ಆರೋಗ್ಯ ಏರುಪೇರಿನ ನಡುವೆಯೂ ನಿಲ್ಲದ ಆಶಾ ಹೋರಾಟ : 25ಕ್ಕೂ ಹೆಚ್ಚು ಕಾರ್ಯಕರ್ತೆಯರು ಅಸ್ವಸ್ಥ
ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದಿಗೆ 11ನೇ ದಿನಕ್ಕೆ ಕಾಲಿಟ್ಟಿದೆ. ಬೇಡಿಕೆಗಳ ಈಡೇರಿಕೆಗಾಗಿ ಹೋರಾಡುತ್ತಿರುವ ಕಾರ್ಯಕರ್ತೆಯರಿಗೆ ವಿವಿಧ ಸಂಘಟನೆಗಳ ಬೆಂಬಲ ಹೆಚ್ಚುತ್ತಿದ್ದರೂ, ಸರ್ಕಾರದ ಸಂಧಾನ ಮಾತುಕತೆಗಳು ಇನ್ನೂ ಫಲ ನೀಡಿಲ್ಲ. ಇದರ ನಡುವೆಯೇ ಧರಣಿ ನಿರತ ಹಲವರ ಆರೋಗ್ಯದಲ್ಲಿ ಏರುಪೇರಾಗುತ್ತಿರುವುದು ಆತಂಕ ಮೂಡಿಸಿದೆ. 11ನೇ ದಿನದ ಬೆಳವಣಿಗೆಗಳು ಮತ್ತು ಕಾರ್ಯಕರ್ತೆಯರ ಆರೋಗ್ಯ ಸ್ಥಿತಿಯ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು : ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಇಂದಿಗೆ 11ನೇ ದಿನ. ಬೇಡಿಕೆಗಳ ಈಡೇರಿಕೆಗಾಗಿ ಹಗಲು,ರಾತ್ರಿ ಎನ್ನದೆ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುತ್ತಿರುವ ಆಶಾಗಳಿಗೆ ವಿವಿಧ ಸಂಘಟನೆಗಳು ಹಾಗೂ ಗಣ್ಯರು ಬೆಂಬಲ ಸೂಚಿಸಿದ್ದಾರೆ. ಮತ್ತೊಂದೆಡೆ ಸರ್ಕಾರದ ಸಂಧಾನ ಪ್ರಯತ್ನಗಳೂ ಫಲ ನೀಡಿಲ್ಲ. ಹಾಗಾದ್ರೆ 11ನೇ ದಿನದ ಹೋರಾಟದಲ್ಲಿ ಏನೆಲ್ಲಾ ಆಯ್ತು..? ಆಶಾಗಳ ಆರೋಗ್ಯ ಸ್ಥಿತಿ ಹೇಗಿದೆ..? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್
ಮಳೆ, ಚಳಿ, ಬಿಸಿಲು ಯಾವುದಕ್ಕೂ ಜಗ್ಗದೆ ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮುಂದುವರಿಸಿದ್ದಾರೆ. ದಿನದಿಂದ ದಿನಕ್ಕೆ ಪ್ರತಿಭಟನೆಗೆ ಬೆಂಬಲವೂ ಹೆಚ್ಚಾಗುತ್ತಿದೆ. ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹಿದ್, INTUC ಅಧ್ಯಕ್ಷ ಶ್ಯಾಮಣ್ಣ ರೆಡ್ಡಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಆಶಾಗಳ ಹೋರಾಟಕ್ಕೆ ಕೈಜೋಡಿಸಿದ್ದಾರೆ.
ಇನ್ನೊಂದೆಡೆ ಆಶಾಗಳ ಪ್ರತಿಭಟನೆ ಅಂತ್ಯಗೊಳಿಸಲು ಸರ್ಕಾರದ ಕಡೆಯಿಂದ ಮಾತುಕತೆಯ ಪ್ರಯತ್ನಗಳು ನಡೆಯುತ್ತಲೇ ಇವೆ. ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ನೇತೃತ್ವದಲ್ಲಿ ಹಲವು ಸುತ್ತಿನ ಸಂಧಾನಕ್ಕೆ ಪ್ರಯತ್ನ ನಡೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ನಿನ್ನೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಜಿ.ಸಿ. ಚಂದ್ರಶೇಖರ್ ಅವರೊಂದಿಗೆ ನಡೆದ ಸಭೆಯೂ ಯಶಸ್ವಿಯಾಗಿಲ್ಲ. ಹೀಗಾಗಿ ಸರ್ಕಾರ ಮತ್ತು ಆಶಾ ಕಾರ್ಯಕರ್ತೆಯರ ನಡುವಿನ ಬಿಕ್ಕಟ್ಟು ಇನ್ನೂ ಮುಂದುವರಿದಿದೆ.
ಒಂದೆಡೆ ಬೇಡಿಕೆ ಈಡೇರಿಕೆಗಾಗಿ ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಪ್ರತಿಭಟನಾ ಸ್ಥಳದಲ್ಲೇ ಆಶಾ ಕಾರ್ಯಕರ್ತೆಯರ ಆರೋಗ್ಯ ಕೈಕೊಡುತ್ತಿದೆ. ಕಳೆದ 11 ದಿನಗಳಲ್ಲಿ 25ಕ್ಕೂ ಹೆಚ್ಚು ಮಹಿಳೆಯರು ಅಸ್ವಸ್ಥರಾಗಿದ್ದಾರೆ. ಎದೆನೋವು, ಮೂರ್ಛೆ ತಪ್ಪುವುದು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಅಸ್ವಸ್ಥಗೊಂಡ ಕಾರ್ಯಕರ್ತೆಯರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ತಡರಾತ್ರಿಯೂ ಆಶಾ ಕಾರ್ಯಕರ್ತೆಯೊಬ್ಬರು ಅಸ್ವಸ್ಥರಾಗಿದ್ದಾರೆ. ಚಿಕ್ಕಮಗಳೂರು ಮೂಲದ 38 ವರ್ಷದ ಗಂಗಾ ಎಂಬುವವರಿಗೆ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿದೆ. ತಕ್ಷಣವೇ ರಾತ್ರಿ 2.30ರ ಸುಮಾರಿಗೆ ಅವರನ್ನು ಕೆ.ಸಿ. ಜನರಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಗಂಗಾ ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಒಟ್ಟಿನಲ್ಲಿ 11 ದಿನಗಳಿಂದ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಒಂದೆಡೆ ಬೇಡಿಕೆ ಈಡೇರಿಸುವಂತೆ ಆಶಾಗಳ ಪಟ್ಟು, ಮತ್ತೊಂದೆಡೆ ಸಂಧಾನಕ್ಕೆ ಮುಂದಾಗಿರುವ ಸರ್ಕಾರ. ಈ ಹಗ್ಗಜಗ್ಗಾಟಕ್ಕೆ ಕೊನೆ ಯಾವಾಗ..? ಆಶಾಗಳ ಬೇಡಿಕೆಗಳಿಗೆ ಸರ್ಕಾರ ಯಾವಾಗ ಸ್ಪಂದಿಸುತ್ತೆ..? ಕಾರ್ಯಕರ್ತೆಯರು ಮತ್ತೆ ಕರ್ತವ್ಯಕ್ಕೆ ಮರಳೋದು ಯಾವಾಗ ಅನ್ನೋದನ್ನ ಕಾದುನೋಡಬೇಕಿದೆ.