ಜಮೀನು ಹಾಗೂ ಕಬ್ಬು ಕಟಾವು ಗಲಾಟೆ : ವಿಜಯಪುರ ಜಿಲ್ಲೆಯಲ್ಲಿ ಭೀಕರ ಮಾರಾಮಾರಿ, ಇಬ್ಬರ ಸಾ*ವು
ಕಬ್ಬು ಕಟಾವು ಹಾಗೂ ಜಮೀನು ವ್ಯಾಜ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ ಇನ್ನಿಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಸಂಭವಿಸಿದೆ. ಹಾಗಾದರೆ ಈ ಘಟನೆ ನಡೆದಿದ್ದಾದರೂ ಎಲ್ಲಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್...
ವಿಜಯಪುರ : ಜಿಲ್ಲೆಯ ಕೊಲ್ಹಾರ ತಾಲೂಕಿನ ತಡಲಗಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಸಂಭವಿಸಿ ಇಬ್ಬರನ್ನ ಬರ್ಭರವಾಗಿ ಕೊಲೆ ಮಾಡಲಾಗಿದೆ. ಜಮೀನು ವಿವಾದದ ವಿಚಾರವಾಗಿ ಸಾಲವಾಡಗಿ ಕುಟುಂಬ ಹಾಗೂ ಮೇಟಿ ಕುಟುಂಬದ ಮಧ್ಯೆ ಮೊದಲಿನಿಂದಲೂ ಗಲಾಟೆ ಇತ್ತು, ಜಮೀನು ವ್ಯಾಜ್ಯದ ವಿಚಾರ ಕೋರ್ಟ್ ನಲ್ಲಿ ಕೇಸು ಕೂಡಾ ನಡೆಯುತ್ತಿತ್ತು. ಇದರ ಮಧ್ಯೆ ಸಾಲವಾಡಗಿ ಕುಟುಂಬದವರು ಇಂದು ಕಬ್ಬು ಕಡಿಯಲು ಮುಂದಾದಾಗ ಎರಡು ಗುಂಪುಗಳು ಮಧ್ಯೆ ಗಲಾಟೆ ಆರಂಭವಾಗಿ ಇಬ್ಬರನ್ನು ಬರ್ಭರವಾಗಿ ಕೊಲೆ ಮಾಡಲಾಗಿದೆ.
ಹನುಮವ್ವ ಮೇಟಿ ಎಂಬುವರ 10 ಎಕರೆ ಜಮೀನು ಸಾಲೋಡಗಿ ಕುಟುಂಬವರಿಗೆ ಜಮೀನು ಲೀಸ್ ನೀಡಿದ್ದರು. ಇಂದು ಸಾಲವಾಡಗಿ ಕುಟುಂಬದ ಹನುಮಂತ ಸಾಲವಾಡಗಿ ಹಾಗೂ ಮಂಜು ಸಾಲವಾಡಗಿ ಸ್ಥಳದಲ್ಲಿ ಸಾವನ್ನಪ್ಪಿದ್ದು ಮಲ್ಲು ಸಾಲವಾಡಗಿ ಹಾಗೂ ಮಹಾದೇವಪ್ಪ ಸಾಲವಾಡಗಿ ಎಂಬುವವರಿಗೆ ಗಾಯಗಳಾಗಿವೆ. ಇನ್ನೂ ಘಟನೆಯಲ್ಲಿ ಮೇಟಿ ಕುಟುಂಬದವರಿಗೂ ಗಾಯಗಳಾಗಿದ್ದು ಅದರಲ್ಲಿ ಆನಂದ ಹಾಗೂ ಹಿರಿಯಪ್ಪ ಎಂಬಾತರನ್ನು ತಂದು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯಲ್ಲಿ ಹತ್ಯೆ ಮಾಡಿದ್ದಾರೆ ಎನ್ನಲಾದ ಆರೋಪಿಗಳು ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿ ಇವರು ಹೇಳುವದೇ ಬೇರೆ...
ಇನ್ನು ತಡಲಗಿ ಗ್ರಾಮದ ಹನುಮವ್ವ ಮೇಟಿ ಎಂಬುವವರಿಗೆ ಸೇರಿದ 10 ಎಕರೆ ಜಮೀನನ್ನು ಅದೇ ಗ್ರಾಮದ ಸಾಲೋಟಗಿ ಕುಟುಂಬದವರು ಗುತ್ತಿಗೆ ಪಡೆದು ಕಬ್ಬು ಬೆಳೆದಿದ್ದರು. ಆದ್ರೆ, ಈ ಜಮೀನಿನಲ್ಲಿ ತಮ್ಮ ಪಾಲೂ ಇದೆ ಎಂದು ಹನುಮವ್ವ ಅವರ ಸಂಬಂಧಿಕರು ತಗಾದೆ ತೆಗೆದಿದ್ದರು. ಈ ಬಾರಿ ಕಬ್ಬು ಬೆಳೆದಿದ್ದೇವೆ, ಕಟಾವು ಮಾಡಿಕೊಂಡು ಹೋಗುತ್ತೇವೆ, ಮುಂದಿನ ಬಾರಿ ಜಮೀನು ಲೀಸ್ ಪಡೆಯುವುದಿಲ್ಲ ಎಂದು ಸಾಲವಾಡಗಿ ಕುಟುಂಬದವರು ಮನವಿ ಮಾಡಿದ್ದರು. ಆದ್ರೆ ಇದಕ್ಕೆ ಒಪ್ಪದ ಹನುಮವ್ವ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ದರು.
ಇಂದು ಸಾಲವಾಡಗಿ ಕುಟುಂಬದವರು ಕಬ್ಬು ಕಟಾವು ಮಾಡಲು ಗದ್ದೆಗೆ ತೆರಳಿದಾಗ, ಹನುಮವ್ವ ಸಂಬಂಧಿಕರು ಅಡ್ಡಗಟ್ಟಿದ್ದಾರೆ. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ನೋಡ ನೋಡುತ್ತಿದ್ದಂತೆಯೇ ಕೈ-ಕೈ ಮಿಲಾಯಿಸಿ, ಕಲ್ಲು, ಕಟ್ಟಿಗೆ ಹಾಗೂ ಬೊಂಬುಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಹಲ್ಲೆಯ ತೀವ್ರತೆಗೆ ಸಾಲವಾಡಗಿ ಕುಟುಂಬದ ಹನುಮಂತ ಹಾಗೂ ಮಂಜು ಎಂಬಾತರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ವಿಜಯಪುರ ನಗರದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ...
ಘಟನೆ ನಡೆಯುತ್ತಿದ್ದಂತೆ ಕೊಲ್ಹಾರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣವಿದ್ದು, ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ತಲೆ ಮರೆಸಿಕೊಂಡ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.