ಸ್ಮಾಶನದಲ್ಲಿನ ಹೆಣಕ್ಕೂ ರಕ್ಷಣೆ ಇಲ್ಲ : ಬೆಚ್ಚಿ ಬೀಳಿಸುತ್ತೆ ಸಮಾಧಿ ಅಗೆದು ಈ ಖದೀಮರು ಮಾಡಿದ ಕೃತ್ಯ
ಮನುಷ್ಯ ಸತ್ತ ಮೇಲೂ ಆತನ ದೇಹಕ್ಕೆ ನೆಮ್ಮದಿ ಇಲ್ಲ ಎಂಬ ಮಾತು ಅಕ್ಷರಶಃ ನಿಜವಾಗುತ್ತಿದೆ. ಜೀವಂತವಿರುವಾಗ ಮನೆಗೆ ಕನ್ನ ಹಾಕುವುದು, ಹಣ-ಆಭರಣ ಕಳವು ಮಾಡುವುದನ್ನು ನಾವು ಕೇಳಿದ್ದೇವೆ. ಆದರೆ, ಸತ್ತವರ ಮೂಳೆಗಳನ್ನೇ ಗುರಿಯಾಗಿಸಿಕೊಂಡು, ಸ್ಮಶಾನದಲ್ಲೇ ಕಳ್ಳಾಟ ನಡೆಸಿರುವ ರೋಚಕ ಹಾಗೂ ಆಘಾತಕಾರಿ ಪ್ರಕರಣವೊಂದು ರಾಯಚೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ..
ರಾಯಚೂರು: ನಗರದಲ್ಲಿ ಶವ ಸಂಸ್ಕಾರ ಮಾಡಿದ ಆರು ತಿಂಗಳ ಬಳಿಕ, ಸಮಾಧಿ ಅಗೆದು ಅಸ್ಥಿಪಂಜರ ಹಾಗೂ ಮೂಳೆಗಳನ್ನು ಹೊರತೆಗೆದು ಮಾರಾಟ ಮಾಡುತ್ತಿದ್ದ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ವಿಚಾರ ಸದ್ಯ ಇಡೀ ಜಿಲ್ಲೆಯ ಜನತೆಯನ್ನು ಬೆಚ್ಚಿಬೀಳಿಸಿದೆ..
ಸ್ಮಶಾನವೇ ಇವರ ಅಡ್ಡ, ಸಮಾಧಿಗಳೇ ಇವರ ಟಾರ್ಗೆಟ್
ಈ ಕಳ್ಳರ ಗ್ಯಾಂಗ್‌ನ ದಂಧೆಯೇ ವಿಭಿನ್ನವಾಗಿದೆ. ಇವರು ಯಾರ ಮನೆಗೂ ನುಗ್ಗುವುದಿಲ್ಲ, ಬೀದಿಗಳಲ್ಲಿ ದರೋಡೆ ಮಾಡುವುದಿಲ್ಲ. ಬದಲಿಗೆ ಇವರ ಇಡೀ ಕೃತ್ಯ ಸ್ಮಶಾನಗಳಲ್ಲೇ ನಡೆಯುತ್ತದೆ. ಶವ ಸಂಸ್ಕಾರವಾದ ಬಳಿಕ ಸುಮಾರು ಆರು ತಿಂಗಳು ಕಾಯುವ ಈ ಖದೀಮರು, ಶವ ಸಂಪೂರ್ಣವಾಗಿ ಕೊಳೆತು ಮೂಳೆಗಳು ಮಾತ್ರ ಉಳಿಯುವ ಹಂತಕ್ಕೆ ಬಂದಾಗ ಸಮಾಧಿಯನ್ನು ಅಗೆಯುತ್ತಾರೆ. ಹಾಡಹಗಲೇ ಅಥವಾ ಜನಸಂಚಾರವಿಲ್ಲದ ಸಮಯದಲ್ಲಿ ಸ್ಮಶಾನಕ್ಕೆ ನುಗ್ಗಿ, ಸಮಾಧಿಯ ಮಣ್ಣು ಸಡಿಲಗೊಳಿಸಿ ಒಳಗೆ ಹುದುಗಿರುವ ಶವದ ಮೂಳೆಗಳನ್ನು ಕದಿಯುತ್ತಾರೆ. ಈ ಕುರಿತಂತೆ ಸ್ಥಳೀಯರು ಕೆಲವರು ಆರೋಪಿಗಳ ಕೃತ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ಜಾಲತಾಣಗಳಲ್ಲಿ ಹಂಚಿಕೊಂಡ ಬಳಿಕ ಈ ಕರಾಳ ದಂಧೆ ಜಗಜ್ಜಾಹೀರಾಗಿದೆ.
ಬಯಲಾದ ಸ್ಪೋಟಕ ಸತ್ಯ
ಸತತವಾಗಿ ಇಂತಹ ಕೃತ್ಯಗಳು ಮರುಕಳಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಅನುಮಾನಗೊಂಡು ಆರೋಪಿಗಳಾದ ವೀರೇಶ್ ಹಾಗೂ ಆತನ ಸ್ನೇಹಿತರನ್ನು ತಾವೇ ಖುದ್ದಾಗಿ ಹಿಡಿದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಬಾಯಿಬಿಟ್ಟಿದ್ದು, ಒಂದೊಂದೇ ರೋಚಕ ಸತ್ಯಗಳು ಹೊರಬಂದಿವೆ. ಬರೀ ಅಲ್ಪ ಸ್ವಲ್ಪ ಹಣ ಹಾಗೂ ಮದ್ಯದ ನಶೆಗಾಗಿ ಇಂತಹ ಅಮಾನವೀಯ ಕೃತ್ಯಕ್ಕೆ ಕೈಹಾಕಿರುವುದಾಗಿ ತಿಳಿದುಬಂದಿದೆ. ಕೇವಲ ಐದು ನೂರು ರೂಪಾಯಿಗೂ ಕಡಿಮೆ ಹಣಕ್ಕಾಗಿ ಅಥವಾ ಎಣ್ಣೆ ಖರ್ಚಿಗಾಗಿ ಸಮಾಧಿಗಳನ್ನು ಅಗೆದು ಮೂಳೆಗಳನ್ನು ಕದಿಯುತ್ತಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಮೆಡಿಕಲ್ ಕಾಲೇಜಿಗೆ ಮೂಳೆ ಮಾರಾಟ ಆರೋಪ
ಕಳವು ಮಾಡಲಾದ ಈ ಮೂಳೆಗಳನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬ ಪ್ರಶ್ನೆಗೆ ಸ್ಥಳೀಯವಾಗಿ ಶಾಕಿಂಗ್ ಉತ್ತರ ಸಿಕ್ಕಿದೆ. ಕಳ್ಳರು ಕದ್ದು ತಂದ ಮೂಳೆಗಳನ್ನು ನಗರದ ಪ್ರತಿಷ್ಠಿತ ನವೋದಯ ಮೆಡಿಕಲ್ ಕಾಲೇಜಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕಾಲೇಜಿನ ಅಟೆಂಡರ್ ಒಬ್ಬ ಈ ಮೂಳೆಗಳನ್ನು ಖರೀದಿಸುತ್ತಿದ್ದನೆಂದೂ, ನಂತರ ಇವುಗಳನ್ನು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆ ಹಾಗೂ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗುತ್ತಿತ್ತು ಎಂದೂ ಹೇಳಲಾಗುತ್ತಿದೆ. ಮನುಷ್ಯನ ಅಸ್ಥಿಪಂಜರಗಳನ್ನು ನಿಯಮಬದ್ಧವಾಗಿ ಸರ್ಕಾರಿ ಅಥವಾ ಅಧಿಕೃತ ಮೂಲಗಳಿಂದ ಪಡೆಯಬೇಕಾಗಿದ್ದರೂ, ಇಂತಹ ಕಳ್ಳ ಮಾರ್ಗದಿಂದ ಮೂಳೆಗಳನ್ನು ಖರೀದಿಸುತ್ತಿದ್ದಾರಾ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅನುಮಾನ ಹಾಗೂ ಆಕ್ರೋಶ ವ್ಯಕ್ತವಾಗಿದೆ.
ಸಿನಿಮಾವನ್ನು ಮೀರಿಸುವ ನೈಜ ಕಥೆ, ಜನರ ಆತಂಕ
ಇಷ್ಟು ದಿನ ಇಂತಹ ರೋಚಕ ಕಥೆಗಳನ್ನು ಕೇವಲ ಸಿನಿಮಾಗಳಲ್ಲಿ ಅಥವಾ ಕಾದಂಬರಿಗಳಲ್ಲಿ ಮಾತ್ರ ನಾವು ನೋಡಿದ್ದೆವು. ಆದರೆ, ರಾಯಚೂರಿನಲ್ಲಿ ನಡೆದಿರುವ ಈ ನೈಜ ಘಟನೆ ಜನರನ್ನು ನಿಜಕ್ಕೂ ಕಂಗಾಲಾಗಿಸಿದೆ. ದುಡ್ಡಿನ ಆಸೆಗೆ ಬತ್ತುಹೋದ ಮಾನವೀಯ ಮೌಲ್ಯಗಳು ಮತ್ತು ಸತ್ತವರ ಮೇಲೂ ನಡೆಯುತ್ತಿರುವ ಈ ವಿಕೃತಿ ಸಮಾಜದ ಕಣ್ಣು ತೆರೆಸುವಂತಿದೆ. ಕೇವಲ ಐದು ನೂರು ರೂಪಾಯಿಗೂ ಕಡಿಮೆ ಆಸೆಗೆ ಮೃತರ ದೇಹದ ಮೂಳೆಗಳನ್ನು ಕದ್ದು ಮಾರಾಟ ಮಾಡುತ್ತಿರುವ ಈ ಜಾಲದ ಹಿಂದೆ ಬೇರೆ ಯಾರದ್ದಾದರೂ ಕೈವಾಡವಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.