SOCIAL MEDIA

Newsletter

PARTNER SITES
Select Language Select State

ರಾಯಚೂರು ಒಪೆಕ್ ಆಸ್ಪತ್ರೆ ನಿರ್ಲಕ್ಷ್ಯ : ರೋಗಿಯ ತಲೆಯ ಬ್ಯಾಂಡೇಜ್‌ನಲ್ಲಿ ಹುಳುಗಳು ಪತ್ತೆ!

ರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಬೇಕಾದ ಆಸ್ಪತ್ರೆಯಲ್ಲೇ ಇಂತಹ ನಿರ್ಲಕ್ಷ್ಯ ನಡೆದರೆ ಹೇಗೆ..? ಜೀವ ಉಳಿಸಬೇಕಾದ ವೈದ್ಯಕೀಯ ವ್ಯವಸ್ಥೆಯೇ ರೋಗಿಗಳಿಗೆ ಯಾತನೆ ನೀಡಿದರೆ ಯಾರ ಬಳಿ ಹೇಳಿಕೊಳ್ಳಬೇಕು..? ರಾಯಚೂರಿನ ಒಪೆಕ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಆರೋಪ ಕೇಳಿಬಂದಿದೆ. ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯ ತಲೆಗೆ ಹಾಕಿದ್ದ ಬ್ಯಾಂಡೇಜ್‌ನಲ್ಲಿ ಹುಳುಗಳು ಕಾಣಿಸಿಕೊಂಡಿರುವ ಘಟನೆ ಆಸ್ಪತ್ರೆಯ ಸ್ವಚ್ಛತೆ ಮತ್ತು ಗಾಯದ ಆರೈಕೆ ವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಕುರಿತು ಇಲ್ಲಿದೆ ಒಂದು ವರದಿ..

Written By Krishna NK
Published: Oct 13, 2026, 06:41 PM IST | Updated: Oct 13, 2026, 06:43 PM IST
Image Credit: Kannada News
Join

ರಾಯಚೂರು : ಇದು ಆಸ್ಪತ್ರೆಯೋ..? ಅಥವಾ ರೋಗಿಗಳಿಗೆ ನರಕದರ್ಶನ ಮಾಡಿಸುವ ತಾಣವೋ..? ರೋಗಿಗಳ ಜೀವ ಉಳಿಸಬೇಕಾದ ಆಸ್ಪತ್ರೆಯಲ್ಲೇ ಇಂತಹ ಸ್ಥಿತಿ ನಿರ್ಮಾಣವಾಗಿದೆಯಾ..? ರಾಯಚೂರಿನ ಒಪೆಕ್ ಆಸ್ಪತ್ರೆಯಲ್ಲಿ ನಡೆದಿರುವ ಈ ಘಟನೆ ಆರೋಗ್ಯ ವ್ಯವಸ್ಥೆಯ ನಿರ್ವಹಣೆಯ ಬಗ್ಗೆ ಆತಂಕ ಮೂಡಿಸಿದೆ.

ಹೌದು ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯಾದಗಿರಿ ಮೂಲದ ಮಹೇಶ್ವರಿ ಎಂಬ ಮಹಿಳೆಯ ತಲೆಗೆ ಬ್ಯಾಂಡೇಜ್ ಹಾಕಲಾಗಿತ್ತು. ಆದರೆ, ಕುಟುಂಬಸ್ಥರ ಆರೋಪದ ಪ್ರಕಾರ, ಮೂರು ದಿನಗಳ ಕಾಲ ಬ್ಯಾಂಡೇಜ್ ಬದಲಾಯಿಸದೆ ಹಾಗೂ ಗಾಯದ ಡ್ರೆಸ್ಸಿಂಗ್ ಮಾಡದೆ ನಿರ್ಲಕ್ಷ್ಯ ತೋರಲಾಗಿದೆ.

ಇದರ ಪರಿಣಾಮವಾಗಿ ಬ್ಯಾಂಡೇಜ್ ತೆಗೆದಾಗ ಹುಳುಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ. ಬೆಡ್‌ಶೀಟ್ ಮೇಲೂ ಹುಳುಗಳು ಓಡಾಡುತ್ತಿರುವ ದೃಶ್ಯಗಳು ಆತಂಕ ಮೂಡಿಸುವಂತಿವೆ. ಆಸ್ಪತ್ರೆಯ ವೈದ್ಯರ ಹಾಗೂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ರೋಗಿಯ ಗಾಯದ ಆರೈಕೆಯಲ್ಲಿ ಇಷ್ಟೊಂದು ನಿರ್ಲಕ್ಷ್ಯ ಹೇಗೆ ಸಂಭವಿಸಿತು..? ಗಾಯದ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕಾದ ಸಿಬ್ಬಂದಿ ಎಲ್ಲಿ ಹೋದರು..? ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ ಬಳಿಕವೇ ಬ್ಯಾಂಡೇಜ್ ಸ್ವಚ್ಛಗೊಳಿಸಿ ಡ್ರೆಸ್ಸಿಂಗ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ರೋಗಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಆಸ್ಪತ್ರೆಯಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾದರೆ, ಬಡ ರೋಗಿಗಳು ಯಾರನ್ನು ನಂಬಬೇಕು ಎಂಬ ಪ್ರಶ್ನೆ ಎದುರಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆಸ್ಪತ್ರೆಯ ಆಡಳಿತ ಮಂಡಳಿ ಸ್ಪಷ್ಟನೆ ನೀಡಬೇಕಿದೆ. ರೋಗಿಯ ಆರೈಕೆಯಲ್ಲಿ ಲೋಪವಾಗಿದೆಯೇ ಎಂಬುದರ ಕುರಿತು ಸಮಗ್ರ ತನಿಖೆ ನಡೆಯಬೇಕಿದೆ.

ತಪ್ಪಿತಸ್ಥರು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೂ ಇಂತಹ ಅನುಭವ ಆಗದಂತೆ ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಆದ್ರೆ ಸದ್ಯಕ್ಕೆ ರೋಗಿಯ ಚಿಕಿತ್ಸೆಯಲ್ಲಾಗಲೀ, ಆರೈಕೆಯಲ್ಲಾಗಲಿ ಯಾವುದೇ ಲೋಪವಾಗಿಲ್ಲ ಅಂತ ವೈದ್ಯರು ಹೇಳ್ತಿದಾರೆ.

ಒಟ್ನಲ್ಲಿ ಆಸ್ಪತ್ರೆ ಎಂದರೆ ರೋಗಿಗಳಿಗೆ ನೆಮ್ಮದಿ ಸಿಗುವ ಸ್ಥಳವಾಗಬೇಕು. ಆದರೆ,ಇದನ್ನ ಚಿಕಿತ್ಸೆ ಪಡೆಯುವ ರೋಗಿಯ ಗಾಯದಲ್ಲೇ ಹುಳುಗಳು ಕಾಣಿಸಿಕೊಂಡಿವೆ ಎಂಬ ಆರೋಪ ಕೇಳಿಬಂದಿರುವುದು ಗಂಭೀರ ವಿಚಾರ. ರೋಗಿಗಳ ಜೀವದ ಜೊತೆ ನಿರ್ಲಕ್ಷ್ಯಕ್ಕೆ ಅವಕಾಶವಿದೆಯೇ..? ಒಪೆಕ್ ಆಸ್ಪತ್ರೆಯ ಆಡಳಿತ ಈ ಘಟನೆಗೆ ಉತ್ತರ ನೀಡುತ್ತದೆಯೇ..? ಕಾದುನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES