Karnataka Ration Card e-KYC Last Date: ಕರ್ನಾಟಕದ ಪಡಿತರ ಚೀಟಿದಾರರಿಗೆ ಮಹತ್ವದ ಮಾಹಿತಿ ಇಲ್ಲಿದೆ. ಪಡಿತರ ಚೀಟಿಯ ಫಲಾನುಭವಿಗಳು ಇ-ಕೆವೈಸಿ (e-KYC) ದೃಢೀಕರಣ ಮಾಡಿಸಿಕೊಳ್ಳಲು ನೀಡಲಾಗಿದ್ದ ಗಡುವನ್ನು ನವೆಂಬರ್ 10ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು ಇ-ಕೆವೈಸಿ ಪೂರ್ಣಗೊಳಿಸಲು ಅಕ್ಟೋಬರ್ 20 ಕೊನೆಯ ದಿನಾಂಕವಾಗಿತ್ತು. ಇದೀಗ ಹೆಚ್ಚಿನ ಫಲಾನುಭವಿಗಳಿಗೆ ಅನುಕೂಲವಾಗುವಂತೆ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಗಡುವನ್ನು ವಿಸ್ತರಿಸಿದೆ.
ಆಹಾರ ಇಲಾಖೆಯ ಆದೇಶದ ಪ್ರಕಾರ, ಒಂದು ವರ್ಷಕ್ಕೂ ಮೇಲ್ಪಟ್ಟು ಹಿಂದೆ ಇ-ಕೆವೈಸಿ ಮಾಡಿಸಿಕೊಂಡಿರುವ 1,15,87,298 ಫಲಾನುಭವಿಗಳು ಮತ್ತೊಮ್ಮೆ ಇ-ಕೆವೈಸಿ ದೃಢೀಕರಣ ಮಾಡಿಸಿಕೊಳ್ಳ ಬೇಕಿದೆ. ಇದರ ಜೊತೆಗೆ, ಈವರೆಗೆ ಒಮ್ಮೆಯೂ ಇ-ಕೆವೈಸಿ ಮಾಡಿಸದ 3,82,362 ಫಲಾನುಭವಿಗಳು ಹಾಗೂ ಐದು ವರ್ಷಗಳಿಗಿಂತಲೂ ಹಿಂದೆ ಇ-ಕೆವೈಸಿ ಮಾಡಿಸಿಕೊಂಡಿರುವ 54,27,396 ಫಲಾನುಭವಿಗಳು ದೃಢೀಕರಣ ಪೂರ್ಣಗೊಳಿಸಬೇಕಿದೆ.
ಹೀಗಾಗಿ, ಇ-ಕೆವೈಸಿ ಮಾಡಿಸಿಕೊಳ್ಳಬೇಕಿರುವ ಫಲಾನುಭವಿಗಳು ನವೆಂಬರ್ 10ರೊಳಗೆ ಈ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು. ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಇ-ಕೆವೈಸಿ ಮಾಡಿಸಿಕೊಳ್ಳುವುದು ಉತ್ತಮ. ನಿಗದಿತ ಗಡುವಿನೊಳಗೆ ದೃಢೀಕರಣ ಮಾಡಿಸದಿದ್ದರೆ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ.
ಅನ್ನ ಸೇವೆ ಆ್ಯಪ್ ಮೂಲಕವೂ ಇ-ಕೆವೈಸಿ ಮಾಡಿಸಬಹುದು
ಪಡಿತರ ಚೀಟಿದಾರರು ಇ-ಕೆವೈಸಿ ದೃಢೀಕರಣಕ್ಕಾಗಿ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಬಹುದು. ಅಲ್ಲಿ ‘AHARA’ ತಂತ್ರಾಂಶದ ಮೂಲಕ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶವಿದೆ. ಅಲ್ಲದೆ, ‘ಅನ್ನ ಸೇವೆ’ ಮೊಬೈಲ್ ಆ್ಯಪ್ ಮೂಲಕವೂ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಕೊಳ್ಳಬಹುದು.
ವಿಶೇಷವಾಗಿ, ಉದ್ಯೋಗ ಅಥವಾ ಇತರ ಕಾರಣಗಳಿಗಾಗಿ ರಾಜ್ಯದಿಂದ ಹೊರಗೆ ವಾಸಿಸುತ್ತಿರುವ ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ ಅನ್ನ ಸೇವೆ ಆ್ಯಪ್‌ನ ಲಭ್ಯತೆಯನ್ನು ದೇಶಾದ್ಯಂತ ವಿಸ್ತರಿಸಲಾಗಿದೆ. ಇದರಿಂದ ಕರ್ನಾಟಕದ ಪಡಿತರ ಚೀಟಿದಾರರು ಬೇರೆ ರಾಜ್ಯಗಳಲ್ಲಿ ವಾಸಿಸುತ್ತಿದ್ದರೂ ಅಲ್ಲಿಂದಲೇ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಅನ್ನ ಸೇವೆ ಆ್ಯಪ್‌ನ ನವೀಕರಿಸಿದ ಆವೃತ್ತಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ. ಈಗಾಗಲೇ ತಮ್ಮ ಮೊಬೈಲ್‌ನಲ್ಲಿ ಆ್ಯಪ್ ಇನ್‌ಸ್ಟಾಲ್ ಮಾಡಿಕೊಂಡಿರುವವರು ಅದನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು. ಆ್ಯಪ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳುವವರು ಅಗತ್ಯ ಸೂಚನೆಗಳನ್ನು ಅನುಸರಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ 'ಅನ್ನ ಸೇವೆ' (Anna Seve) ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ರೇಷನ್ ಕಾರ್ಡ್ ಇ-ಕೆವೈಸಿ (e-KYC) ಮಾಡಿಕೊಳ್ಳಬಹುದು.
ಅಗತ್ಯವಿರುವ ದಾಖಲೆಗಳು ಮತ್ತು ಮಾಹಿತಿಗಳು:
ರೇಷನ್ ಕಾರ್ಡ್ ನಂಬರ್
ರೇಷನ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ನಂಬರ್ (OTP ಪಡೆಯಲು)
AadhaarFaceRD ಹಾಗೂ CSC ಆ್ಯಪ್‌ಗಳು ಮೊಬೈಲ್‌ನಲ್ಲಿ ಇರಬೇಕು (ಮುಖದ ದೃಢೀಕರಣಕ್ಕಾಗಿ)
ಇ-ಕೆವೈಸಿ ಮಾಡುವ ಸರಳ ಹಂತಗಳು:
1. ಆ್ಯಪ್ ಡೌನ್‌ಲೋಡ್: ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) 'Anna Seve' ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. ಜೊತೆಗೆ ಮುಖದ ಸ್ಕ್ಯಾನ್ ಮಾಡಲು ಅಗತ್ಯವಿರುವ AadhaarFaceRD ಆ್ಯಪ್ ಕೂಡ ಇನ್‌ಸ್ಟಾಲ್ ಮಾಡಿ.
2. ಲಾಗಿನ್ ಆಗಿ: ಆ್ಯಪ್ ತೆರೆದು ನಿಮ್ಮ ರೇಷನ್ ಕಾರ್ಡ್ ನಂಬರ್ ನಮೂದಿಸಿ.
3. OTP ಪರಿಶೀಲನೆ: ನಿಮ್ಮ ರೇಷನ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್ ನಂಬರಿಗೆ ಬರುವ OTP ನಮೂದಿಸಿ ಲಾಗಿನ್ ಆಗಿ.
4. ಮುಖದ ದೃಢೀಕರಣ (Face Authentication): ಕುಟುಂಬದ ಸದಸ್ಯರ ವಿವರಗಳನ್ನು ಆಯ್ಕೆ ಮಾಡಿ, ಫೇಸ್ ಅಥೆಂಟಿಕೇಶನ್ ಆಯ್ಕೆ ಬಳಸಿ ಕ್ಯಾಮೆರಾ ಮೂಲಕ ಮುಖದ ಸ್ಕ್ಯಾನ್ ಮಾಡಿ.
5. ಪೂರ್ಣಗೊಳಿಸಿ: ಸ್ಕ್ಯಾನ್ ಯಶಸ್ವಿಯಾದ ನಂತರ ನಿಮ್ಮ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಪಡಿತರ ಚೀಟಿಯಲ್ಲಿ ಹೆಸರು ಹೊಂದಿರುವ ಫಲಾನುಭವಿಗಳು ತಮ್ಮ ಇ-ಕೆವೈಸಿ ಸ್ಥಿತಿಯನ್ನು ಪರಿಶೀಲಿಸಿಕೊಂಡು, ದೃಢೀಕರಣ ಬಾಕಿ ಇದ್ದರೆ ನವೆಂಬರ್ 10ರೊಳಗೆ ಪೂರ್ಣಗೊಳಿಸಿಕೊಳ್ಳಬೇಕು. ಕೊನೆಯ ದಿನಾಂಕ ವಿಸ್ತರಣೆಯಾಗಿರುವುದರಿಂದ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಇನ್ನಷ್ಟು ಸಮಯಾವಕಾಶ ಸಿಕ್ಕಂತಾಗಿದೆ. ಆದ್ದರಿಂದ ಅರ್ಹ ಫಲಾನುಭವಿಗಳು ಈ ಅವಕಾಶವನ್ನು ಬಳಸಿಕೊಂಡು ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