SOCIAL MEDIA

Newsletter

PARTNER SITES
Select Language Select State

RTO ಬಡ್ತಿ ಅಕ್ರಮ ಪ್ರಕರಣ: ಜೈಲು ಸೇರುವ ಭೀತಿಯಲ್ಲಿ 46 ಸಾರಿಗೆ ಅಧಿಕಾರಿಗಳು

ನಕಲಿ ಪ್ರಮಾಣ ಪತ್ರ ನೀಡಿ ಬಡ್ತಿಗೆ ಯತ್ನಿಸಿದ ಸಾರಿಗೆ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಲು ಸಾರಿಗೆ ಸಚಿವ ಬೈರತಿ ಸುರೇಶ್ ಸೂಚಿಸಿದ್ದು, ಸದ್ಯ 46 ಸಾರಿಗೆ ಅಧಿಕಾರಿಗಳು ಉದ್ಯೋಗ ಕಳೆದುಕೊಳ್ಳುವ ಜೊತೆಗೆ ಜೈಲು ಸೇರುವ ಭೀತಿಯಲ್ಲಿದ್ದಾರೆ.

Written By Yashaswini V
Published: Nov 17, 2026, 16:08 IST | Updated: Nov 17, 2026, 16:09 IST
Join

ಆರ್‌ಟಿಒ ಬಡ್ತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಪ್ರಮಾಣ ಪತ್ರ ನೀಡಿ ಬಡ್ತಿ ಪಡೆಯಲು ಯತ್ನಿಸಿದ 46 ಸಾರಿಗೆ ಅಧಿಕಾರಿಗಳಿಗೆ ಶೋಕಾಸ್‌ ನೋಟಿಸ್‌ ನೀಡಲು ಸಾರಿಗೆ ಸಚಿವ ಬೈರತಿ ಸುರೇಶ್ ಆದೇಶಿಸಿದ್ದಾರೆ. ಈ ಹಿನ್ನಲೆಯಲ್ಲಿ ಒಂದೆಡೆ ಉದ್ಯೋಗ ಕಳೆದುಕೊಳ್ಳುವ ಜೊತೆಗೆ ಜೈಲು ಸೇರುವ ಭೀತಿಯಲ್ಲಿದ್ದಾರೆ 46 ಸಾರಿಗೆ ಅಧಿಕಾರಿಗಳು. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ನಕಲಿ ಪ್ರಮಾಣ ಪತ್ರ ಸಲ್ಲಿಸಿರುವ 46 ಸಾರಿಗೆ ಅಧಿಕಾರಿಗಳಿಗೆ ಶೋಕಾಸ್ ನೊಟೀಸ್ ನೀಡಲು ಸಾರಿಗೆ ಸಚಿವ ಬೈರತಿ ಸುರೇಶ್ ಆದೇಶಿಸಿದ್ದು, ಆರ್‌ಟಿಒ ಬಡ್ತಿ ಅಕ್ರಮ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಸಾರಿಗೆ ಸಚಿವ ಹೇಳಿಕೆ ನೀಡಿದ್ದಾರೆ.

ಆರ್‌ಟಿಒ ಸಾರಿಗೆ ಇಲಾಖೆಯಲ್ಲಿ ನಡೆದಿದ್ದ ಬಡ್ತಿ ಅಕ್ರಮ ಪ್ರಕರಣದ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸೂಚಿಸಿರುವುದಾಗಿ ಸಾರಿಗೆ ಸಚಿವ ಭೈರತಿ ಸುರೇಶ್‌ ತಿಳಿಸಿದ್ದಾರೆ.

ಗಮನಾರ್ಹವಾಗಿ, ವಿಧಾನಪರಿಷತ್ ಸದಸ್ಯ ಟಿ ಎ ಶರವಣ ಕಳೆದ ಬಾರಿಯ ಸದನದಲ್ಲಿ ಹಗರಣದ ಕುರಿತು ಪ್ರಶ್ನಿಸಿದ್ದರು. ರಾಜ್ಯ ಸಾರಿಗೆ ಇಲಾಖೆಯ ಮೋಟಾರು ವಾಹನ ತನಿಖಾಧಿಕಾರಿ ಹುದ್ದೆಗಳ ಬಡ್ತಿಯಲ್ಲಿ ಭಾರೀ ಅಕ್ರಮ ನಡೆದಿರುವ ಕುರಿತು ದಾಖಲೆ ಸಮೇತ ಆರೋಪ ಮಾಡಿದ್ದರು. ಸಿ ಮತ್ತು ಡಿ ಗ್ರೂಪ್‌ನ 46 ನೌಕರರು ಸಂಜೆ ಕಾಲೇಜಿನ ನಕಲಿ ದಾಖಲೆ ನೀಡಿ ಪ್ರಮೋಷನ್‌ ಪಡೆಯಲು ಯತ್ನಿಸುತ್ತಿದ್ದಾರೆ ಎಂದು  ಟಿಎ ಶರವಣ ಆರೋಪಿಸಿದ್ದರು. ನಕಲಿ ದಾಖಲೆ ನೀಡಿ ಐಎಂವಿ ಪೋಸ್ಟ್ ಗಿಟ್ಟಿಸಿಕೊಳ್ಳಲು ಸಂಚು ಮಾಡಿರುವ ಪ್ರಕರಣ ಇಡೀ ಸಾರಿಗೆ ಇಲಾಖೆಗೆ ಮಾನ ಹರಾಜು ಹಾಕಿತ್ತು.

12 ಹುದ್ದೆಗಳ ಬಡ್ತಿಗೆ 46 ನೌಕರರಿಂದ ನಕಲಿ ಸರ್ಟಿಫಿಕೇಟ್:
12 ಹುದ್ದೆಗಳ ಬಡ್ತಿಗೆ 46 ನೌಕರರಿಂದ ಸಂಜೆ ಕಾಲೇಜಿನ ನಕಲಿ ಸರ್ಟಿಫಿಕೇಟ್ ಸಲ್ಲಿಕೆ ಕುರಿತು ದಾಖಲೆಗಳನ್ನು ಬಹಿರಂಗಪಡಿಸಿದ್ದರು.‌ ಇದೇ ವೇಳೆ ಪ್ರಕರಣದ ತನಿಖೆಯನ್ನು ನಿವೃತ್ತ ಐಎಎಸ್ ಅಧಿಕಾರಿಗಳ ಬದಲು ಇಲಾಖಾ ತನಿಖೆಗೆ ಪುನರ್ ಆದೇಶಿಸುವುದಾಗಿ ಭೈರತಿ ಸುರೇಶ್ ತಿಳಿಸಿದ್ದಾರೆ.

ಸಾರಿಗೆ ಇಲಾಖೆಯಲ್ಲಿ ಇನ್-ಸರ್ವಿಸ್ ಕೋಟಾದಡಿ 12 ಐಎಂವಿ ಹುದ್ದೆಗಳು ಖಾಲಿಯಿದ್ದವು. ಇವುಗಳನ್ನು ಪಡೆಯಲು 46 ಹಾಲಿ ನೌಕರರು ಅರ್ಜಿ ಸಲ್ಲಿಸಿದ್ದರು.

ನಿಯಮಾವಳಿಗಳ ಪ್ರಕಾರ, ಪ್ರಮೋಷನ್ ಪಡೆಯಲು ಅಭ್ಯರ್ಥಿಗಳು ಕೆಲಸಕ್ಕೆ ಸೇರುವ ಮುನ್ನವೇ ಮೆಕಾನಿಕಲ್ ಅಥವಾ ಆಟೋಮೊಬೈಲ್ ವಿಭಾಗದಲ್ಲಿ ರೆಗ್ಯುಲರ್ ಡಿಪ್ಲೊಮಾ/ಬಿ.ಇ ಮಾಡಿರಬೇಕು. ಇಲ್ಲವೇ ಉದ್ಯೋಗದಲ್ಲಿದ್ದಾಗ ಮೂರು ವರ್ಷ ರಜೆ ಪಡೆದು ವಿದ್ಯಾಭ್ಯಾಸ ಮುಗಿಸಿರಬೇಕು. ಆದರೆ, ಈ 46 ಸಿ ಗ್ರೂಪ್ ಮತ್ತು ಡಿ ಗ್ರೂಪ್ ಸಿಬ್ಬಂದಿಗಳು ಸಂಜೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದೇವೆ ಎಂದು ನಕಲಿ ಸರ್ಟಿಫಿಕೇಟ್‌ ನೀಡಿ ಬಡ್ತಿ ಪಡೆಯಲು ಯತ್ನಿಸಿದ್ದರು. ಜೊತೆಗೆ ಅನುಭವ ಪ್ರಮಾಣಪತ್ರವೂ ಫೇಕ್ ಆಗಿರೋದು ಪತ್ತೆಯಾಗಿತ್ತು.

ಇನ್ನು ಸಂಜೆ ಕಾಲೇಜಿನಲ್ಲಿ ಶಿಕ್ಷಣ ಪಡೆಯಬೇಕಾದರೆ ಯಾವುದೇ ಖಾಸಗಿ ಇಂಡಸ್ಟ್ರಿ ಅಥವಾ ಫ್ಯಾಕ್ಟರಿಯಲ್ಲಿ ಖಾಯಂ ಉದ್ಯೋಗಿಯಾಗಿರಬೇಕು ಎಂಬ ನಿಯಮವಿದೆ. ಇದಕ್ಕಾಗಿ ಆರ್‌ಟಿಓ ಸಿಬ್ಬಂದಿಗಳು ತಾವು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದಾಗಿ ನಕಲಿ ಅನುಭವ ಪ್ರಮಾಣಪತ್ರ ಸೃಷ್ಟಿಸಿದ್ದಾರೆ. 
ಅಲ್ಲದೆ, ಇಲಾಖೆಯಿಂದ ಪಡೆದ NOC ಯನ್ನು ಕಾಲೇಜುಗಳಿಗೆ ನೀಡದೆ ಮುಚ್ಚಿಟ್ಟಿದ್ದಾರೆ. ಈ ಕಿಲಾಡಿ ನೌಕರರಿಗೆ ಸಾಥ್ ನೀಡಿರುವ ಹಿರಿಯ ಅಧಿಕಾರಿಗಳು, ಇವರಿಗೆ ಅನುಕೂಲವಾಗುವಂತೆ ಅರ್ಹತಾ ವಯೋಮಿತಿಯನ್ನು 50ರಿಂದ 55 ವರ್ಷಕ್ಕೆ ಏರಿಕೆ ಮಾಡಿದ್ದರು.

ಜೊತೆಗೆ ಡಿಪ್ಲೊಮಾ ನಂತರ ಇರಬೇಕಿದ್ದ 3 ವರ್ಷಗಳ ಕಡ್ಡಾಯ ಸೇವಾವಧಿಯ ನಿಯಮವನ್ನು ತಿದ್ದುಪಡಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಒಟ್ಟಾರೆ ಪ್ರಮೋಷನ್ ಗಾಗಿ ಅಡ್ಡದಾರಿ ಹಿಡಿದ 46 ಆರ್‌ಟಿಓ ನೌಕರರು ಇದೀಗ ಜೈಲು ಪಾಲಾಗುವ ಭೀತಿಯಲ್ಲಿದ್ದಾರೆ. 
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES