ಮೊದಲ ಗಂಡ ಪ್ರತ್ಯಕ್ಷ, 2ನೇ ಗಂಡನಿಂದ ಸೆಟಲ್‌ಮೆಂಟ್ : ಕಿಲಾಡಿ ಚೇತನಾ.. ಎನಮ್ಮಾ ನಿನ್ನ ಆಟ..!
ಮೊದಲ ಮದುವೆ ಮುಚ್ಚಿಟ್ಟು ಎರಡನೇ ಮದುವೆಯಾಗಿದ್ದ ಚೇತನ ಎಂಬಾಕೆ, ಬಳಿಕ ಲಕ್ಷಾಂತರ ರೂಪಾಯಿ ಸೆಟಲ್‌ಮೆಂಟ್ ಮಾಡಿಕೊಂಡು ಈಗ ತನಗೆ ಸಹಾಯ ಮಾಡಿದ್ದ ಹೋರಾಟಗಾರ್ತಿ ವಿರುದ್ಧವೇ ತಿರುಗಿಬಿದ್ದಿದ್ದು, ಪ್ರಕರಣ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.. ಇಬ್ಬರ ಗಂಡಂದಿರ ಮುದ್ದಿನ ಹೆಂಡತಿಯ ರೋಚಕ ಕಹಾನಿ ಇಲ್ಲಿದೆ..
ಚಿಕ್ಕಬಳ್ಳಾಪುರ: ನ್ಯಾಯ ಕೊಡಿಸಲು ನಿಂತ ಮಹಿಳಾ ಹೋರಾಟಗಾರ್ತಿಗೇ ಚಳ್ಳೆಹಣ್ಣು ತಿನಿಸಿ, ಬ್ಲ್ಯಾಕ್‌ಮೇಲ್ ಮಾಡಲು ಯತ್ನಿಸಿದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಯಲಹಂಕದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಚೇತನಾ ಎಂಬಾಕೆಯ ಹೈಡ್ರಾಮಾ ಈಗ ಚಿಕ್ಕಬಳ್ಳಾಪುರ ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಟೀ ಅಂಗಡಿಯಲ್ಲಾದ ಪರಿಚಯ, ಪ್ರೇಮದ ನಾಟಕ
ಬೆಂಗಳೂರಿನ ಯಲಹಂಕದಲ್ಲಿ ಟೀ ಅಂಗಡಿ ನಡೆಸುತ್ತಿದ್ದ ಚೇತನಾ, ಅಲ್ಲಿಗೆ ನಿಯಮಿತವಾಗಿ ಬರುತ್ತಿದ್ದ ಮುನಿರಾಜು ಎಂಬುವವರ ಜೊತೆ ಪರಿಚಯ ಬೆಳೆಸಿಕೊಂಡಿದ್ದಳು. ದಿನಕಳೆದಂತೆ ಇಬ್ಬರ ನಡುವಿನ ಪರಿಚಯ ನಿಕಟ ಸಂಬಂಧಕ್ಕೆ ತಿರುಗಿತ್ತು. ಆದರೆ, ಕೆಲ ದಿನಗಳ ನಂತರ ಮುನಿರಾಜು ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ ಚೇತನ, ನ್ಯಾಯ ಕೊಡಿಸುವಂತೆ ಕಣ್ಣೀರಿಡುತ್ತಾ ಮಹಿಳಾ ಹೋರಾಟಗಾರ್ತಿ ನಂದಿನಿ ಅವರ ಬಳಿ ಸಹಾಯಕ್ಕೆ ಬಂದಿದ್ದಳು.
ಮದುವೆ ಮಾಡಿಸಿದ ಹೋರಾಟಗಾರ್ತಿ, ಕಾದಿತ್ತು ಬಿಗ್ ಶಾಕ್
ಚೇತನಳ ಅಳಲನ್ನು ಸತ್ಯವೆಂದು ನಂಬಿದ ಹೋರಾಟಗಾರ್ತಿ ನಂದಿನಿ, ಮುನಿರಾಜುನನ್ನು ಕರೆಸಿ ಇಬ್ಬರಿಗೂ ಕಾನೂನುಬದ್ಧವಾಗಿ ವಿವಾಹ ಮಾಡಿಸಿ ನ್ಯಾಯ ಒದಗಿಸಿದ್ದರು. ಆದರೆ ಅಸಲಿ ಕಥೆ ಮದುವೆಯ ನಂತರ ಬಯಲಾಗಿದೆ. ಚೇತನ ತನಗೆ ಈಗಾಗಲೇ ನವೀನ್ ಎಂಬುವವನ ಜೊತೆ ಮೊದಲ ಮದುವೆಯಾಗಿದ್ದ ಸತ್ಯವನ್ನು ಸಂಪೂರ್ಣವಾಗಿ ಮುಚ್ಚಿಟ್ಟಿದ್ದಳು. ಈ ವಿಷಯ ತಿಳಿಯುತ್ತಿದ್ದಂತೆ ಹೋರಾಟಗಾರ್ತಿ ನಂದಿನಿ ತೀವ್ರ ದಿಗ್ಭ್ರಮೆಗೊಂಡಿದ್ದಾರೆ. ಇತ್ತ ಮೊದಲ ಗಂಡ ನವೀನ್ ಪ್ರತ್ಯಕ್ಷನಾಗುತ್ತಿದ್ದಂತೆ, "ಮೊದಲ ಗಂಡ ಜೀವಂತವಾಗಿರುವಾಗ ಈಕೆ ನನಗೆ ಬೇಡ" ಎಂದು ಎರಡನೇ ಗಂಡ ಮುನಿರಾಜು ಹಿಂದೆ ಸರಿದಿದ್ದಾನೆ.
1.10 ಲಕ್ಷ ರೂ. ಸೆಟಲ್‌ಮೆಂಟ್ ಮತ್ತು ಉಲ್ಟಾ ಹೊಡೆದ ಚೇತನ
ಇಷ್ಟೆಲ್ಲಾ ನಾಟಕದ ಬಳಿಕವೂ ಸುಮ್ಮನಿರದ ಚೇತನಾ, ಎರಡನೇ ಗಂಡ ಮುನಿರಾಜುನಿಂದ 1 ಲಕ್ಷ 10 ಸಾವಿರ ರೂಪಾಯಿ ಪಡೆದುಕೊಂಡು ವಿಷಯವನ್ನು ಸೆಟಲ್‌ಮೆಂಟ್ ಮಾಡಿಕೊಂಡಿದ್ದಳು. ಆದರೆ, ಈ ಹಣದ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡುತ್ತಿದ್ದಂತೆ, ತನಗೆ ಆಸರೆ ನೀಡಿ ನ್ಯಾಯ ಕೊಡಿಸಿದ ಹೋರಾಟಗಾರ್ತಿ ನಂದಿನಿ ವಿರುದ್ಧವೇ ಚೇತನ ತಿರುಗಿಬಿದ್ದಿದ್ದಾಳೆ.
ಹಣಕ್ಕಾಗಿ ನಂದಿನಿ ಅವರಿಗೆ ಕಿರುಕುಳ ನೀಡಲು ಪ್ರಾರಂಭಿಸಿ ಗಲಾಟೆ ಮಾಡಿದ್ದಾಳೆ. ಸಹಾಯ ಮಾಡಿದ ಕೈಗೇ ಚಳ್ಳೆಹಣ್ಣು ತಿನಿಸಿ ಹೈಡ್ರಾಮಾ ಸೃಷ್ಟಿಸಿರುವ ಈಕೆಯ ಕೃತ್ಯದ ವಿರುದ್ಧ ಇದೀಗ ಚಿಕ್ಕಬಳ್ಳಾಪುರ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.