SOCIAL MEDIA

Newsletter

PARTNER SITES
Select Language Select State

ಕುಡಿಯುವ ನೀರಿನಿಂದ ರಾಜಕೀಯ ಅಸ್ತ್ರದವರೆಗೆ : ಮೇಕೆದಾಟು ಯೋಜನೆ ನಡೆದುಬಂದ ರೋಚಕ ಹಾದಿ

ಬೆಂಗಳೂರಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗಾಗಿ ರೂಪಿಸಲಾದ ಮೇಕೆದಾಟು ಯೋಜನೆ, ಕೇವಲ ಜಲವಿದ್ಯುತ್ ಮತ್ತು ಕುಡಿಯುವ ನೀರಿನ ಯೋಜನೆಯಾಗಿ ಉಳಿಯದೆ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ದೊಡ್ಡ ರಾಜಕೀಯ ಮತ್ತು ಕಾನೂನು ಹೋರಾಟದ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ. ಮೇಕೆದಾಟು ಯೋಜನೆಯ ಸಂಪೂರ್ಣ ರಾಜಕೀಯ ಹಾದಿಯ ಕುರಿತಾದ ವಿಶೇಷ ವರದಿ ಇಲ್ಲಿದೆ.

Written By Krishna NK
Published: Nov 20, 2026, 19:53 IST | Updated: Nov 20, 2026, 19:55 IST
Image Credit: makedatu protest history
Join

Mekedatu project history : ಕುಡಿಯುವ ನೀರಿನ ಯೋಜನೆಯಾಗಿ ಆರಂಭವಾದ ಮೇಕೆದಾಟು, ಕಾಲಕ್ರಮೇಣ ಕರ್ನಾಟಕ ಮತ್ತು ತಮಿಳುನಾಡು ನಡುವಿನ ದೊಡ್ಡ ರಾಜಕೀಯ ಅಸ್ತ್ರವಾಗಿ ಬದಲಾಯಿತು. ಜಲವಿವಾದದಿಂದ ಹಿಡಿದು, ಪಾದಯಾತ್ರೆ, ಕೋವಿಡ್ ನಿಯಮಗಳ ಉಲ್ಲಂಘನೆ ಮತ್ತು ನೆರೆ ರಾಜ್ಯದ ವಿರೋಧದವರೆಗೆ ಮೇಕೆದಾಟು ಯೋಜನೆ ನಡೆದುಬಂದ ರಾಜಕೀಯ ಹಾದಿ ವೇರಿ ಇಂಟ್ರೆಸ್ಟಿಂಗ್...

ಹೌದು.. ಬೆಂಗಳೂರಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗಾಗಿ ರೂಪಿಸಲಾದ ಮೇಕೆದಾಟು ಯೋಜನೆ, 2017ರಲ್ಲಿ ಡಿಪಿಆರ್ ಸಲ್ಲಿಕೆಯಾದ ನಂತರ ತೀವ್ರ ರಾಜಕೀಯ ತಿರುವು ಪಡೆಯಿತು. ಕಾವೇರಿ ನೀರು ಹಂಚಿಕೆ ವಿಚಾರವು ಎರಡೂ ರಾಜ್ಯಗಳಲ್ಲಿ ಭಾವನಾತ್ಮಕ ವಿಷಯವಾಗಿದ್ದು, ಚುನಾವಣಾ ಲಾಭಕ್ಕಾಗಿ ರಾಜಕೀಯ ಪಕ್ಷಗಳು ಇದನ್ನು ಅಸ್ತ್ರವನ್ನಾಗಿ ಬಳಸಿಕೊಂಡವು. ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಆರೋಪ-ಪ್ರತ್ಯಾರೋಪಗಳಿಂದಾಗಿ, ತಾಂತ್ರಿಕ ಯೋಜನೆಯೊಂದು ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗಿ ಮಾರ್ಪಟ್ಟಿತು.

ಮೇಕೆದಾಟು ಯೋಜನೆಯು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ತವರು ಜಿಲ್ಲೆ ರಾಮನಗರದ ಕನಕಪುರ ವ್ಯಾಪ್ತಿಯಲ್ಲಿ ಬರುತ್ತದೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಮತ್ತು ಒಕ್ಕಲಿಗ ಸಮುದಾಯದ ನಾಯಕತ್ವವನ್ನು ಗಟ್ಟಿಗೊಳಿಸಲು ಡಿ.ಕೆ. ಶಿವಕುಮಾರ್ ಈ ಯೋಜನೆಯನ್ನು ಕೈಗೆತ್ತಿಕೊಂಡರು. 'ನಮ್ಮ ನೀರು, ನಮ್ಮ ಹಕ್ಕು' ಎಂಬ ಘೋಷಣೆಯೊಂದಿಗೆ, ಇದನ್ನು ತಮ್ಮ ರಾಜಕೀಯ ಅಸ್ಮಿತೆಯನ್ನಾಗಿ ಮಾಡಿಕೊಂಡರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ಯೋಜನೆಗೆ ಶೀಘ್ರ ಅನುಮತಿ ಪಡೆಯುವ ಉದ್ದೇಶದಿಂದ ಕಾಂಗ್ರೆಸ್ 2022ರ ಜನವರಿಯಲ್ಲಿ ಪಾದಯಾತ್ರೆ ಹಮ್ಮಿಕೊಂಡಿತ್ತು, ಈ ವೇಳೆ ರಾಜ್ಯದಲ್ಲಿ ತೀವ್ರ ರಾಜಕೀಯ ಸಂಘರ್ಷ ಏರ್ಪಟ್ಟಿತ್ತು. ಕಾಂಗ್ರೆಸ್ ಪಕ್ಷವು ಇದನ್ನು ಜನಪರ ಹೋರಾಟ ಎಂದು ಕರೆದರೆ, ಅಂದಿನ ಆಡಳಿತಾರೂಢ ಬಿಜೆಪಿ ಸರ್ಕಾರವು ಇದನ್ನು 'ರಾಜಕೀಯ ಗಿಮಿಕ್' ಎಂದು ಟೀಕಿಸಿತು. ಪಾದಯಾತ್ರೆಯ ಮೂಲಕ ಕಾಂಗ್ರೆಸ್ ಚುನಾವಣಾ ಪ್ರಚಾರ ನಡೆಸುತ್ತಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಆರೋಪಿಸಿದ್ದರು.

2022ರ ಜನವರಿಯಲ್ಲಿ ಕೋವಿಡ್ ಮೂರನೇ ಅಲೆ ತೀವ್ರವಾಗಿದ್ದ ಸಂದರ್ಭದಲ್ಲೇ ಕಾಂಗ್ರೆಸ್ ಪಾದಯಾತ್ರೆ ಆರಂಭಿಸಿತ್ತು. ಸರ್ಕಾರ ವಾರಾಂತ್ಯದ ಕರ್ಫ್ಯೂ ಮತ್ತು ನಿಷೇಧಾಜ್ಞೆ ಜಾರಿಗೊಳಿಸಿದ್ದರೂ, ಸಾವಿರಾರು ಜನರು ಸೇರಿದ್ದು ದೊಡ್ಡ ವಿವಾದಕ್ಕೆ ಕಾರಣವಾಯಿತು. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಪಾದಯಾತ್ರೆ ನಿಲ್ಲಿಸುವಂತೆ ರಾಜ್ಯ ಸರ್ಕಾರ ಎಚ್ಚರಿಕೆ ನೀಡಿತು ಮತ್ತು ಹೈಕೋರ್ಟ್ ಕೂಡ ಅಸಮಾಧಾನ ವ್ಯಕ್ತಪಡಿಸಿತು. ನಾಯಕರ ವಿರುದ್ಧ ಎಫ್‌ಐಆರ್‌ಗಳು ದಾಖಲಾದವು. ಕೊನೆಗೆ, ನ್ಯಾಯಾಲಯದ ಸೂಚನೆ ಮತ್ತು ಕೋವಿಡ್ ತೀವ್ರತೆಯಿಂದಾಗಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ನಂತರ ಫೆಬ್ರವರಿಯಲ್ಲಿ ಪೂರ್ಣಗೊಳಿಸಲಾಯಿತು.

ಮೇಕೆದಾಟು ಯೋಜನೆಗೆ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಾತೀತವಾಗಿ ತೀವ್ರ ವಿರೋಧ ವ್ಯಕ್ತಪಡಿಸಿವೆ. ತಮಿಳುನಾಡು ಸರ್ಕಾರದ ಪ್ರಕಾರ, ಈ ಅಣೆಕಟ್ಟು ನಿರ್ಮಾಣವಾದರೆ ಕಾವೇರಿ ಕಣಿವೆಯ ರೈತರಿಗೆ ನೀರಿನ ಕೊರತೆಯಾಗುತ್ತದೆ ಮತ್ತು ಇದು ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿದೆ. ತಮಿಳುನಾಡು ವಿಧಾನಸಭೆಯಲ್ಲಿ ಯೋಜನೆಯ ವಿರುದ್ಧ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು ಅಲ್ಲದೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುವ ಮೂಲಕ ಯೋಜನೆಗೆ ತಡೆಯೊಡ್ಡುವ ರಾಜಕೀಯ ಮತ್ತು ಕಾನೂನು ತಂತ್ರವನ್ನು ತಮಿಳುನಾಡು ಅನುಸರಿಸಿತು. ಈಗಲೂ ತಮಿಳು ನಾಡು ಈ ಸಮರ ಮುಂದುವರಿಸಿದೆ.

ಇತ್ತ ರಾಜ್ಯ ಸರ್ಕಾರ ಕೂಡ ಇದನ್ನು ಎದುರಿಸುತ್ತಾ ಮೇಕೆದಾಟು ಯೋಜನೆ ಅನುಷ್ಠಾನ ಮಾಡಿಯೇ ಸಿದ್ಧ ಎನ್ನುತ್ತಿದೆ, ಈ ಬಗ್ಗೆ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್ ಈ ಯೋಜನೆ ಜಾರಿ ಸಿದ್ದ.ತಮಿಳುನಾಡಿಗೆ ಯಾವುದೇ ತೊಂದರೆ ಕೊಡುವುದಿಲ್ಲ. ಅವರ ಪಾಲು ಅವರಿಗೆ ನೀಡುತ್ತೇವೆ.ನಮ್ಮ ಹಕ್ಕಿನ ನೀರನ್ಮ ನಾವು ಬಳಸಿಕೊಳ್ಳುತ್ತೇವೆಂದಿದ್ದಾರೆ.. ಮೇಕೆದಾಟು ಯೋಜನೆ ನಮ್ಮ ಕಮಿಟ್ಮೆಂಟ್ ಅದನ್ನ ಮಾಡುತ್ತೇವೆ. ಈ ಹಿಂದೆ ‌ಬಿಜೆಪಿ ಅವರಿಗೆ ಅಧಿಕಾರ ಕೊಟ್ಟಿದ್ರು ಆದ್ರೆ ಅದರ ಬಗ್ಗೆ ಗಮನ ಹರಿಸಲಿಲ್ಲ.ನಾವು ಜನರಿಗೆ ಮಾತು‌ಕೊಟ್ಟು ಗೆದ್ದಿದ್ದೇವೆ ಅದನ್ನ ಈಡೇರಿಸುವ ಕೆಲಸ ಮಾಡುತ್ತೇವೆ..

ಒಟ್ಟಾರೆ ಮೇಕೆದಾಟು ಯೋಜನೆಯಲ್ಲಿ ಪಕ್ಷಗಳು ರಾಜಕೀಯವಾಗಿ ದಾಟಲು ಅಸ್ತ್ರ ಮಾಡಿಕೊಂಡು ಅಧಿಕಾರಕ್ಕೆ ಬರ್ತಿವೆ.ಇದನ್ನ ನಂಬಿಕೊಂಡ ಐದು ಜಿಲ್ಲೆಗಳ ಜನರು ನೀರಿನ ಹಾಹಾಕಾರದಿಂದ ಎಂದೂ ದಾಟುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES