SOCIAL MEDIA

Newsletter

PARTNER SITES
Select Language Select State

ಮಂಗಳೂರಿನಲ್ಲಿ ಮಾದಕ ಜಾಲ : 1.58 ಕೋಟಿ ಮೌಲ್ಯದ MDMA ವಶಕ್ಕೆ, 3 ಬಂಧನ

ಕರಾವಳಿಯಲ್ಲಿ ಮಾದಕ ವಸ್ತುಗಳ ಜಾಲ ಪತ್ತೆಯಾಗಿದೆ. ನಿಷೇಧಿತ MDMA ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು 1.58 ಕೋಟಿ ಮೌಲ್ಯದ ಎಂಡಿಎಂಎ ಪತ್ತೆಯಾಗಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 09, 2026, 03:47 PM IST | Updated: Oct 09, 2026, 03:52 PM IST
Image Credit: Mangaluru News
Join

ಮಂಗಳೂರು: ಕೋರಿಯರ್ ಮೂಲಕ ನಿಷೇಧಿತ ಎಂಡಿಎಂಎ (MDMA) ಮಾದಕ ವಸ್ತುವನ್ನು ತರಿಸಿ ಸಾಗಾಟ ಹಾಗೂ ಮಾರಾಟ ಮಾಡಲು ಸಂಚು ರೂಪಿಸಿದ್ದ ಬೃಹತ್ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 1 ಕೋಟಿ 58 ಲಕ್ಷದ 34 ಸಾವಿರ ರೂಪಾಯಿ ಮೌಲ್ಯದ 1 ಕೆಜಿ 796.96 ಗ್ರಾಂ MDMA ಯನ್ನು ವಶಪಡಿಸಿಕೊಳ್ಳಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಡಿಮಾರ್ಟ್ ಬಳಿ ಕಾರ್ಯಾಚರಣೆ: ನಗರದಲ್ಲಿ ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಮಾಹಿತಿ ಆಧಾರಿಸಿ ಉಳ್ಳಾಲ ತಾಲೂಕಿನ ಕುಂಪಲದ ಡಿಮಾರ್ಟ್ ಬಳಿ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಅಬ್ದುಲ್ ಹಾಪೀಲ್, ಜಿಯಾವುಲ್ ಹಕ್ ಹಾಗೂ ಅಲ್ತಾಫ್ ಎಂದು ಗುರುತಿಸಲಾಗಿದೆ.

ವಾಟರ್ ಪ್ಯೂರಿಫೈಯರ್‌ನಲ್ಲಿ ಎಂಡಿಎಂಎ ಬಚ್ಚಿಟ್ಟು ಕೋರಿಯರ್ 
ಆರೋಪಿಗಳು ಪಂಜಾಬ್‌ನ ಅಮೃತಸರದಿಂದ ಎಂಡಿಎಂಎ ಖರೀದಿಸಿದ್ದರು. ಅದನ್ನು ವಾಟರ್ ಪ್ಯೂರಿಫೈಯರ್‌ನ ನೀರು ಸಂಗ್ರಹಿಸುವ ಜಾಗದಲ್ಲಿ ಭದ್ರವಾಗಿ ಇಟ್ಟು, ಕೋರಿಯರ್ ಮೂಲಕ ಮಂಗಳೂರಿಗೆ ಕಳುಹಿಸಿಕೊಟ್ಟಿದ್ದರು. ಇಲ್ಲಿಂದ ಮಂಗಳೂರು ನಗರ ಹಾಗೂ ನೆರೆಯ ಕೇರಳ ರಾಜ್ಯದ ವಿವಿಧ ಭಾಗಗಳಿಗೆ ಪೂರೈಕೆ ಮಾಡಲು ಯೋಜನೆ ರೂಪಿಸಿದ್ದರು. ಆದರೆ ಪೊಲೀಸರು ಸಮಯಪ್ರಜ್ಞೆಯಿಂದ ಜಾಲವನ್ನು ಆರಂಭದಲ್ಲೇ ಪತ್ತೆಹಚ್ಚಿ ವಿಫಲಗೊಳಿಸಿದ್ದಾರೆ.

1.63 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ
ಬಂಧಿತರಿಂದ 1 ಕೆಜಿ 796.96 ಗ್ರಾಂ MDMA, 3 ಮೊಬೈಲ್ ಫೋನ್‌ಗಳು, ಮಾರುತಿ ಸುಜುಕಿ ಸ್ವಿಫ್ಟ್ ಕಾರು, ಆಟೋ ರಿಕ್ಷಾ, ಕೋರಿಯರ್ ಕಾರ್ಟನ್ ಬಾಕ್ಸ್ ಹಾಗೂ ವಾಟರ್ ಪ್ಯೂರಿಫೈಯರ್ ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 1,63,84,000 ರೂಪಾಯಿ ಎಂದು ಅಂದಾಜಿಸಲಾಗಿದೆ.

ಆರೋಪಿಗಳ ಹಿನ್ನೆಲೆ: ಅಬ್ದುಲ್ ಹಾಪೀಲ್ ಈ ಹಿಂದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣ ದಾಖಲಾಗಿತ್ತು. ಜಿಯಾವುಲ್ ಹಕ್ ದುಬೈನ ರಸ್-ಅಲ್-ಖೈಮಾನಲ್ಲಿ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿ ಭಾರತಕ್ಕೆ ಮರಳಿದ್ದ. ಅಲ್ಲದೆ, ಅಲ್ತಾಫ್ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆ ಪ್ರಕರಣ ದಾಖಲಾಗಿದೆ.

ಈ ಮಾದಕ ಜಾಲದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರಿಗೆ ಆಘಾತ ನೀಡಿದೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES