ಪ್ರೀತ್ಸೆ ಅಂತ ರಸ್ತೆಯಲ್ಲೇ ಬೆಂಕಿ ಹಚ್ಚಿಕೊಂಡ ಆಂಟಿ ಲವರ್
ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿ ವಿವಾಹಿತೆಯನ್ನು ಪ್ರೀತಿಸು ಎಂದು ಯುವಕನೊಬ್ಬ ರಸ್ತೆಯಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾನೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
Crime News: ಪ್ರೀತಿಯ ವಿಚಾರವಾಗಿ ದುಡುಕಿ ಯುವಕನೊಬ್ಬ ನಡು ರಸ್ತೆ ಮಧ್ಯೆದಲ್ಲೇ ತನ್ನ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ತಾನೇ ಬೆಂಕಿ ಹಚ್ಚಿಕೊಂಡು ನರಳಾಡುತ್ತಾ ಮೃತ ಪಟ್ಟಿರುವ ಘಟನೆ ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನಪಾಳ್ಯದಲ್ಲಿ ನಡೆದಿದೆ.
ಮೃತ ಯುವಕನನ್ನು ಆಂಧ್ರ ಪ್ರದೇಶದ ಹಿಂದೂಪುರ ಮೂಲದ 28 ವರ್ಷದ ಪವನ್ ಎಂದು ಗುರುತಿಸಲಾಗಿದೆ. ಈತನು ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಎರಡು ಮಕ್ಕಳ ತಾಯಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ.
ಘಟನೆ ಹಿನ್ನಲೆ:
ಮಾಹಿತಿ ಪ್ರಕಾರ, ಮದುವೆಯಾಗಿ ಮಕ್ಕಳಿದ್ದ ಮಹಿಳೆಯೊಬ್ಬಳು ಕೌಟುಂಬಿಕ ಕಾರಣಗಳಿಂದಾಗಿ ತನ್ನ ಪತಿಯಿಂದ ದೂರವಾಗಿ ಮಾದನಾಯಕನಹಳ್ಳಿಯ ಹನುಮಂತೇಗೌಡ ಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ನಡುವೆ ಪವನ್ ಹಾಗೂ ಮಹಿಳೆಯ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು. ಬಳಿಕ ಯುವಕ ಪ್ರೀತಿಯಲ್ಲಿ ಬಿದ್ದಿದ್ದು ಆಂಟಿ ಪ್ರೀತ್ಸೆ ಎಂದು ಮಹಿಳೆ ಹಿಂದೆ ಬಿದ್ದಿದ್ದ.
ಆದರೆ ಕಳೆದ ಕೆಲ ದಿನಗಳಿಂದ ಮಹಿಳೆ ಪವನ್‌ನ ಸಂಪರ್ಕಕ್ಕೆ ಸಿಗದೇ ದೂರವಾಗಿದ್ದರು. ಮಹಿಳೆ ಸಂಪರ್ಕಕ್ಕೆ ಸಿಗದ ಹಿನ್ನಲೆಯಲ್ಲಿ ಮನನೊಂದು ಆಕೆಯನ್ನು ಹುಡುಕಿಕೊಂಡು ಯುವಕ ಪವನ್ ಮಾದನಾಯಕನಹಳ್ಳಿಗೆ ಬಂದಿದ್ದ. ಆದರೆ ಆತನ ಪ್ರಯತ್ನ ವ್ಯರ್ಥವಾಗಿತ್ತು. ಮಾದನಾಯಕನ ಹಳ್ಳಿಯಲ್ಲೂ ಕೂಡ ಆತನಿಗೆ ಮಹಿಳೆ ಸಿಗಲಿಲ್ಲ. ಈ ಹಿನ್ನಲೆಯಲ್ಲಿ ಮನನೊಂದ ಪವನ್ ಆ*ತ್ಮಹ*ತ್ಯೆಯ ನಿರ್ಧಾರ ಕೈಗೊಂಡಿದ್ದಾನೆ. ಹನುಮಂತೇಗೌಡ ಪಾಳ್ಯದ ರಸ್ತೆ ಮಧ್ಯೆದಲ್ಲೇ ಪವನ್ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದಾನೆ. ಕ್ಷಣಾರ್ಧದಲ್ಲಿ ಬೆಂಕಿ ಮೈ ತುಂಬಾ ಆವರಿಸಿದ್ದು, ತೀವ್ರ ಸುಟ್ಟ ಗಾಯಗಳಿಂದ ನೋವು ತಾಳಲಾರದೇ ಪವನ್ ರಸ್ತೆಯಲ್ಲೇ ನರಳಾಡುತ್ತಾ ಚೀರಾಡುತ್ತಾ ಓಡಾಡಿದ್ದಾನೆ. ಈ ಭೀಕರ ದೃಶ್ಯ ಕಂಡ ಸ್ಥಳೀಯರು ತಕ್ಷಣ ಧಾವಿಸಿ ನೀರು ಸುರಿದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಈ ಘಟನೆ ನಡೆಯುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಾದನಾಯಕನಹಳ್ಳಿ ಪೊಲೀಸರು ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಪವನ್‌ನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದ್ದಾರೆ. ಆದರೆ ದುರದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಆಂಬ್ಯುಲೆನ್ಸ್‌ನಲ್ಲಿ ಪವನ್ ಉಸಿರು ಚೆಲ್ಲಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತದೇಹವನ್ನ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಈ ರೀತಿ ವಿಚಾರದಲ್ಲಿ ಯುವಕನು ತೆಗೆದುಕೊಂಡ ದುಡುಕಿನ ನಿರ್ಧಾರಕ್ಕೆ ಒಂದು ಅಮೂಲ್ಯ ಜೀವ ಬಲಿಯಾಗಿದೆ. ಕ್ಷಣಿಕ ಭಾವೋದ್ವೇಗದಲ್ಲಿ ತೆಗೆದುಕೊಳ್ಳುವ ಒಂದು ನಿರ್ಧಾರ ಆತನ ಜೀವವಷ್ಟೇ ಅಲ್ಲ ಆತನನ್ನು ನಂಬಿಕೊಂಡಿರುವ ಕುಟುಂಬದವರ ಜೀವನವನ್ನೂ ಕತ್ತಲೆಗೆ ತಳ್ಳಿದೆ. ಅನೈತಿಕ ಸಂಬಂಧಗಳಿಂದ ಬದುಕೇ ಸರ್ವನಾಶವಾಗುತ್ತೆ ಎಂಬುದಕ್ಕೆ ಇದೂ ಒಂದು ನಿದರ್ಶನ ಅಂದ್ರೆ ತಪ್ಪಾಗಲಾರದು.