SOCIAL MEDIA

Newsletter

PARTNER SITES
Select Language Select State

ಸ್ಟಿಂಗ್ ಆಪರೇಷನ್ ಪ್ರಕರಣ : ಸಿಸಿಬಿ ತನಿಖೆಯಲ್ಲಿ ಬಯಲಾಯ್ತು ರೋಚಕ ಸತ್ಯ

ಸಿಎಂ ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿ ನಡೆದಿದೆ ಎನ್ನಲಾದ 'ಸ್ಟಿಂಗ್ ಆಪರೇಷನ್' ಪ್ರಕರಣ ದಿನದಿಂದ ದಿನಕ್ಕೆ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸುತ್ತಿದೆ. ವಿವಾದಾತ್ಮಕ ವಿಡಿಯೋ ಅಪ್ಲೋಡ್ ಮಾಡಲು ಬಳಸಲಾಗಿದ್ದ ಮೊಬೈಲ್ ಫೋನ್ ಖರೀದಿಯ ಜಾಡು ಹಿಡಿದು ಹೊರಟ ಬೆಂಗಳೂರು ಸಿಸಿಬಿ ಪೊಲೀಸರಿಗೆ ದೆಹಲಿಯ ಕೇಂದ್ರ ಸಚಿವರ ಅಧಿಕೃತ ನಿವಾಸದ ನಂಟು ಬೆಳಕಿಗೆ ಬಂದಿದ್ದು, ಇಡೀ ಪ್ರಕರಣ ರೋಚಕ ಹಂತ ತಲುಪಿದೆ.

Written By Krishna NK
Published: Nov 01, 2026, 04:18 PM IST | Updated: Nov 01, 2026, 04:25 PM IST
Image Credit: sting operation
Join

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರ ಹೆಸರಿಗೆ ಮಸಿ ಬಳಿಯಲು ನಡೆದಿದೆ ಎನ್ನಲಾದ 'ಸ್ಟಿಂಗ್ ಆಪರೇಷನ್' ಪ್ರಕರಣ ದಿನದಿಂದ ದಿನಕ್ಕೆ ಭಾರೀ ಕುತೂಹಲ ಮೂಡಿಸುತ್ತಿದೆ. ಈ ವಿವಾದಾತ್ಮಕ ವಿಡಿಯೋ ಅಪ್ಲೋಡ್ ಮಾಡಲು ಬಳಸಲಾಗಿದ್ದ ಮೊಬೈಲ್ ಫೋನ್ ಎಲ್ಲಿಂದ ಬಂತು ಎಂಬುದನ್ನು ಪತ್ತೆ ಹಚ್ಚುವಲ್ಲಿ ಬೆಂಗಳೂರು ಸಿಸಿಬಿ (CCB) ಪೊಲೀಸರು ಯಶಸ್ವಿಯಾಗಿದ್ದು, ತನಿಖೆಯಲ್ಲಿ ಒಂದೊಂದಾಗಿ ರೋಚಕ ಸಂಗತಿಗಳು ಹೊರಬರುತ್ತಿವೆ.

ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ್ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದು, ಪ್ರಕರಣದ ಹಿಂದೆ ಬಲವಾದ ರಾಜಕೀಯ ನಂಟು ಹಾಗೂ ವ್ಯವಸ್ಥಿತ ಸಂಚು ಇರುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ.

ಮೊಬೈಲ್ ಖರೀದಿ ಜಾಲ ಪತ್ತೆ ಹಚ್ಚಿದ್ದೇ ರೋಚಕ
ವಿಡಿಯೋ ಅಪ್ಲೋಡ್ ಮಾಡಲು ಬಳಸಲಾದ ಮೊಬೈಲ್ ಮೂಲವನ್ನು ಹುಡುಕ ಹೊರಟ ಸಿಸಿಬಿ ಪೊಲೀಸರಿಗೆ ದೆಹಲಿಯ ಕರೋಲ್ ಬಾಗ್ ಪ್ರದೇಶದ ಮೊಬೈಲ್ ಅಂಗಡಿಯೊಂದು ಪ್ರಮುಖ ಸುಳಿವು ನೀಡಿತು. ಕಳೆದ ಸೆಪ್ಟೆಂಬರ್ 26 ರಂದು ದೆಹಲಿಯಲ್ಲಿ ರಿತೇಶ್ ಪಾಂಡೆ ಮತ್ತು ವಿನೋದ್ ಶರ್ಮಾ ಎಂಬಿಬ್ಬರು ಮೊಬೈಲ್ ಖರೀದಿಸಲು ತೆರಳಿದ್ದರು. ಮಧ್ಯಾಹ್ನ 1.57ರ ಸುಮಾರಿಗೆ ಅಂಗಡಿಗೆ ಬಂದಿದ್ದ ಈ ಆರೋಪಿಗಳು, 7,700 ರೂ. ಹಾಗೂ 8,000 ರೂ. ಬೆಲೆಯ ಎರಡು ಸ್ಯಾಮ್‌ಸಂಗ್ ಮೊಬೈಲ್ ಫೋನ್‌ಗಳನ್ನು ಖರೀದಿಸಿದ್ದರು.

ವಿಶೇಷವೆಂದರೆ, ತಾವು ಖರೀದಿಸಿದ ಮೊಬೈಲ್ ಸರಿಯಾಗಿ ಕೆಲಸ ಮಾಡುತ್ತದೆಯೇ ಎಂದು ಪರೀಕ್ಷಿಸಲು ಅಂಗಡಿಯಲ್ಲಿದ್ದ ಪೆನ್ ಡ್ರೈವ್ ಮತ್ತು ಸಿಮ್ ಕಾರ್ಡ್ ಹಾಕಿ ಟೆಸ್ಟ್ ಮಾಡಿದ್ದರು. ನಂತರ 8,000 ರೂ. ಬೆಲೆಬಾಳುವ ಸ್ಯಾಮ್‌ಸಂಗ್ ಮೊಬೈಲ್ ಅನ್ನೇ ವಿಡಿಯೋ ಅಪ್ಲೋಡ್ ಮಾಡಲು ಬಳಸಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಅಂಗಡಿಯವರ ಸಿಸಿಟಿವಿ ದೃಶ್ಯಗಳು ಮತ್ತು ಬಿಲ್ಲಿಂಗ್ ವಿವರಗಳನ್ನು ಆಧರಿಸಿ ಸಿಸಿಬಿ ತಂಡ ಆರೋಪಿ ರಿತೇಶ್ ಪಾಂಡೆಯನ್ನು ಕೊನೆಗೂ ಹೆಡೆಮುರಿ ಕಟ್ಟಿದೆ.

ಕೇಂದ್ರ ಸಚಿವರ ಮನೆಯಲ್ಲೇ ನಡೆದಿತ್ತು ಕೈ ಬದಲಾವಣೆ
ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಆರೋಪಿ ರಿತೇಶ್ ಪಾಂಡೆ ನೀಡಿರುವ ಹೇಳಿಕೆಗಳು ಇಡೀ ಪ್ರಕರಣಕ್ಕೆ ದೊಡ್ಡ ತಿರುವು ನೀಡಿವೆ. ಪ್ರಜ್ವಲ್ ಪ್ರಸಾದ್ ಎಂಬಾತನ ಸೂಚನೆಯ ಮೇರೆಗೆ ತಾನು ಮತ್ತು ವಿನೋದ್ ಶರ್ಮಾ ಸೇರಿ ಮೊಬೈಲ್ ಖರೀದಿಸಿರುವುದಾಗಿ ರಿತೇಶ್ ಒಪ್ಪಿಕೊಂಡಿದ್ದಾನೆ.

ಅಷ್ಟೇ ಅಲ್ಲದೆ, ದೆಹಲಿಯಲ್ಲಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HDK) ಅವರ ಅಧಿಕೃತ ನಿವಾಸದ ಬಳಿ ಬರುವಂತೆ ಪ್ರಜ್ವಲ್ ಸೂಚನೆ ನೀಡಿದ್ದ. ಆ ಸೂಚನೆಯಂತೆ ಎಚ್‌ಡಿಕೆ ನಿವಾಸದ ಬಳಿ ತೆರಳಿ, ಅಲ್ಲಿ ಪ್ರಜ್ವಲ್ ಪ್ರಸಾದ್ ಅವರಿಗೆ ಖರೀದಿಸಿದ ಮೊಬೈಲ್ ಅನ್ನು ಹ್ಯಾಂಡ್‌ಓವರ್ ಮಾಡಿದ್ದಾಗಿ ರಿತೇಶ್ ಬಾಯ್ದಿಟ್ಟಿದ್ದಾನೆ. ಪ್ರಜ್ವಲ್ ಹಾಗೂ ರಿತೇಶ್ ನಡುವೆ ಹಣಕಾಸಿನ ವ್ಯವಹಾರ ನಡೆದಿರುವ ಬಗ್ಗೆಯೂ ಪೊಲೀಸರಿಗೆ ಮಹತ್ವಪೂರ್ಣ ಮಾಹಿತಿ ಲಭ್ಯವಾಗಿದೆ.

ಸಿಸಿಬಿಯಿಂದ ನೋಟಿಸ್, ಮುಂದುವರಿದ ತನಿಖೆ
ಪೊಲೀಸ್ ಆಯುಕ್ತರು ನೀಡಿರುವ ಮಾಹಿತಿ ಪ್ರಕಾರ, ಈ ಪ್ರಕರಣದಲ್ಲಿ ಸದ್ಯ ಮೂರು ಜನರ ಪ್ರಮುಖ ಪಾತ್ರವಿರುವುದು ದೃಢಪಟ್ಟಿದೆ. ಆರೋಪಿಗಳು ಹಾಗೂ ಈ ಕೃತ್ಯದಲ್ಲಿ ಭಾಗಿಯಾದವರು ಹೆಚ್.ಡಿ. ಕುಮಾರಸ್ವಾಮಿ ಅವರ ನಿವಾಸದಲ್ಲಿ ಕೆಲಸ ಮಾಡುತ್ತಿದ್ದು, ಸೋಷಿಯಲ್ ಮೀಡಿಯಾ ಕಂಟೆಂಟ್‌ಗಳನ್ನು ನಿರ್ವಹಿಸುವ ಕೆಲಸದಲ್ಲಿ ತೊಡಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಸದ್ಯ ರಿತೇಶ್ ಪಾಂಡೆ ನೀಡಿರುವ ಹೇಳಿಕೆಯ ಆಧಾರದ ಮೇರೆಗೆ ಪ್ರಜ್ವಲ್ ಪ್ರಸಾದ್ ಹಾಗೂ ವಿನೋದ್ ಶರ್ಮಾ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಪ್ರಜ್ವಲ್ ವಿಚಾರಣೆ ಪೂರ್ಣಗೊಂಡ ಬಳಿಕ ದೆಹಲಿಯಲ್ಲಿರುವ ಕೇಂದ್ರ ಸಚಿವರ ಅಧಿಕೃತ ನಿವಾಸದಲ್ಲೂ ಸ್ಥಳ ಮಹಜರು ಹಾಗೂ ಪರಿಶೀಲನೆ ನಡೆಸುವ ಸಾಧ್ಯತೆಯಿದೆ. ಈ ಮೂವರು ಆರೋಪಿಗಳು ಸಿಕ್ಕ ಬಳಿಕವಷ್ಟೇ ಸ್ಟಿಂಗ್ ಆಪರೇಷನ್ ಹಿಂದಿನ ಅಸಲಿ ಸೂತ್ರಧಾರಿಗಳು ಯಾರು ಎಂಬುದು ಜಗಜ್ಜಾಹೀರಾಗಲಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES