ಮಾಡೋದು ಮಾತ್ರ ಪೋಸ್ಟ್ ಮಾಸ್ಟರ್ ವೃತ್ತಿ. ಆದರೆ ಶೋಕಿಗಾಗಿ ಮಾಡೋದು ಮಾತ್ರ ಚೈನ್ ಸ್ನ್ಯಾಚಿಂಗ್, ಹಗಲು ಹೊತ್ತಲ್ಲಿ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ರೆ ರಸ್ತೆಗಿಳಿದ್ರೆ ಸರಗಳ್ಳ ಮಾಡುತ್ತಿದ್ದನು. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ವಿಳಾಸ ಕೇಳುವ ನೆಪದಲ್ಲಿ ಈ ಪೋಸ್ಟ್ ಮಾಸ್ಟರ್ ತನ್ನ ಕೈಚಳಕ ತೋರಿಸುತ್ತಿದ್ದನು. ಮೊಬೈಲ್ ಕೊಟ್ಟು ಮಾತನಾಡುವಂತೆ ಮಾಡಿ, ಕತ್ತಿನಲ್ಲಿದ್ದ ಚಿನ್ನದ ಸರ ಕದ್ದು ಥಾರ್ ಕಾರಿನಲ್ಲಿ ಪರಾರಿಯಾಗುತ್ತಿದ್ದನಂತೆ. ಕೇವಲ ಎರಡು ದಿನಗಳಲ್ಲಿ ನಾಲ್ಕು ಮಹಿಳೆಯರಿಗೆ ಟೋಪಿ ಹಾಕಿದ್ದ ಆರೋಪ ಇವನ ಮೇಲಿದೆ. ಈಗ ಇದೇ ಪೋಸ್ಟ್ ಮಾಸ್ಟರ್ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಇದು ಒಂದೆರಡು ಪ್ರಕರಣವಲ್ಲ, ಕೇವಲ ಎರಡು ದಿನದಲ್ಲಿ ನಾಲ್ಕು ಮಹಿಳೆಯರಿಗೆ ಯಾಮಾರಿಸಿದ್ದಾನೆ. ಈತ ಆನೇಕಲ್ ತಾಲ್ಲೂಕಿನ ಗೆರಟಿಗನಬೆಲೆ ನಿವಾಸಿ ಜೀವನ್ ಕುಮಾರ್. ಸಿಡಿಹೊಸಕೋಟೆಯ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದ. ಈತನ ವಿರುದ್ಧ ಇದೀಗ ಸರಗಳ್ಳತನದ ಆರೋಪ ಕೇಳಿಬಂದಿದೆ. ಮಹೀಂದ್ರಾ ಥಾರ್ ಕಾರಿನಲ್ಲಿ ಬರುತ್ತಿದ್ದ ಆರೋಪಿ, ಒಂಟಿಯಾಗಿ ಸಿಗುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ. ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಬಳಿ ಹೋಗುತ್ತಿದ್ದನು. ನಂತರ ಮಾತಿನ ಮೂಲಕ ಅವರ ಗಮನ ಬೇರೆಡೆ ಸೆಳೆದು, ಕ್ಷಣಾರ್ಧದಲ್ಲಿ ಚಿನ್ನದ ಸರ ಕದ್ದು ಪರಾರಿಯಾಗುತ್ತಿದ್ದನು ಎನ್ನುವ ಆರೋಪ ಇವನ ಮೇಲಿದೆ.
ಇನ್ನೊಂದು ಶಾಕ್ ಅಂದ್ರೆ ಮೊಬೈಲ್ ಕೊಟ್ಟು ಮಾತನಾಡುವಂತೆ ಮಾಡಿ, ಅದೇ ಸಮಯದಲ್ಲಿ ಮಹಿಳೆಯರ ಕತ್ತಿನಲ್ಲಿದ್ದ ಸರ ಕದ್ದು ಪರಾರಿಯಾಗುತ್ತಿದ್ದ ಎನ್ನಲಾಗಿದೆ. ತಳಿ, ಹೊಸೂರು, ಮತ್ತಿಗಿರಿಯ ಹಲವು ಭಾಗಗಳಲ್ಲಿ ಸರಣಿ ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದನು. ಕೇವಲ ಎರಡು ದಿನಗಳಲ್ಲಿ ನಾಲ್ವರು ಮಹಿಳೆಯರಿಂದ ಚಿನ್ನಾಭರಣ ಕಳವು ಮಾಡಿರುವ ಆರೋಪಿ ವೃದ್ಧೆಯರನ್ನೂ ಬಿಡದೆ ಸರಗಳ್ಳತನ ಮಾಡುತ್ತಿದ್ದ ಎನ್ನಲಾಗಿದೆ.
ಇನ್ನು ಸರಣಿ ಚೈನ್ ಸ್ನ್ಯಾಚಿಂಗ್ ಪ್ರಕರಣಗಳ ತನಿಖೆ ನಡೆಸುತ್ತಿದ್ದ ತಳಿ ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಜೀವನ್ ಕುಮಾರ್‌ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಮಹೀಂದ್ರಾ ಥಾರ್ ಕಾರನ್ನೂ ಸೀಜ್ ಮಾಡಿದ್ದಾರೆ. ಸದ್ಯ ಆರೋಪಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿರುವ ತಳಿ ಪೊಲೀಸರು, ಇನ್ನೂ ಎಷ್ಟು ಪ್ರಕರಣಗಳಲ್ಲಿ ಈತನ ಕೈವಾಡ ಇದೆ ಅನ್ನೋದನ್ನ ಬಯಲಿಗೆಳೆಯುತ್ತಿದ್ದಾರೆ.
ಬೆಳಗ್ಗೆ ಅಂಚೆ ಕಚೇರಿಯಲ್ಲಿ ಜವಾಬ್ದಾರಿಯುತ ಅಧಿಕಾರಿಯಾಗಿದ್ದ ಜೀವನ್, ಸಂಜೆ ಆಗುತ್ತಿದ್ದಂತೆ ಚಿನ್ನದ ಸರಗಳ ಮೇಲೆ ಕಣ್ಣು ಹಾಕುತ್ತಿದ್ದ. ಪೋಸ್ಟ್ ಮಾಸ್ಟರ್ ಕೆಲಸದ ಜೊತೆಗೆ ಸರಗಳ್ಳತನದ ದಾರಿ ಹಿಡಿದಿದ್ದ ಆರೋಪ ಜೀವನ್ ಕುಮಾರ್ ಮೇಲಿದ್ದು, ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ಕೊನೆಗೂ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ತಳಿ ಪೊಲೀಸರ ಬಲೆಗೆ ಪೋಸ್ಟ್ ಮಾಸ್ಟರ್ ಸಿಕ್ಕಿಬಿದ್ದಿದ್ದಾನೆ. ಈತನ ಹಿಂದೆ ಇನ್ನೆಷ್ಟು ಪ್ರಕರಣಗಳಿವೆ, ಯಾರು ಯಾರನ್ನು ಟಾರ್ಗೆಟ್ ಮಾಡಿದ್ದ, ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸ್ ತನಿಖೆಯಲ್ಲಿ ಉತ್ತರ ಸಿಗಬೇಕಿದೆ.
ಒಳ್ಳೆಯ ಸರ್ಕಾರಿ ಕೆಲಸ ಇದ್ದರೂ ಆರೋಪಿಯೂ ಇಂತಹ ಕೃತ್ಯ ಯಾಕೆ ಮಾಡುತ್ತಿದ್ದನು ಎನ್ನುವುದು ಎಲ್ಲರಿಗೂ ಅನುಮಾನ ಮೂಡಿಸಿದೆ. ಪೋಸ್ಟರ್ ಮಾಸ್ಟರ್ ಹುದ್ದೆ ಎಂದರೆ ಕೇಂದ್ರ ಸರ್ಕಾರದಡಿ ಬರುವಂತಹ ಕೆಲಸವಾಗಿದೆ. ಸಂಬಳ ಸೇರಿ ಎಲ್ಲವೂ ಸರಿಯಾದ ಸಮಯಕ್ಕೆ ಆಗುತ್ತದೆ. ಆದರೆ ಇಂತಹ ಕೆಲಸವನ್ನು ಮಾಡುತ್ತಾ ಚೈನ್ ಸ್ನ್ಯಾಚಿಂಗ್ ಮಾಡುವ ಕೆಲಸಕ್ಕೆ ಇಳಿದಿರುವುದು ನಾಚಿಗೆಗೇಡಿನ ಸಂಗತಿ. ಯಾರೇ ಆಗಲಿ ಸರ್ಕಾರಿ ಕೆಲಸ ಇದ್ದವರೂ ಇಂತಹ ಕಳೆ ಮಟ್ಟಕ್ಕೆ ಇಳಿಯುವುದಿಲ್ಲ. ತಮ್ಮದೇ ಆದ ವೃತ್ತಿಯನ್ನು ನಿರ್ವಹಿಸಿಕೊಂಡು ಹೋಗುತ್ತಾರೆ. ಸರ್ಕಾರವೂ ಕೊಡುವ ಹಣಕ್ಕಿಂತ ಕದ್ದು ತಿನ್ನುವ ಹಣದಲ್ಲಿ ಈ ಆರೋಪಿಗೆ ತೃಪ್ತಿ ಹೆಚ್ಚು ಅನಿಸುತ್ತೆ. ಅದಕ್ಕೆ ಇಂತಹ ದುಷ್ಕ್ಯೃತ್ಯಕ್ಕೆ ಇಳಿದ್ದನು ಎನಿಸುತ್ತದೆ. ಏನೇ ಅಗಲಿ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸಿ ಆರೋಪಿಯನ್ನು ಬಲೆಗೆ ಕೆಡವಿದ್ದಾರೆ. ಇನ್ನಷ್ಟು ವಿಚಾರಣೆಯಿಂದ ಮಾಹಿತಿ ಹೊರ ಬರಬೇಕಿದೆ. ಆರೋಪಿ ಜೊತೆ ಇನ್ನು ಯಾರಾದರೂ ಇದ್ದರಾ ಎನ್ನುವುದು ತಿಳಿದು ಬರಬೇಕಿದೆ. ಥಾರ್ ಕಾರಿನಲ್ಲಿಯೇ ಬಂದ್ ಚೈನ್ ಸ್ನ್ಯಾಚಿಂಗ್ ಮಾಡುತ್ತಿದ್ದನು ಎನ್ನುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.