SOCIAL MEDIA

Newsletter

PARTNER SITES
Select Language Select State

ವಿಜಯನಗರದಲ್ಲಿ ಅಕ್ರಮ ಮದ್ಯ ಘಾಟು, ಸಚಿವರ ವಾರ್ನಿಂಗ್‌ : ಬಳ್ಳಾರಿಯಲ್ಲಿ ಎಲ್ಲೆಂದರಲ್ಲಿ ಕೆಟ್ಟು ನಿಂತ ಬಸ್ಸು

ವಿಜಯನಗರ ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಹೆಚ್ಚಾಗಿರುವುದು ಜಿಲ್ಲಾ ಉಸ್ತುವಾರಿ ಸಚಿವರ ಕೆಂಗಣ್ಣಿಗೆ ಗುರಿಯಾಗಿದ್ದರೆ, ಮತ್ತೊಂದೆಡೆ ಬಳ್ಳಾರಿ ಜಿಲ್ಲೆಯಲ್ಲಿ ಸಾರಿಗೆ ಇಲಾಖೆಯ ಹಳೇ ಬಸ್‌ಗಳ ದುಸ್ಥಿತಿಯಿಂದ ರೋಸಿಹೋದ ಪ್ರಯಾಣಿಕರು ರಸ್ತೆಯಲ್ಲೇ ಬಸ್ ತಳ್ಳಬೇಕಾದ ಸ್ಥಿತಿಗೆ ತಲುಪಿದ್ದಾರೆ.. ಈ ಎರಡೂ ಜಿಲ್ಲೆಗಳ ಪ್ರತ್ಯೇಕ ಸುದ್ದಿಗಳ ಸಂಪೂರ್ಣ ವಿವರ ಇಲ್ಲಿದೆ..

Written By Krishna NK
Published: Nov 03, 2026, 07:31 AM IST | Updated: Nov 03, 2026, 07:38 AM IST
Image Credit: Kannada News
Join

ವಿಜಯನಗರ/ ಬಳ್ಳಾರಿ: ವಿಜಯನಗರ ಜಿಲ್ಲೆಯಲ್ಲಿ ಗಲ್ಲಿ ಗಲ್ಲಿಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ಬಗ್ಗೆ ಉಸ್ತುವಾರಿ ಸಚಿವರು ಅಬಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರೆ, ಮತ್ತೊಂದೆಡೆ ಬಳ್ಳಾರಿ ಡಿಪೋದ ಹಳೆಯ ಬಸ್‌ಗಳ ಕಾಟಕ್ಕೆ ರೋಸಿಹೋದ ಪ್ರಯಾಣಿಕರು ಬಸ್‌ಗಳನ್ನೇ ತಳ್ಳಬೇಕಾದ ಪರಿಸ್ಥಿತಿಗೆ ತಲುಪಿದ್ದಾರೆ.. ಈ ಎರಡು ಸುದ್ದಿಗಳ ಸಂಪೂರ್ಣ ವಿವರಗಳು ಇಲ್ಲಿವೆ..

ಅಕ್ರಮ ಮದ್ಯ ಮಾರಾಟ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು
ಜಿಲ್ಲೆಯ ವಿವಿಧ ಕಡೆಗಳಲ್ಲಿ ಹಾಗೂ ಗ್ರಾಮೀಣ ಭಾಗದ ಗಲ್ಲಿ ಗಲ್ಲಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಸರಣಿ ವರದಿಗಳು ಬಿತ್ತರವಾಗಿದ್ದವು. ಈ 'ಬಿಗ್ ಇಂಪ್ಯಾಕ್ಟ್' ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಬಸವಂತಪ್ಪ, ಅಬಕಾರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಸಭೆಯಲ್ಲಿ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅವರು, "ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದರೂ ಅಧಿಕಾರಿಗಳು ಯಾಕೆ ಕಣ್ಣುಮುಚ್ಚಿ ಕುಳಿತಿದ್ದೀರಿ? ಯಾವುದೇ ಕ್ರಮ ಕೈಗೊಳ್ಳದೆ ಇರಲು ಕಾರಣವೇನು?" ಎಂದು ಪ್ರಶ್ನಿಸಿದ್ದಾರೆ.

"ಜಿಲ್ಲಾಧಿಕಾರಿಗಳ ಗಮನಕ್ಕೆ ವಿಷಯ ಬಂದ ನಂತರವಷ್ಟೇ ನೀವು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳುತ್ತೀರಾ? ಅಲ್ಲಿಯವರೆಗೆ ಅಬಕಾರಿ ಅಧಿಕಾರಿಗಳಾದ ನೀವೇನು ಮಾಡುತ್ತಿದ್ದೀರಿ?" ಎಂದು ಸಚಿವರು ಖಾರವಾಗಿ ತರಾಟೆಗೆ ತೆಗೆದುಕೊಂಡರು. ಅಲ್ಲದೆ, ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಮದ್ಯದ ಹಾವಳಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಅಕ್ರಮ ಮಾರಾಟವನ್ನು ತಡೆಗಟ್ಟಲು ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಮತ್ತು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವವರ ವಿರುದ್ಧ ಮುದಾಕ್ಷಿಣ್ಯವಿಲ್ಲದೆ ಕ್ರಮ ಜರುಗಿಸಬೇಕು ಎಂದು ಸೂಚಿಸಿರುವ ಸಚಿವರು, ಇನ್ಮುಂದೆ ಈ ಬಗ್ಗೆ ನಿರಂತರ ನಿಗಾ ವಹಿಸುವಂತೆ ತಾಕೀತು ಮಾಡಿದ್ದಾರೆ.

ಡೀಸೆಲ್ ಇಲ್ಲದೆ, ತಾಂತ್ರಿಕ ದೋಷದಿಂದ ರಸ್ತೆಯಲ್ಲೇ ನಿಲ್ಲುತ್ತಿರುವ ಬಸ್‌ಗಳು!

ಬಳ್ಳಾರಿ : ಇನ್ನೊಂದೆಡೆ, ಬಳ್ಳಾರಿ ಸಾರಿಗೆ ಡಿಪೋದ ಬಸ್‌ಗಳ ಅವ್ಯವಸ್ಥೆ ಮುಂದುವರಿದಿದ್ದು, ಸಾರ್ವಜನಿಕರು ಪರದಾಡುವಂತಾಗಿದೆ. ಬಳ್ಳಾರಿ ಡಿಪೋದಲ್ಲಿರುವ ಬಹುತೇಕ ಶೇ. 60ರಷ್ಟು ಬಸ್‌ಗಳು ಅತ್ಯಂತ ಹಳೆಯದಾಗಿವೆ. ಈ ಕಾರಣದಿಂದಾಗಿ ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಳ್ಳುವುದು ಹಾಗೂ ಎಲ್ಲೆಂದರಲ್ಲಿ ಬಸ್‌ಗಳು ಕೆಟ್ಟು ನಿಲ್ಲುವುದು ನಿತ್ಯದ ಗೋಳಾಗಿದೆ.

ಇದಕ್ಕೆ ತಾಜಾ ನಿದರ್ಶನವೆಂಬಂತೆ, ಬಳ್ಳಾರಿಯಿಂದ ಮೋಕಾ ಗ್ರಾಮಕ್ಕೆ ಹೊರಟಿದ್ದ ಸಾರಿಗೆ ಬಸ್ ಮಾರ್ಗಮಧ್ಯೆ ಡೀಸೆಲ್ ಇಲ್ಲದೆ ಬಂದ್ ಆಗಿರುವ ಘಟನೆ ನಡೆದಿದೆ. ಕೊನೆಗೆ ಚಾಲಕ ಹಾಗೂ ನಿರ್ವಾಹಕರು ಪರದಾಡಿ, ಹೇಗೋ ಡೀಸೆಲ್ ತರಿಸಿ ಬಸ್ ಸ್ಟಾರ್ಟ್ ಮಾಡಬೇಕಾದ ಪರಿಸ್ಥಿತಿ ಎದುರಾಯಿತು. ಇದೇ ರೀತಿ ಬಳ್ಳಾರಿ ನಗರದ ಹೈದರಾಬಾದ್ ಬಿರಿಯಾನಿ ಹೋಟೆಲ್ ಮುಂಭಾಗದಲ್ಲೂ ತಾಂತ್ರಿಕ ಸಮಸ್ಯೆಯಿಂದ ಬಸ್ ಮಧ್ಯದಲ್ಲೇ ನಿಂತಿತ್ತು. ಬಸ್ ಸ್ಟಾರ್ಟ್ ಆಗದೆ ಇದ್ದುದರಿಂದ ಪ್ರಯಾಣಿಕರು ಮತ್ತು ನಿರ್ವಾಹಕರು ಸೇರಿಕೊಂಡು ರಸ್ತೆಯಲ್ಲೇ ಬಸ್ ಅನ್ನು ತಳ್ಳಬೇಕಾದ ದಯನೀಯ ಸ್ಥಿತಿ ನಿರ್ಮಾಣವಾಗಿತ್ತು.

ಸರ್ಕಾರಿ ಬಸ್‌ಗಳ ಈ ರೀತಿಯ ಪದೇ ಪದೇ ವೈಫಲ್ಯದಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಬೇಜವಾಬ್ದಾರಿತನವೇ ಈ ದುಸ್ಥಿತಿಗೆ ಕಾರಣ ಎಂದು ಸಾರ್ವಜನಿಕರು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಪ್ರಯಾಣಿಕರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ಜನರು, ಕೂಡಲೇ ಬಳ್ಳಾರಿ ಡಿಪೋಗೆ ಹೊಸ ಬಸ್‌ಗಳನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಸಂಬಂಧಪಟ್ಟ ಇಲಾಖೆಯು ಇನ್ನು ಮುಂದೆಯಾದರೂ ಎಚ್ಚೆತ್ತುಕೊಂಡು ಪ್ರಯಾಣಿಕರ ಪರದಾಟಕ್ಕೆ ಮುಕ್ತಿ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES