ಗದಗದಲ್ಲಿ ಸ್ಪರ್ಧಿಸಲು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಬಹಿರಂಗ ಆಹ್ವಾನ
ಸಚಿವ ಪ್ರಿಯಾಂಕ್ ಖರ್ಗೆ ಅವರು ಹಾಕಿದ್ದ ಸವಾಲನ್ನು ಗದಗ ಜಿಲ್ಲೆಯ ಜನತೆ ಗಂಭೀರವಾಗಿ ಸ್ವೀಕರಿಸಿ, ನಗರದ ಪ್ರಮುಖ ವೃತ್ತಗಳಲ್ಲಿ ಫ್ಲೆಕ್ಸ್ ಅಳವಡಿಸುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಗದಗ: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಈ ಬಾರಿ ಗದಗ ಜಿಲ್ಲೆಯಿಂದ ಸ್ಪರ್ಧಿಸಬೇಕು ಎಂದು ಸ್ಥಳೀಯ ಜೆಡಿಎಸ್ ಮುಖಂಡರು ಮತ್ತು ಜನತೆ ಬಹಿರಂಗವಾಗಿ ಆಹ್ವಾನ ನೀಡಿದ್ದಾರೆ.
ಸಚಿವ ಪ್ರಿಯಾಂಕ್ ಖರ್ಗೆ ಅವರು ಹಾಕಿದ್ದ ಸವಾಲನ್ನು ಗದಗ ಜಿಲ್ಲೆಯ ಜನತೆ ಗಂಭೀರವಾಗಿ ಸ್ವೀಕರಿಸಿ, ನಗರದ ಪ್ರಮುಖ ವೃತ್ತಗಳಲ್ಲಿ ಫ್ಲೆಕ್ಸ್ ಅಳವಡಿಸುವ ಮೂಲಕ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ನೀವು ಕೇವಲ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾದ ನಾಯಕರಲ್ಲ, ಬದಲಿಗೆ ಇಡೀ ನಾಡಿಗೆ ಬೇಕಾದ ಜನನಾಯಕರು. ಹಾಗಾಗಿ ನೀವು ಗದಗ ಜಿಲ್ಲೆಯಿಂದ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಮನವಿ ಮಾಡಲಾಗಿದೆ. ದಶಕಗಳಿಂದ ಗದಗ ಜಿಲ್ಲೆಯು 'ಹಿಂದುಳಿದ ಜಿಲ್ಲೆ' ಎಂಬ ಹಣೆಪಟ್ಟಿಯನ್ನು ಹೊತ್ತಿದ್ದು, ಅಭಿವೃದ್ಧಿಯಲ್ಲಿ ಹಿಂದೆಳಿದಿದೆ. ನೀರಾವರಿ ಸೌಲಭ್ಯಗಳ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಕೈಗಾರಿಕೆಗಳಿಲ್ಲದೆ ಯುವಕ-ಯುವತಿಯರಿಗೆ ಉದ್ಯೋಗದ ಸಮಸ್ಯೆ ತೀವ್ರವಾಗಿದೆ. ಇದರೊಂದಿಗೆ ಕುಡಿಯುವ ನೀರು, ಒಳಚರಂಡಿ ಮತ್ತು ನೈರ್ಮಲ್ಯ ಸೇರಿದಂತೆ ಮೂಲಸೌಕರ್ಯಗಳ ಕೊರತೆಯೂ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಗದಗ ಜಿಲ್ಲೆಗೆ ಈಗ ಬೇಕಿರುವುದು ದ್ವೇಷದ ರಾಜಕಾರಣವಲ್ಲ, ಬದಲಿಗೆ ಅಭಿವೃದ್ಧಿಪರ ನಾಯಕತ್ವದ ಸ್ಪರ್ಶ. ಎಚ್.ಡಿ. ಕುಮಾರಸ್ವಾಮಿ ಅವರ ಜನಪರ ಆಡಳಿತ ಶೈಲಿ ಮತ್ತು ರೈತಪರ ಕಾಳಜಿಯ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ನೀವು ಗದಗ ಜಿಲ್ಲೆಯಲ್ಲಿ ಬಂದು ಸ್ಪರ್ಧಿಸಿ, ನಿಮ್ಮನ್ನು ಭರ್ಜರಿಯಾಗಿ ಗೆಲ್ಲಿಸುವ ಸಂಪೂರ್ಣ ಜವಾಬ್ದಾರಿ ನಮ್ಮದು ಎಂದು ಜೆಡಿಎಸ್ ಮುಖಂಡರು ಧೈರ್ಯ ತುಂಬಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ಸವಾಲಿನ ಬೆನ್ನಲ್ಲೇ ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.