Bengaluru Police: ಬೆಂಗಳೂರು ಪೊಲೀಸರು ಭರ್ಜರಿ ಬೇಟೆ ಆಡಿದ್ದಾರೆ. ವಿವಿಧ ಕೇಸ್‌ಗಳನ್ನು ಬೆನ್ನತಿದ್ದ ಖಾಕಿ ಟೀಮ್ ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ. ಕಳ್ಳತನ, ಚೈನ್ ಸ್ನ್ಯಾಚಿಂಗ್ ಮಾಡ್ತಾ ಪುಂಡಾಟ ಮೆರಿತಿದ್ದವರ ಕೈಗೆ ಕೋಳ ತೊಡಿಸಿದ್ದಾರೆ. ಸಿಲಿಕಾನ್ ಸಿಟಿಯ ವಿವಿಧ ಕಡೆಗಳಲ್ಲಿ ಈ ಖದೀಮರು ತಮ್ಮ ಕೈ ಚಳಕವನ್ನು ತೋರಿಸಿದ್ದಾರೆ. ಆರೋಪಿಗಳಿಂದ ದೊಡ್ಡ ಮಟ್ಟದಲ್ಲಿಯೇ ಆಭರಣಗಳನ್ನು ಪೊಲೀಸರು ವಶಕ್ಕೆ ಪಡಿಸಿಕೊಂಡಿದ್ದಾರೆ. ಮನೆ ಕಳ್ಳತನ, ಸರಗಳ್ಳತನ, ನಂಬಿದವರ ಮನೆಗೆ ಕನ್ನ ಹಾಕಿರುವುದು, ಜುವೆಲ್ಲರಿ ಶಾಪ್‌ನಲ್ಲಿ ಕೆಲಸಕ್ಕೆ ಇದ್ದು ಅಲ್ಲಿನೇ ಬಂಗಾರ ಕದ್ದು ಆಭರಣ ಮಾಡಿಸಿಕೊಂಡಿರುವುದು ಇದೆ. ಈ ಎಲ್ಲ ಮಾಹಿತಿ ಇಲ್ಲಿದೆ.
ಮಿರ ಮಿರ ಮಿಂಚ್ತಿರುವ ಚಿನ್ನದ ಸರ. ಪಳ ಪಳ ಹೊಳೆಯುತ್ತಿರುವ ಉಂಗುರ. ಬ್ರಾಸ್ ಲೈಟ್ ಕಣ್ಣು ಕುಕ್ಕುವಂತಿದ್ರೆ, ಬಳೆ, ಉಂಗುರ ಮತ್ತು ಬೆಳ್ಳಿ ದೀಪಗಳನ್ನು ಜೋಡಿಸಲಾಗಿದೆ. ಇದು ಜ್ಯುವೆಲರಿ ಶಾಪ್ ಅಲ್ಲವೇ ಅಲ್ಲ. ಕಳ್ಳರು ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿರೋದು. ಕಳ್ಳರು ಕಳ್ಳತನ ಮಾಡಿದ ವಸ್ತುಗಳನ್ನು ನೋಡಿ ಪೊಲೀಸರೇ ಶಾಕ್ ಆಗಿದ್ದಾರೆ. ಏಕೆಂದರೆ ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತದ ಚಿನ್ನಾಭರಣಗಳನ್ನು 13 ಜನ ಖದೀಮರು ಕಳ್ಳತನ ಮಾಡಿದ್ದು ಈಗ ಪೊಲೀಸರ ಅತಿಥಿಗಳು ಆಗಿದ್ದಾರೆ.
ಮನೆಗಳವು, ಚೈನ್ ಸ್ನ್ಯಾಚಿಂಗ್ ಮಾಡ್ತಿದ್ದ ಆಸಾಮಿಗಳು ಅರೆಸ್ಟ್
13 ಜನರ ಬಂಧನ.. 1.18 ಕೋಟಿ ಮೌಲ್ಯದ ಚಿನ್ನಾಭರಣ ವಶ
ಪುಟ್ಟೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗಳ್ಳತನ, ಸರಗಳ್ಳತನ ಹೆಚ್ಚಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪುಟ್ಟೇನಹಳ್ಳಿ ಪೊಲೀಸರು, 9 ಪ್ರಕರಣಗಳನ್ನು ಬೆನ್ನು ಹತ್ತಿದ್ದರು. ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆ ಹಾಕಿ, ಇಬ್ಬರು ಹೊರ ರಾಜ್ಯದ ವ್ಯಕ್ತಿಗಳು ಸೇರಿದಂತೆ 13 ಮಂದಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮೊಹಮ್ಮದ್ ಅಬ್ದುರ್ ರೆಹಮಾನ್, ಪಿಂಟು ದಾಸ್, ದೀಪಕ್, ನಾಗರಾಜ್, ರೋಹಿಥ ದರ್ಜಿ, ಹುಸೇನ್ ಕಾಟತ್, ಅಭಿಷೇಕ್, ಪ್ರೇಕ್ಷಿತಾ ಸೇರಿದಂತೆ ಮಹೇಶ್ ಎಂಬುವವರನ್ನು ಬಂಧಿಸಿದ್ದು, 1.18 ಕೋಟಿ ಮೌಲ್ಯದ 731 ಗ್ರಾಂ ಚಿನ್ನ, 859 ಗ್ರಾಂ ಬೆಳ್ಳಿ ವಸ್ತು, 2 ಆಟೋ ರಿಕ್ಷಾ ಸೇರಿದಂತೆ 4.23 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.
ಕೆಲಸ ಕೊಟ್ಟ ಮಾಲೀಕನಿಗೆ ದ್ರೋಹ ಬಗೆದ ಆಸಾಮಿ
ಚಿನ್ನದ ಗಟ್ಟಿಯನ್ನು ಆಭರಣ ಮಾಡಿಕೊಂಡು ಎಸ್ಕೇಪ್
ಇತ್ತ ಸುಬ್ರಹ್ಮಣ್ಯ ನಗರ ಪೊಲೀಸರು ಚಿನ್ನಾಭರಣ ಕದ್ದು ಅಂಗಡಿಯಲ್ಲಿ ಕೆಲಸ ಬಿಟ್ಟು ಪರಾರಿ ಆಗಿದ್ದ ಐನಾತಿಯನ್ನು ಬಂಧಿಸಿದ್ದಾರೆ. ನೂರ್ ಇಸ್ಲಾಂ ಮಲಿಕ್ ಎಂಬ ಆಸಾಮಿಯು, ಜ್ಯೂವೆಲ್ಲರಿ ಅಂಗಡಿಯಲ್ಲಿ ಗಟ್ಟಿಯನ್ನು ಕರಗಿಸಿ ಚಿನ್ನ ಮಾಡೊ ಕೆಲಸ ಮಾಡ್ತಿದ್ದ. ಆದ್ರೆ ಮಾಲೀಕ ಕೊಟ್ಟ ಗಟ್ಟಿಯಲ್ಲಿ ಚಿನ್ನ ಮಾಡಿಕೊಂಡ ಆಸಾಮಿ ಸ್ವಲ್ಪ ನನಗೂ ಇರಲಿ ಅಂತಾ ಅದನ್ನು ತೆಗೆದುಕೊಂಡು ಪರಾರಿ ಆಗಿದ್ದ, ಅಲ್ಲದೆ ಕೆಲಸಕ್ಕೂ ಬಂದಿರಲಿಲ್ಲ. ಅನುಮಾನಗೊಂಡ ಮಾಲೀಕ ಪರಿಶೀಲಿಸಿದಾಗ ವಿಚಾರ ಗೊತ್ತಾಗಿದೆ. ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು ಆರೋಪಿಯನ್ನ ಬಂಧಿಸಿದ್ದಾರೆ. ಬಂಧಿತನಿಂದ 441 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಮತ್ತೊಂದು ಮನೆಗಳವು ಪ್ರಕರಣದ ತನಿಖೆ ನಡೆಸಿದ ಸುಬ್ರಹ್ಮಣ್ಯನಗರ ಪೊಲೀಸರು ಆರೋಪಿ ಚೇತನ್, ಶ್ರೀನಿಧಿ, ಭುವನೇಶ್ ಎಂಬುವವರನ್ನು ಬಂಧಿಸಿದ್ದು, ಆರೋಪಿಗಳಿಂದ ಒಟ್ಟು 3 ಲಕ್ಷ ಮೌಲ್ಯದ 23 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಹೀಗೆ ಎರಡೂ ಪ್ರಕರಣಗಳಿಂದ 1.06 ಕೋಟಿ ಮೌಲ್ಯದ ಒಟ್ಟು 702 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ.
ಅದೇನೆ ಹೇಳಿ, ಮೈ ಮುರಿದು ದುಡಿಯೋದನ್ನ ಬಿಟ್ಟು ಕಳ್ಳದಾರಿ ಹಿಡಿಯಲು ಬಂದವರು ಪೊಲೀಸರ ಕೈಗೆ ಲಾಕ್ ಆಗಿದ್ದಾರೆ. ಜೈಲಿನಿಂದ ಹೊರ ಬಂದ ನಂತರವಾದರೂ ಬುದ್ಧಿ ಕಲಿತಾರ ಅನ್ನೋದೆ ಸದ್ಯಕ್ಕಿರೋ ಪ್ರಶ್ನೆ.