ಫೈವ್ ಸ್ಟಾರ್ ಹೋಟೆಲ್ನಲ್ಲಿ ಅಭ್ಯರ್ಥಿಗಳಿಗೆ ಪರೀಕ್ಷೆ! ಇಡಿ ತನಿಖೆಯಲ್ಲಿ ಬಯಲಾಯ್ತು KPSC ನೇಮಕಾತಿ ಅಕ್ರಮದ ಸ್ಫೋಟಕ ರಹಸ್ಯ!
ಕೆಪಿಎಸ್ಸಿ ಅಕ್ರಮ ನೇಮಕಾತಿ ಹಗರಣದ ಸಂಬಂಧ ಇಡಿ ತನಿಖೆಯಲ್ಲಿ ಹಲವು ಆಘಾತಕಾರಿ ಆರೋಪಗಳು ಬೆಳಕಿಗೆ ಬಂದಿವೆ. ಕೆಲ ಅಭ್ಯರ್ಥಿಗಳಿಗೆ ಫೈವ್ ಸ್ಟಾರ್ ಹೋಟೆಲ್ನಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ಬರೆಸಲಾಗಿದ್ದು, ಉತ್ತರಗಳ ಚೀಟಿ ನೀಡಿದರೂ ಪರೀಕ್ಷೆ ಬರೆಯಲು ಸಾಧ್ಯವಾಗದವರಿಗೆ ಪ್ರಶ್ನೆಪತ್ರಿಕೆ ಮತ್ತು ಒಎಂಆರ್ ಶೀಟ್ ನೀಡಿ ಪರೀಕ್ಷೆ ನಡೆಸಿರುವ ಆರೋಪ ಕೇಳಿಬಂದಿದೆ. ಇಂಗ್ಲಿಷ್ನಲ್ಲಿ ತಮ್ಮ ಹೆಸರು, ವಿಳಾಸ ಬರೆಯಲು ಸಾಧ್ಯವಾಗದ ವ್ಯಕ್ತಿಗಳೂ ಸರ್ಕಾರಿ ಉದ್ಯೋಗ ಪಡೆದಿರುವ ಕುರಿತು ಅನುಮಾನ ವ್ಯಕ್ತವಾಗಿದ್ದು, ಈ ಅಕ್ರಮದಲ್ಲಿ ಕೆಪಿಎಸ್ಸಿಯ ಕೆಲ ಸದಸ್ಯರ ಪಾತ್ರದ ಬಗ್ಗೆಯೂ ಇಡಿ ತನಿಖೆ ಮುಂದುವರಿಸಿದೆ.
KPSC Recruitment Scam: ಕರ್ನಾಟಕ ಲೋಕಸೇವಾ ಆಯೋಗದ (KPSC) ಅಕ್ರಮ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ನಡೆಸುತ್ತಿರುವ ತನಿಖೆಯಲ್ಲಿ ಮತ್ತಷ್ಟು ಆಘಾತಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ ಎನ್ನಲಾಗಿದೆ. ಸರ್ಕಾರಿ ಉದ್ಯೋಗ ಪಡೆಯಲು ಅಭ್ಯರ್ಥಿಗಳು ವರ್ಷಗಟ್ಟಲೆ ಕಠಿಣ ಪರಿಶ್ರಮ ಪಡುತ್ತಿದ್ದರೆ, ಮತ್ತೊಂದೆಡೆ ಕೆಲ ಅಭ್ಯರ್ಥಿಗಳಿಗೆ ಐಷಾರಾಮಿ ಫೈವ್ ಸ್ಟಾರ್ ಹೋಟೆಲ್ನಲ್ಲಿ ಪ್ರತ್ಯೇಕವಾಗಿ ಪರೀಕ್ಷೆ ಬರೆಸಿ ಸರ್ಕಾರಿ ಉದ್ಯೋಗ ಕೊಡಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಈ ಅಕ್ರಮದಲ್ಲಿ ಕೆಪಿಎಸ್ಸಿಯ ಕೆಲ ಸದಸ್ಯರೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಇಡಿ ಅಧಿಕಾರಿಗಳು ತನಿಖೆಯನ್ನ ತೀವ್ರಗೊಳಿಸಿದ್ದಾರೆ.
ಫೈವ್ ಸ್ಟಾರ್ ಹೋಟೆಲ್ನಲ್ಲೇ ಅಭ್ಯರ್ಥಿಗಳಿಗೆ ಪರೀಕ್ಷೆ!
ಕೆಪಿಎಸ್ಸಿ ನೇಮಕಾತಿ ಅಕ್ರಮದ ತನಿಖೆ ವೇಳೆ ಪರೀಕ್ಷೆ ನಡೆಸಿದ ವಿಧಾನವೇ ಅಧಿಕಾರಿಗಳನ್ನ ಬೆಚ್ಚಿಬೀಳಿಸುವಂತಿದೆ. ಆರೋಪದ ಪ್ರಕಾರ, ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮವಾಗಿ ಆಯ್ಕೆಯಾಗಬೇಕಿದ್ದ ಕೆಲ ಅಭ್ಯರ್ಥಿಗಳನ್ನ ಖಾಸಗಿ ಐಷಾರಾಮಿ ಹೋಟೆಲ್ಗೆ ಕರೆಸಿಕೊಂಡು ಪ್ರತ್ಯೇಕವಾಗಿ ಪರೀಕ್ಷೆ ಬರೆಸಲಾಗಿತ್ತು. ವಿಶೇಷವೆಂದರೆ ಈ ಪ್ರಕ್ರಿಯೆ ಕೆಪಿಎಸ್ಸಿಯ ಕೆಲ ಸದಸ್ಯರ ಸಮ್ಮುಖದಲ್ಲೇ ನಡೆದಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಸಾಮಾನ್ಯವಾಗಿ ಅಭ್ಯರ್ಥಿಗಳು ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ನಿಯಮಗಳಡಿ ಪರೀಕ್ಷೆ ಬರೆಯಬೇಕಾಗುತ್ತದೆ. ಆದರೆ ಇಲ್ಲಿ ಕೆಲ ಅಭ್ಯರ್ಥಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಿ, ಪ್ರಶ್ನೆಪತ್ರಿಕೆ ಹಾಗೂ ಒಎಂಆರ್ ಶೀಟ್ಗಳನ್ನ ನೀಡಿ ಪರೀಕ್ಷೆ ಬರೆಸಿರುವ ಆರೋಪ ತನಿಖೆಯಲ್ಲಿ ಕೇಳಿಬಂದಿದೆ.
ಉತ್ತರಗಳ ಚೀಟಿ ಕೊಟ್ಟರೂ ಪರೀಕ್ಷೆ ಬರೆಯಲಾಗದ ಅಭ್ಯರ್ಥಿಗಳು!
ತನಿಖೆಯಲ್ಲಿ ಹೊರಬಂದಿರುವ ಮತ್ತೊಂದು ಆಘಾತಕಾರಿ ಸಂಗತಿಯೆಂದರೆ, ಆರಂಭದಲ್ಲಿ ಕೆಲ ಅಭ್ಯರ್ಥಿಗಳಿಗೆ ಪರೀಕ್ಷೆಗೂ ಮೊದಲೇ ಉತ್ತರಗಳನ್ನ ಚೀಟಿಯಲ್ಲಿ ಬರೆದು ನೀಡಲಾಗಿತ್ತು ಎನ್ನುವುದು. ಆ ಚೀಟಿಯಲ್ಲಿದ್ದ ಉತ್ತರಗಳನ್ನ ಒಎಂಆರ್ ಶೀಟ್ನಲ್ಲಿ ಗುರುತಿಸುವಂತೆ ಸೂಚಿಸಲಾಗಿತ್ತು ಎಂಬ ಆರೋಪವಿದೆ. ಆದರೆ ಕೆಲ ಅಭ್ಯರ್ಥಿಗಳಿಗೆ ನೀಡಿದ್ದ ಉತ್ತರಗಳನ್ನ ಸರಿಯಾಗಿ ಗುರುತಿಸಲು ಕೂಡ ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಇದರಿಂದ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪಿಗಳು ಮತ್ತೊಂದು ಯೋಜನೆ ರೂಪಿಸಿದ್ದರು. ಅಂತಹ ಅಭ್ಯರ್ಥಿಗಳನ್ನ ಖಾಸಗಿ ಹೋಟೆಲ್ಗೆ ಕರೆದುಕೊಂಡು ಹೋಗಿ, ಅಲ್ಲಿಯೇ ಪ್ರಶ್ನೆಪತ್ರಿಕೆ ಮತ್ತು ಒಎಂಆರ್ ಶೀಟ್ಗಳನ್ನ ನೀಡಿ ಪರೀಕ್ಷೆ ಬರೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಒಎಂಆರ್ ಶೀಟ್ಗಳ ಮೌಲ್ಯಮಾಪನದಲ್ಲೂ ಅಕ್ರಮ?
ಹೋಟೆಲ್ನಲ್ಲಿ ಪರೀಕ್ಷೆ ಬರೆಸಿದ ಬಳಿಕ ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನ ಅಧಿಕೃತ ಪರೀಕ್ಷಾ ಪ್ರಕ್ರಿಯೆಯ ಭಾಗವಾಗಿ ಸೇರಿಸಿರುವ ಆರೋಪವೂ ಕೇಳಿಬಂದಿದೆ. ಈ ಪ್ರಕ್ರಿಯೆಯಲ್ಲಿ ಜ್ಞಾನೇಂದ್ರಕುಮಾರ್ ಎಂಬವರ ಪಾತ್ರದ ಬಗ್ಗೆಯೂ ತನಿಖೆಯಲ್ಲಿ ಮಾಹಿತಿ ಲಭ್ಯವಾಗಿದೆ ಎನ್ನಲಾಗಿದೆ. ಅವರ ಮೂಲಕ ಅಭ್ಯರ್ಥಿಗಳ ಒಎಂಆರ್ ಶೀಟ್ಗಳನ್ನ ಪಟ್ಟಿಯಲ್ಲಿ ಸೇರಿಸಿ, ಯಾರಿಗೂ ಅನುಮಾನ ಬಾರದಂತೆ ಮೌಲ್ಯಮಾಪನಕ್ಕೆ ಒಳಪಡಿಸಲಾಗಿತ್ತು ಎಂಬ ಆರೋಪವಿದೆ. ಈ ಮೂಲಕ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳನ್ನ ದುರುಪಯೋಗಪಡಿಸಿಕೊಂಡು ಅನರ್ಹ ಅಭ್ಯರ್ಥಿಗಳ ಆಯ್ಕೆಗೆ ಅವಕಾಶ ಮಾಡಿಕೊಡಲಾಗಿದೆಯೇ ಎಂಬುದನ್ನ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇಂಗ್ಲಿಷ್ನಲ್ಲಿ ಹೆಸರು, ವಿಳಾಸ ಬರೆಯಲು ಬಾರದವರಿಗೂ ಸರ್ಕಾರಿ ಉದ್ಯೋಗ!
ಈ ಪ್ರಕರಣದಲ್ಲಿ ಅತ್ಯಂತ ಅಚ್ಚರಿ ಮೂಡಿಸಿರುವ ಸಂಗತಿಯೆಂದರೆ, ಇಂಗ್ಲಿಷ್ನಲ್ಲಿ ತಮ್ಮ ಹೆಸರು ಮತ್ತು ವಿಳಾಸವನ್ನ ಬರೆಯಲು ಸಾಧ್ಯವಾಗದ ಕೆಲ ವ್ಯಕ್ತಿಗಳೂ ಸರ್ಕಾರಿ ಉದ್ಯೋಗ ಪಡೆದಿದ್ದಾರೆ ಎಂಬ ಆರೋಪ. ಇಡಿ ಅಧಿಕಾರಿಗಳ ಪರಿಶೀಲನೆ ವೇಳೆ ಉದ್ಯೋಗ ಪಡೆದ ವ್ಯಕ್ತಿಯೊಬ್ಬರಿಗೆ ಇಂಗ್ಲಿಷ್ನಲ್ಲಿ ತಮ್ಮ ಹೆಸರು ಹಾಗೂ ವಿಳಾಸವನ್ನ ಬರೆದು ನೀಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಈ ವಿಚಾರ ಅಧಿಕಾರಿಗಳ ಅನುಮಾನಕ್ಕೆ ಕಾರಣವಾಗಿದ್ದು, ಆ ವ್ಯಕ್ತಿಯ ನೇಮಕಾತಿ ಪ್ರಕ್ರಿಯೆಯನ್ನ ಪರಿಶೀಲಿಸಿದಾಗ ಅಕ್ರಮದ ಸುಳಿವು ಲಭ್ಯವಾಗಿದೆ ಎಂದು ಹೇಳಲಾಗಿದೆ. ಇಂತಹ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೇಗೆ ಉತ್ತೀರ್ಣರಾದರು? ಅವರ ಉತ್ತರಪತ್ರಿಕೆಗಳನ್ನ ಯಾರು ಸಿದ್ಧಪಡಿಸಿದರು? ನೇಮಕಾತಿ ಪ್ರಕ್ರಿಯೆಯಲ್ಲಿ ಯಾರ್ಯಾರು ನೆರವು ನೀಡಿದರು ಎಂಬ ಪ್ರಶ್ನೆಗಳು ಇದೀಗ ತನಿಖೆಯ ಪ್ರಮುಖ ಭಾಗವಾಗಿವೆ.
ಕೆಪಿಎಸ್ಸಿ ಸದಸ್ಯರ ಪಾತ್ರದ ಬಗ್ಗೆ ಇಡಿ ತನಿಖೆ
ಈ ಅಕ್ರಮದಲ್ಲಿ ಕೆಪಿಎಸ್ಸಿಯ ಕೆಲ ಸದಸ್ಯರು ಭಾಗಿಯಾಗಿರುವ ಸಾಧ್ಯತೆ ಕುರಿತು ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಸಲಾಗಿದೆ ಎನ್ನಲಾದ ಖಾಸಗಿ ಹೋಟೆಲ್ನಿಂದಲೂ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ ಎಂಬ ವಿವರಗಳು ಲಭ್ಯವಾಗಿವೆ. ಹೋಟೆಲ್ನಲ್ಲಿ ಪರೀಕ್ಷೆ ನಡೆಸಲು ವ್ಯವಸ್ಥೆ ಮಾಡಿದ್ದು ಯಾರು? ಅಭ್ಯರ್ಥಿಗಳನ್ನ ಅಲ್ಲಿಗೆ ಕರೆತಂದವರು ಯಾರು? ಪ್ರಶ್ನೆಪತ್ರಿಕೆ ಮತ್ತು ಒಎಂಆರ್ ಶೀಟ್ಗಳು ಹೇಗೆ ಲಭ್ಯವಾದವು? ಎಂಬ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ತನಿಖೆ ಮುಂದುವರಿದಿದೆ.
ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯದ ಮೇಲೆ ಅಕ್ರಮದ ಕರಿನೆರಳು!
ಸರ್ಕಾರಿ ಉದ್ಯೋಗದ ಕನಸಿನೊಂದಿಗೆ ಹಗಲಿರುಳು ಓದಿ ಪರೀಕ್ಷೆಗೆ ಸಿದ್ಧರಾಗುವ ಸಾವಿರಾರು ಅಭ್ಯರ್ಥಿಗಳ ನಡುವೆ ಇಂತಹ ನೇಮಕಾತಿ ಅಕ್ರಮದ ಆರೋಪಗಳು ಆತಂಕ ಮೂಡಿಸಿವೆ. ಅರ್ಹತೆ ಮತ್ತು ಪ್ರತಿಭೆಯ ಆಧಾರದ ಮೇಲೆ ನಡೆಯಬೇಕಾದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದ್ದರೆ, ಅದು ಪ್ರಾಮಾಣಿಕ ಅಭ್ಯರ್ಥಿಗಳಿಗೆ ದೊಡ್ಡ ಅನ್ಯಾಯವಾಗಲಿದೆ. ಸದ್ಯ ಇಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಹಾಗೂ ಸಂಬಂಧಪಟ್ಟವರ ಪಾತ್ರದ ಕುರಿತು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ. ತನಿಖೆಯ ಅಂತಿಮ ವರದಿಯಲ್ಲಿ ಅಕ್ರಮದ ವ್ಯಾಪ್ತಿ ಹಾಗೂ ಹೊಣೆಗಾರರ ಕುರಿತು ಹೆಚ್ಚಿನ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.