SOCIAL MEDIA

Newsletter

PARTNER SITES
Select Language Select State

ಲಾಲ್‌ಬಾಗ್ ಟನಲ್ ರಸ್ತೆ ಮಾರ್ಗ ಬದಲಾವಣೆ, ಟೋಲ್ ದರ ಏರಿಕೆ ಇಲ್ಲ: ಕೃಷ್ಣ ಬೈರೇಗೌಡ ಸ್ಪಷ್ಟನೆ

ಬೆಂಗಳೂರಿನ ರಸ್ತೆ, ರಾಜಕಾಲುವೆ ಹಾಗೂ ವೈಟ್ ಟಾಪಿಂಗ್ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಇಂದು ಮಹತ್ವದ ಸಭೆ ನಡೆಸಿದ್ದಾರೆ. ಅವೈಜ್ಞಾನಿಕ ಫುಟ್‌ಪಾತ್ ನಿರ್ಮಾಣದ ಬಗ್ಗೆ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಪ್ರತಿದಿನದ ಕಾಮಗಾರಿ ಅಪ್‌ಡೇಟ್ ಕಡ್ಡಾಯಗೊಳಿಸಿದ್ದಾರೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

Written By Krishna NK
Published: Nov 25, 2026, 21:40 IST | Updated: Nov 25, 2026, 21:40 IST
Image Credit: Krishna Byregowda
Join

ಬೆಂಗಳೂರು: ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಕುರಿತು ಬೆಂಗಳೂರು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರು ಇಂದು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಹತ್ವದ ರಿವ್ಯೂ ಮೀಟಿಂಗ್ ನಡೆಸಿದರು. ಐದು ಪಾಲಿಕೆಗಳ ಅಧಿಕಾರಿಗಳು ಹಾಗೂ ಬಿಸ್ಮೈಲ್ (BSMILE) ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾಮಗಾರಿಗಳ ವಿಳಂಬ ಮತ್ತು ಅವೈಜ್ಞಾನಿಕ ನಿರ್ಮಾಣಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ರಸ್ತೆ ಮತ್ತು ರಾಜಕಾಲುವೆ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ವೈಟ್ ಟಾಪಿಂಗ್ ಕಾಮಗಾರಿಗಳ ವೇಗವನ್ನು ಹೆಚ್ಚಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅವೈಜ್ಞಾನಿಕ ಫುಟ್‌ಪಾತ್‌ಗೆ ಸಚಿವರ ಆಕ್ರೋಶ
ಸಭೆಯ ವೇಳೆ ಸಮರ್ಪಕವಾಗಿ ಕಾರ್ಯನಿರ್ವಹಿಸದ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡ ಕೃಷ್ಣ ಬೈರೇಗೌಡ, "ಫುಟ್‌ಪಾತ್ ರಸ್ತೆಗಿಂತ ಎರಡು ಅಡಿ ಎತ್ತರ ಇದ್ದರೆ ಮಕ್ಕಳು, ವಯಸ್ಸಾದವರು, ವಿಕಲಚೇತನರು ಹಾಗೂ ವ್ಹೀಲ್ ಚೇರ್ ಬಳಸುವವರು ಹೇಗೆ ಹೋಗುತ್ತಾರೆ? ಫುಟ್‌ಪಾತ್ ಅನ್ನು ವೈಜ್ಞಾನಿಕವಾಗಿ ನಿರ್ಮಿಸಲು ನಿಮಗೇನು ಸಮಸ್ಯೆ?" ಎಂದು ಪ್ರಶ್ನಿಸಿದರು. "ಯಾವತ್ತಾದರೂ ಫುಟ್‌ಪಾತ್‌ನಲ್ಲಿ ನೀವು ನಡೆದಿದ್ದರೆ ಇಂತಹ ಫುಟ್‌ಪಾತ್ ಮಾಡುತ್ತಿದ್ದೀರಾ?" ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆನ್‌ಲೈನ್ ಮೂಲಕ ಪ್ರತಿದಿನದ ಅಪ್‌ಡೇಟ್ ಕಡ್ಡಾಯ
ರಸ್ತೆಗಳ ಸ್ಥಿತಿಗತಿ ಕುರಿತು ಸಾರ್ವಜನಿಕರಿಂದಲೂ ದೂರುಗಳು ಬರುತ್ತಿರುವುದನ್ನು ಪ್ರಸ್ತಾಪಿಸಿದ ಸಚಿವರು, ಸರ್ಕಾರದಿಂದ ಜಿಬಿಎಗೆ ಅನುದಾನ ನೀಡಲಾಗಿದೆ. ಮಳೆ ಹಾಗೂ ಇತರೆ ಪ್ರತಿಕೂಲ ವಾತಾವರಣದಿಂದ ಕಾಮಗಾರಿ ಪ್ರಗತಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿತ್ತು. ಈಗ ಮಳೆಯ ಅವಧಿ ಮುಗಿದಿರುವುದರಿಂದ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರು. ಮುಂದಿನ ದಿನಗಳಲ್ಲಿ ಪ್ರತಿ 10 ದಿನಕ್ಕೊಮ್ಮೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ನೇರವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಅಲ್ಲದೆ, ಪ್ರತಿದಿನದ ಕಾಮಗಾರಿ ಅಪ್‌ಡೇಟ್, ವಿಡಿಯೋ, ಫೋಟೋ ಮತ್ತು ದೈನಂದಿನ ಖರ್ಚಿನ ವಿವರಗಳನ್ನು ಆನ್‌ಲೈನ್ ಸಿಸ್ಟಮ್ ಮೂಲಕ ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿದರು.

ವೈಟ್ ಟಾಪಿಂಗ್ ಹಾಗೂ ರಸ್ತೆ ಅಭಿವೃದ್ಧಿ ವಿವರ
ಪ್ರಸ್ತುತ 120 ಕಿ.ಮೀ. ಉದ್ದದ ವೈಟ್ ಟಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ, ಸಂಚಾರ ದಟ್ಟಣೆ ಸಮಸ್ಯೆಯಿಂದ ಒಂದೇ ಬಾರಿಗೆ ಸಂಪೂರ್ಣ ರಸ್ತೆಯನ್ನು ಬಂದ್ ಮಾಡಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿಲ್ಲ; ಸುಮಾರು 500 ಮೀಟರ್ ಮಾತ್ರ ಬಂದ್ ಮಾಡಿ ಕೆಲಸ ಮಾಡಬೇಕಿದೆ. ಕೆಲವೆಡೆ ಜಲಮಂಡಳಿ ಕಾಮಗಾರಿಗಳಿಂದಲೂ ವಿಳಂಬವಾಗಿದ್ದು, ಡಿಸೆಂಬರ್ ಒಳಗಾಗಿ ಎಲ್ಲಾ ವೈಟ್ ಟಾಪಿಂಗ್ ಕಾಮಗಾರಿಗಳನ್ನು ಮುಗಿಸಲು ಸಾಧ್ಯವಾಗುತ್ತಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. 2,321 ಕೋಟಿ ರೂ. ವೆಚ್ಚದಲ್ಲಿ 88 ರಸ್ತೆಗಳ ಅಭಿವೃದ್ಧಿ ಹಾಗೂ ಹೊರ ವರ್ತುಲ ರಸ್ತೆ (ಔಟರ್ ರಿಂಗ್ ರೋಡ್) ಅಭಿವೃದ್ಧಿಗೆ 477 ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಪಿಂಕ್ ಲೈನ್ ಮೆಟ್ರೋ ಕಾಮಗಾರಿ ಪೂರ್ಣಗೊಂಡ ಭಾಗಗಳಲ್ಲಿ ವೈಟ್ ಟಾಪಿಂಗ್ ಕೆಲಸ ಆರಂಭಿಸಲಾಗುವುದು ಎಂದರು.

22 ಎಕರೆ ರಾಜಕಾಲುವೆ ಒತ್ತುವರಿ ಪತ್ತೆ
ಬೆಂಗಳೂರು ಹೊರವಲಯದಲ್ಲಿ 22 ಎಕರೆ ರಾಜಕಾಲುವೆ ಜಾಗ ಒತ್ತುವರಿಯಾಗಿರುವುದು ಸರ್ವೆ ವೇಳೆ ಬೆಳಕಿಗೆ ಬಂದಿದೆ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು. 2,830 ಕೋಟಿ ರೂ. ವೆಚ್ಚದಲ್ಲಿ ರಾಜಕಾಲುವೆಗಳ ಅಭಿವೃದ್ಧಿ ಕೈಗೆತ್ತಿಕೊಳ್ಳಲಾಗಿದ್ದು, ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ಒತ್ತುವರಿಯಾದ 22 ಎಕರೆ ಪೈಕಿ ಒಂದೇ ಕ್ಷೇತ್ರದಲ್ಲಿ 9 ಎಕರೆ ಜಾಗವನ್ನು ತೆರವುಗೊಳಿಸಿ ವಶಕ್ಕೆ ಪಡೆಯಲಾಗಿದೆ. ಕೆರೆ ಕೋಡಿ ತುಂಬುವ ಜಾಗದಲ್ಲೇ ಕಾಲುವೆ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಅಲ್ಲಿ ಮಣ್ಣು ತೆಗೆದು ಆರ್‌ಸಿಸಿ (RCC) ಗೋಡೆ ನಿರ್ಮಿಸಬೇಕಾಗುತ್ತದೆ ಎಂದು ತಿಳಿಸಿದರು.

ಲಾಲ್‌ಬಾಗ್ ಟನಲ್ ರಸ್ತೆ ಅಲೈನ್‌ಮೆಂಟ್ ಬದಲಾವಣೆ
ಲಾಲ್‌ಬಾಗ್ ಒಳಗೆ ಟನಲ್ ರಸ್ತೆ ನಿರ್ಮಿಸುವುದಿಲ್ಲ; ಲಾಲ್‌ಬಾಗ್‌ನಿಂದ ಟನಲ್ ಹೊರಗೆ ಹೋಗುವಂತೆ ಅಲೈನ್‌ಮೆಂಟ್ ಬದಲಾಯಿಸಲಾಗುವುದು ಎಂದು ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು. ಈ ಸಂಬಂಧ ಸರ್ವೆ ನಡೆಯುತ್ತಿದ್ದು, ಎರಡು ಪರ್ಯಾಯ ಮಾರ್ಗಗಳನ್ನು ಪರಿಶೀಲಿಸಲಾಗುತ್ತಿದೆ. ಅಂತಿಮ ಸ್ಥಳ ಹಾಗೂ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಯುತ್ತಿದೆ. ಅಲೈನ್‌ಮೆಂಟ್ ಬದಲಾವಣೆಯಿಂದ ಯೋಜನಾ ವೆಚ್ಚ ಹೆಚ್ಚಾಗುವ ಸಾಧ್ಯತೆ ಇದ್ದು, ಅದನ್ನು ಸರ್ಕಾರ ಭರಿಸಲಿದೆ. ಟೋಲ್ ದರ ಹೆಚ್ಚಿಸುವುದಿಲ್ಲ, ಆದರೆ ಅವಧಿ ವಿಸ್ತರಣೆಯಾಗಬಹುದು. ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಗುತ್ತಿಗೆದಾರರೊಂದಿಗೆ ಮಾತುಕತೆ ನಡೆಸಲು ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಲಾಗಿದೆ ಮತ್ತು ಸರ್ಕಾರದಿಂದ 7,000 ಕೋಟಿ ರೂ. ನೀಡಲಾಗುವುದು ಎಂದರು.

ಬೆಂಗಳೂರು ಜಾತ್ರೆ, ಟ್ರಾಫಿಕ್ ಹಾಗೂ ನೈಟ್ ಲೈಫ್ ಕುರಿತು ಮಾತು
ಚಳಿಗಾಲದ ಅಧಿವೇಶನದ ಅವಧಿಯಲ್ಲಿ 'ಬೆಂಗಳೂರು ಜಾತ್ರೆ' ಕಾರ್ಯಕ್ರಮಗಳ ಕುರಿತು ಪ್ರತಿಕ್ರಿಯಿಸಿದ ಅವರು, ಬಹುತೇಕ ಕಾರ್ಯಕ್ರಮಗಳು ಶನಿವಾರ ಮತ್ತು ಭಾನುವಾರ ನಡೆಯಲಿದ್ದು, ಆ ದಿನಗಳಲ್ಲಿ ಅಧಿವೇಶನ ಇರುವುದಿಲ್ಲ. ಜಾತ್ರೆ ದಿನಾಂಕವನ್ನು ಸೆಪ್ಟೆಂಬರ್‌ನಲ್ಲೇ ಘೋಷಿಸಲಾಗಿದ್ದು, ಇದು ಸಾರ್ವಜನಿಕರಿಗಾಗಿ ಆಯೋಜಿಸುತ್ತಿರುವ ಕಾರ್ಯಕ್ರಮ ಎಂದು ಸಮರ್ಥಿಸಿಕೊಂಡರು. ಸಂಚಾರ ಸಮಸ್ಯೆ ಬಗೆಹರಿಸುವಂತೆ ಪ್ರಧಾನಮಂತ್ರಿಗಳಿಂದ ಸಲಹೆ ಬಂದಿದ್ದು, ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಲಾಗಿದೆ. ಜೊತೆಗೆ, ನೈಟ್ ಲೈಫ್ ವಿಸ್ತರಣೆ ಕುರಿತ ಹೋಟೆಲ್‌ಗಳ ಮನವಿ ಗಮನಕ್ಕೆ ಬಂದಿಲ್ಲವಾದರೂ, ಹಿಂದೆ 10 ಗಂಟೆಯಿದ್ದ ಅವಧಿಯನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಿಸ್ತರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಿಸುವ ಬಗ್ಗೆ ಪರಿಶೀಲಿಸುವ ಮುನ್ಸೂಚನೆ ನೀಡಿದರು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES