SOCIAL MEDIA

Newsletter

PARTNER SITES
Select Language Select State

ಬೇಲಿಯೇ ಎದ್ದು ಹೊಲ ಮೇಯ್ದ ಕಥೆ : KPSC ಹಗರಣದ ಜಾಡು ಹಿಡಿದು ಹೊರಟ ಇಡಿ ಸಿಕ್ತು ರಹಸ್ಯ ಚಾಟ್‌

ಕೆಪಿಎಸ್‌ಸಿ ಹಗರಣದ ಕರಾಳ ಮುಖಗಳು ಒಂದೊಂದಾಗಿ ಹೊರಬರುತ್ತಿದ್ದು, ಜಾರಿ ನಿರ್ದೇಶನಾಲಯದ (ED) ತನಿಖೆಯು ನೇಮಕಾತಿ ಅಕ್ರಮದ ಹಿಂದೆ ಇದ್ದ ದೊಡ್ಡ ಜಾಲವನ್ನು ಬಯಲು ಮಾಡಿದೆ. ಮಾಜಿ ಅಧ್ಯಕ್ಷರ ಪಿಎ ಹಾಗೂ ಮಾಜಿ ಸದಸ್ಯರ ನಡುವಿನ ವಾಟ್ಸಾಪ್ ಚಾಟಿಂಗ್ ರಹಸ್ಯಗಳು ಸ್ಫೋಟಗೊಂಡಿದ್ದು, ತನಿಖೆ ಮತ್ತಷ್ಟು ತೀವ್ರಗೊಂಡಿದೆ.

Written By Krishna NK
Published: Oct 10, 2026, 08:42 PM IST | Updated: Oct 10, 2026, 08:43 PM IST
Image Credit: KPSC Scam updates
Join

ಬೆಂಗಳೂರು: ಕೆಪಿಎಸ್‌ಸಿ (ಕರ್ನಾಟಕ ಲೋಕಸೇವಾ ಆಯೋಗ) ನೇಮಕಾತಿ ಅಕ್ರಮ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಜಾರಿ ನಿರ್ದೇಶನಾಲಯದ (ED) ತನಿಖೆಯು ಮತ್ತಷ್ಟು ಕರಾಳ ರಹಸ್ಯಗಳನ್ನು ಹೊರಹಾಕಿದೆ. ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಹಾಲಿ ಸದಸ್ಯೆ ಗೀತಾ ಬಂಧನದ ಬೆನ್ನಲ್ಲೇ, ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳ ಹಾಗೂ ಪ್ರಭಾವಿಗಳ ಕೈವಾಡದ ಬಲಾಢ್ಯ ಸಾಕ್ಷ್ಯಗಳು ಲಭ್ಯವಾಗಿವೆ.

ಪಿಎ ಮೋಹನ್ ಚಾಟಿಂಗ್ ರಹಸ್ಯದಿಂದ ಬೆಚ್ಚಿಬಿದ್ದ ಇ.ಡಿ ಅಧಿಕಾರಿಗಳು
ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಪಿಎ ಮೋಹನ್ ಕುಮಾರ್ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ವಶಪಡಿಸಿಕೊಂಡ ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ ಶಾಕಿಂಗ್ ವಿಚಾರಗಳು ಹೊರಬಿದ್ದಿವೆ. ಕೆಪಿಎಸ್‌ಸಿ ಮಾಜಿ ಸದಸ್ಯ ಹಾಗೂ ನಿವೃತ್ತ ಎಸಿಪಿ ದುಗ್ಗಪ್ಪ ಹಾಗೂ ಮೋಹನ್ ನಡುವಿನ ವಾಟ್ಸಾಪ್ ಚಾಟಿಂಗ್ ಹಿಸ್ಟರಿ ತನಿಖಾಧಿಕಾರಿಗಳ ಕೈಸೇರಿದೆ.

ಅಭ್ಯರ್ಥಿಯೊಬ್ಬರ ಅರ್ಜಿ ನಮೂನೆಯನ್ನು ದುಗ್ಗಪ್ಪ ಅವರು ಪಿಎ ಮೋಹನ್‌ಗೆ ವಾಟ್ಸಾಪ್ ಮೂಲಕ ಕಳುಹಿಸಿರುವುದು ಸಾಕ್ಷ್ಯ ಸಮೇತ ಪತ್ತೆಯಾಗಿದೆ. ಈ ಅಕ್ರಮ ವ್ಯವಹಾರಗಳು ಮತ್ತು ಡೀಲಿಂಗ್‌ಗಳು ಪಿಎ ಮೋಹನ್ ಮೂಲಕವೇ ನಡೆಯುತ್ತಿದ್ದವಾ ಎಂಬ ಗಂಭೀರ ಅನುಮಾನ ದಟ್ಟವಾಗಿದೆ.

ದುಗ್ಗಪ್ಪ ಪಾತ್ರದ ಮೇಲೆ ಅನುಮಾನದ ಕಾರ್ಮೋಡ
ಮಾಜಿ ಸದಸ್ಯ ದುಗ್ಗಪ್ಪ ಅವರು ಹಿಂದೆ ಪೊಲೀಸ್ ಇಲಾಖೆಯಲ್ಲಿ ಎಸಿಪಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಕೆಪಿಎಸ್‌ಸಿ ಸದಸ್ಯರಾಗಿ ನೇಮಕಗೊಂಡಿದ್ದರು. ಸಿಕ್ಕ ಅಧಿಕಾರ ಮತ್ತು ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು ಅವರು ಅಕ್ರಮವಾಗಿ ಹಣ ಸಂಪಾದನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಶೀಘ್ರದಲ್ಲೇ ಇ.ಡಿ ಅಧಿಕಾರಿಗಳು ದುಗ್ಗಪ್ಪ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಮುಂದುವರಿದ ವಿಚಾರಣೆ ಮತ್ತು ಹಗರಣದ ನಡುಕ
ಪ್ರಸ್ತುತ ಇ.ಡಿ ಕಸ್ಟಡಿಯಲ್ಲಿರುವ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಗೀತಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಸಿಕ್ಕಿರುವ ಸಾಕ್ಷ್ಯಾಧಾರಗಳು, ಅಭ್ಯರ್ಥಿಗಳು, ಪೋಷಕರು ಹಾಗೂ ಗ್ಯಾನೇಂದ್ರ ಮತ್ತು ಕನ್ನಾಳೆ ಅವರ ಹೇಳಿಕೆಗಳ ಆಧಾರದ ಮೇಲೆ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈಯುತ್ತಿದ್ದಾರೆ. ಈ ಹಗರಣದ ಆಳಕ್ಕೆ ಇಳಿಯುತ್ತಿದ್ದಂತೆ ಹೊರಬರುತ್ತಿರುವ ಕರಾಳ ಸತ್ಯಗಳು, ಅಕ್ರಮದ ಪಾಲುಂಡ ಮಿಕಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದು, ಮುಂದಿನ ಬಂಧನಗಳ ಭೀತಿ ಎದುರಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES