ಮಂಡ್ಯ: ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಆರೈ ಅಂದರೆ ARAI ಪರೀಕ್ಷಾ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಅಡ್ಡಿಪಡಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಕೈಗಾರಿಕೆ ಸ್ಥಾಪನೆಗೆ ಅಗತ್ಯವಿರುವ ಭೂಮಿ ಮಂಜೂರು ಮಾಡದೆ ಬರೋಬ್ಬರಿ ಹತ್ತು ತಿಂಗಳಿಂದ ರಾಜ್ಯ ಸರ್ಕಾರ ಸತಾಯಿಸುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಪತ್ರ ಬರೆದಿದ್ದಾರೆ.
ಭೂಮಿ ಮಂಜೂರಾತಿಯ ಹತ್ತು ತಿಂಗಳ ವಿಳಂಬ:
ಮಂಡ್ಯದಲ್ಲಿ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ ಹಾಗೂ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ ಸ್ಥಾಪಿಸಲು ಕೇಂದ್ರ ಬೃಹತ್ ಕೈಗಾರಿಕೆ ಸಚಿವಾಲಯ ಮುಂದಾಗಿದೆ.ಆದರೆ, ಕಳೆದ ಹತ್ತು ತಿಂಗಳಿಂದ ಪ್ರಸ್ತಾವಿತ ಯೋಜನೆಗೆ ಜಾಗ ನೀಡುವಲ್ಲಿ ರಾಜ್ಯ ಸರ್ಕಾರ ಮತ್ತು ಮಂಡ್ಯ ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿವೆ.ಈ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು ತೀವ್ರ ಬೇಸರ ಹೊರಹಾಕಿದ್ದಾರೆ.ಸಚಿವರ ಈ ಪತ್ರವನ್ನು ಅವರ ಆಪ್ತರು ವಿಧಾನಸೌಧಕ್ಕೆ ತೆರಳಿ ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಹಸ್ತಾಂತರಿಸಿದ್ದಾರೆ.
ಕಳೆದ ಹತ್ತು ತಿಂಗಳಿಂದ ನಡೆದಿರುವ ಬೆಳವಣಿಗೆಗಳ ಹೆಜ್ಜೆ ಗುರುತುಗಳನ್ನು ಹೆಚ್.ಡಿ.ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.ಮಾರ್ಚ್ 16ರಂದೇ ARAI ತಜ್ಞರ ತಂಡ ಮಂಡ್ಯದ ಬಸರಾಳು, ಸಕ್ಕರೆ ಕಾರ್ಖಾನೆ ಹಾಗೂ ಕೆ.ಆರ್.ಪೇಟೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.ವಿಕಾಸಸೌಧದಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಸಚಿವ ಎಂ.ಬಿ.ಪಾಟೀಲ್ ಜೊತೆಯೂ ಸಭೆಗಳು ನಡೆದಿದ್ದವು.ಸೆಪ್ಟೆಂಬರ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯ ಬಳಿಕ, ಬಸರಾಳುನಲ್ಲಿ ಸಿಐಇ ಕೇಂದ್ರಕ್ಕೆ 100 ಎಕರೆ ಹಾಗೂ ಇವಿ ಕೇಂದ್ರಕ್ಕೆ ಹೆಚ್ಚುವರಿಯಾಗಿ 60 ಎಕರೆ ಭೂಮಿಯನ್ನು ಪರಿಷ್ಕೃತ ಪ್ರಸ್ತಾವನೆಯ ಮೂಲಕ ಕೋರಲಾಗಿತ್ತು. ಇಷ್ಟೆಲ್ಲಾ ಕಸರತ್ತು ನಡೆದರೂ ರಾಜ್ಯ ಸರ್ಕಾರದಿಂದ ಅಂತಿಮ ಅನುಮೋದನೆ ಸಿಗದಿರುವುದು ದುರದೃಷ್ಟಕರ ಎಂದು ಸಚಿವರು ಕಿಡಿಕಾರಿದ್ದಾರೆ.
ಮಹಾರಾಷ್ಟ್ರದ ಪುಣೆ, ಹರಿಯಾಣದ ಮಾನೇಸರ್ ಮತ್ತು ಚೆನ್ನೈನಲ್ಲಿ ಇಂತಹ ಅತ್ಯಾಧುನಿಕ ಕೇಂದ್ರಗಳಿದ್ದು, ಆ ರಾಜ್ಯಗಳು ಆಟೋಮೊಬೈಲ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ.ಆದರೆ ಕರ್ನಾಟಕದಲ್ಲಿ ಮಾತ್ರ ಕೇವಲ ಭಾಷಣಗಳಲ್ಲಿ ಆಶ್ವಾಸನೆ ನೀಡಲಾಗುತ್ತಿದೆಯೇ ಹೊರತು ಮಣ್ಣಿನಲ್ಲಿ ಕೆಲಸ ಕಾಣಿಸುತ್ತಿಲ್ಲ ಎಂದು ಹೆಚ್‌ಡಿಕೆ ಟೀಕಿಸಿದ್ದಾರೆ.
ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ ಮತ್ತು ಸಾವಿರಾರು ಎಕರೆ ಜಮೀನು ನೀಡುವುದಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿರುವ ಮಾತುಗಳನ್ನು ಉಳಿಸಿಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ. ಒಟ್ಟಿನಲ್ಲಿ, ರಾಜಕೀಯ ಭೇದ ಭಾವ ತೊರೆದು ಮಂಡ್ಯದ ಯುವಕರಿಗೆ ಉದ್ಯೋಗ ತಂದುಕೊಡುವ ಈ ಮಹತ್ವಾಕಾರದ ಕೇಂದ್ರಕ್ಕೆ ಕೂಡಲೇ ಭೂಮಿ ಮಂಜೂರು ಮಾಡಬೇಕು ಎಂಬ ಒತ್ತಡ ಈಗ ಸರ್ಕಾರದ ಮೇಲೆ ಬಿದ್ದಿದೆ.