SOCIAL MEDIA

Newsletter

PARTNER SITES
Select Language Select State

ಬೆಂಗಳೂರು ವಾಹನ ಸವಾರರೇ ಗಮನಿಸಿ: ಅ.10ರಿಂದ ಈ ಪ್ರಮುಖ ರಸ್ತೆಗಳು 20 ದಿನ ಬಂದ್‌!

ಬೆಂಗಳೂರಿನ ಬಸವನಗರ ಮುಖ್ಯ ರಸ್ತೆಯಲ್ಲಿ ವಿಭೂತಿಪುರ ಕೆರೆಯ ಮಳೆನೀರು ಕಾಲುವೆಗೆ ಸೇತುವೆ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ 10ರಿಂದ 20 ದಿನಗಳ ಕಾಲ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಮಾರತ್ತಹಳ್ಳಿ, ಎಚ್‌ಎಎಲ್‌, ವಿಜ್ಞಾನ ನಗರ, ಕಗ್ಗದಾಸಪುರ ಮತ್ತು ಬಿಇಎಂಎಲ್‌ ಕಡೆಗೆ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನ ಬಳಸುವಂತೆ ಸೂಚಿಸಲಾಗಿದೆ.

Written By Puttaraj K Alur
Published: Oct 09, 2026, 07:52 PM IST | Updated: Oct 09, 2026, 08:04 PM IST
Image Credit: Bengaluru Traffic
Join

Bengaluru Traffic Alert: ಬೆಂಗಳೂರಿನಲ್ಲಿ ವಾಹನ ಸವಾರರಿಗೆ ಸಂಚಾರ ನಿರ್ಬಂಧದ ಎಚ್ಚರಿಕೆ. ನಗರದ ಬಸವನಗರ ಮುಖ್ಯ ರಸ್ತೆಯಲ್ಲಿ ಅಕ್ಟೋಬರ್ 10ರಿಂದ ಮುಂದಿನ 20 ದಿನಗಳ ಕಾಲ ವಾಹನ ಸಂಚಾರವನ್ನ ತಾತ್ಕಾಲಿಕವಾಗಿ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತಿದೆ. ವಿಭೂತಿಪುರ ಕೆರೆಯ ಮಳೆನೀರು ಕಾಲುವೆಗೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಮಾರತ್ತಹಳ್ಳಿ, ಎಚ್‌ಎಎಲ್, ಬಸವನಗರ, ವಿಜ್ಞಾನ ನಗರ, ಕಗ್ಗದಾಸಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನ ಬಳಸಬೇಕಾಗಿದೆ.

ಏಕೆ ರಸ್ತೆ ಬಂದ್ ಮಾಡಲಾಗುತ್ತಿದೆ?

ಬೃಹತ್ ಬೆಂಗಳೂರು ಪ್ರಾಧಿಕಾರ (GBA) ವತಿಯಿಂದ ವಿಭೂತಿಪುರ ಕೆರೆಯ ಮಳೆನೀರು ಕಾಲುವೆಗೆ ಹೊಸದಾಗಿ ಕಾಂಕ್ರೀಟ್ ಸೇತುವೆ ನಿರ್ಮಿಸುವ ಕಾಮಗಾರಿ ಕೈಗೊಳ್ಳಲಾಗಿದೆ. ಬಸವನಗರ ಮುಖ್ಯ ರಸ್ತೆಯು ಕಿರಿದಾಗಿರುವುದರಿಂದ ಕಾಮಗಾರಿ ವೇಳೆ ಭಾರೀ ಯಂತ್ರೋಪಕರಣಗಳನ್ನ ಬಳಸಬೇಕಿದೆ. ಈ ಸಂದರ್ಭದಲ್ಲಿ ವಾಹನಗಳ ಸಂಚಾರ ಮುಂದುವರಿದರೆ ಅಪಾಯ ಉಂಟಾಗುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಸ್ತೆಯನ್ನ ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಲಾಗಿದೆ. ಈ ಕಾಮಗಾರಿ ಹಿನ್ನೆಲೆಯಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ. ಅಕ್ಟೋಬರ್ 10ರಿಂದ ಸುಮಾರು 20 ದಿನಗಳವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ ಎಂದು ನೀಡಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.

ಯಾವ ವಾಹನಗಳಿಗೆ ನಿರ್ಬಂಧ?

