SOCIAL MEDIA

Newsletter

PARTNER SITES
Select Language Select State

ಮುರಸು ಚಂಡಮಾರುತ ಎಫೆಕ್ಟ್: ಹಲವು ಜಿಲ್ಲೆಗಳಿಗೆ ಇಂದಿನಿಂದ 3 ದಿನ ಭಾರಿ ಮಳೆ ಮುನ್ಸೂಚನೆ

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಮುರಸು' ಚಂಡಮಾರುತದ ತೀವ್ರತೆಯು ಹೆಚ್ಚಾಗಿದ್ದು, ಆಂಧ್ರಪ್ರದೇಶದ ಕರಾವಳಿಯತ್ತ ಮುನ್ನುಗ್ಗುತ್ತಿದೆ. ಇದರ ನೇರ ಪ್ರಭಾವ ಕರ್ನಾಟಕದ ಮೇಲೂ ಬೀರಲಿದ್ದು, ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಗುಡುಗು, ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.. ಹೆಚ್ಚಿನ ವಿವರಗಳು ಇಲ್ಲಿವೆ..

Written By Krishna NK
Published: Nov 03, 2026, 06:57 AM IST | Updated: Nov 03, 2026, 07:01 AM IST
Image Credit: weather report
Join

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ 'ಮುರಸು' ಚಂಡಮಾರುತದ ತೀವ್ರತೆಯು ಹೆಚ್ಚಾಗಿದ್ದು, ಆಂಧ್ರಪ್ರದೇಶದ ಕರಾವಳಿಯತ್ತ ಮುನ್ನುಗ್ಗುತ್ತಿದೆ. ಇದರ ನೇರ ಪ್ರಭಾವ ಕರ್ನಾಟಕದ ಮೇಲೂ ಬೀರಲಿದ್ದು, ರಾಜ್ಯದ ಕರಾವಳಿ ಹಾಗೂ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ (ನವೆಂಬರ್ 3) ವರುಣನಾರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಆಂಧ್ರಪ್ರದೇಶದ ನೆಲ್ಲೂರು ಮತ್ತು ನರಸಾಪುರ ನಡುವಿನ ಕರಾವಳಿ ಭಾಗದಲ್ಲಿ ಈ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ತೀವ್ರಗೊಂಡಿದೆ. ಈ ವೇಳೆ ಗಂಟೆಗೆ ಬರೋಬ್ಬರಿ 100ರಿಂದ 110 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ಇದೆ. ಇದರ ಪರಿಣಾಮವಾಗಿ ಆಂಧ್ರಪ್ರದೇಶ, ತಮಿಳುನಾಡು ಜೊತೆಗೆ ಕರ್ನಾಟಕದಲ್ಲೂ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದ ನಾನಾ ಭಾಗಗಳಲ್ಲಿ ಮಳೆಯಾಗುವ ವಾತಾವರಣ ನಿರ್ಮಾಣವಾಗಿದೆ.

ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ?
ಕರಾವಳಿ ಭಾಗ: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕೆಲ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 1ರಿಂದಲೇ ಈ ಭಾಗದಲ್ಲಿ ಸಿಡಿಲು-ಗುಡುಗಿನ ಅಬ್ಬರ ಶುರುವಾಗಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಉತ್ತರ ಒಳನಾಡು: ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ. ಆದರೆ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.

ದಕ್ಷಿಣ ಒಳನಾಡು ಮತ್ತು ಬೆಂಗಳೂರು: ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಇದರೊಂದಿಗೆ ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ವಿಜಯನಗರ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ನವೆಂಬರ್ 5ರವರೆಗೆ ಎಚ್ಚರಿಕೆ ಅಗತ್ಯ
ಹವಾಮಾನ ಇಲಾಖೆಯ ವರದಿ ಪ್ರಕಾರ, ನವೆಂಬರ್ 2ರಿಂದ ನವೆಂಬರ್ 5ರವರೆಗೆ ಕರ್ನಾಟಕದ ಒಳನಾಡಿನ ವಿವಿಧ ಭಾಗಗಳಲ್ಲಿ ಬಿರುಗಾಳಿಯ ವೇಗ ಗಂಟೆಗೆ 30-40 ಕಿ.ಮೀ ಇರಲಿದೆ. ಕರಾವಳಿ ಭಾಗದಲ್ಲಿ ಸಿಡಿಲು ಬಡಿಯುವ ತೀವ್ರತೆ ಹೆಚ್ಚಿರುವ ಕಾರಣ ಮೀನುಗಾರರು ಹಾಗೂ ಕೃಷಿಕರು ಎಚ್ಚರಿಕೆಯಿಂದಿರಲು ಮನವಿ ಮಾಡಲಾಗಿದೆ. ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡದ ಸುಳ್ಯದಲ್ಲಿ 2 ಸೆಂ.ಮೀ ಹಾಗೂ ಬಂಟ್ವಾಳ, ಪುತ್ತೂರು ಭಾಗಗಳಲ್ಲಿ ತಲಾ 1 ಸೆಂ.ಮೀ ಮಳೆ ದಾಖಲಾಗಿದೆ. ಬಯಲುಸೀಮೆಯ ಮಂಡ್ಯದಲ್ಲಿ ಕನಿಷ್ಠ 18.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಚಳಿಯ ವಾತಾವರಣವೂ ಅನುಭವಕ್ಕೆ ಬರುತ್ತಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES