SOCIAL MEDIA

Newsletter

PARTNER SITES
Select Language Select State

ಚಾಮುಂಡೇಶ್ವರಿ ತಾಯಿ ಟವರ್ ಆಫ್ ದಿ ಪವರ್ : ಗವಿಶ್ರೀ ಅದ್ಭುತ ಭಾಷಣ

ವಿಶ್ವವಿಖ್ಯಾತ ಮೈಸೂರು ದಸರಾ 2026 ಮಹೋತ್ಸವವು ಚಾಮುಂಡಿ ಬೆಟ್ಟದಲ್ಲಿ ಅತ್ಯಂತ ಸಡಗರದಿಂದ ಆರಂಭಗೊಂಡಿದೆ. ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ 6 ಕೋಟಿಗೂ ಅಧಿಕ ಕನ್ನಡಿಗರ ಪರವಾಗಿ ದೀಪ ಬೆಳಗುವ ಮೂಲಕ ನಾಡಹಬ್ಬಕ್ಕೆ ಚಾಲನೆ ನೀಡಿದರು... ಅಲ್ಲದೆ, ಅದ್ಭುತ ಆಶೀರ್ವಚನ ನೀಡಿದರು..

Written By Krishna NK
Published: Oct 11, 2026, 04:38 PM IST | Updated: Oct 11, 2026, 04:42 PM IST
Image Credit: Mysore Dasara 2026
Join

Mysuru Dasara 2026 : ಮೈಸೂರು ದಸರಾ 2026 ಮಹೋತ್ಸವವು ಅತ್ಯಂತ ವೈಭವೋಪೇತವಾಗಿ ಆರಂಭಗೊಂಡಿದೆ. ಕೃಷ್ಣದೇವರಾಯನ ಕಾಲದಲ್ಲಿ ಆರಂಭವಾದ ಈ ಐತಿಹಾಸಿಕ ನಾಡಹಬ್ಬವನ್ನು ಪ್ರತಿವರ್ಷ ಬಹಳ ಅದ್ಧೂರಿಯಾಗಿ ಆಚರಿಸಲಾಗುತ್ತದೆ.. ಅದರಂತೆ ಈ ವರ್ಷವೂ ಕೊಪ್ಪಳದ ಗವಿಮಠದ ಪರಮಪೂಜ್ಯ ಗವಿಸಿದ್ದೇಶ್ವರ ಶ್ರೀಗಳು ಉದ್ಧಾಟನೆ ಮಾಡಿ, ಅದ್ಭುತ ಆಶೀರ್ವಚನ ನೀಡಿದರು..

ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಚನ ಮತ್ತು ಚಿಂತನೆಗಳು
ದಸರಾ ಉದ್ಘಾಟಕರಾಗಿ ಆಗಮಿಸಿದ್ದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಸಮಾರಂಭದಲ್ಲಿ ಅತ್ಯಮೂಲ್ಯವಾದ ಆಶೀರ್ವಚನ ನೀಡಿದರು. ಮೈಸೂರು ಕರ್ನಾಟಕದ ಸಂಸ್ಕೃತಿಯ ಆತ್ಮವಾಗಿದ್ದು, ಇದು ಸಂಸ್ಕಾರವಂತರ ನಗರ, ಅರಮನೆಗಳ ನಗರ ಮತ್ತು ಅರಿವಿನ ಮನೆಗಳ ನಗರವಾಗಿದೆ. ವೈಭವೋಪೇತ ದಸರಾದ ಹಿಂದೆ ಕಾಣದ ಸಾವಿರಾರು ಕೈಗಳು ಶ್ರಮಿಸುತ್ತವೆ ಎಂದು ತಿಳಿಸಿದ ಶ್ರೀಗಳು, ಒಂದು ಕಾಲಕ್ಕೆ ದೊರೆಗಳ ಹಬ್ಬವಾಗಿದ್ದ ದಸರಾ ಇಂದು ಜನಸಾಮಾನ್ಯರ ಧರೆಯ ಹಬ್ಬವಾಗಿ ಮಾರ್ಪಟ್ಟಿದೆ ಎಂದರು. ತಾನು ದಸರಾ ಉದ್ಘಾಟನೆ ಮಾಡಲು ದೊಡ್ಡವನಲ್ಲ, ಚಾಮುಂಡಿ ಸನ್ನಿಧಿಯಲ್ಲಿ ಪ್ರಾರ್ಥಿಸಲು ಮತ್ತು ಮಹಾನುಭವರು ಹಚ್ಚಿರುವ ದೀಪವನ್ನು ಬೆಳಗಲು ಮಾತ್ರ ಬಂದಿರುವುದಾಗಿ ವಿನಮ್ರತೆ ಮೆರೆದರು. 6 ಕೋಟಿಗೂ ಹೆಚ್ಚಿನ ಕನ್ನಡಿಗರ ಪರವಾಗಿ ಕೈಚಾಚಿ ದೀಪ ಹಚ್ಚಿರುವುದಾಗಿ ಅವರು ನುಡಿದರು.

ಮೈಸೂರು ರಾಜಮನೆತನ ಮತ್ತು ಸಾಹಿತ್ಯದ ಹಿರಿಮೆ
ಮೈಸೂರು ರಾಜಮನೆತನವನ್ನು ಹೊರಗಿಟ್ಟು ಕರ್ನಾಟಕದ ಇತಿಹಾಸವನ್ನು ನೋಡಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಶ್ರೀಗಳು, ಅಂದಿನ ಕಾಲದಲ್ಲೇ ಅಭಿವೃದ್ಧಿ ರಾಜ್ಯವನ್ನು ಕಟ್ಟಿದವರು ಮೈಸೂರು ಅರಸರು ಎಂದರು. ಮೈಸೂರು ಮಹಾರಾಜರು ಕೇವಲ ಈ ನಾಡಿನ ನೆಲವನ್ನು ಆಳಲಿಲ್ಲ, ಬದಲಾಗಿ ಜನರ ಮನಸ್ಸನ್ನು ಆಳಿದರು. ಜನಪದ ಸಾಹಿತ್ಯವು ಮಹಲುಗಳಲ್ಲಿ ಕೂತವರಿಂದ ಬಂದಿದ್ದಲ್ಲ, ಬದಲಾಗಿ ಮಣ್ಣಿನೊಂದಿಗೆ ಬೆರೆತು ಬಂದಿದೆ ಎಂದು ವಿವರಿಸಿದರು. ತಾಯಿ ತನ್ನ ಮಗುವಿಗೆ ತುತ್ತು ನೀಡುತ್ತಾ ಜಾನಪದ ಸಾಹಿತ್ಯವನ್ನು ಕಟ್ಟಿದಳು ಎಂದು ಶ್ರೀಗಳು ಸ್ಮರಿಸಿದರು.

ಪ್ರಕೃತಿ ರಕ್ಷಣೆ ಮತ್ತು ಕನ್ನಡಿಗರ ಸಂಕಲ್ಪ
ಎಷ್ಟೇ ಆಧುನಿಕ ತಂತ್ರಜ್ಞಾನ ಬೆಳೆದರೂ ಊಟವನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲವಾದ್ದರಿಂದ, ಅನ್ನ ಸಿಗಬೇಕಾದರೆ ರೈತನ ಬೆವರು ಭೂಮಿಗೆ ಇಳಿಯಬೇಕು ಎಂದು ಶ್ರೀಗಳು ಎಚ್ಚರಿಸಿದರು. ನಾಡಿನ ಜಲಾಶಯಗಳು ಅನ್ನದ ತಟ್ಟೆಗಳಾಗಿದ್ದು, ಜಲಮೂಲಗಳನ್ನು ಮತ್ತು ಪ್ರಕೃತಿಯನ್ನು ಹಾಳುಮಾಡಬಾರದು. ಮಣ್ಣು, ನೀರು ಹಾಗೂ ಗಾಳಿಯನ್ನು ಸರಕಾರ ನೀಡಿಲ್ಲ, ಪ್ರಕೃತಿಯೇ ನಮಗೆ ಇದನ್ನು ಕರುಣಿಸಿದೆ. ಪ್ರತಿಯೊಬ್ಬ ಕನ್ನಡಿಗರು ಕರ್ನಾಟಕವನ್ನು ಕಟ್ಟಲು ಒಳ್ಳೆಯ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು
ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಇದು ನಾವು ಒಗ್ಗಟ್ಟಿನಿಂದ ಮುನ್ನಡೆಯುತ್ತಿದ್ದೇವೆ ಎಂಬುದನ್ನು ಸಾರುವ ಹಬ್ಬವಾಗಿದೆ ಎಂದರು. ಮೈಸೂರಿನ ಸಂಸ್ಕೃತಿ ಒಬ್ಬರಿಂದ ಆದದ್ದಲ್ಲ, ಎಲ್ಲರ ಶ್ರಮದಿಂದ ರೂಪುಗೊಂಡಿದೆ. ಮೈಸೂರಿನ ಸಂಪತ್ತು ಕೇವಲ ಅರಮನೆಯಲ್ಲ, ಅರಮನೆಯ ಮೇಲಿನ ಜನರ ನಂಬಿಕೆಯಾಗಿದೆ. ಈ ಬಾರಿಯ ದಸರಾ ಮೆರವಣಿಗೆಯು ಅತ್ಯಂತ ವಿಶಿಷ್ಟವಾಗಿರಲಿದ್ದು, ಭಾರತೀಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆಯ ತುಕಡಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ ಎಂದು ಅವರು ಹೆಮ್ಮೆಯಿಂದ ತಿಳಿಸಿದರು.

ಶಾಸಕ ಜಿ.ಟಿ. ದೇವೇಗೌಡರ ಬಲವಾದ ಆಗ್ರಹ
ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಮನವಿಯನ್ನು ನೆನಪಿಸಿದ ಶಾಸಕ ಜಿ.ಟಿ. ದೇವೇಗೌಡರು, ಮೈಸೂರಿನ ಅಳಿಯನಾದ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಅಗತ್ಯವಿರುವ ನೀರು, ರಸ್ತೆ ಮತ್ತು ಚರಂಡಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದು ಭಾಷಣದಲ್ಲಿ ಆಗ್ರಹಿಸಿದರು. ಕ್ಷೇತ್ರದ ಜನರಿಗೆ ಇಂದು ವಿವಿಧ ರೀತಿಯ ಸಂಕಷ್ಟಗಳು ಎದುರಾಗಿರುವುದರಿಂದ, ಕೂಡಲೇ ಕ್ಷೇತ್ರದ ಸಮಸ್ಯೆಗಳತ್ತ ಗಮನ ಹರಿಸಬೇಕೆಂದು ಅವರು ಒತ್ತಾಯಿಸಿದರು.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES