂಗಳೂರಿನ ಸಾಂಪ್ರದಾಯಿಕ ಹಬ್ಬಗಳಲ್ಲೊಂದಾದ ಬಸವನಗುಡಿಯ ಕಡಲೆಕಾಯಿ ಪರಿಷೆಗೆ ದಿನಗಣನೆ ಆರಂಭವಾಗಿದೆ. ಪ್ರತಿ ವರ್ಷ ಸಾವಿರಾರು ಜನರನ್ನ ಆಕರ್ಷಿಸುವ ಈ ಪ್ರಸಿದ್ಧ ಜಾತ್ರೆ ಈ ಬಾರಿ ಡಿಸೆಂಬರ್ 5ರಿಂದ 8ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ. ಕಡಲೆಕಾಯಿ ವ್ಯಾಪಾರ, ಸಾಂಪ್ರದಾಯಿಕ ತಿಂಡಿ-ತಿನಿಸುಗಳು, ಆಟಿಕೆಗಳ ಮಾರಾಟ ಹಾಗೂ ಧಾರ್ಮಿಕ ಆಚರಣೆಗಳೊಂದಿಗೆ ಬಸವನಗುಡಿ ಜಾತ್ರೆಯ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.

ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಸಂಪ್ರದಾಯಕ್ಕೆ ಅನುಗುಣವಾಗಿ ಈ ಬಾರಿಯೂ ಕಡಲೆಕಾಯಿ ಪರಿಷೆಯನ್ನ ಆಯೋಜಿಸಲಾಗುತ್ತಿದೆ. ಡಿಸೆಂಬರ್ 7ರಂದು ಜಾತ್ರೆಯ ಪ್ರಮುಖ ಧಾರ್ಮಿಕ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಸವನಗುಡಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಮುಜರಾಯಿ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜಂಟಿಯಾಗಿ ಈ ಜಾತ್ರೆಯ ಆಯೋಜನೆಯ ಜವಾಬ್ದಾರಿ ವಹಿಸಿಕೊಂಡಿವೆ.

ವಿವಿಧ ಜಿಲ್ಲೆಗಳಿಂದ ಆಗಮಿಸಲಿರುವ ರೈತರು, ವ್ಯಾಪಾರಿಗಳು

ಕಡಲೆಕಾಯಿ ಪರಿಷೆಯ ಪ್ರಮುಖ ಆಕರ್ಷಣೆಯೇ ವಿವಿಧ ಪ್ರದೇಶಗಳಿಂದ ಆಗಮಿಸುವ ರೈತರು ಮತ್ತು ವ್ಯಾಪಾರಿಗಳು. ಕರ್ನಾಟಕದ ಹಲವು ಜಿಲ್ಲೆಗಳಿಂದ ಕಡಲೆಕಾಯಿ ಬೆಳೆಗಾರರು ತಮ್ಮ ಉತ್ಪನ್ನಗಳನ್ನ ತಂದು ಮಾರಾಟ ಮಾಡಲಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ, ಶ್ರೀನಿವಾಸಪುರ, ಮಂಡ್ಯ, ಮಾಗಡಿ, ಮೈಸೂರು, ಕುಣಿಗಲ್ ಹಾಗೂ ತುಮಕೂರು ಭಾಗಗಳಿಂದ ಕಡಲೆಕಾಯಿ ಪೂರೈಕೆಯಾಗಲಿದೆ. ಕರ್ನಾಟಕದ ರೈತರಷ್ಟೇ ಅಲ್ಲದೆ ನೆರೆಯ ರಾಜ್ಯಗಳಾದ ತಮಿಳುನಾಡು ಮತ್ತು ಆಂಧ್ರಪ್ರದೇಶದಿಂದಲೂ ವ್ಯಾಪಾರಿಗಳು ಜಾತ್ರೆಗೆ ಆಗಮಿಸಲಿದ್ದಾರೆ. ಹೀಗಾಗಿ ವಿವಿಧ ಪ್ರದೇಶಗಳಲ್ಲಿ ಬೆಳೆಯುವ ಕಡಲೆಕಾಯಿಯನ್ನ ಒಂದೇ ಸ್ಥಳದಲ್ಲಿ ಖರೀದಿಸಲು ಗ್ರಾಹಕರಿಗೆ ಅವಕಾಶ ದೊರೆಯಲಿದೆ.

ಹಸಿ ಕಡಲೆಕಾಯಿಯಿಂದ ಸಾಂಪ್ರದಾಯಿಕ ತಿಂಡಿಗಳವರೆಗೆ

ಜಾತ್ರೆಗೆ ಭೇಟಿ ನೀಡುವವರಿಗೆ ವಿವಿಧ ಬಗೆಯ ಕಡಲೆಕಾಯಿ ಖರೀದಿಸುವ ಅವಕಾಶ ಇರಲಿದೆ. ಹಸಿ ಕಡಲೆಕಾಯಿ ಹಾಗೂ ಹುರಿದ ಕಡಲೆಕಾಯಿ ಸೇರಿದಂತೆ ಹಲವು ಬಗೆಯ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿರಲಿವೆ. ಕಡಲೆಕಾಯಿ ಪರಿಷೆ ಎಂದರೆ ಕೇವಲ ಕಡಲೆಕಾಯಿ ಖರೀದಿಸುವ ಜಾತ್ರೆಯಷ್ಟೇ ಅಲ್ಲ. ಸಾಂಪ್ರದಾಯಿಕ ತಿಂಡಿ-ತಿನಿಸುಗಳ ಮಳಿಗೆಗಳೂ ಇಲ್ಲಿನ ಪ್ರಮುಖ ಆಕರ್ಷಣೆಗಳಾಗಿವೆ. ಮಂಡಕ್ಕಿ, ಜಿಲೇಬಿ, ಬತ್ತಾಸು ಸೇರಿದಂತೆ ಸಿಹಿ ಮತ್ತು ಖಾರದ ತಿಂಡಿಗಳ ಮಳಿಗೆಗಳು ಜಾತ್ರೆಯಲ್ಲಿ ಕಾಣಿಸಿಕೊಳ್ಳಲಿವೆ. ಇದರ ಜೊತೆಗೆ ಮಕ್ಕಳನ್ನ ಆಕರ್ಷಿಸುವ ಆಟಿಕೆಗಳು, ಬಳೆಗಳು, ಕಿವಿಯೋಲೆಗಳು ಸೇರಿದಂತೆ ವಿವಿಧ ವಸ್ತುಗಳ ಮಾರಾಟವೂ ನಡೆಯಲಿದೆ. ಹೀಗಾಗಿ ಕಡಲೆಕಾಯಿ ಖರೀದಿಯ ಜೊತೆಗೆ ಕುಟುಂಬದವರು ಮತ್ತು ಮಕ್ಕಳು ಜಾತ್ರೆಯ ಇತರ ಮಳಿಗೆಗಳಲ್ಲಿಯೂ ವಸ್ತುಗಳನ್ನ ಖರೀದಿಸಬಹುದಾಗಿದೆ.

ಪ್ಲಾಸ್ಟಿಕ್ ಮುಕ್ತ ಜಾತ್ರೆಗೆ ಈ ಬಾರಿ ಆದ್ಯತೆ

ಈ ಬಾರಿಯ ಕಡಲೆಕಾಯಿ ಪರಿಷೆಯನ್ನ ಪರಿಸರ ಸ್ನೇಹಿಯಾಗಿ ನಡೆಸಲು ಪ್ಲಾಸ್ಟಿಕ್ ಮುಕ್ತ ವ್ಯವಸ್ಥೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ವ್ಯಾಪಾರಿಗಳು ಪ್ಲಾಸ್ಟಿಕ್ ಬಳಸುವುದನ್ನ ತಪ್ಪಿಸುವಂತೆ ಸೂಚನೆ ನೀಡುವ ಸಾಧ್ಯತೆಯಿದೆ. ಜಾತ್ರೆಯ ಸಂದರ್ಭದಲ್ಲಿ ಬಸವನಗುಡಿ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತದೆ. ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುವ ನಿರೀಕ್ಷೆಯಿರುವುದರಿಂದ ಜನಸಂದಣಿ ನಿಯಂತ್ರಣ, ಭದ್ರತೆ, ಸಂಚಾರ ನಿರ್ವಹಣೆ ಮತ್ತು ಸ್ವಚ್ಛತೆಗೆ ಸಂಬಂಧಿಸಿದ ಸಿದ್ಧತೆಗಳನ್ನ ಅಧಿಕಾರಿಗಳು ಕೈಗೊಳ್ಳಲಿದ್ದಾರೆ. ನಾಲ್ಕು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳನ್ನ ರೂಪಿಸುವ ಕಾರ್ಯವೂ ನಡೆಯಲಿದೆ.

ಕಡಲೆಕಾಯಿ ಬೆಲೆ ಏರಿಕೆಯಾಗುವ ಸಾಧ್ಯತೆ

ಈ ಬಾರಿ ಕಡಲೆಕಾಯಿ ಪರಿಷೆಯಲ್ಲಿ ಗ್ರಾಹಕರ ಗಮನ ಸೆಳೆಯಲಿರುವ ಮತ್ತೊಂದು ವಿಚಾರ ಬೆಲೆ. ರಾಜ್ಯದಲ್ಲಿ ಸಮರ್ಪಕ ಮಳೆಯಾಗದ ಕಾರಣ ಕಡಲೆಕಾಯಿ ಇಳುವರಿ ಕುಸಿದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಈ ವರ್ಷದ ಜಾತ್ರೆಯಲ್ಲಿ ಕಡಲೆಕಾಯಿ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಕಾಲು ಲೀಟರ್ ಅಳತೆಯ ಕಡಲೆಕಾಯಿಗೆ ಸುಮಾರು 20ರಿಂದ 25 ರೂಪಾಯಿ ಬೆಲೆ ಇದೆ. ಡಿಸೆಂಬರ್ ಆರಂಭದ ವೇಳೆಗೆ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂಬ ನಿರೀಕ್ಷೆಯಿದೆ. ಹೀಗಾಗಿ ಜಾತ್ರೆಗೆ ಬರುವ ಗ್ರಾಹಕರು ಕಡಲೆಕಾಯಿ ಖರೀದಿಸುವಾಗ ಬೆಲೆಯತ್ತಲೂ ಗಮನ ಹರಿಸಬೇಕಾಗಬಹುದು.

ಕೃಷಿ ಪರಂಪರೆ ಮತ್ತು ಧಾರ್ಮಿಕ ನಂಬಿಕೆಯ ಪ್ರತೀಕ

ಬಸವನಗುಡಿಯ ಕಡಲೆಕಾಯಿ ಪರಿಷೆ ಬೆಂಗಳೂರಿನ ಕೃಷಿ ಪರಂಪರೆ ಹಾಗೂ ಧಾರ್ಮಿಕ ನಂಬಿಕೆಗಳೊಂದಿಗೆ ಬೆಸೆದುಕೊಂಡಿರುವ ಸಾಂಪ್ರದಾಯಿಕ ಆಚರಣೆಯಾಗಿದೆ. ರೈತರು ತಾವು ಬೆಳೆದ ಮೊದಲ ಫಸಲನ್ನ ಬಸವಣ್ಣನಿಗೆ ಅರ್ಪಿಸಿ ಆಶೀರ್ವಾದ ಪಡೆಯುವ ಸಂಪ್ರದಾಯ ಈ ಜಾತ್ರೆಯ ವಿಶೇಷತೆ. ಈ ಹಿನ್ನೆಲೆಯಲ್ಲಿಯೇ ಕಡಲೆಕಾಯಿ ಪರಿಷೆಗೆ ಧಾರ್ಮಿಕ ಮಹತ್ವವೂ ಇದೆ. ಒಟ್ನಲ್ಲಿ ಡಿಸೆಂಬರ್ 5ರಿಂದ 8ರವರೆಗೆ ನಡೆಯಲಿರುವ ಕಡಲೆಕಾಯಿ ಪರಿಷೆಯಲ್ಲಿ ವಿವಿಧ ಜಿಲ್ಲೆಗಳ ರೈತರು ಮತ್ತು ವ್ಯಾಪಾರಿಗಳು ಪಾಲ್ಗೊಳ್ಳಲಿದ್ದು, ಕಡಲೆಕಾಯಿ, ತಿಂಡಿ-ತಿನಿಸುಗಳು ಹಾಗೂ ಆಟಿಕೆಗಳ ಮಳಿಗೆಗಳು ಜಾತ್ರೆಯ ಪ್ರಮುಖ ಆಕರ್ಷಣೆಯಾಗಲಿವೆ. ಈ ಬಾರಿಯೂ ಸಾವಿರಾರು ಜನರು ಬಸವನಗುಡಿಗೆ ಭೇಟಿ ನೀಡಿ ಜಾತ್ರೆಯ ಸಂಭ್ರಮದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES