ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ತಪ್ಪಿದ ಭಾರಿ ಅನಾಹುತ; ಡಿಪೋ ಗೇಟ್‌ಗೆ ಡಿಕ್ಕಿ ಹೊಡೆದ KSRTC ಬಸ್
ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಸಾರಿಗೆ ಬಸ್ ನಿಂತಿತ್ತು. ಈ ವೇಳೆ ಬಸ್‌ನ ಚಾಲಕ ವಾಹನವನ್ನು ನಿಲ್ಲಿಸಿ ಸ್ವಲ್ಪ ದೂರ ತೆರಳಿದ್ದರು.
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಒಂದೇ ಏಕಾಏಕಿ ಹಿಮ್ಮುಖವಾಗಿ ಚಲಿಸಿ ಡಿಪೋದ ಗೇಟ್‌ಗೆ ಡಿಕ್ಕಿ ಹೊಡೆದ ಘಟನೆ ಸೋಮವಾರ ನಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ದೊಡ್ಡ ಮಟ್ಟದ ಅನಾಹುತ ಸಂಭವಿಸದೆ, ಪ್ರಯಾಣಿಕರು ಮತ್ತು ಸಾರ್ವಜನಿಕರು ದೊಡ್ಡ ಗಂಡದಿಂದ ಪಾರಾಗಿದ್ದಾರೆ.
ಲಭ್ಯವಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಂದ ತುಂಬಿದ್ದ ಸಾರಿಗೆ ಬಸ್ ನಿಂತಿತ್ತು. ಈ ವೇಳೆ ಬಸ್‌ನ ಚಾಲಕ ವಾಹನವನ್ನು ನಿಲ್ಲಿಸಿ ಸ್ವಲ್ಪ ದೂರ ತೆರಳಿದ್ದರು. ಹಾಗೂ ನಿರ್ವಾಹಕರು ಬಸ್‌ನ ಡ್ಯೂಟಿ ಎಂಟ್ರಿ (ಕರ್ತವ್ಯದ ನೊಂದಣಿ) ಮಾಡಿಸಲು ಹೋಗಿದ್ದರು. ಬಸ್‌ನಲ್ಲಿ ಯಾವುದೇ ಸಿಬ್ಬಂದಿ ಇಲ್ಲದ ಸಂದರ್ಭದಲ್ಲಿ, ಪ್ರಯಾಣಿಕರೊಬ್ಬರು ಬಸ್ ಹತ್ತುವ ಯತ್ನ ನಡೆಸಿದ್ದಾರೆ.
ಘಟನೆಗೆ ಮಹಿಳಾ ಪ್ರಯಾಣಿಕರೊರ್ವರ ಎಡವಟ್ಟು ಕಾರಣ ಎಂಬ ಮಾಹಿತಿ ಲಭ್ಯವಾಗಿದೆ. ಬಸ್‌ನ ಚಾಲಕನ ಬಾಗಿಲಿನ (ಡೋರ್) ಮೂಲಕ ಒಳಗೆ ಏರಿದ ಆ ಮಹಿಳೆ, ಆಕಸ್ಮಿಕವಾಗಿ ಕ್ಲಚ್ ಮೇಲೆ ಕಾಲಿಟ್ಟಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ನಿಂತಿದ್ದ ಬಸ್ ಏಕಾಏಕಿ ಹಿಮ್ಮುಖವಾಗಿ (ರಿವರ್ಸ್) ಚಲಿಸಲು ಪ್ರಾರಂಭಿಸಿದೆ. ಬಸ್ ದಿಢೀರ್ ಚಲಿಸುವುದನ್ನು ಕಂಡ ಪ್ರಯಾಣಿಕರು ಮತ್ತು ಸುತ್ತಮುತ್ತಲಿನ ಜನರು ಜೀವಭಯದಿಂದ ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿ ಸರಿದಿದ್ದಾರೆ.
ಚಾಲಕ ಹಾಗೂ ನಿರ್ವಾಹಕರಹಿತ ಬಸ್ ಸುಮಾರು ದೂರ ಹಿಮ್ಮುಖವಾಗಿ ಸಾಗಿ, ಕೊನೆಗೆ ಬಸ್ ನಿಲ್ದಾಣದ ಬಳಿಯಿದ್ದ ಡಿಪೋ ಗೇಟ್‌ಗೆ ಜೋರಾಗಿ ಡಿಕ್ಕಿ ಹೊಡೆದು ನಿಂತಿದೆ. ಬಸ್‌ನಲ್ಲಿದ್ದ ಇತರ ಪ್ರಯಾಣಿಕರು ಮತ್ತು ನಿಲ್ದಾಣದಲ್ಲಿದ್ದ ಸಾರ್ವಜನಿಕರು ಈ ಅನಿರೀಕ್ಷಿತ ಘಟನೆಯಿಂದ ತೀವ್ರ ಭಯಭೀತರಾದರು.
ಬಸ್ ಗೇಟ್‌ಗೆ ಡಿಕ್ಕಿ ಹೊಡೆದು ನಿಲ್ಲುತ್ತಿದ್ದಂತೆ, ಗಾಬರಿಗೊಂಡ ಆ ಮಹಿಳಾ ಪ್ರಯಾಣಿಕರು ತಕ್ಷಣವೇ ಬಸ್‌ನಿಂದ ಕೆಳಗೆ ಇಳಿದು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಈ ಘಟನೆಯಿಂದಾಗಿ ಬಸ್ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸದಿರುವುದು ಎಲ್ಲರೂ ನಿಟ್ಟುಸಿರುಬಿಡುವಂತೆ ಮಾಡಿದೆ.