• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತಾ ಜಪಾನ್ ಮಾದರಿಯ ಹೈಬ್ರಿಡ್ ಟ್ಯಾಕ್ಸಿ? ಟೊಯೋಟಾ ಜೊತೆ ಡಿಕೆಶಿ ಮಹತ್ವದ ಚರ್ಚೆ!

ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತಾ ಜಪಾನ್ ಮಾದರಿಯ ಹೈಬ್ರಿಡ್ ಟ್ಯಾಕ್ಸಿ? ಟೊಯೋಟಾ ಜೊತೆ ಡಿಕೆಶಿ ಮಹತ್ವದ ಚರ್ಚೆ!

ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಟೊಯೋಟಾ ಕಂಪನಿ ಅಧಿಕಾರಿಗಳೊಂದಿಗೆ JPN TAXI ಮಾದರಿಯ LPG-ಹೈಬ್ರಿಡ್ ಟ್ಯಾಕ್ಸಿಯನ್ನ ಕರ್ನಾಟಕದಲ್ಲಿ ಪರಿಚಯಿಸುವ ಕುರಿತು ಚರ್ಚಿಸಿದ್ದಾರೆ. ಈ ವಾಹನವನ್ನ ರಾಜ್ಯದಲ್ಲೇ ಉತ್ಪಾದಿಸುವ ಸಾಧ್ಯತೆ ಹಾಗೂ ಟೊಯೋಟಾ ಕಂಪನಿಯ ಹೂಡಿಕೆ ವಿಸ್ತರಣೆ ಬಗ್ಗೆಯೂ ಮಾತುಕತೆ ನಡೆದಿದೆ. ಜೊತೆಗೆ ಕಂಪನಿಯ ಉತ್ಪಾದನಾ ಸಾಮರ್ಥ್ಯ ಹೆಚ್ಚಳ, ಉದ್ಯೋಗ ಸೃಷ್ಟಿ ಮತ್ತು 'ಬಿಯಾಂಡ್ ಬೆಂಗಳೂರು' ಯೋಜನೆಗೆ ಹೂಡಿಕೆ ಆಕರ್ಷಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಆದರೆ ಟ್ಯಾಕ್ಸಿ ಪರಿಚಯಿಸುವ ಕುರಿತು ಅಂತಿಮ ನಿರ್ಧಾರ ಇನ್ನೂ ಪ್ರಕಟವಾಗಿಲ್ಲ.

Written ByPuttaraj K Alur
Published: Nov 24, 2026, 11:18 IST|Updated: Nov 24, 2026, 11:31 IST
joinshare
ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತಾ ಜಪಾನ್ ಮಾದರಿಯ ಹೈಬ್ರಿಡ್ ಟ್ಯಾಕ್ಸಿ? ಟೊಯೋಟಾ ಜೊತೆ ಡಿಕೆಶಿ ಮಹತ್ವದ ಚರ್ಚೆ!
Image Credit: JPN TAXI

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಯಕ್ಷಗಾನದ ಹಿನ್ನೆಲೆ ಮತ್ತು ಮಾನವೀಯ ಮೌಲ್ಯಗಳ ‘ದೇವಿ ಮಹಾತ್ಮೆ’ ಚಿತ್ರದ ಟ್ರೇಲರ್ ಬಿಡುಗಡೆ

ಯಕ್ಷಗಾನದ ಹಿನ್ನೆಲೆ ಮತ್ತು ಮಾನವೀಯ ಮೌಲ್ಯಗಳ ‘ದೇವಿ ಮಹಾತ್ಮೆ’ ಚಿತ್ರದ ಟ್ರೇಲರ್ ಬಿಡುಗಡೆ

2

ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತಾ ಜಪಾನ್ ಮಾದರಿಯ ಹೈಬ್ರಿಡ್ ಟ್ಯಾಕ್ಸಿ? ಟೊಯೋಟಾ ಜೊತೆ ಡಿಕೆಶಿ ಮಹತ್ವದ ಚರ್ಚೆ!

3

ಮೈ ಕೊರೆವ ಚಳಿ ನಡುವೆ ಮಳೆ ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

4

ಬಸ್ ಪ್ರಯಾಣಿಕರಿಗೆ ಬಿಗ್‌ ಅಲರ್ಟ್‌..! ಭಾರೀ ಬದಲಾವಣೆ ಸಾರಿಗೆ ಇಲಾಖೆಯಿಂದ ಹೊಸ ರೂಲ್ಸ್ ಜಾರಿ

5

ಜಿ.ಪಂ. ಮತ್ತು ತಾ.ಪಂ. ಚುನಾವಣೆಗೆ ಮುಹೂರ್ತ ಫಿಕ್ಸ್: ಅಂತಿಮ ಮೀಸಲಾತಿ ಪಟ್ಟಿ ಪ್ರಕಟ

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

DK Shivakumar Japan Visit: ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಜಪಾನ್ ಮಾದರಿಯ ಹೈಬ್ರಿಡ್ ಟ್ಯಾಕ್ಸಿಗಳು ಕಾಣಿಸಿಕೊಳ್ಳುತ್ತವೆಯೇ? ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಕ್ಯಾಬ್ ಸೇವೆ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಇಂತಹ ಹೊಸ ಸಾರಿಗೆ ಮಾದರಿಯತ್ತ ಗಮನ ಹರಿಸಿದೆ. ಜಪಾನ್ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಟೊಯೋಟಾ ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದು, ಕಂಪನಿಯ ಜನಪ್ರಿಯ JPN TAXI ಮಾದರಿಯನ್ನ ಕರ್ನಾಟಕಕ್ಕೆ ಪರಿಚಯಿಸುವ ಸಾಧ್ಯತೆಗಳನ್ನ ಪರಿಶೀಲಿಸಿದ್ದಾರೆ.

ನವೆಂಬರ್ 23ರಂದು ಜಪಾನ್‌ನ ಮೊಟೊಮಾಚಿ ಪ್ರದೇಶದಲ್ಲಿರುವ ಟೊಯೋಟಾ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ಕಂಪನಿಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಟೊಯೋಟಾ ಕಂಪನಿಯ ಉತ್ಪಾದನಾ ಚಟುವಟಿಕೆ ವಿಸ್ತರಣೆ, ಹೊಸ ಹೂಡಿಕೆಗಳು, ಉದ್ಯೋಗ ಸೃಷ್ಟಿ ಹಾಗೂ ಭವಿಷ್ಯದ ಸಾರಿಗೆ ವ್ಯವಸ್ಥೆ ಕುರಿತು ಮಾತುಕತೆ ನಡೆಸಲಾಯಿತು.

ಏನಿದು ಜಪಾನ್ ಮಾದರಿಯ JPN TAXI?

ಜಪಾನ್‌ನಲ್ಲಿ ಟ್ಯಾಕ್ಸಿ ಸೇವೆಗಾಗಿ ವಿನ್ಯಾಸಗೊಳಿಸಲಾಗಿರುವ ಟೊಯೋಟಾದ JPN TAXI ವಿಶೇಷ ಮಾದರಿಯ ವಾಹನವಾಗಿದೆ. ಇದು LPG-ಹೈಬ್ರಿಡ್ ತಂತ್ರಜ್ಞಾನವನ್ನ ಹೊಂದಿದ್ದು, ಟ್ಯಾಕ್ಸಿ ಬಳಕೆಗೆ ಅನುಕೂಲವಾಗುವಂತೆ ರೂಪಿಸಲಾಗಿದೆ. ಸಾಮಾನ್ಯ ಕಾರುಗಳಿಗಿಂತ ಪ್ರಯಾಣಿಕರ ಅನುಕೂಲಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಈ ವಾಹನದ ವಿಶೇಷತೆ. ಈ ಟ್ಯಾಕ್ಸಿಯಲ್ಲಿ ವಿಶಾಲವಾದ ಒಳಾಂಗಣ ವ್ಯವಸ್ಥೆ, ಅಗಲವಾದ ಸ್ಲೈಡಿಂಗ್ ಬಾಗಿಲುಗಳು ಮತ್ತು ಕೆಳಮಟ್ಟದ ಪ್ರವೇಶ ವ್ಯವಸ್ಥೆ ಇದೆ. ಇದರಿಂದ ಪ್ರಯಾಣಿಕರು ವಾಹನವನ್ನ ಸುಲಭವಾಗಿ ಹತ್ತಲು ಮತ್ತು ಇಳಿಯಲು ಸಾಧ್ಯವಾಗುತ್ತದೆ.

ವಿಶೇಷವಾಗಿ ವೀಲ್‌ಚೇರ್ ಬಳಸುವ ವ್ಯಕ್ತಿಗಳಿಗೂ ಅನುಕೂಲವಾಗುವಂತೆ ಅಗತ್ಯ ಸೌಲಭ್ಯಗಳನ್ನ ಕಲ್ಪಿಸಲಾಗಿದೆ. ನಗರ ಪ್ರದೇಶಗಳಲ್ಲಿ ಟ್ಯಾಕ್ಸಿ ಸೇವೆ ಬಳಸುವ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ಮಾದರಿಯನ್ನ ಕರ್ನಾಟಕದಲ್ಲೂ ಪರಿಚಯಿಸುವ ಬಗ್ಗೆ ಮುಖ್ಯಮಂತ್ರಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಈ ವಾಹನವನ್ನ ರಾಜ್ಯದಲ್ಲಿ ಪರಿಚಯಿಸುವುದರಿಂದ ಕ್ಯಾಬ್ ಸೇವೆಯನ್ನ ಹೆಚ್ಚು ಕೈಗೆಟುಕುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಮಾಡಬಹುದು ಎಂಬ ಉದ್ದೇಶವನ್ನ ಸರ್ಕಾರ ಮುಂದಿಟ್ಟಿದೆ.

ಕರ್ನಾಟಕದಲ್ಲೇ ಉತ್ಪಾದನಾ ಘಟಕ ಸ್ಥಾಪನೆಯ ಸಾಧ್ಯತೆ?

ಟ್ಯಾಕ್ಸಿ ಪರಿಚಯಿಸುವ ವಿಚಾರದ ಜೊತೆಗೆ, ಈ ವಾಹನವನ್ನ ಕರ್ನಾಟಕದಲ್ಲಿಯೇ ಉತ್ಪಾದಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ. ಇದಕ್ಕಾಗಿ ಸ್ಥಳೀಯವಾಗಿ ಉತ್ಪಾದನಾ ವ್ಯವಸ್ಥೆ ರೂಪಿಸುವ ಅವಕಾಶಗಳನ್ನ ಪರಿಶೀಲಿಸುವ ಆಸಕ್ತಿಯನ್ನ ಮುಖ್ಯಮಂತ್ರಿ ವ್ಯಕ್ತಪಡಿಸಿದ್ದಾರೆ. ಆದರೆ ಈ ಕುರಿತು ಅಂತಿಮ ಒಪ್ಪಂದ ಅಥವಾ ಉತ್ಪಾದನಾ ಘಟಕ ಸ್ಥಾಪನೆಯ ನಿರ್ಧಾರ ಪ್ರಕಟವಾಗಿಲ್ಲ. ಟೊಯೋಟಾ ಕಂಪನಿಯು ಕರ್ನಾಟಕದಲ್ಲಿ ಈಗಾಗಲೇ ತನ್ನ ಉತ್ಪಾದನಾ ಚಟುವಟಿಕೆಗಳನ್ನ ಹೊಂದಿದೆ. ಮುಂದಿನ ದಿನಗಳಲ್ಲಿ ವಾಹನ ಉತ್ಪಾದನಾ ಸಾಮರ್ಥ್ಯವನ್ನ ಒಂದು ಮಿಲಿಯನ್ ಅಂದರೆ 10 ಲಕ್ಷ ವಾಹನಗಳಿಗೆ ಹೆಚ್ಚಿಸುವ ಗುರಿಯನ್ನ ಕಂಪನಿ ಹೊಂದಿದೆ ಎಂದು ವರದಿಯಾಗಿದೆ.

ಈ ವಿಸ್ತರಣೆಗೆ ರಾಜ್ಯ ಸರ್ಕಾರದಿಂದ ಅಗತ್ಯ ಸಹಕಾರ ನೀಡುವುದಾಗಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಇದಲ್ಲದೆ ಪರ್ಯಾಯ ಇಂಧನ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಫ್ಲೆಕ್ಸ್-ಫ್ಯೂಯೆಲ್ ವಾಹನಗಳ ಸಾಧ್ಯತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಇಂತಹ ವಾಹನ ತಂತ್ರಜ್ಞಾನಗಳನ್ನ ಕರ್ನಾಟಕದಲ್ಲಿ ಪರಿಚಯಿಸುವುದರಿಂದ ಭವಿಷ್ಯದ ಸಾರಿಗೆ ವ್ಯವಸ್ಥೆಗೆ ಹೊಸ ಅವಕಾಶಗಳು ಸಿಗಬಹುದು ಎಂಬ ನಿಟ್ಟಿನಲ್ಲಿ ಮಾತುಕತೆ ನಡೆದಿದೆ.

ಟೊಯೋಟಾಗೆ ಜಾಗತಿಕ ಹೂಡಿಕೆದಾರರ ಸಮಾವೇಶದ ಆಹ್ವಾನ

ಕರ್ನಾಟಕದಲ್ಲಿ ಮತ್ತಷ್ಟು ಹೂಡಿಕೆಗಳನ್ನ ಆಕರ್ಷಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಟೊಯೋಟಾ ಕಂಪನಿಗೆ ಮುಂದಿನ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದೆ. ಕಂಪನಿಯ ಉತ್ಪಾದನಾ ಚಟುವಟಿಕೆ ವಿಸ್ತರಣೆ ಮತ್ತು ಹೊಸ ಹೂಡಿಕೆಗಳ ಮೂಲಕ ಉದ್ಯೋಗಾವಕಾಶಗಳನ್ನ ಹೆಚ್ಚಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ ರಾಜ್ಯದ 'ಬಿಯಾಂಡ್ ಬೆಂಗಳೂರು' ಯೋಜನೆಯ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಬೆಂಗಳೂರು ನಗರವನ್ನಷ್ಟೇ ಕೇಂದ್ರವಾಗಿಟ್ಟುಕೊಳ್ಳದೆ, ರಾಜ್ಯದ ಇತರ ಭಾಗಗಳಲ್ಲಿಯೂ ಕೈಗಾರಿಕಾ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳನ್ನ ವಿಸ್ತರಿಸುವುದು ಈ ಯೋಜನೆಯ ಪ್ರಮುಖ ಆಶಯವಾಗಿದೆ.

ಜಪಾನ್‌ನಲ್ಲಿ ತರಬೇತಿ ಪಡೆಯುತ್ತಿರುವ ಕರ್ನಾಟಕದ ಯುವಕರೊಂದಿಗೆ ಮಾತುಕತೆ

ಟೊಯೋಟಾದ ಬಿಡದಿ ಘಟಕದಲ್ಲಿ ಕೆಲಸ ಮಾಡುತ್ತಿರುವ 20ಕ್ಕೂ ಹೆಚ್ಚು ಐಟಿಐ ತರಬೇತಿ ಪಡೆದ ಯುವಕರು ಕಂಪನಿಯ ಗ್ಲೋಬಲ್ ಸ್ಕಿಲ್-ಅಪ್ ಕಾರ್ಯಕ್ರಮದಡಿ ಜಪಾನ್‌ನಲ್ಲಿ ವಿಶೇಷ ತರಬೇತಿ ಮತ್ತು ಇಂಟರ್ನ್‌ಶಿಪ್ ಪಡೆಯುತ್ತಿದ್ದಾರೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಎಂ.ಬಿ.ಪಾಟೀಲ್ ಅವರು ಈ ಯುವಕರೊಂದಿಗೆ ಸಂವಾದ ನಡೆಸಿ, ಅವರ ತರಬೇತಿ ಅನುಭವದ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಜಪಾನ್‌ನ ಮೊಟೊಮಾಚಿ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿದ ನಿಯೋಗಕ್ಕೆ ಹೈಬ್ರಿಡ್ ಎಲೆಕ್ಟ್ರಿಕ್, ಬ್ಯಾಟರಿ ಎಲೆಕ್ಟ್ರಿಕ್ ಮತ್ತು ಫ್ಯೂಯೆಲ್ ಸೆಲ್ ತಂತ್ರಜ್ಞಾನಗಳ ಮೂಲಕ ಕಾರ್ಯನಿರ್ವಹಿಸುವ ವಾಹನಗಳ ಉತ್ಪಾದನಾ ವ್ಯವಸ್ಥೆಯ ಕುರಿತು ಮಾಹಿತಿ ನೀಡಲಾಯಿತು.

ಒಟ್ನಲ್ಲಿ ಬೆಂಗಳೂರಿನ ರಸ್ತೆಗಳಲ್ಲಿ ಜಪಾನ್ ಮಾದರಿಯ ಹೈಬ್ರಿಡ್ ಟ್ಯಾಕ್ಸಿಗಳು ಸಂಚರಿಸುವ ಸಾಧ್ಯತೆ ಕುರಿತು ಚರ್ಚೆ ಆರಂಭವಾಗಿದೆ. ಆದರೆ ಟೊಯೋಟಾ ಕಂಪನಿಯ ಅಂತಿಮ ನಿರ್ಧಾರ, ವಾಹನಗಳ ಪರಿಚಯ ಮತ್ತು ಸ್ಥಳೀಯ ಉತ್ಪಾದನೆಗೆ ಸಂಬಂಧಿಸಿದ ಮುಂದಿನ ಬೆಳವಣಿಗೆಗಳ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.

Add Zee News as a Preferred Source
TAGS:
Karnataka Politics
Kannada News