ಅಮೃತಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಂದನ್ ಕೊಲೆ ಕೇಸ್; ಸಲಿಂಗ ಸಂಬಂಧದ ವಿಚಾರಕ್ಕೆ ಜಿಮ್ ಟ್ರೈನರ್ ಹತ್ಯೆ!
ಕೊಲೆಗೂ ಮುನ್ನ ಏನೆಲ್ಲಾ ನಡೆದಿತ್ತು..? ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಸಿಕ್ಕಿರುವ ಸಾಕ್ಷ್ಯಗಳು ಬೆಚ್ಚಿ ಬೀಳಿಸುವಂತಿವೆ. ಹಾಗಾದ್ರೆ ನಂದನ್ ಕೊಲೆಗೆ ಅಸಲಿ ಕಾರಣ ಏನೂ ಎಂಬುದನ್ನು ಹೇಳ್ತಿವಿ ನೋಡಿ.
ಬೆಂಗಳೂರು: ಅಮೃತಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ಜಿಮ್ ಟ್ರೈನರ್ ನಂದನ್ ಕೊಲೆ ಪ್ರಕರಣದಲ್ಲಿ ಸ್ಫೋಟಕ ಸತ್ಯಗಳು ಹೊರಬಿದ್ದಿವೆ. ಕೊಲೆಗೆ ಕಾರಣವೇನು..? ಕೊಲೆಗೂ ಮುನ್ನ ಏನೆಲ್ಲಾ ನಡೆದಿತ್ತು..? ಪ್ರಕರಣದ ತನಿಖೆಯಲ್ಲಿ ಪೊಲೀಸರಿಗೆ ಸಿಕ್ಕಿರುವ ಸಾಕ್ಷ್ಯಗಳು ಬೆಚ್ಚಿ ಬೀಳಿಸುವಂತಿವೆ. ಹಾಗಾದ್ರೆ ನಂದನ್ ಕೊಲೆಗೆ ಅಸಲಿ ಕಾರಣ ಏನೂ ಎಂಬುದನ್ನು ಹೇಳ್ತಿವಿ ನೋಡಿ.
ಕಟ್ಟುಮಸ್ತಾದ ದೇಹ ಹೊಂದಿದ್ದ ಜಿಮ್ ಟ್ರೈನರ್ ನಂದನ್ ಕೊಲೆ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರಂಭದಲ್ಲೇ ಕೆಲ ಅನುಮಾನಗಳು ಮೂಡಿದ್ದವು. ಮೃತದೇಹದಲ್ಲಿ ಕಂಡುಬಂದಿದ್ದ ಗಾಯದ ಗುರುತುಗಳು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದವು.ಇದೀಗ ವೈದ್ಯಕೀಯ ಪರಿಶೀಲನೆ ಹಾಗೂ ತನಿಖೆಯಿಂದ ಪ್ರಕರಣದ ಮತ್ತಷ್ಟು ಅಂಶಗಳು ಬೆಳಕಿಗೆ ಬಂದಿವೆ.ನಂದನ್ ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಕಂಡುಬಂದಿದ್ದ ಕಚ್ಚಿದ ಗುರುತುಗಳು ಪ್ರಕರಣಕ್ಕೆ ಹೊಸ ತಿರುವು ನೀಡಿವೆ. ಇದೇ ರೀತಿಯ ಗುರುತುಗಳು ಆರೋಪಿಯ ದೇಹದಲ್ಲೂ ಪತ್ತೆಯಾಗಿರುವುದು ಪೊಲೀಸರ ತನಿಖೆಗೆ ಪ್ರಮುಖ ಸಾಕ್ಷ್ಯವಾಗಿದೆ.
ಈ ದೃಶ್ಯಗಳನ್ನು ಗಮನಿಸಿ.ನಂದನ್ ಎದೆ ಭಾಗದಲ್ಲಿ ಹಲವು ಬಾರಿ ಕಚ್ಚಿದ ಗುರುತುಗಳು ಸ್ಪಷ್ಟವಾಗಿ ಕಾಣಿಸುತ್ತಿವೆ. ಈ ಗುರುತುಗಳು ಹೇಗೆ ಉಂಟಾದವು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸಿದಾಗ, ನಂದನ್ ಹಾಗೂ ಆರೋಪಿ ವಿಶ್ವನಾಥ್ ನಡುವೆ ಆತ್ಮೀಯ ಸಂಬಂಧದ ವಿಚಾರ ಬೆಳಕಿಗೆ ಬಂದಿದೆ.
ವಿಚಾರಣೆ ವೇಳೆ, ನಂದನ್ ಹಾಗೂ ವಿಶ್ವನಾಥ್ ನಡುವೆ ಆತ್ಮೀಯತೆ ಬೆಳೆದಿತ್ತು ಎಂದು ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಾರ್ಟಿ ವೇಳೆ ನಂದನ್ ಹಾಗೂ ವಿಶ್ವ ಕಿಸ್ ಮಾಡಿ ಪರಸ್ಪರ ಕಚ್ಚಿಕೊಂಡಿರುವ ಗುರುತುಗಳು ದೇಹದಲ್ಲಿ ಪತ್ತೆಯಾಗಿವೆ. ಬಳಿಕ ಇಬ್ಬರೂ ಕೆಲಕಾಲ ವಾಶ್‌ರೂಮ್‌ನಲ್ಲಿದ್ದರು ಎನ್ನಲಾಗಿದೆ. ಆದರೆ ಇದೇ ವಿಚಾರದ ನಡುವೆ ಮತ್ತೊಂದು ಗಲಾಟೆ ಶುರುವಾಗಿದೆ. ತನಗಿಂತ ಮೂರು ವರ್ಷ ಚಿಕ್ಕವನಾಗಿದ್ದ ವಿಶ್ವನಾಥ್‌ನನ್ನು ನಂದನ್ ಶಿಷ್ಯ ಎಂದು ಕರೆದಿದ್ದೇ ಗಲಾಟೆಗೆ ಪ್ರಮುಖ ಕಾರಣವಾಗಿದೆ.
ಇತ್ತ ಗಲಾಟೆ ನಡೆಯುತ್ತಿದ್ದ ವೇಳೆ ವಿಶ್ವನಾಥ್ ಪರವಾಗಿ ವಿಜಯ್, ನಿಶಾಂತ್ ಹಾಗೂ ಶರತ್ ಕೂಡ ಬಂದಿದ್ದಾರೆ. ಜಿಮ್‌ನ ಅನಿವರ್ಸರಿ ಕಾರ್ಯಕ್ರಮ ಮುಗಿಸಿ ಬಂದಿದ್ದ ಎಲ್ಲರೂ ಮದ್ಯ ಸೇವಿಸಿದ್ದರು. ಈ ವೇಳೆ ಅನೂಷ್ ಶೆಟ್ಟಿಗೆ ಕರೆ ಮಾಡಿ, ತಾವು ಈಗಾಗಲೇ ಕುಡಿದಿದ್ದು ಫ್ಲ್ಯಾಟ್‌ಗೆ ಬರುತ್ತಿರುವುದಾಗಿ ತಿಳಿಸಿದ್ದಾರೆ. ಐವರು ಫ್ಲ್ಯಾಟ್‌ಗೆ ಬಂದ ಬಳಿಕ ಅನೂಷ್ ತನ್ನ ರೂಮ್‌ಗೆ ತೆರಳಿ ಬಾಗಿಲು ಹಾಕಿಕೊಂಡು ಮಲಗಿದ್ದ. ಬೆಳಗ್ಗೆ ಎದ್ದು ನೋಡಿದಾಗ ವಾಶ್‌ರೂಮ್‌ನಲ್ಲಿ ನಂದನ್ ಶವವಾಗಿ ಪತ್ತೆಯಾಗಿದ್ದಾನೆ.
ಪೊಲೀಸರ ತನಿಖೆಯ ಪ್ರಕಾರ, ನಂದನ್ ಹಾಗೂ ವಿಶ್ವನಾಥ್ ನಡುವೆ ನಡೆದಿದ್ದ ಗಲಾಟೆ ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಹೊಡೆದಾಟದ ವೇಳೆ ವಾಶ್‌ರೂಮ್‌ನಲ್ಲಿದ್ದ ಗಾಜಿನ ವಸ್ತುವೊಂದು ನಂದನ್ ತಲೆಗೆ ತಾಗಿ ಗಂಭೀರ ಗಾಯವಾಗಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದರೂ, ಹಲವು ಗಂಟೆಗಳ ಕಾಲ ನಂದನ್‌ಗೆ ಆಸ್ಪತ್ರೆಗೆ ಕರೆದೊಯ್ಯಲಾಗಿಲ್ಲ. ಪರಿಣಾಮವಾಗಿ ತೀವ್ರ ರಕ್ತಸ್ರಾವದಿಂದ ನಂದನ್ ಮೃತಪಟ್ಟಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಇನ್ನು ಪ್ರಕರಣದ ಮತ್ತೊಂದು ಪ್ರಮುಖ ಅಂಶವೆಂದರೆ ಆರೋಪಿಗಳ ನಶೆ. ಪೊಲೀಸರು ಆರೋಪಿಗಳನ್ನು ಅದೇ ಫ್ಲ್ಯಾಟ್‌ನಿಂದ ವಶಕ್ಕೆ ಪಡೆದಿದ್ದರು. ಆದರೆ ಸುಮಾರು ಏಳೆಂಟೂ ಗಂಟೆಗಳ ಕಾಲ ಆರೋಪಿಗಳು ನಶೆಯಲ್ಲೇ ಇದ್ದರು ಎನ್ನಲಾಗಿದೆ. ಹೀಗಾಗಿ ಆರೋಪಿಗಳು ಮಾದಕ ವಸ್ತು ಸೇವನೆ ಮಾಡಿದ್ದಾರೆಯೇ ಎಂಬ ಅನುಮಾನ ಪೊಲೀಸರಿಗೆ ಮೂಡಿದೆ. ಈ ಹಿನ್ನೆಲೆ ಎಲ್ಲಾ ಆರೋಪಿಗಳ ರಕ್ತ ಹಾಗೂ ಮೂತ್ರದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.ಪರೀಕ್ಷಾ ವರದಿ ಬಂದ ಬಳಿಕ ಆರೋಪಿಗಳು ಡ್ರಗ್ಸ್ ಸೇವಿಸಿದ್ದಾರೆಯೇ ಎಂಬುದರ ಬಗ್ಗೆ ಮತ್ತಷ್ಟು ಸ್ಪಷ್ಟತೆ ಸಿಗಲಿದೆ.ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಅಮೃತಹಳ್ಳಿ ಪೊಲೀಸರು, ಕೊಲೆ ಪ್ರಕರಣದ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆಸಿದ್ದಾರೆ.