SOCIAL MEDIA

Newsletter

PARTNER SITES
Select Language Select State

ಬಾಗಲಕೋಟೆ, ಮೈಸೂರು ಸೇರಿ 5 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ: ಬಾಲಕನ ಜೇಬಿನಲ್ಲಿತ್ತು ಕಂತೆ ಕಂತೆ ನೋಟು!

ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಿಗ್ಗೆ ಲೋಕಾಯುಕ್ತ ಶಾಕ್‌ ನೀಡಿದ್ದು ಮೈಸೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ಲೋಕಾಯುಕ್ತ ತಂಡದಿಂದ ದಾಳಿ ನಡೆಸಲಾಗಿದೆ.

Written By Yashaswini V
Published: Nov 18, 2026, 11:52 IST | Updated: Nov 18, 2026, 13:02 IST
Join

ಭ್ರಷ್ಟ ಅಧಿಕಾರಿಗಳಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್‌ ನೀಡಿದ್ದು ಬಾಗಲಕೋಟೆ, ಮೈಸೂರು ಸೇರಿ ರಾಜ್ಯ 5 ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದ ಮೇಲೆ ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ಅಧಿಕಾರಿಯ ಮಗನ ಪ್ಯಾಂಟ್‌ ಜೇಬಿನಲ್ಲಿ ಕಂತೆ ಕಂತೆ ನೋಟುಗಳಿರುವುದು ಪತ್ತೆ ಆಗಿದೆ.

ಎಲ್ಲೆಲ್ಲಿ ಲೋಕಾಯುಕ್ತ ದಾಳಿ?
ಇಂದು (ನ. 18) ರಾಜ್ಯದ ಐದು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಟೀಂ ದಾಳಿ ನಡೆಸಿದೆ. ಬಾಗಲಕೋಟೆ, ಹುಬ್ಬಳ್ಳಿ, ಬೀದರ್‌, ಮೈಸೂರು ಹಾಗೂ ಹಾಸನ ಜಿಲ್ಲೆಗಳ ಭ್ರಷ್ಟ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ತಂಡ ದಾಳಿ ನಡೆಸಿದೆ. ಅದರ ವಿವರ ಈ ಕೆಳಕಂಡಂತಿದೆ..

ಬಾಗಲಕೋಟೆಯಲ್ಲಿ ಲಂಚಕೋರ ಅಧಿಕಾರಿಗೆ ಲೋಕಾ ಶಾಕ್!
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕು ಪಂಚಾಯತ್ ಇಲಾಖೆ ಪಂಚಾಯತ್ ರಾಜ್ ವಿಭಾಗದ ಎಡಿ‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸಂಜೀವ ಹಿಪ್ಪರಗಿ ಅವರ ಮನೆ ಮೇಲೆ ಲೋಕಾಯುಕ್ತ ರೇಡ್‌ ಮಾಡಿದೆ. ಸಂಜೀವ ಹಿಪ್ಪರಗಿ ಅವರ ಜಮಖಂಡಿಯ ಎರಡು ಮನೆಗಳ ಮೇಲೆ ಲೋಕಾ ರೇಡ್ ನಡೆಸಿದ್ದು, ವಿಜಯನಗರ ಹಾಗೂ ಮೈಗೂರು ರಸ್ತೆ ಮನೆಗಳಲ್ಲಿಯೂ ಸುಮಾರು ಏಳು ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ಮಾಡಿ, ಶೋಧ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸಾರಿಗೆ ಇಲಾಖೆ ನೌಕರನಿಗೆ ಲೋಕಾಯುಕ್ತ ಬಿಸಿ ತುಪ್ಪ!
ಹುಬ್ಬಳ್ಳಿಯಲ್ಲಿ ಎನ್‌ಡಬ್ಲ್ಯೂಕೆಎಸ್‌ಆರ್‌ಟಿಸಿ (NWKSRTC) ಚಾಲಕ ಕಂ ನಿರ್ವಾಹಕ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದನೆ ಆರೋಪ ಕೇಳಿಬಂದಿರುವ ಹಿನ್ನಲೆಯಲ್ಲಿ ಗಾಂಧಿನಗರದ ನೌಕರ ಷಡಕ್ಷರಯ್ಯ ನಿವಾಸದ ಮೇಲೆ ಧಾರವಾಡ ಲೋಕಾ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದಲ್ಲಿ ದಾಳಿ ನಡೆಸಿರುವ ಲೋಕಾ ಅಧಿಕಾರಿಗಳು ಅವರ ಆಸ್ತಿ ಹಾಗೂ ದಾಖಲೆ ಪತ್ರಗಳನ್ನು ಪರಿಶೀಲನೆ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬೀದರ್‌ನಲ್ಲಿ ಬೆಳ್ಳಂಬೆಳಿಗ್ಗೆ ಲೊಕಾಯುಕ್ತ ದಾಳಿ: 
ಬೀದರ್‌ ಜಿಲ್ಲೆಯಲ್ಲೂ ಬ್ರಿಮ್ಸ್ ನರ್ಸಿಂಗ್ ಕಾಲೇಜು ಪ್ರಿನ್ಸಿಪಲ್‌ಗೆ ಲೋಕಾ‌ ಶಾಕ್ ನೀಡಿದ್ದು, ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಹಿನ್ನೆಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ರೇಡ್ ಮಾಡಿದ್ದಾರೆ. ಬೀದರ್ ನಗರದ ಗುರುನಾಕ ಕಾಲನಿಯಲ್ಲಿರುವ ಬ್ರಿಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ರಾಜ್‌ಕುಮಾರ್ ಮಾಳಗೆ ಎಂಬುವವರ ಮನೆ ಮೇಲೆ 
ಲೋಕಾಯುಕ್ತ ಎಸ್‌ಪಿ ಸಿದ್ದರಾಜು, ಡಿವೈಎಸ್‌ಪಿ ಹನುಮಂತರಾಯ್ ನೇತೃತ್ವದಲ್ಲಿ ದಾಳಿ ನಡೆಸಿದೆ. ಕೋಳಾರ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಶೆಡ್, ಬೆಂಗಳೂರಿನಲ್ಲಿರುವ ಮನೆ, ಬೀದರ್‌ನ ಶಿವನಗರದಲ್ಲಿರುವ ಮಿಲೇನಿಯಮ್ ನರ್ಸಿಂಗ್ ಕಾಲೇಜ್ ಕಚೇರಿ ಸೇರಿ 5 ಕಡೆ ಏಕಕಾಲಕ್ಕೆ ದಾಳಿ ಮಾಡಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಹಾಸನದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದ ಅರಣ್ಯಾಧಿಕಾರಿ ಹೇಮಂತ್:
ಹಾಸನದಲ್ಲಿ ಆರ್‌ಎಫ್‌ಒ ಹೇಮಂತ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಹೇಮಂತ್‌ ಮಗನ ಪ್ಯಾಂಟ್‌ ಜೇಬಿನಲ್ಲಿ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ ಎನ್ನಲಾಗಿದೆ. ಚಿಕ್ಕಹೊನ್ನೇನಹಳ್ಳಿಯ ಅರಣ್ಯಾಧಿಕಾರಿ ಹೇಮಂತ್ ಮನೆ ಮೇಲೆ ಲೋಕಾ ರೇಡ್ ನಡೆಸಿದ್ದು, ಆರೋಪಿ ಹೇಮಂತ್‌ಗೆ ಸಂಬಂಧಿಸಿದ ಒಟ್ಟು 5 ಕಡೆ ದಾಳಿ ಮಾಡಿದ್ದಾರೆ. RFO ಸ್ನೇಹಿತ, ಗುತ್ತಿಗೆದಾರ ಹರೀಶ್ ಮನೆಯಲ್ಲೂ ರೇಡ್‌ ನಡೆಸಿರುವ ಲೋಕಾ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.

ಶಾಲಾ ಬಾಲಕನ ಜೇಬಿನಲ್ಲಿ ಬರೋಬ್ಬರಿ ಒಂದು ಲಕ್ಷ ಹಣ ಪತ್ತೆ!
ಲೋಕಾಯುಕ್ತ ಎಸ್‌ಪಿ ನಂದಿನಿ ನೇತೃತ್ವದಲ್ಲಿ ನಡೆದ ಭರ್ಜರಿ ದಾಳಿ ಸಂದರ್ಭದಲ್ಲಿ ಶಾಲೆಗೆ ಹೊರಟ ಮಗನ ಪ್ಯಾಂಟ್ ಪಾಕೆಟ್‌ನಲ್ಲಿ 1 ಲಕ್ಷ ಹಣ ಪತ್ತೆಯಾಗಿದೆ. ಬಾಲಕನ ಜೇಬಿನಲ್ಲಿ ಪತ್ತೆಯಾದ ಅಕ್ರಮ ಹಣ ಅಧಿಕಾರಿಯ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದಂತಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಈ ಹಣವನ್ನು ವಶಕ್ಕೆ ಪಡೆದಿದ್ದಾರೆ.

ಮೈಸೂರಿನಲ್ಲಿ ಭ್ರಷ್ಟ ಅರಣ್ಯಾಧಿಕಾರಿಗೆ ಲೋಕಾ ಶಾಕ್:
ಮೈಸೂರಿನಲ್ಲಿ ಸಹ ಅರಣ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ರೇಡ್‌ ನಡೆದಿದೆ. ಅರಣ್ಯಾಧಿಕಾರಿ ಸುರೇಂದ್ರ ಮನೆ ಮೇಲೆ ಲೋಕಾ ದಾಳಿ ನಡೆದಿದ್ದು ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಅಧಿಕಾರಿ ಬಲೆಗೆ ಬಿದ್ದಿದ್ದಾರೆ. ಅರಣ್ಯಭವನದ RFO ಸುರೇಂದ್ರ ಕಚೇರಿ ಮೇಲೆ ರೇಡ್ ಮಾಡಿರುವ ಲೋಕಾ ಅಧಿಕಾರಿಗಳು, ಅವರ ಶ್ರೀರಾಂಪುರದ ನಿವಾಸ ಹಾಗೂ ಕಚೇರಿಯಲ್ಲಿ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.

ಚಾಮರಾಜನಗರ ಲೋಕಾ ಇನ್ಸ್‌ಪೆಕ್ಟರ್ ಸುಧಾಕರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ಹೆಚ್.ಡಿ.ಕೋಟೆಯ ಸಹೋದರನ ಮನೆ ಮೇಲೂ ಕಣ್ಣಿಟ್ಟಿರುವ ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆಯಿಂದಲೇ ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.  
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES