ಮೈಸೂರು: ವಿಶ್ವವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವ-2026ರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಬೆಳಗ್ಗೆ ಚಾಮುಂಡಿಬೆಟ್ಟದ ಅಧಿದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ, ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿಗಳು ಶುಭ ಧನುರ್ ಲಗ್ನದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿಶೇಷವೆಂದರೆ, ಈ ಬಾರಿಯ ದಸರಾ ಇತಿಹಾಸದಲ್ಲೇ ಪ್ರಥಮ ಬಾರಿಗೆ 200ಕ್ಕೂ ಹೆಚ್ಚು ವಿವಿಧ ಧರ್ಮ ಗುರುಗಳು ಹಾಗೂ ಮಠಾಧೀಶರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದಾರೆ.
ಬೃಹತ್ ವೇದಿಕೆ ಮತ್ತು ಆಸನ ವ್ಯವಸ್ಥೆ
ಚಾಮುಂಡಿಬೆಟ್ಟದಲ್ಲಿ ದೇವಸ್ಥಾನದ ಪಕ್ಕದಲ್ಲೇ ಉದ್ಘಾಟನೆಗಾಗಿ ಬೃಹತ್ ವೇದಿಕೆ ತಲೆಎತ್ತಿದೆ. ಸುಮಾರು 2 ಸಾವಿರ ಜನರು ಕುಳಿತು ಸಮಾರಂಭ ಕಣ್ತುಂಬಿಕೊಳ್ಳಲು ಸುಸಜ್ಜಿತ ಆಸನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಆಗಮಿಸಲಿರುವ 200ಕ್ಕೂ ಹೆಚ್ಚು ಮಠಾಧೀಶರು ಹಾಗೂ ಧರ್ಮಗುರುಗಳಿಗೆ ಪ್ರತ್ಯೇಕವಾಗಿ ಗೌರವಯುತ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸ್ವತಃ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.
ಬಿಗಿ ಭದ್ರತೆ ಹಾಗೂ ಪ್ರೋಟೋಕಾಲ್
ಅದ್ದೂರಿ ಉದ್ಘಾಟನಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭದ್ರತೆಗೆ ಅತ್ಯಂತ ಮಹತ್ವ ನೀಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರು ಹಾಗೂ ಭಕ್ತರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಇನ್ನು ತಾಯಿ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಅತ್ಯಂತ ಶ್ರದ್ಧಾಭಕ್ತಿಯಿಂದ ಶುಚಿಗೊಳಿಸುವ ಕಾರ್ಯ ಯಶಸ್ವಿಯಾಗಿ ನೆರವೇರಿದೆ.
ಅರಮನೆಯಲ್ಲಿ ಖಾಸಗಿ ದರ್ಬಾರ್ ಆರಂಭ
ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ನೆರವೇರುತ್ತಿದ್ದಂತೆ, ಇತ್ತ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರಿಂದ ಖಾಸಗಿ ದರ್ಬಾರ್ ಆರಂಭಗೊಳ್ಳಲಿದೆ. ನಾಳೆಯಿಂದ ಮುಂದಿನ 11 ದಿನಗಳ ಕಾಲ ಪ್ರತಿದಿನ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ. ನಾಡಿನೆಲ್ಲೆಡೆ ಸಂಭ್ರಮದ ಅಲೆ ಎಬ್ಬಿಸಲಿರುವ ವಿಶ್ವವಿಖ್ಯಾತ ದಸರಾ-2026ರ ಸಮಸ್ತ ಧಾರ್ಮಿಕ ವೈಭವಕ್ಕೆ ನಾಳೆ ಅಧಿಕೃತ ಚಾಲನೆ ಸಿಗಲಿದ್ದು, ಸರಳತೆಯೊಂದಿಗೆ ಅದ್ದೂರಿಯಾಗಿ ಉದ್ಘಾಟನೆಗೊಳ್ಳುತ್ತಿರುವುದು ನಾಡಿನ ಜನರಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿದೆ.