SOCIAL MEDIA

Newsletter

PARTNER SITES
Select Language Select State

ಬೈಕ್‌ ಟ್ಯಾಕ್ಸಿಗೆ ಸುಪ್ರೀಂಕೋರ್ಟ್ ಅಸ್ತು; ಪ್ರಯಾಣಿಕರಿಗೆ ಅನುಕೂಲ, ಸುರಕ್ಷತೆ-ಉದ್ಯೋಗಕ್ಕೆ ಸವಾಲು?

ಬೈಕ್‌ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನ ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ರಾಜ್ಯ ಸರ್ಕಾರದ ಮೇಲ್ಮನವಿಯನ್ನ ವಜಾಗೊಳಿಸಿದೆ. ಇದರಿಂದ ಕಡಿಮೆ ವೆಚ್ಚದ ಪ್ರಯಾಣ, ಸಂಚಾರ ದಟ್ಟಣೆಯಲ್ಲಿ ಸಮಯ ಉಳಿತಾಯ ಹಾಗೂ ಬೈಕ್‌ ಮಾಲೀಕರಿಗೆ ಉದ್ಯೋಗಾವಕಾಶ ಹೆಚ್ಚುವ ನಿರೀಕ್ಷೆಯಿದೆ. ಆದರೆ ಪ್ರಯಾಣಿಕರ ಸುರಕ್ಷತೆ, ವಿಮೆ, ಪರವಾನಗಿ ಮತ್ತು ಆಟೋ-ಕ್ಯಾಬ್ ಚಾಲಕರ ಜೀವನೋಪಾಯದ ಮೇಲೆ ಉಂಟಾಗಬಹುದಾದ ಪರಿಣಾಮಗಳು ಪ್ರಮುಖ ಸವಾಲುಗಳಾಗಿವೆ.

Written By Puttaraj K Alur
Published: Nov 21, 2026, 11:20 IST | Updated: Nov 21, 2026, 11:31 IST
Image Credit: Karnataka Bike Taxi
Join

Karnataka Bike Taxi: ಕರ್ನಾಟಕದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗಳನ್ನ ನಿಷೇಧಿಸುವ ರಾಜ್ಯ ಸರ್ಕಾರದ ಪ್ರಯತ್ನಕ್ಕೆ ಸುಪ್ರೀಂಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆಗೆ ಅವಕಾಶ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನ ಸುಪ್ರೀಂಕೋರ್ಟ್ ಎತ್ತಿಹಿಡಿದಿದ್ದು, ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನ ವಜಾಗೊಳಿಸಿದೆ. ಈ ಬೆಳವಣಿಗೆಯಿಂದ ರಾಜ್ಯದಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗಳು ಮತ್ತೆ ಚುರುಕುಗೊಳ್ಳುವ ನಿರೀಕ್ಷೆ ಮೂಡಿದೆ. ಆದರೆ ಈ ಸೇವೆಯಿಂದ ಪ್ರಯಾಣಿಕರಿಗೆ ಅನುಕೂಲಗಳಿರುವಂತೆಯೇ ಸುರಕ್ಷತೆ, ವಿಮೆ ಮತ್ತು ಸಾಂಪ್ರದಾಯಿಕ ಸಾರಿಗೆ ವಲಯದ ಉದ್ಯೋಗದ ಕುರಿತ ಪ್ರಶ್ನೆಗಳೂ ಮುನ್ನೆಲೆಗೆ ಬಂದಿವೆ.

ಬೈಕ್‌ ಟ್ಯಾಕ್ಸಿಗೆ ಸುಪ್ರೀಂಕೋರ್ಟ್‌ನಿಂದ ಹಸಿರು ನಿಶಾನೆ

ಬೈಕ್‌ ಟ್ಯಾಕ್ಸಿ ಸೇವೆಗಳ ಕುರಿತು ಕರ್ನಾಟಕದಲ್ಲಿ ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಯುತ್ತಿತ್ತು. 2025ರ ಏಪ್ರಿಲ್‌ನಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಅಗತ್ಯ ನಿಯಮಾವಳಿ ರೂಪಿಸುವವರೆಗೆ ಬೈಕ್‌ ಟ್ಯಾಕ್ಸಿ ಸೇವೆಗಳನ್ನ ಸ್ಥಗಿತಗೊಳಿಸುವಂತೆ ಆದೇಶಿಸಿತ್ತು. ಇದನ್ನ ಪ್ರಶ್ನಿಸಿ ಓಲಾ, ಉಬರ್, ರ‍್ಯಾಪಿಡೋ ಸೇರಿದಂತೆ ಅಗ್ರಿಗೇಟರ್‌ಗಳು ಹಾಗೂ ಬೈಕ್‌ ಮಾಲೀಕರ ಸಂಘಟನೆಗಳು ಮೇಲ್ಮನವಿ ಸಲ್ಲಿಸಿದ್ದವು. 2026ರ ಜನವರಿ 23ರಂದು ಹೈಕೋರ್ಟ್‌ನ ವಿಭಾಗೀಯ ಪೀಠವು ಹಿಂದಿನ ಆದೇಶವನ್ನ ರದ್ದುಗೊಳಿಸಿ, ಮೋಟಾರ್‌ಸೈಕಲ್‌ಗಳನ್ನ ಸಾರಿಗೆ ವಾಹನಗಳಾಗಿ ನೋಂದಾಯಿಸುವ ಮತ್ತು ಒಪ್ಪಂದದ ಆಧಾರದಲ್ಲಿ ಪ್ರಯಾಣಿಕರನ್ನ ಸಾಗಿಸಲು ಪರವಾನಗಿ ನೀಡುವ ಅರ್ಜಿಗಳನ್ನ ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.

ಈ ಆದೇಶವನ್ನ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‌ ಮೊರೆ ಹೋಗಿತ್ತು. ಆದರೆ ನವೆಂಬರ್ 20ರಂದು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರದ ಮೇಲ್ಮನವಿಯನ್ನ ವಜಾಗೊಳಿಸಿದೆ. ಬೈಕ್‌ ಟ್ಯಾಕ್ಸಿಗಳನ್ನ ಸಂಪೂರ್ಣವಾಗಿ ನಿಷೇಧಿಸುವ ಬದಲು ಸೂಕ್ತ ನಿಯಮಗಳ ಮೂಲಕ ನಿಯಂತ್ರಿಸುವುದು ಉತ್ತಮ ಎಂಬ ಅಭಿಪ್ರಾಯವನ್ನೂ ನ್ಯಾಯಾಲಯ ವ್ಯಕ್ತಪಡಿಸಿದೆ.

ಬೈಕ್‌ ಟ್ಯಾಕ್ಸಿಯಿಂದ ಪ್ರಯಾಣಿಕರಿಗೆ ಏನು ಅನುಕೂಲ?

ಬೈಕ್‌ ಟ್ಯಾಕ್ಸಿಗಳ ಪ್ರಮುಖ ಅನುಕೂಲವೆಂದರೆ ಕಡಿಮೆ ಪ್ರಯಾಣ ವೆಚ್ಚ. ಆಟೋ ಅಥವಾ ಕ್ಯಾಬ್‌ಗೆ ಹೋಲಿಸಿದರೆ ಬೈಕ್‌ ಟ್ಯಾಕ್ಸಿ ಪ್ರಯಾಣ ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಾಗುವ ಸಾಧ್ಯತೆಯಿದೆ. ಕಡಿಮೆ ದೂರದ ಪ್ರಯಾಣಕ್ಕೆ ಇದು ಅನುಕೂಲಕರ ಆಯ್ಕೆಯಾಗಬಹುದು. ನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಬೈಕ್‌ಗಳು ಕಿರಿದಾದ ರಸ್ತೆಗಳಲ್ಲಿ ಸುಲಭವಾಗಿ ಸಂಚರಿಸಬಲ್ಲವು. ಇದರಿಂದ ಕೆಲವು ಸಂದರ್ಭಗಳಲ್ಲಿ ಪ್ರಯಾಣದ ಸಮಯ ಕಡಿಮೆಯಾಗಬಹುದು.

ಕಚೇರಿಗಳಿಗೆ ತೆರಳುವವರು, ವಿದ್ಯಾರ್ಥಿಗಳು ಹಾಗೂ ಕಡಿಮೆ ದೂರದ ಪ್ರಯಾಣ ಮಾಡುವವರಿಗೆ ಈ ಸೇವೆ ಸಹಾಯಕವಾಗಬಹುದು. ಇದಲ್ಲದೆ ಆ್ಯಪ್‌ ಆಧಾರಿತ ಬುಕ್ಕಿಂಗ್, ಪ್ರಯಾಣದ ವಿವರಗಳು ಮತ್ತು ಜಿಪಿಎಸ್‌ ಟ್ರ್ಯಾಕಿಂಗ್‌ನಂತಹ ಸೌಲಭ್ಯಗಳು ಪ್ರಯಾಣಿಕರಿಗೆ ಅನುಕೂಲ ಒದಗಿಸುತ್ತವೆ. ಬೈಕ್‌ ಮಾಲೀಕರಿಗೂ ಹೆಚ್ಚುವರಿ ಆದಾಯ ಗಳಿಸುವ ಅವಕಾಶ ಸಿಗಬಹುದು. ಸೇವೆಯ ವಿಸ್ತರಣೆಯಿಂದ ಬೈಕ್‌ ಚಾಲಕರಿಗೆ ಉದ್ಯೋಗಾವಕಾಶಗಳು ಹೆಚ್ಚುವ ಸಾಧ್ಯತೆಯೂ ಇದೆ.

ಸುರಕ್ಷತೆ ಮತ್ತು ವಿಮೆ ಪ್ರಮುಖ ಸವಾಲು

ಬೈಕ್‌ ಟ್ಯಾಕ್ಸಿಗಳ ಅನುಕೂಲಗಳ ನಡುವೆಯೇ ಪ್ರಯಾಣಿಕರ ಸುರಕ್ಷತೆ ಪ್ರಮುಖ ಚರ್ಚೆಯ ವಿಷಯವಾಗಿದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವಾಗ ಅಪಘಾತದ ಅಪಾಯವನ್ನ ನಿರ್ಲಕ್ಷಿಸುವಂತಿಲ್ಲ. ವಿಶೇಷವಾಗಿ ಮಹಿಳಾ ಪ್ರಯಾಣಿಕರ ಸುರಕ್ಷತೆ, ಚಾಲಕರ ಹಿನ್ನೆಲೆ ಪರಿಶೀಲನೆ, ವಾಹನದ ದಾಖಲೆಗಳು ಮತ್ತು ವಿಮಾ ಸೌಲಭ್ಯಗಳ ಬಗ್ಗೆ ಸ್ಪಷ್ಟ ನಿಯಮಗಳ ಅಗತ್ಯವಿದೆ. ವೈಯಕ್ತಿಕ ಬಳಕೆಗೆ ನೋಂದಾಯಿಸಿರುವ ಬೈಕ್‌ಗಳನ್ನ ವಾಣಿಜ್ಯ ಉದ್ದೇಶಕ್ಕೆ ಬಳಸುವಾಗ ಸೂಕ್ತ ಪರವಾನಗಿ ಹಾಗೂ ವಿಮಾ ನಿಯಮಗಳನ್ನ ಪಾಲಿಸುವುದು ಮುಖ್ಯ. ಅಪಘಾತ ಸಂಭವಿಸಿದರೆ ಪ್ರಯಾಣಿಕರಿಗೆ ಪರಿಹಾರ ದೊರೆಯುವ ವ್ಯವಸ್ಥೆಯೂ ಸ್ಪಷ್ಟವಾಗಿರಬೇಕು. 

ಚಾಲಕರ ದಾಖಲೆಗಳ ಪರಿಶೀಲನೆ, ವಾಹನದ ಫಿಟ್‌ನೆಸ್‌ ಮತ್ತು ಕಡ್ಡಾಯ ಸುರಕ್ಷತಾ ಕ್ರಮಗಳ ಅನುಷ್ಠಾನವೂ ಸವಾಲಿನ ಅಂಶಗಳಾಗಿವೆ. ಇನ್ನು ಆಟೋ ಮತ್ತು ಕ್ಯಾಬ್‌ ಚಾಲಕರಿಗೆ ಬೈಕ್‌ ಟ್ಯಾಕ್ಸಿಗಳ ವಿಸ್ತರಣೆಯಿಂದ ಸ್ಪರ್ಧೆ ಹೆಚ್ಚಾಗಬಹುದು. ಸಮಾನ ನಿಯಮಗಳು ಮತ್ತು ಪರವಾನಗಿ ವ್ಯವಸ್ಥೆ ಇಲ್ಲದಿದ್ದರೆ ಸಾಂಪ್ರದಾಯಿಕ ಸಾರಿಗೆ ವಲಯದ ಚಾಲಕರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಆತಂಕವನ್ನೂ ಸಂಘಟನೆಗಳು ವ್ಯಕ್ತಪಡಿಸಿವೆ.

ನಿಯಮಾವಳಿ ರೂಪಿಸಲು ಸರ್ಕಾರದ ಸಿದ್ಧತೆ

ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ಯ ಸರ್ಕಾರ ಬೈಕ್‌ ಟ್ಯಾಕ್ಸಿ ಸೇವೆಗಳಿಗೆ ಸಂಬಂಧಿಸಿದ ನಿಯಮಗಳನ್ನ ರೂಪಿಸುವ ಪ್ರಕ್ರಿಯೆಗೆ ಮುಂದಾಗಿದೆ. ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಪ್ರಯಾಣಿಕರ ಸುರಕ್ಷತೆ, ಅದರಲ್ಲೂ ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಚಾಲಕರ ದಾಖಲೆಗಳ ಪರಿಶೀಲನೆ, ಜಿಪಿಎಸ್‌ ಸಾಧನಗಳ ಅಳವಡಿಕೆ, ವಾಹನ ವಿಮೆ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮಗಳನ್ನ ನಿಯಮಾವಳಿಯಲ್ಲಿ ಸೇರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ.

ಸುಪ್ರೀಂಕೋರ್ಟ್‌ನ ಲಿಖಿತ ಆದೇಶ ಪರಿಶೀಲಿಸಿದ ಬಳಿಕ ಅಡ್ವೊಕೇಟ್ ಜನರಲ್ ಅವರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಸಚಿವರು ಹೇಳಿದ್ದಾರೆ. ಒಟ್ನಲ್ಲಿ ಬೈಕ್‌ ಟ್ಯಾಕ್ಸಿ ಸೇವೆಗಳು ಪ್ರಯಾಣಿಕರಿಗೆ ಕಡಿಮೆ ವೆಚ್ಚದ ಹಾಗೂ ವೇಗದ ಸಂಚಾರದ ಆಯ್ಕೆಯನ್ನ ಒದಗಿಸುವ ಸಾಮರ್ಥ್ಯ ಹೊಂದಿವೆ. ಅದೇ ರೀತಿ ಸುರಕ್ಷತೆ, ವಿಮೆ, ಪರವಾನಗಿ ಮತ್ತು ಇತರ ಸಾರಿಗೆ ಸೇವೆಗಳ ಮೇಲಿನ ಪರಿಣಾಮಗಳಿಗೂ ಸೂಕ್ತ ಗಮನ ನೀಡಬೇಕಿದೆ. ಸೇವೆಯ ಯಶಸ್ಸು ಕೇವಲ ಅನುಮತಿಯ ಮೇಲೆ ಮಾತ್ರವಲ್ಲ, ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆ ಮತ್ತು ಸುರಕ್ಷತಾ ಕ್ರಮಗಳ ಅನುಷ್ಠಾನದ ಮೇಲೂ ಅವಲಂಬಿತವಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES