ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವು ಇಂದು 8ನೇ ದಿನಕ್ಕೆ ಕಾಲಿಟ್ಟಿದ್ದು ಅರಮನೆ ನಗರಿಯಲ್ಲಿ ಒಂದರ ಮೇಲೊಂದರಂತೆ ರೋಮಾಂಚಕಾರಿ ಕಾರ್ಯಕ್ರಮಗಳು ಮೈದುಂಬಿಕೊಂಡಿವೆ. ಜೆ.ಕೆ. ಗ್ರೌಂಡ್ನಲ್ಲಿ ನಡೆದ ರೈತ ದಸರಾ ಹಾಲು ಕರೆಯುವ ಸ್ಪರ್ಧೆ, ಅರಮನೆ ಮುಂಭಾಗ ವಿಜಯದಶಮಿ ಜಂಬೂಸವಾರಿಯ ತಾಲೀಮು, ಮಳೆ ಹಾಗೂ ಮೋಡ ಕವಿದ ವಾತಾವರಣದಿಂದ ತಾತ್ಕಾಲಿಕವಾಗಿ ಮೊಟಕುಗೊಂಡ ಸೂರ್ಯಕಿರಣ್ ಏರ್ ಶೋ, ಅಂತಿಮ ಹಂತ ತಲುಪಿದ ದಸರಾ ಕುಸ್ತಿ ಪಂದ್ಯಾವಳಿಯ ಜಗಜಟ್ಟಿಗಳ ಕಾಳಗ, ಮೈಸೂರಿನಲ್ಲಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ಆರಂಭವಾದ ಕರಾವಳಿಯ ಕಂಬಳೋತ್ಸವ ಕಣ್ಮನ ಸೆಳೆದಿದೆ. ಹೇಗಿತ್ತು ಈ ಸಂಭ್ರಮ ಇಲ್ಲಿದೆ ನೋಡಿ ಕಂಪ್ಲೀಟ್ ಮಾಹಿತಿ.
ಹೌದು... ದಸರೆಯ 8ನೇ ದಿನದ ಬೆಳಿಗ್ಗೆಯಿಂದಲೇ ಜೆ.ಕೆ. ಗ್ರೌಂಡ್ನಲ್ಲಿ ರೈತ ದಸರಾ ಅಂಗವಾಗಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಹಾಲು ಕರೆಯುವ ಸ್ಪರ್ಧೆ ಅದ್ಧೂರಿಯಾಗಿ ಜರುಗಿತು. ಈ ರೋಚಕ ಸ್ಪರ್ಧೆಯಲ್ಲಿ ಬಿಡದಿಯ ಅಶ್ವಿನಿ ಅಂಬರೀಶ್ ಅವರು 44 ಕೆಜಿ 200 ಗ್ರಾಂ ಹಾಲು ಕರೆದು ಪ್ರಥಮ ಬಹುಮಾನ ಪಡೆದರೆ. ಮೈಸೂರು ಜಿಲ್ಲೆಯ ಸಾಲಿಗ್ರಾಮದ ಗುರು ರಾಘವೇಂದ್ರ ಡೈರಿ ಫಾರಂ ದ್ವಿತೀಯ, ಬೆಂಗಳೂರಿನ ಸಂಜೀವ್ ರಾಜು ತೃತೀಯ ಹಾಗೂ ಹಾಸನದ ಕಿರಣ್ ಗೂಳಿ ನಾಲ್ಕನೇ ಬಹುಮಾನ ಪಡೆದರು.
ಇದರ ಬೆನ್ನಲ್ಲೇ ವಿಜಯದಶಮಿ ಮೆರವಣಿಗೆಯ ಅಚ್ಚುಕಟ್ಟುತನಕ್ಕಾಗಿ ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಅರಮನೆ ಮುಂಭಾಗ ಜಂಬೂಸವಾರಿಯ ಗ್ರ್ಯಾಂಡ್ ರಿಹರ್ಸಲ್ ನಡೆಸಲಾಯಿತು. ಗಜಪಡೆಯ ಕ್ಯಾಪ್ಟನ್ ಪ್ರಶಾಂತ ಆನೆಯ ನಾಯಕತ್ವದಲ್ಲಿ ನೌಫತ್ ಆನೆ ಗೋಪಿ, ಸಾಲಾನೆಗಳಾದ ಮಹೇಂದ್ರ, ಶ್ರೀರಾಮ, ಶ್ರೀಕಂಠ ಹಾಗೂ ನಿಶಾನೆ ಆನೆ ಅಭಿಮನ್ಯುವೊಂದಿಗೆ ಕುಮ್ಕಿ ಆನೆಗಳಾದ ಕಾವೇರಿ, ರೂಪಾ ಹಾಗೂ ಅಶ್ವದಳ, ಪೊಲೀಸ್ ವಾದ್ಯಗೋಷ್ಠಿ ಒಟ್ಟಾಗಿ ಅಚ್ಚುಕಟ್ಟಿನ ತಾಲೀಮು ನಡೆಸಿದವು. ಅರಮನೆ ಮುಂಭಾಗ ಬಂದಾಗ ಪ್ರಶಾಂತ ಆನೆಗೆ ಅಧಿಕಾರಿಗಳು ಪುಷ್ಪರ್ಚನೆ ಮಾಡಲಾಯಿತು. ಈ ಸಮಯದಲ್ಲಿ ನುಡಿದ ರಾಷ್ಟ್ರಗೀತೆಗೆ ಸೊಂಡಿಲು ಎತ್ತಿ ಪ್ರಶಾಂತ ಆನೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.
ಆದರೆ ಮಧ್ಯಾಹ್ನ ನಿರೀಕ್ಷಿತವಾಗಿದ್ದ ಭಾರತೀಯ ವಾಯುಪಡೆಯ ಸೂರ್ಯಕಿರಣ್ ಅಕ್ರೋಬ್ಯಾಟಿಕ್ಸ್ ಏರ್ ಶೋ ಹವಾಮಾನ ವೈಪರೀತ್ಯದಿಂದಾಗಿ ತಾತ್ಕಾಲಿಕವಾಗಿ ಮೊಟಕುಗೊಂಡಿತು. ಮೂರು ಸುತ್ತು ಹಾರಿಬಂದ ವಿಮಾನಗಳು ಮಳೆ ಹಾಗೂ ಮೋಡದ ದಟ್ಟಣೆಯಿಂದಾಗಿ ವಾಪಸ್ ಬೆಂಗಳೂರಿನ ಯಲಹಂಕಕ್ಕೆ ತೆರಳಿದ್ದರಿಂದ ಕಾಯ್ದುಕುಳಿತಿದ್ದ ಸಾರ್ವಜನಿಕರಿಗೆ ನಿರಾಸೆಯುಂಟಾಯಿತು. ನಾಳೆ ಹವಾಮಾನ ಸುಧಾರಿಸಿದರೆ ಪೂರ್ಣ ಪ್ರಮಾಣದ ಶೋ ನಡೆಯಲಿದೆ ಎಂದು ಸಿಬ್ಬಂದಿ ತಿಳಿಸಿದರು.
ಇನ್ನು ಈ ಬಾರಿಯ ದಸರಾದಲ್ಲಿ ಹೊಸ ಮೈಲಿಗಲ್ಲು ಎನ್ನುವಂತೆ ಸಾತಗಳ್ಳಿಯ ವಿಟಿಯು ಕಾಲೇಜು ಬಳಿ ಕರಾವಳಿಯ ಸಾಂಪ್ರದಾಯಿಕ ಕಂಬಳ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ದೊರೆಯಿತು. ಬೆಳಗ್ಗೆ ಕಂಬಳದ ಕರೆ ಉದ್ಘಾಟನೆಗೊಂಡು ಸಂಜೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಅಧಿಕೃತ ಚಾಲನೆ ಪಡೆದ ಈ ಎರಡು ದಿನಗಳ ಕಂಬಳ ಕ್ರೀಡೆಯಲ್ಲಿ ಕೋಣಗಳ ರಭಸದ ಓಟ ಕ್ರೀಡಾಭಿಮಾನಿಗಳಲ್ಲಿ ರೋಮಾಂಚನ ಮೂಡಿಸಿತು. ಇದರ ಜೊತೆಗೆವಿಶ್ವವಿಖ್ಯಾತ ನಾಡಹಬ್ಬದ ವಿಜಯದಶಮಿ ದಿನದಂದು ನಡೆಯಲಿರುವ ರೋಮಾಂಚಕ ವಜ್ರಮುಷ್ಠಿ ಕಾಳಗ ಕ್ಕೆ ಅರಮನೆ ಆವರಣದಲ್ಲಿ ಜೆಟ್ಟಿಗಳ ಜೋಡಿ ಕಟ್ಟುವ ತಯಾರಿ ಮುಕ್ತಾಯಗೊಂಡಿದೆ. ಈ ಬಾರಿ ಮೈಸೂರು v/s ಬೆಂಗಳೂರು ಹಾಗೂ ಚನ್ನಪಟ್ಟಣ v/s ಚಾಮರಾಜನಗರ ಜೆಟ್ಟಿಗಳ ನಡುವೆ ಕಾಳಗ ನಡೆಯಲಿದ್ದು. ಮೈಸೂರಿನ ಮಹೇಶ್ ಜೆಟ್ಟಿ, ಬೆಂಗಳೂರಿನ ಚೇತನ್ ಜೆಟ್ಟಿ, ಚಾಮರಾಜನಗರದ ಸತೀಶ್ ಜೆಟ್ಟಿ ಹಾಗೂ ಚನ್ನಪಟ್ಟಣದ ತೇಜಸ್ ಶೆಟ್ಟಿ ಅವರನ್ನು ಉಸ್ತಾದ್ಗಳು ಅಂತಿಮಗೊಳಿಸಿದ್ದಾರೆ.
ಇನ್ನು ವಾರಾಂತ್ಯವಾದ ಕಾರಣದಿಂದ ಮೈಸೂರಿನಲ್ಲಿ ಜನಸ್ತೋಮ ನೆರದಿತ್ತು. ದಸರಾದ ಪ್ರಮುಖ ಅಕರ್ಷಣೆಗಳಾದ ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ವಸ್ತುಪ್ರದರ್ಶನ ಸೇರಿದಂತೆ ಎಲ್ಲಾ ಕಡೆಗಳಲ್ಲೂ ಜನರು ತುಂಬಿ ತುಳುಕುತ್ತಿತ್ತು. ಮತ್ತೊಂದು ಕಡೆ ಮಳೆಯಿಂದ ರದ್ದಗಿದ್ದ ಗಾಯಕ ಸಿದ್ ಶ್ರೀ ರಾಮ್ ಯುವ ದಸರಾ ಕಾರ್ಯಕ್ರಮವನ್ನು ಇಂದು ಆಯೋಜನೆ ಮಾಡಲಾಗಿತ್ತು. ಕೊನೆ ದಿನದ ಯುವ ದಸರಾಕ್ಕೆ ಯುವ ಜನತೆಯಿಂದ ಭರ್ಜರಿ ರೆಸ್ಪಾನ್ಸ್ ದೊರೆಯಿತು. ಗಾಯಕ ಸಿದ್ ಶ್ರೀ ರಾಮ್ ಗಾಯನಕ್ಕೆ ಯವ ಸಮೂಹ ಹುಚ್ಚೆದ್ದು ಕುಣಿಯಿತು
ಒಟ್ಟಿನಲ್ಲಿ ರೈತ ದಸರೆಯ ಹೈನು ಸಂಭ್ರಮ ಜಂಬೂಸವಾರಿಯ ತಾಲೀಮು, ಕುಸ್ತಿ ಅಖಾಡದ ಜಗಜಟ್ಟಿಗಳ ವಿಜಯೋತ್ಸವ ಹಾಗೂ ಕರಾವಳಿಯ ಕಂಬಳದ ಅಬ್ಬರ. ಮೈಸೂರು ದಸರಾದ 8ನೇ ದಿನದ ಸಂಭ್ರಮ ಅಕ್ಷರಶಃ ಪರಾಕಾಷ್ಠೆ ತಲುಪಿದೆ.