ಧಾರವಾಡ: ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಹಾಗೂ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ಧಾರವಾಡದಲ್ಲಿ ಸಚಿವ ಸಂತೋಷ್ ಲಾಡ್ ಮಾಧ್ಯಮಗಳೊಂದಿಗೆ ಮಾತನಾಡಿದರು. ರಾಜ್ಯದಲ್ಲಿನ ಸ್ಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಅವರು ಏನ್ ಮಾಡ್ತಾರೆ, ಯಾವ ರೀತಿ ಮಾಡ್ತಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಬಹಳಷ್ಟು ಟೆಕ್ನಾಲಜಿ ಇದೆ, ಈ ಬಗ್ಗೆ ಮಾಧ್ಯಮಗಳು ಎಷ್ಟು ಹೈಪ್ ಕೊಡುತ್ತವೆಯೋ ಅಷ್ಟು ಅದರ ಬಗ್ಗೆ ಪ್ರಚಾರವಾಗುತ್ತದೆ" ಎಂದು ತಿಳಿಸಿದರು.
ಇದೇ ವೇಳೆ ಕಬ್ಬು ಬೆಳೆಗಾರರ ಹೋರಾಟ ಮತ್ತು ಎಥೆನಾಲ್ ನೀತಿಯ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಈ ಬಗ್ಗೆ ಗಂಭೀರ ಚರ್ಚೆಯಾಗಬೇಕಿದೆ ಎಂದರು. "ಕಬ್ಬು ಬೆಳೆಗಾರರ ಹೋರಾಟದ ಸ್ಥಳಕ್ಕೆ ಮುಖ್ಯಮಂತ್ರಿಗಳು ಬಂದಿದ್ದರು, ನಾನೂ ಕೂಡ ಇದ್ದೆ. ಧಾರವಾಡದಲ್ಲೂ ಹೋರಾಟ ನಡೆದಿದೆ. ಎಥೆನಾಲ್ ಕುರಿತು ದೇಶದಲ್ಲಿ ಯಾವುದೇ ಸ್ಪಷ್ಟತೆ ಇಲ್ಲ. 2014ರಲ್ಲಿ ಎಥೆನಾಲ್ ಪಾಲಿಸಿಯಾಗಿದೆ, ಈಗ 2026, ಕಳೆದ 12 ವರ್ಷಗಳಲ್ಲಿ ಏನು ನಿಯಮವಾಗಿದೆ? ಎಷ್ಟು ಉತ್ಪಾದನೆಯಾಗಿದೆ, ಎಷ್ಟು ಬಳಕೆ ಮಾಡಿದ್ದೇವೆ?" ಎಂದು ಪ್ರಶ್ನಿಸಿದರು.
"ನಾವು ಅಮೆರಿಕದಿಂದ 50 ಮಿಲಿಯನ್ ಬ್ಯಾರಲ್ ಆಮದು ಮಾಡಿಕೊಂಡಿದ್ದೇವೆ, ಅದು ಎಲ್ಲಿ ಬಳಕೆಯಾಗಿದೆ? 56 ರಿಂದ 58 ರೂ.ಗಳಿಗೆ ನಾವು ಖರೀದಿ ಮಾಡುತ್ತೇವೆ, ಸರ್ಕಾರ ಅದನ್ನು ತೆಗೆದುಕೊಳ್ಳುತ್ತಿದೆ. ರೈತರಿಂದಲೇ ಎಥೆನಾಲ್ ಆಗುವುದು, ಎಥೆನಾಲ್ ಅನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ರೈತರಿಗೆ ಐದಾರು ರೂಪಾಯಿ ಕೊಟ್ಟರೆ ಆಯ್ತು, ಅದಕ್ಕೆ ಸ್ಪಷ್ಟೀಕರಣ ಬೇಕಲ್ಲವೇ?" ಎಂದು ಆಕ್ರೋಶ ವ್ಯಕ್ತಪಡಿಸಿದರು.
"ಇವತ್ತು ಎಫ್‌ಆರ್‌ಪಿ ಮತ್ತು ಎಂಎಸ್‌ಪಿ ಕೇಳುತ್ತಿದ್ದಾರೆ, ಇದನ್ನು ಯಾರು ಸೆಟ್ ಮಾಡಬೇಕು? 10 ಲಕ್ಷ ಟನ್ ಸಕ್ಕರೆ ಆಮದು ಮಾಡಿದರು, ಇದಕ್ಕೆ ಯಾರು ಉತ್ತರ ಕೊಡಬೇಕು? 40 ರೂಪಾಯಿ ಇದ್ದ ಸಕ್ಕರೆ 70 ರೂ.ಗೆ ಹೋಯಿತು, ಯಾರೂ ಯೋಚನೆ ಮಾಡಲಿಲ್ಲ. ಸಕ್ಕರೆ ಉತ್ಪಾದನೆ ಹಾಗೂ ಆಮದು ನಿಯಂತ್ರಣ ಮಾಡುವುದು ಕೇಂದ್ರ ಸರ್ಕಾರವೇ ಹೊರತು ರಾಜ್ಯ ಸರ್ಕಾರಕ್ಕಲ್ಲ" ಎಂದರು.
ಎಥೆನಾಲ್ ಲಾಭ ಯಾರಿಗೆ?
"ನಾವು 6 ಸಾವಿರ ಕೋಟಿ ಲೀಟರ್ ಪೆಟ್ರೋಲ್ ಬಳಸುತ್ತೇವೆ, ಎಥೆನಾಲ್ 20% ಬಳಸಬೇಕು ಅನ್ನುವವರು ಇವರೇ. 55 ರೂ.ಗಳಿಗೆ ಎಥೆನಾಲ್ ಖರೀದಿ ಮಾಡುತ್ತಿದ್ದಾರೆ, ಆದರೆ ಪೆಟ್ರೋಲ್ ಅನ್ನು 110 ರೂ.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ರೈತರ ಕಬ್ಬು ಕಾರ್ಖಾನೆಗೆ ಹೋಗುತ್ತದೆ, ಕಾರ್ಖಾನೆ ಎಥೆನಾಲ್ ತಯಾರಿ ಮಾಡುತ್ತದೆ, ಎಥೆನಾಲ್ ಖರೀದಿ ಮಾಡುವ ಕೇಂದ್ರ ಸರ್ಕಾರ ಲಾಭ ಮಾಡಿಕೊಳ್ಳುತ್ತಿದೆ. ಈ ಹಣ ಯಾರಿಗೆ ಕೊಡಬೇಕು ಎನ್ನುವುದರ ಬಗ್ಗೆ ಚರ್ಚೆಯಾಗಲಿ" ಎಂದು ಸಚಿವ ಸಂತೋಷ್ ಲಾಡ್ ಆಗ್ರಹಿಸಿದರು.