ಸ್ಟಿಂಗ್ ಆಪರೇಷನ್: ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷರು ಏನಂದ್ರು?
ಸ್ಟಿಂಗ್ ಆಪರೇಷನ್ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಮಾತನಾಡಿದ್ದು ಅವರು ಹೇಳಿದ್ದೇನು ಗೊತ್ತಾ?
ರಾಜ್ಯ ರಾಜಕೀಯದಲ್ಲಿ ಇದೀಗ ʼಸ್ಟಿಂಗ್ ಆಪರೇಷನ್ʼ ವಿಚಾರ ಭಾರೀ ಸದ್ದು ಮಾಡುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಖ್ಯಾತಿಗೆ ಚ್ಯುತಿ ತರುವ ಉದ್ದೇಶದಿಂದ, ಅವರ ಹೆಸರಿಗೆ ಮಸಿ ಬಳೆಯುವ ಸಲುವಾಗಿ ನಡೆಸಲಾಗುತ್ತಿದೆ ಎನ್ನಲಾಗುತ್ತಿರುವ ʼಸ್ಟಿಂಗ್ ಆಪರೇಷನ್ʼನಲ್ಲಿ ನಮ್ಮ ಪಕ್ಷದವರೂ ಭಾಗಿಯಾಗಿರಬಹುದು ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅನುಮಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮಾಧ್ಯಮ ಮಿತ್ರರ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್, ಕೇವಲ ಅಪಾದನೆ ಮಾಡಿದ್ರೆ ಆಗಲ್ಲ, ಸೂಕ್ತ ಪುರಾವೆ ಅಗತ್ಯ ಎಂದಿದ್ದಾರೆ.
ಸ್ಟಿಂಗ್ ಆಪರೇಷನ್ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಿ.ಕೆ. ಹರಿಪ್ರಸಾದ್, ನಾನು ಯತೀಂದ್ರ ಅವರ ಜೊತೆಗೆ ಮಾತಾಡ್ತೀನಿ. ನಮ್ಮ ಪಕ್ಷದವರೇ ಈ ಕೃತ್ಯದಲ್ಲಿ ಭಾಗಿಯಾಗಿದ್ದರೆ, ಅದರ ಪುರಾವೆ ಇದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ. ಯಾರದಾದರೂ ಅಪಾದನೆ ಮಾಡಿದ್ರೆ ಆಗಲ್ಲ, ಅವರ ವಿರುದ್ಧ ಸೂಕ್ತ ಪುರಾವೆ ಬೇಕು. ಇಂತಹ ಕೃತ್ಯದಲ್ಲಿ ನಮ್ಮ ಪಕ್ಷದವರು ಯಾರಾದರೂ ಶಾಮಿಲಾಗಿದ್ದಾರೆ ಅಂದ್ರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಸೇಡಿನ ರಾಜಕೀಯ ಹೀನ ಕೃತ್ಯ:
ನಾನು ಈಗಾಗಲೇ ಹೇಳಿದ್ದೀನಿ. ಸೇಡಿನ ರಾಜಕೀಯವಾಗಿ ಸೇಡು ತೀರಿಸಿಕೊಳ್ಳೋಕೆ ಕೆಲವರು ಮಾಡುವ ಹೀನ ಕೃತ್ಯ ಇದು. ಅದು ಆಗಬಾರದು ಅಂತ ನಾನು ನಿರಂತರವಾಗಿ ಹೇಳಿಕೊಂಡೆ ಬಂದಿದ್ದೀನಿ.
ಈ ತರ ಸ್ಟಿಂಗ್ ಆಪರೇಷನ್ ಹಿಂದೆ ಯಾರಾದರೂ ಕಾಂಗ್ರೆಸ್ ಪಕ್ಷದವರು ಇದ್ದರೆ ಅಥವಾ ಅದರಲ್ಲಿ ಯಾರಾದರೂ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು. ಈ ಕುರಿತಂತೆ, ಹರಿದಾಡುತ್ತಿರುವ ವಿಡಿಯೋದಲ್ಲಿ ಯಾರ ವಿರುದ್ಧ ಆರೋಪ ಕೇಳಿ ಬಂದಿದೆಯೋ ಈಗಾಗಲೇ ಅವರಿಗೆ ಶೋಕಾಸ್ ನೋಟೀಸ್ ಕೊಡಿ ಅಂತ ಹೇಳಿದ್ದೀವಿ. ಬಂದ ನಂತರ ಅದರ ಏನು ಕ್ರಮ ತೆಗೆದುಕೊಳ್ಳಬೇಕು, ಮಾಡ್ತೀವಿ. ವೀಡಿಯೋದಲ್ಲಿ ಯಾರಿದ್ದಾರೆ? ಅವರ ಹಿಂದೆ ಯಾರಿದ್ದಾರೆ? ಅಂತ ತನಿಖೆ ಮಾಡೋಕೆ ಸಿಐಡಿ, ಸಿಬಿಐ ಎಲ್ಲಾ ಇದೆ. ಆ ರೀತಿ ನೋಡೋಕೆ ಹೋದ್ರೆ ತನಿಖೆ ಬಹಳ ಹಿಂದೆಯಿಂದ ಆಗಬೇಕಾಗುತ್ತೆ ಎಂದರು.
ಸಿಡಿ ಆಪರೇಷನ್ ಪಿತಾಮಹ:
ಸಿಡಿ ಆಪರೇಷನ್, ಪಿತಾಮಹ ಭೀಷ್ಮಾಚಾರ್ಯ ಈ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ. ಸಂಜಯ್ ಜೋಶಿ ಅಂತ ಗುಜರಾತ್ ನಲ್ಲಿ ನನ್ನ ಜೊತೆ ಅವರು ಬಿಜೆಪಿ ಉಸ್ತುವಾರಿ ವಹಿಸಿದರು. ಅವರ ಸಿಡಿ ತೆಗೆದು ಅವರ ರಾಜಕೀಯ ಜೀವನವನ್ನೇ ನಿರ್ನಾಮ ಮಾಡಿದಂತಹ ಕೀರ್ತಿ ಮಹಾ ಮಾನವನಿಗೆ ಸಲ್ಲುತ್ತೆ ಎಂದರು.
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ ಎಂದ ಎಚ್.ಡಿ. ಕುಮಾರಸ್ವಾಮಿ:
ಸಿದ್ದರಾಮಯ್ಯ ಭೇಟಿ ಮಾಡ್ತೇನೆ ಅಂತ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಹೇಳಿಕೆ ನೀಡುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಸಿದ್ದರಾಮಯ್ಯನವರು ಅಷ್ಟೊಂದು ವೀಕ್ ಮನುಷ್ಯ ಅಲ್ಲ. ಕುಮಾರಸ್ವಾಮಿಯವರಿಗೆ ಎಷ್ಟು ಧೈರ್ಯ ಇದೆ. ಅದಕ್ಕಿಂತ ಜಾಸ್ತಿ ಧೈರ್ಯ ಸಿದ್ದರಾಮಯ್ಯನವರಿಗೂ ಇದೆ. ಅದನ್ನ ರಾಜಕೀಯವಾಗಿ ಫೇಸ್ ಮಾಡ್ತೀವಿ. ಅದರ ಬಗ್ಗೆ ನಾನು ಏನು ಕಾಮೆಂಟ್ ಮಾಡಲ್ಲ ಎಂದರು.