ಚಿಕ್ಕಬಳ್ಳಾಪುರ: ಬಯಲುಸೀಮೆಯ ಜಿಲ್ಲೆ ಚಿಕ್ಕಬಳ್ಳಾಪುರದಲ್ಲಿ ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಜಿಲ್ಲಾದ್ಯಂತ ದಟ್ಟ ಮಂಜು ಆವರಿಸಿದೆ. ಕಣ್ಣಾಯಿಸಿದಷ್ಟು ದೂರ ಬರೀ ಮಂಜು ಮಂಜು ಮಂಜು ಕಾಣುತ್ತಿದ್ದು, ಬಯಲುಸೀಮೆಯ ಈ ಜಿಲ್ಲೆ ಅಕ್ಷರಶಃ ಮಲೆನಾಡು ಅಥವಾ ಊಟಿಯಂತೆ ಭಾಸವಾಗುತ್ತಿದೆ. ಪ್ರಮುಖವಾಗಿ ಚಿಂತಾಮಣಿ ನಗರಕ್ಕೆ ಮಂಜು ದಿಗ್ಬಂಧನ ಹಾಕಿದಂತಿದ್ದು, ಇಡೀ ನಗರ ಮಂಜಿನ ಮುಸುಕಿನಲ್ಲಿ ಮುಳುಗಿಹೋಗಿದೆ.
ಸಾಮಾನ್ಯವಾಗಿ ಬೆಳಗ್ಗೆ 6 ಅಥವಾ 7 ಗಂಟೆಯ ಹೊತ್ತಿಗೆ ಮಂಜು ಕರಗಿ ಸೂರ್ಯನ ಕಿರಣಗಳು ಭೂಮಿಗೆ ಬೀಳುತ್ತವೆ. ಆದರೆ ಇಂದು ಬೆಳಗ್ಗೆ 8 ಗಂಟೆ ಕಳೆದರೂ ದಟ್ಟ ಮಂಜು ಕರಗದ ಹಿನ್ನೆಲೆಯಲ್ಲಿ ಚಳಿಯ ತೀವ್ರತೆ ವಿಪರೀತವಾಗಿದೆ. ಮೋಡ ಕವಿದ ವಾತಾವರಣ ಮತ್ತು ದಟ್ಟ ಹಿಮದಿಂದಾಗಿ ಸೂರ್ಯನ ದರ್ಶನವೇ ಇಲ್ಲದಂತಾಗಿದ್ದು, ಜನರು ಬಿಸಿಲಿಗಾಗಿ ಕಾಯುವಂತಾಗಿದೆ. ಮೈಕೊರೆಯುವ ಚಳಿ ಹಾಗೂ ಮಂಜಿನಿಂದಾಗಿ ಬೆಳಗಿನ ವಾಯುವಿಹಾರಕ್ಕೆ ಹೋಗುವವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಕೂಲಿ ಕಾರ್ಮಿಕರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಹಲವೆಡೆ ಜನರು ಚಳಿಯಿಂದ ರಕ್ಷಣೆ ಪಡೆಯಲು ಬೆಂಕಿ ಕಾಯಿಸಿಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.
ದಟ್ಟ ಮಂಜಿನಿಂದಾಗಿ ರಸ್ತೆ ಕಾಣದೆ ವಾಹನ ಸವಾರರು ತೀವ್ರ ಪರದಾಟ ನಡೆಸುತ್ತಿದ್ದಾರೆ. ಮುಂದೆ ಬರುವ ವಾಹನಗಳು ಕಾಣಿಸದಷ್ಟು ದಟ್ಟವಾಗಿ ಮಂಜು ಆವರಿಸಿರುವುದರಿಂದ, ಹಗಲಿನಲ್ಲೇ ವಾಹನ ಸವಾರರು ಹೆಡ್‌ಲೈಟ್‌ಗಳನ್ನು ಹಾಕಿಕೊಂಡು ನಿಧಾನಗತಿಯಲ್ಲಿ ಸಂಚರಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಚಿಂತಾಮಣಿ-ಚಿಕ್ಕಬಳ್ಳಾಪುರ ಸಂಪರ್ಕ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಅಪಘಾತಗಳನ್ನು ತಪ್ಪಿಸಲು ಚಾಲಕರು ಇಂಡಿಕೇಟರ್ ಮತ್ತು ಹೆಡ್‌ಲೈಟ್ ಬಳಸಿ ಎಚ್ಚರಿಕೆಯಿಂದ ವಾಹನ ಚಲಾಯಿಸುತ್ತಿದ್ದಾರೆ.
ಚಿಂತಾಮಣಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ದಟ್ಟ ಮಂಜು ಆವರಿಸಿರುವುದರಿಂದ ದೈನಂದಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೆಳಗಿನ ಜಾವ ಹಾಲು, ತರಕಾರಿ, ಪತ್ರಿಕೆ ವಿತರಿಸುವವರು ಹಾಗೂ ಮಾರುಕಟ್ಟೆಗೆ ಬರುವ ರೈತರು ತೀವ್ರ ತೊಂದರೆ ಅನುಭವಿಸಿದ್ದಾರೆ. ಒಂದೆಡೆ ಈ ಮಂಜಿನ ವಾತಾವರಣ ಪ್ರಕೃತಿ ಪ್ರಿಯರಿಗೆ ಮುದ ನೀಡುತ್ತಿದ್ದರೆ, ಮತ್ತೊಂದೆಡೆ ವಾಹನ ಸವಾರರು ಹಾಗೂ ದೈನಂದಿನ ಕೆಲಸಗಳಿಗೆ ತೆರಳುವವರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿಯ ಚಳಿ ಮತ್ತು ಮಂಜಿನ ವಾತಾವರಣ ಮುಂದುವರಿಯುವ ಸಾಧ್ಯತೆಯಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.