Hubli-Dharwad tourist places : ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡ ಅದ್ಭುತ ಪ್ರವಾಸಿ ತಾಣಗಳನ್ನು ಹೊಂದಿವೆ. ನಗರದ ಗದ್ದಲದಿಂದ ದೂರ ಉಳಿದು, ಕೊಂಚ ವಿಭಿನ್ನವಾಗಿ ಪ್ರಕೃತಿ ಮತ್ತು ಆಧ್ಯಾತ್ಮಿಕತೆಯನ್ನು ಅನುಭವಿಸಲು ಬಯಸುವವರಿಗೆ ಈ ಸ್ಥಳಗಳು ಅತ್ಯುತ್ತಮ ಆಯ್ಕೆಯಾಗಿದೆ. ಕಾಂಕ್ರೀಟ್ ಕಾಡಿನ ಮಧ್ಯ ನೈಸರ್ಗಿಕ ಸೊಬಗಿನ ತಾಣಗಳ ಸಂಪೂರ್ಣ ವಿವರಗಳು ಈ ಕೆಳಗೆ ನೀಡಲಾಗಿದೆ...
ನೃಪತುಂಗ ಬೆಟ್ಟ: ಹುಬ್ಬಳ್ಳಿ ನಗರದ ಪ್ರಮುಖ ಆಕರ್ಷಣೆಗಳಲ್ಲಿ ನೃಪತುಂಗ ಬೆಟ್ಟಕ್ಕೆ ಮೊದಲ ಸ್ಥಾನವಿದೆ. ಕಾಂಕ್ರೀಟ್ ಕಾಡಿನ ನಡುವೆ ಹಸಿರು ಸೀರೆಯುಟ್ಟ ಪ್ರಕೃತಿದೇವಿಯಂತೆ ಕಂಗೊಳಿಸುವ ಈ ಬೆಟ್ಟವು ಪಕ್ಷಿ ವೀಕ್ಷಕರಿಗೆ ಮತ್ತು ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗಸಮಾನ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಅತ್ಯದ್ಭುತ ವಿಹಂಗಮ ನೋಟ ಕಾಯುತ್ತಿರುತ್ತದೆ. ಚಾರಣ ಪ್ರಿಯರು ಮೆಟ್ಟಿಲುಗಳ ಮೂಲಕ ಬೆಟ್ಟವನ್ನು ಏರಿ ನಿಸರ್ಗದ ಸೌಂದರ್ಯವನ್ನು ಸವಿಯಬಹುದು. ಹಿರಿಯ ನಾಗರಿಕರು ಮತ್ತು ಚಾರಣ ಮಾಡಲು ಸಾಧ್ಯವಾಗದವರಿಗಾಗಿ ಸಾರಿಗೆ ಸೌಲಭ್ಯವೂ ಇಲ್ಲಿದೆ. ವಿಶೇಷವಾಗಿ ಬೇಸಿಗೆಕಾಲದ ಅಂತ್ಯ ಚಳಿಗಾಲದ ಅವಧಿಯಲ್ಲಿ, ಈ ಬೆಟ್ಟವು ಮಂಜಿನ ಮುಸುಕಿನಲ್ಲಿ ಕಂಗೊಳಿಸುತ್ತಾ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ಚಂದ್ರಮೌಳೇಶ್ವರ ದೇವಸ್ಥಾನ: ಇತಿಹಾಸ ಮತ್ತು ವಾಸ್ತುಶಿಲ್ಪದಲ್ಲಿ ಆಸಕ್ತಿ ಉಳ್ಳವರಿಗೆ ಚಂದ್ರಮೌಳೇಶ್ವರ ದೇವಾಲಯವು ಕಡ್ಡಾಯವಾಗಿ ವೀಕ್ಷಿಸಬೇಕಾದ ತಾಣ. ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ, ಅಂದರೆ ಸುಮಾರು 600 ವರ್ಷಗಳ ಹಿಂದೆ ನಿರ್ಮಿಸಲಾದ ಈ ಪ್ರಾಚೀನ ದೇವಾಲಯವು ಕೇವಲ ಒಂದು ಧಾರ್ಮಿಕ ಸ್ಥಳವಲ್ಲ, ಬದಲಿಗೆ ಕಲ್ಯಾಣ ಚಾಲುಕ್ಯರ ಶ್ರೀಮಂತ ಶೈಲಿಯನ್ನು ಸಾರುವ ಐತಿಹಾಸಿಕ ಸ್ಮಾರಕವಾಗಿದೆ. ಶಿವನಿಗೆ ಅರ್ಪಿತವಾಗಿರುವ ಈ ದೇವಾಲಯವು ಕಲ್ಲಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ಇಡೀ ದೇಶಾದ್ಯಂತದ ಇತಿಹಾಸ ಪ್ರೇಮಿಗಳು ಮತ್ತು ಯಾತ್ರಾರ್ಥಿಗಳು ವರ್ಷಪೂರ್ತಿ ಈ ಸುಂದರ ತಾಣಕ್ಕೆ ಭೇಟಿ ನೀಡುತ್ತಾರೆ.
ಬನಶಂಕರಿ ದೇವಸ್ಥಾನ: ಚಂದ್ರಮೌಳೇಶ್ವರ ದೇವಾಲಯದ ಅತ್ಯಂತ ಸಮೀಪದಲ್ಲೇ ಇರುವ ಬನಶಂಕರಿ ಅಮ್ಮನವರ ದೇವಾಲಯವು ಹುಬ್ಬಳ್ಳಿಯ ಮತ್ತೊಂದು ಪ್ರಾಚೀನ ವಾಸ್ತುಶಿಲ್ಪದ ಹೆಮ್ಮೆ. 13ನೇ ಶತಮಾನದ ಅವಧಿಯಲ್ಲಿ ನಿರ್ಮಿತವಾದ ಈ ದೇವಾಲಯವು ಚಾಲುಕ್ಯ ಕಾಲದ ಕುಶಲಕರ್ಮಿಗಳ ಅದ್ಭುತ ಕಲಾತ್ಮಕತೆಗೆ ಸಾಕ್ಷಿಯಾಗಿದೆ. ಸೂಕ್ಷ್ಮ ಕೆತ್ತನೆಗಳು ಮತ್ತು ಪ್ರಶಾಂತ ವಾತಾವರಣದಿಂದ ಕೂಡಿದ ಈ ಸ್ಥಳವು ಧಾರ್ಮಿಕ ಶ್ರದ್ಧೆಯ ಜೊತೆಗೆ ಐತಿಹಾಸಿಕ ಅಧ್ಯಯನಕ್ಕೂ ಸೂಕ್ತವಾಗಿದೆ.
ನವಗ್ರಹ ತೀರ್ಥ: ಧ್ಯಾನ ಮಾಡಲು ಬಯಸುವವರಿಗೆ ಹುಬ್ಬಳ್ಳಿ ಸಮೀಪದ ನವಗ್ರಹ ತೀರ್ಥವು ಅತ್ಯುತ್ತಮ ತಾಣವಾಗಿದೆ. ಜೈನ ಸಮುದಾಯದ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಈ ಸ್ಥಳದಲ್ಲಿ 61 ಅಡಿ ಎತ್ತರದ ಶ್ರೀ ಭಗವಾನ್ ಪಾರ್ಶ್ವನಾಥರ ಬೃಹತ್ ಏಕಶಿಲಾ ಪ್ರತಿಮೆ ಇದೆ. ಇದರೊಂದಿಗೆ ಇತರ ತೀರ್ಥಂಕರರ ಸಣ್ಣ ಮನಮೋಹಕ ಪ್ರತಿಮೆಗಳನ್ನೂ ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಪ್ರಶಾಂತ ವಾತಾವರಣ, ವಿಶಾಲವಾದ ಆವರಣವು ಧ್ಯಾನ ನಿರತರಾಗಲು ಮತ್ತು ಮನಸ್ಸಿಗೆ ಶಾಂತಿ ಕಂಡುಕೊಳ್ಳಲು ಹೇಳಿ ಮಾಡಿಸಿದಂತಿದೆ.
ಉಣಕಲ್ ಕೆರೆ: ಸುಮಾರು 200 ಎಕರೆಗಳಷ್ಟು ಬೃಹತ್ ಪ್ರದೇಶದಲ್ಲಿ ಹರಡಿಕೊಂಡಿರುವ ಉಣಕಲ್ ಕೆರೆಯು ಕುಟುಂಬದೊಂದಿಗೆ ಪಿಕ್ನಿಕ್ ಹೋಗಲು ಸೂಕ್ತವಾದ ಸ್ಥಳ. ಈ ಸರೋವರದ ಸೂರ್ಯಾಸ್ತದ ನೋಟವು ಪ್ರವಾಸಿಗರಿಗೆ ರೋಮಾಂಚಕ ಅನುಭವ ನೀಡುತ್ತದೆ. ಅತ್ಯಂತ ಸ್ಪಷ್ಟವಾದ ನೀರನ್ನು ಹೊಂದಿರುವ ಈ ಕೆರೆಯಲ್ಲಿ ಜಲಚರಗಳ ಚಲನವಲನಗಳನ್ನು ನೋಡುವುದೇ ಒಂದು ಚಂದ. ಸಾಹಸ ಮತ್ತು ಮೋಜಿನ ಚಟುವಟಿಕೆಗಳಿಗೆ, ದೋಣಿ ವಿಹಾರಕ್ಕೆ ಇದು ಸೂಕ್ತ ಸ್ಥಳವಾಗಿದ್ದು, ವಾರಾಂತ್ಯದಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರಿಂದ ತುಂಬಿರುತ್ತದೆ. ಕೆರೆಯ ಮಧ್ಯದಲ್ಲಿ ಸ್ಥಾಪಿಸಲಾಗಿರುವ ಸ್ವಾಮಿ ವಿವೇಕಾನಂದರ ಪ್ರತಿಮೆಯು ಇಲ್ಲಿನ ಪ್ರಮುಖ ಆಕರ್ಷಣೆ.
ಶ್ರೀ ಸಿದ್ಧಾರೂಢ ಮಠ: ಹುಬ್ಬಳ್ಳಿಗೆ ಭೇಟಿ ನೀಡುವ ಪ್ರತಿಯೊಬ್ಬರೂ ಒಮ್ಮೆಯಾದರೂ ಭೇಟಿ ನೀಡಲೇಬೇಕಾದ ಸ್ಥಳ ಶ್ರೀ ಸಿದ್ಧಾರೂಢ ಮಠ. ಮಹಾನ್ ಸಂತ ಶ್ರೀ ಸಿದ್ಧಾರೂಢ ಸ್ವಾಮಿಗಳ ಗೌರವಾರ್ಥವಾಗಿ ಸ್ಥಾಪಿತವಾದ ಈ ಮಠವು ಲಕ್ಷಾಂತರ ಅನುಯಾಯಿಗಳಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ತಾಣವಾಗಿದೆ. ಜಾತಿ-ಮತಗಳ ಭೇದವಿಲ್ಲದೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಾಮರಸ್ಯವನ್ನು ಎತ್ತಿಹಿಡಿಯುವ ಈ ಮಠದಲ್ಲಿ ದಿನನಿತ್ಯ ಅನ್ನದಾನ ನಡೆಯುತ್ತದೆ. ವಿಶೇಷವಾಗಿ ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಇಲ್ಲಿ ನಡೆಯುವ ಉತ್ಸವ ಮತ್ತು ಜಾತ್ರೆಗೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಅಷ್ಟೇ ಅಲ್ಲದೆ, ಇಲ್ಲಿ ಪ್ರತಿದಿನ ಓಂ ನಮಃ ಶಿವಾಯ ಮಂತ್ರ ಪಠಣವೂ ನಡೆಯುತ್ತದೆ. ಇಂದಿಗೂ ಇಲ್ಲಿ ಅಖಂಡ ಜ್ಯೋತಿ ಬೆಳಗುವ ಮೂಲಕ ಭಕ್ತರ ಕಷ್ಟಗಳಿಗೆ ಸಾಕ್ಷಾತ್ ಸಿದ್ದಾರೂಢರೇ ಆರ್ಶೀವಾದ ಮಾಡುತ್ತಿದ್ದಾರೆ ಎಂಬ ನಂಬಿಕೆ ಭಕ್ತರಲ್ಲಿ. ಇದರ ಜೊತೆಗೆ ಇಲ್ಲಿ ಶಿಕ್ಷಣವನ್ನು ನೀಡಲಾಗುತ್ತಿದೆ.
ಇಂದಿರಾ ಗಾಂಧಿ ಗ್ಲಾಸ್ ಹೌಸ್: ನಗರದ ನಡುಭಾಗದಲ್ಲಿ ಸುಂದರವಾಗಿ ನಿರ್ಮಿಸಲಾದ ಇಂದಿರಾ ಗಾಂಧಿ ಗ್ಲಾಸ್ ಹೌಸ್ ಗಾರ್ಡನ್ ಅತ್ಯಂತ ಕಣ್ಣುಸೆಳೆಯುವ ಉದ್ಯಾನವನವಾಗಿದೆ. ಬೆಂಗಳೂರಿನ ಲಾಲ್‌ಬಾಗ್ ಗ್ಲಾಸ್ ಹೌಸ್ ಮಾದರಿಯಲ್ಲೇ ನಿರ್ಮಿಸಲಾಗಿರುವ ಇಲ್ಲಿನ ಗಾಜಿನ ಮನೆ (Glass House) ಪ್ರಮುಖ ಆಕರ್ಷಣೆಯಾಗಿದೆ. ವೈವಿಧ್ಯಮಯ ಹೂವಿನ ಗಿಡಗಳು, ಹಸಿರು ಹುಲ್ಲುಹಾಸು ಮತ್ತು ಮನಮೋಹಕ ಕಾರಂಜಿಗಳು ಛಾಯಾಗ್ರಾಹಕರಿಗೆ ಮತ್ತು ಪ್ರಕೃತಿ ಪ್ರೇಮಿಗಳಿಗೆ ಅತ್ಯುತ್ತಮ ಹಿನ್ನೆಲೆಯನ್ನು ಒದಗಿಸುತ್ತವೆ. ಕುಟುಂಬದ ಜೊತೆ ಹೆಚ್ಚಿನ ಸಮಯ ಕಳೆಯಲು ಈ ತಾಣವು ಹೇಳಿ ಮಾಡಿಸಿದೆ. ವೀಕೆಂಡ್‌ನಲ್ಲಿ ಹೆಚ್ಚಿನ ಫ್ಯಾಮಿಲಿ ಈ ಸ್ಥಳಕ್ಕೆ ಬಂದು ಕಾಲ ಕಳೆಯುತ್ತವೆ
ಶಿಕ್ಷಣ ಕಾಶಿ ಧಾರವಾಡ ಆದ್ರೆ, ವಾಣಿಜ್ಯ ನಗರಿ ಹುಬ್ಬಳ್ಳಿ ತನ್ನ ಒಡಿಲಲ್ಲಿ ಹಲವಾರು ಆಕರ್ಷಕ ಮತ್ತು ಆಧ್ಯಾತ್ಮಿಕ ತಾಣಗಳನ್ನು ಅಡಗಿಸಿಕೊಂಡಿರುವುದಂತೂ ಸತ್ಯ. ಬಿಡುವಿನ ವೇಳೆ ಕುಟುಂಬ ಸಮೇತ ಭೇಟಿ ನೀಡಿ ಮೌಲ್ಯಯುತ ಸಮಯ ಕಳೆಯಲು ಈ ಜಾಗಗಳು ಹೇಳಿ ಮಾಡಿಸಿದ್ದವು. ಒಟ್ಟಾರೆಯಾಗಿ ಹುಬ್ಬಳ್ಳಿ ಮತ್ತು ಧಾರವಾಡವು ಕೇವಲ ದಾಟುವ ಹಾದಿಯಲ್ಲ, ಬದಲಿಗೆ ವಿಶ್ರಮಿಸಿ, ಅನುಭವಿಸಿ ಆನಂದಿಸಬೇಕಾದ ಪ್ರವಾಸಿ ತಾಣ. ಪುರಾತನ ಇತಿಹಾಸ, ವಾಸ್ತುಶಿಲ್ಪ, ಪ್ರಕೃತಿಯ ಮಡಿಲು ಹಾಗೂ ಆಧ್ಯಾತ್ಮಿಕ ತೃಪ್ತಿಯನ್ನು ಒಂದೇ ಕಡೆ ಪಡೆಯಲು ಬಯಸುವ ಪ್ರವಾಸಿಗರು ಖಂಡಿತವಾಗಿಯೂ ಒಮ್ಮೆಯಾದರೂ ಈ ಅವಳಿ ನಗರಗಳಿಗೆ ಭೇಟಿ ನೀಡಲೇಬೇಕು.