SOCIAL MEDIA

Newsletter

PARTNER SITES
Select Language Select State

ಜಿಪಂ, ತಾಪಂ ಚುನಾವಣೆಗೆ ಮೀಸಲಾತಿ ಅಂತಿಮ! 4,681 ಸ್ಥಾನಗಳ ಲೆಕ್ಕಾಚಾರ ಇಲ್ಲಿದೆ; ಯಾವ ವರ್ಗಕ್ಕೆ ಎಷ್ಟು ಕ್ಷೇತ್ರ?

ಕರ್ನಾಟಕದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗಿದ್ದು, ಒಟ್ಟು 4,681 ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. 30 ಜಿಲ್ಲಾ ಪಂಚಾಯಿತಿಗಳ 1,101 ಕ್ಷೇತ್ರಗಳು ಹಾಗೂ 234 ತಾಲೂಕು ಪಂಚಾಯಿತಿಗಳ 3,580 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

Written By Puttaraj K Alur
Published: Nov 25, 2026, 16:02 IST | Updated: Nov 25, 2026, 16:19 IST
Image Credit: Karnataka ZP Elections
Join

Karnataka ZP & TP Elections: ಕರ್ನಾಟಕದ ಗ್ರಾಮೀಣ ರಾಜಕೀಯದಲ್ಲಿ ಮತ್ತೆ ಚುನಾವಣಾ ಕಾವು ಹೆಚ್ಚಾಗಿದೆ. ಕಳೆದ ಹಲವು ವರ್ಷಗಳಿಂದ ಮುಂದೂಡಲ್ಪಟ್ಟಿದ್ದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ರಾಜ್ಯ ಸರ್ಕಾರ ಅಂತಿಮ ಮೀಸಲಾತಿ ಅಧಿಸೂಚನೆ ಪ್ರಕಟಿಸಿದೆ. 2027ರ ಜನವರಿಯಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಅಂತಿಮ ಮೀಸಲಾತಿ ಪಟ್ಟಿ ಹೊರಬಿದ್ದಿರುವುದರಿಂದ ರಾಜಕೀಯ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳ ಮೀಸಲಾತಿ ವಿವರಗಳನ್ನ ಪರಿಶೀಲಿಸುತ್ತಿದ್ದು, ಚುನಾವಣಾ ಸಿದ್ಧತೆ ಆರಂಭಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯನ್ನ ಹೊರತುಪಡಿಸಿ ರಾಜ್ಯದ 30 ಜಿಲ್ಲೆಗಳ ವ್ಯಾಪ್ತಿಯ 1,101 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ 234 ತಾಲೂಕು ಪಂಚಾಯಿತಿಗಳ 3,580 ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಒಟ್ಟಾರೆ 4,681 ಸ್ಥಾನಗಳಿಗೆ ಅಂತಿಮ ಮೀಸಲಾತಿ ಪ್ರಕಟವಾಗಿದೆ. ಪ್ರತಿಯೊಂದು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗೂ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ.

ಯಾವ ವರ್ಗಕ್ಕೆ ಎಷ್ಟು ಸ್ಥಾನಗಳು ಮೀಸಲು?

ಪ್ರಕಟಿತ ವರ್ಗವಾರು ವಿವರಗಳ ಪ್ರಕಾರ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಸ್ಥಾನಗಳ ಮೀಸಲಾತಿ ಹಂಚಿಕೆ ಹೀಗಿದೆ:

 ಮೀಸಲಾತಿ ವರ್ಗಜಿಲ್ಲಾ ಪಂಚಾಯಿತಿತಾಲೂಕು ಪಂಚಾಯಿತಿ
ಪರಿಶಿಷ್ಟ ಜಾತಿ (SC) 218  715
ಪರಿಶಿಷ್ಟ ಪಂಗಡ (ST)101389  
ಹಿಂದುಳಿದ ವರ್ಗ ಎ (OBC-A)178 498
ಹಿಂದುಳಿದ ವರ್ಗ ಬಿ (OBC-B)42108
ಸಾಮಾನ್ಯ ವರ್ಗ    562 1,870
ಒಟ್ಟು1,1013,580

ಈ ವರ್ಗವಾರು ಹಂಚಿಕೆಯ ಜೊತೆಗೆ ಪ್ರತಿ ವರ್ಗದಲ್ಲಿಯೂ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಹೀಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಸಾಮಾನ್ಯ ವರ್ಗಗಳಲ್ಲಿಯೂ ಮಹಿಳೆಯರಿಗೆ ಪ್ರತ್ಯೇಕ ಅವಕಾಶ ನಿಗದಿಯಾಗಿದೆ.

ಕ್ಷೇತ್ರವಾರು ಮೀಸಲಾತಿ ಹೇಗಿದೆ? ಕೆಲವು ಉದಾಹರಣೆಗಳು

ಅಂತಿಮ ಅಧಿಸೂಚನೆಯಲ್ಲಿ ಕ್ಷೇತ್ರಗಳ ಹೆಸರಿನೊಂದಿಗೆ ಮೀಸಲಾತಿ ವರ್ಗವನ್ನೂ ಪ್ರಕಟಿಸಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಪಂಚಾಯಿತಿಯ 17 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿವೆ. ಶಿಡ್ಲಘಟ್ಟದ ಕ್ಷೇತ್ರವಾರು ವಿವರಗಳಲ್ಲಿ ಸಾದಲಿ, ಬಶೆಟ್ಟಿಹಳ್ಳಿ, ದೊಡ್ಡತೇಕಹಳ್ಳಿ, ಪಲಿಚೇರ್ಲು ಮತ್ತು ಅಬ್ಲೂಡು ಕ್ಷೇತ್ರಗಳು ಸಾಮಾನ್ಯ ವರ್ಗಕ್ಕೆ ಸೇರಿವೆ. ಈ. ತಿಮ್ಮಸಂದ್ರ, ಮೇಲೂರು ಮತ್ತು ಚೀಮಂಗಲ ಕ್ಷೇತ್ರಗಳು ಪರಿಶಿಷ್ಟ ಜಾತಿ ಮಹಿಳೆ ವರ್ಗಕ್ಕೆ ಮೀಸಲಾಗಿವೆ. ದಿಬ್ಬೂರಹಳ್ಳಿ ಮತ್ತು ಹೊಸಪೇಟೆ ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿವೆ. ಗಂಜಿಗುಂಟೆ ಪರಿಶಿಷ್ಟ ಪಂಗಡಕ್ಕೆ, ಆನೂರು ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದೆ. ದೇವರಮಳ್ಳೂರು, ಹಂಡಿಗನಾಳ, ಭಕ್ತರಹಳ್ಳಿ ಮತ್ತು ಜಂಗಮಕೋಟೆ ಸಾಮಾನ್ಯ ಮಹಿಳೆ ವರ್ಗಕ್ಕೆ ಸೇರಿವೆ. ಕುಂಬಿಗಾನಹಳ್ಳಿ ಹಿಂದುಳಿದ ವರ್ಗ 'ಎ' ಮಹಿಳೆಗೆ ಮೀಸಲಾಗಿದೆ.

ಇನ್ನು ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ 28 ಕ್ಷೇತ್ರಗಳಿಗೂ ಪ್ರತ್ಯೇಕ ಮೀಸಲಾತಿ ಪ್ರಕಟವಾಗಿದೆ. ಕೋಡಂಬಹಳ್ಳಿ, ಮಳೂರು, ತಿಟ್ಟಮಾರನಹಳ್ಳಿ, ಶಿವನಹಳ್ಳಿ, ಐ.ಗೊಲ್ಲಹಳ್ಳಿ, ದೊಡ್ಡ ಮರಳವಾಡಿ, ಅಗಲಕೋಟೆ ಮತ್ತು ತಿಪ್ಪಸಂದ್ರ ಸಾಮಾನ್ಯ ವರ್ಗಕ್ಕೆ ಮೀಸಲಾಗಿವೆ. ವಿರೂಪಾಕ್ಷಿಪುರ, ಬೇವೂರು, ಸಾತನೂರು, ಕುದೂರು, ಕೈಲಾಂಚ ಮತ್ತು ಸುಗ್ಗನಹಳ್ಳಿ ಸಾಮಾನ್ಯ ಮಹಿಳೆ ವರ್ಗಕ್ಕೆ ಸೇರಿವೆ. ಅದೇ ಜಿಲ್ಲೆಯ ರಾಮನಗರ, ಮಾಗಡಿ, ಹಾರೋಹಳ್ಳಿ, ಚನ್ನಪಟ್ಟಣ ಮತ್ತು ಕನಕಪುರ ತಾಲೂಕು ಪಂಚಾಯಿತಿಗಳ ಕ್ಷೇತ್ರವಾರು ಮೀಸಲಾತಿಯನ್ನೂ ಪ್ರಕಟಿಸಲಾಗಿದೆ. ಈ ಕ್ಷೇತ್ರಗಳಲ್ಲಿ ಸಾಮಾನ್ಯ, ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ ಮತ್ತು ಬಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹಂಚಿಕೆ ಮಾಡಲಾಗಿದೆ.

ಮೀಸಲಾತಿ ಪ್ರಕಟವಾಗಿದ್ದು ಹೇಗೆ?

ಸರ್ಕಾರ ಈ ಹಿಂದೆ ಕರಡು ಮೀಸಲಾತಿ ಅಧಿಸೂಚನೆ ಪ್ರಕಟಿಸಿ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನ ಆಹ್ವಾನಿಸಿತ್ತು. ಸಲ್ಲಿಕೆಯಾದ ಆಕ್ಷೇಪಣೆಗಳನ್ನ ಪರಿಶೀಲಿಸಿದ ಬಳಿಕ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ. ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಸರ್ಕಾರದ ಜವಾಬ್ದಾರಿ ಮುಗಿದಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳ ಹಿಂದಿನ ಸದಸ್ಯರ ಅಧಿಕಾರಾವಧಿ 2022ರಲ್ಲೇ ಮುಕ್ತಾಯಗೊಂಡಿತ್ತು. ಕೆಲವು ಪಂಚಾಯಿತಿಗಳನ್ನ ಮೇಲ್ದರ್ಜೆಗೇರಿಸಿದ್ದು, ಕೆಲವು ಗ್ರಾಮ ಪಂಚಾಯಿತಿ ಪ್ರದೇಶಗಳು ನಗರಸಭೆ, ಪುರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿದ್ದರಿಂದ ಕ್ಷೇತ್ರಗಳ ಗಡಿ ಮರುವಿಂಗಡಣೆ ಮಾಡಬೇಕಾಗಿತ್ತು. ಈ ಕಾರಣಗಳಿಂದ ಚುನಾವಣೆ ವಿಳಂಬವಾಗಿತ್ತು.

ಇವಿಎಂ ಬದಲು ಮತಪತ್ರ ಬಳಕೆ

ಈ ಬಾರಿಯ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬದಲಿಗೆ ಮತಪತ್ರಗಳ ಮೂಲಕ ಮತದಾನ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ. ಇದಕ್ಕಾಗಿ ಸುಮಾರು ₹151 ಕೋಟಿ ವೆಚ್ಚದಲ್ಲಿ 1.20 ಲಕ್ಷ ಮತಪೆಟ್ಟಿಗೆಗಳನ್ನ ಖರೀದಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎಂಬ ಮಾಹಿತಿಯೂ ಪ್ರಕಟವಾಗಿದೆ.

ಚುನಾವಣಾ ಆಯೋಗದ ವೇಳಾಪಟ್ಟಿಗೆ ಕಾಯುವಿಕೆ

ಅಂತಿಮ ಮೀಸಲಾತಿ ಅಧಿಸೂಚನೆ ಪ್ರಕಟವಾಗಿರುವುದರಿಂದ ಇದೀಗ ಚುನಾವಣಾ ವೇಳಾಪಟ್ಟಿ ಪ್ರಕಟಿಸುವ ಜವಾಬ್ದಾರಿ ರಾಜ್ಯ ಚುನಾವಣಾ ಆಯೋಗದ ಮೇಲಿದೆ. 2027ರ ಜನವರಿಯಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಅಧಿಕೃತ ದಿನಾಂಕ, ವೇಳಾಪಟ್ಟಿ ಮತ್ತು ನೀತಿ ಸಂಹಿತೆ ಜಾರಿಗೆ ಸಂಬಂಧಿಸಿದ ಘೋಷಣೆಯನ್ನ ಆಯೋಗ ಮಾಡಬೇಕಿದೆ. ಒಟ್ನಲ್ಲಿ 4,681 ಸ್ಥಾನಗಳ ಮೀಸಲಾತಿ ಅಂತಿಮಗೊಂಡಿರುವುದರಿಂದ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ತಮ್ಮ ಕ್ಷೇತ್ರದ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳು ಸ್ಪರ್ಧೆಯ ಲೆಕ್ಕಾಚಾರ ಆರಂಭಿಸಿದ್ದು, ಇದೀಗ ಎಲ್ಲರ ಗಮನ ಚುನಾವಣಾ ಆಯೋಗದ ಮುಂದಿನ ಪ್ರಕಟಣೆಯತ್ತ ನೆಟ್ಟಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ZEENEWS TRENDING STORIES