ಲವ್ ಅಫೇರ್‌ಗೆ ಅಜ್ಜಿ ಅಡ್ಡಿ : ಪ್ರಿಯಕರನ ಜೊತೆ ಸೇರಿ ವೃದ್ಧೆಯನ್ನೇ ಮುಗಿಸಿದ ಮೊಮ್ಮಗಳು
ಪ್ರೀತಿಯ ಅಮಲಿಗೆ ಬಿದ್ದ ಸ್ವಂತ ಮೊಮ್ಮಗಳೇ ಅಜ್ಜಿಯ ಪ್ರಾಣ ತೆಗೆದಿರುವ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಪ್ರೀತಿ ವಿಚಾರದಲ್ಲಿ ಅಜ್ಜಿ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ, ಪ್ರಿಯಕರನ ಜೊತೆ ಸೇರಿ ಅಜ್ಜಿಯನ್ನೇ ಹತ್ಯೆ ಮಾಡಿರುವ ಆಘಾತಕಾರಿ ಪ್ರಕರಣ ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನಡೆದಿದೆ.. ಈ ಕುರಿತ ರೋಚಕ ಸ್ಟೋರಿ ಇಲ್ಲಿದೆ..
ಮಂಡ್ಯ : ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿ ಪ್ರೀತಿಗಾಗಿ ನಡೆದ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೀತಿಗೆ ಅಜ್ಜಿ ಅಡ್ಡಿಯಾಗಿದ್ದಾಳೆ ಎಂಬ ಕಾರಣಕ್ಕೆ, ಪ್ರಿಯಕರನ ಜೊತೆ ಸೇರಿ ಸ್ವಂತ ಮೊಮ್ಮಗಳೇ ಅಜ್ಜಿಯನ್ನು ಕೊಲೆ ಮಾಡಿರುವ ಭೀಕರ ಕೃತ್ಯ ನಡೆದಿದೆ.
ಮೃತಪಟ್ಟ ವೃದ್ಧೆಯನ್ನು ಮಹದೇವಮ್ಮ (52) ಎಂದು ಗುರುತಿಸಲಾಗಿದೆ. ಕೊಲೆಗೈದ ಅಪ್ರಾಪ್ತೆ ಕೀರ್ತನಾ (16) ಹಾಗೂ ಆಕೆಯ ಪ್ರಿಯಕರ ಆಕಾಶ್ ವಿರುದ್ಧ ಪ್ರಕರಣ ದಾಖಲಾಗಿದೆ. ಕೀರ್ತನಾಳ ಪ್ರೀತಿಯನ್ನು ಅಜ್ಜಿ ಮಹದೇವಮ್ಮ ಬಲವಾಗಿ ವಿರೋಧಿಸಿದ್ದೇ ಹತ್ಯೆಗೆ ಕಾರಣ ಎನ್ನಲಾಗಿದೆ.
ಲವ್ ವಿಚಾರದಲ್ಲಿ ಅಜ್ಜಿ ತಮಗೆ ಅಡ್ಡ ಬರುತ್ತಿದ್ದಾಳೆ ಎಂದು ಕೋಪಗೊಂಡ ಕೀರ್ತನಾ, ಪ್ರಿಯಕರ ಆಕಾಶ್ ಜೊತೆ ಸೇರಿ ವೃದ್ಧೆಯನ್ನು ಮುಗಿಸಲು ಸಂಚು ರೂಪಿಸಿದ್ದಳು. ಪ್ಲಾನ್ ಪ್ರಕಾರ ಆಕಾಶ್‌ನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ. ರಾತ್ರಿ ವೇಳೆ ಮಲಗಿದ್ದ ಅಜ್ಜಿ ಮಹದೇವಮ್ಮನ ಮೇಲೆ ದಾಳಿ ನಡೆಸಿ, ಆಕಾಶ್ ಉಸಿರುಗಟ್ಟಿಸಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಘಟನೆ ಬಳಿಕ ಆರೋಪಿ ಆಕಾಶ್ ತಲೆಮರೆಸಿಕೊಂಡಿದ್ದಾನೆ. ಈ ಸಂಬಂಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಡ್ಯ ಎಸ್ಪಿ ಶೋಭಾರಾಣಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.