ಸಂಚಾರ ನಿರ್ಬಂಧವು ವಾಹನಗಳ ಸಂಚಾರ ದಿಕ್ಕು ಮತ್ತು ವರ್ಗವನ್ನ ಆಧರಿಸಿದೆ. ಕೆಲವು ಮಾರ್ಗಗಳಲ್ಲಿ ಭಾರೀ ಸರಕು ವಾಹನಗಳು, ಬಿಎಂಟಿಸಿ ಬಸ್‌ಗಳು, ಶಾಲಾ ಬಸ್‌ಗಳು ಹಾಗೂ ಲಘು ಸರಕು ವಾಹನಗಳ ಸಂಚಾರವನ್ನ ನಿರ್ಬಂಧಿಸಲಾಗಿದೆ. ಮತ್ತೊಂದು ದಿಕ್ಕಿನಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿಷೇಧ ವಿಧಿಸಲಾಗಿದೆ.

ಮಾರ್ಗ 1: ಮಾರತ್ತಹಳ್ಳಿ, ಎಚ್‌ಎಎಲ್, ವಿಭೂತಿಪುರ ಮತ್ತು ಬಸವನಗರ ಕಡೆಯಿಂದ: ಈ ಪ್ರದೇಶಗಳಿಂದ ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಹಾಗೂ ಬಿಇಎಂಎಲ್ ಕಡೆಗೆ ತೆರಳುವ ಭಾರೀ ಸರಕು ವಾಹನಗಳು, ಬಿಎಂಟಿಸಿ ಬಸ್‌ಗಳು, ಶಾಲಾ ಬಸ್‌ಗಳು ಮತ್ತು ಲಘು ಸರಕು ವಾಹನಗಳ ಸಂಚಾರವನ್ನ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಮಾರ್ಗ 2: ವಿಜ್ಞಾನ ನಗರ, ಕಗ್ಗದಾಸಪುರ, ಮಲ್ಲೇಶಪಾಳ್ಯ ಮತ್ತು ಬಿಇಎಂಎಲ್ ಕಡೆಯಿಂದ: ಈ ಪ್ರದೇಶಗಳಿಂದ ವಿಭೂತಿಪುರ, ಬಸವನಗರ, ಎಚ್‌ಎಎಲ್ ಹಾಗೂ ಮಾರತ್ತಹಳ್ಳಿ ಕಡೆಗೆ ಸಂಚರಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಾಗಿ ಈ ಭಾಗದಲ್ಲಿ ಪ್ರಯಾಣಿಸುವವರು ತಮ್ಮ ಪ್ರಯಾಣದ ಮಾರ್ಗವನ್ನ ಮುಂಚಿತವಾಗಿಯೇ ಯೋಜಿಸಿಕೊಳ್ಳುವುದು ಉತ್ತಮ.

ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳ ಮಾಹಿತಿ

ರಸ್ತೆ ಬಂದ್‌ನಿಂದ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಸುರಂಜನ್‌ದಾಸ್ ರಸ್ತೆ ಮಾರ್ಗಗಳನ್ನ ಬಳಸುವಂತೆ ಸೂಚಿಸಲಾಗಿದೆ.

1. ಮಾರತ್ತಹಳ್ಳಿ ಮತ್ತು ಎಚ್‌ಎಎಲ್ ಕಡೆಯಿಂದ ಪ್ರಯಾಣಿಸುವವರಿಗೆ: ಬಸವನಗರ ಮುಖ್ಯ ರಸ್ತೆ ಜಂಕ್ಷನ್‌ನಿಂದ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಮುಂದುವರಿಯಬೇಕು. ಬಳಿಕ ಸುರಂಜನ್‌ದಾಸ್ ರಸ್ತೆ ಜಂಕ್ಷನ್‌ನಲ್ಲಿ ಬಲಕ್ಕೆ ತಿರುಗಿ ಬಿಇಎಂಎಲ್ ಮುಖ್ಯ ರಸ್ತೆಯನ್ನ ತಲುಪಬಹುದು. ಅಲ್ಲಿಂದ ತಮ್ಮ ಗಮ್ಯಸ್ಥಾನಕ್ಕೆ ಅನುಗುಣವಾಗಿ ಮುಂದುವರಿಯಬಹುದು.

2. ವಿಜ್ಞಾನ ನಗರ ಮತ್ತು ಕಗ್ಗದಾಸಪುರ ಕಡೆಯಿಂದ ಬರುವವರಿಗೆ: ಬಿಇಎಂಎಲ್ ಮುಖ್ಯ ರಸ್ತೆಯ ಮೂಲಕ ಸುರಂಜನ್‌ದಾಸ್ ರಸ್ತೆಯನ್ನ ತಲುಪಬೇಕು. ಅಲ್ಲಿಂದ ಹಳೆ ವಿಮಾನ ನಿಲ್ದಾಣ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುಗಿ ಮಾರತ್ತಹಳ್ಳಿ ಅಥವಾ ಎಚ್‌ಎಎಲ್ ಕಡೆಗೆ ಪ್ರಯಾಣಿಸಬಹುದು.

ವಾಹನ ಸವಾರರು ಏನು ಮಾಡಬೇಕು?

ಬಸವನಗರ ಮುಖ್ಯ ರಸ್ತೆಯನ್ನ ಅವಲಂಬಿಸಿರುವವರು ಅಕ್ಟೋಬರ್ 10ರಿಂದ ತಮ್ಮ ದೈನಂದಿನ ಪ್ರಯಾಣದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ವಿಶೇಷವಾಗಿ ಕಚೇರಿಗಳಿಗೆ ತೆರಳುವವರು, ಶಾಲಾ ವಾಹನಗಳ ಸಂಚಾರಕ್ಕೆ ಸಂಬಂಧಿಸಿದವರು ಹಾಗೂ ಸರಕು ಸಾಗಣೆ ವಾಹನಗಳ ಚಾಲಕರು ಪರ್ಯಾಯ ಮಾರ್ಗಗಳನ್ನ ಗಮನದಲ್ಲಿಟ್ಟುಕೊಳ್ಳಬೇಕು.

ಕಾಮಗಾರಿ ನಡೆಯುವ ಅವಧಿಯಲ್ಲಿ ಅನಗತ್ಯ ವಿಳಂಬವನ್ನ ತಪ್ಪಿಸಲು ಪ್ರಯಾಣಕ್ಕೆ ಸ್ವಲ್ಪ ಹೆಚ್ಚುವರಿ ಸಮಯ ಮೀಸಲಿಡುವುದು ಸೂಕ್ತ. ಸಾಧ್ಯವಾದರೆ ಹೊರಡುವ ಮೊದಲು ಸಂಚಾರ ಪೊಲೀಸರ ಇತ್ತೀಚಿನ ಸೂಚನೆಗಳನ್ನ ಪರಿಶೀಲಿಸಬೇಕು. ಕಾಮಗಾರಿಯ ಪ್ರಗತಿ ಮತ್ತು ಸ್ಥಳೀಯ ಸಂಚಾರ ಪರಿಸ್ಥಿತಿಗೆ ಅನುಗುಣವಾಗಿ ಮಾರ್ಗಸೂಚಿಗಳಲ್ಲಿ ಬದಲಾವಣೆಗಳಿದ್ದರೆ ಅವುಗಳನ್ನೂ ಗಮನಿಸಬೇಕು.

ಒಟ್ನಲ್ಲಿ ವಿಭೂತಿಪುರ ಕೆರೆಯ ಮಳೆನೀರು ಕಾಲುವೆಗೆ ಸೇತುವೆ ನಿರ್ಮಿಸುವ ಕಾಮಗಾರಿಯಿಂದ ಬಸವನಗರ ಮುಖ್ಯ ರಸ್ತೆಯಲ್ಲಿ 20 ದಿನಗಳ ಕಾಲ ಸಂಚಾರ ನಿರ್ಬಂಧ ಜಾರಿಯಾಗಲಿದೆ. ಈ ಅವಧಿಯಲ್ಲಿ ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಸುರಂಜನ್‌ದಾಸ್ ರಸ್ತೆಯನ್ನ ಪರ್ಯಾಯ ಮಾರ್ಗಗಳಾಗಿ ಬಳಸುವ ಮೂಲಕ ವಾಹನ ಸವಾರರು ತಮ್ಮ ಪ್ರಯಾಣವನ್ನ ಯೋಜಿಸಿಕೊಳ್ಳಬಹುದು.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES