ಕಾರ್ಮಿಕರ ವೇತನ ಪರಿಷ್ಕರಣೆಯೂ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರದ ನಾಲ್ಕೂ ಸಾರಿಗೆ ನಿಗಮಗಳ ಕಾರ್ಮಿಕ ಸರ್ಕಾರದ ವಿರುದ್ಧ ಸಮರ ಸಾರಲು ಸಜ್ಜಾಗಿದ್ದು, ಅಕ್ಟೋಬರ್ 07ರಂದು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸಲು ಸಜ್ಜಾಗಿದ್ದಾರೆ. ಸಾರಿಗೆ ನೌಕರರು ಅಕ್ಟೋಬರ್ 07ರಂದು ಧರಣಿ ಸತ್ಯಾಗ್ರಹ ನಡೆಸುತ್ತಿರುವುದೇಕೆ? ಸಾರಿಗೆ ನೌಕರರ ಅವರ ಮುಖ್ಯ ಬೇಡಿಕೆಗಳೇನು? ಎಂಬ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ಈ ಕುರಿತು ಮಾಹಿತಿ ನೀಡಿರುವ ಕ.ರಾ.ರ.ಸಾರಿಗೆ ನಿಗಮಗಳ ಕಾರಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಕಾರ್ಮಿಕರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ತನ್ನ ಏಕಪಕ್ಷೀಯ ಅಧಿಸೂಚನೆಯನ್ನು ತಿದ್ದುಪಡಿ ಮಾಡಿ ವೇತನ ಹೆಚ್ಚಳವನ್ನು 01.01.2024 ರಿಂದ ಶೇ. 15 ಕ್ಕಿಂತ ಜಾಸ್ತಿ ಏರಿಸಬೇಕು, 12 ತಿಂಗಳುಗಳ ಹಿಂಬಾಕಿ ವೇತನವನ್ನೂ ನೀಡಬೇಕು, ಹೀಗೆ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ದಿನಾಂಕ: 07.10.2026 ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ ಎಮದು ಮಾಹಿತಿ ನೀಡಿದೆ.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಕಾರ್ಮಿಕರು ಅಕ್ಟೋಬರ್ 7 ರಂದು ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸುವುದರಿಂದ ಆ ದಿನ ಬಸ್ ಸಂಚಾರ ಬಹುತೇಕ ಸ್ಥಗಿತವಾಗುವ ಸಾಧ್ಯತೆ ಇದೆ.
ಸಾರಿಗೆ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಧರಣಿ ಸತ್ಯಾಗ್ರಹದ ಬಗ್ಗೆ ಮಾಹಿತಿ ನೀಡಿರುವ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ ವತಿ ಅವರ ಪ್ರಮುಖ ಬೇಡಿಕೆಗಳನ್ನು ಉಲ್ಲೇಖಿಸಿವೆ.
ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳು ಈ ಕೆಳಕಂಡಂತಿವೆ:-
01. ವೇತನ ಪರಿಷ್ಕರಣೆ:
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಸಾರಿಗೆ ನೌಕರರಿಗೆ ಜಾರಿ ಆಗಬೇಕಾಗಿರುವ ವೇತನ ಪರಿಷ್ಕರಣೆಯನ್ನು 01.01.2024 ರಿಂದ ಅನ್ವಯವಾಗುವಂತೆ ರಾಜ್ಯ ಸರ್ಕಾರ ತನ್ನ ಆದೇಶಗಳನ್ನು ತಿದ್ದುಪಡಿ ಮಾಡುವುದು.
02. ವೇತನ ಹಿಂಬಾಕಿ ಪಾವತಿ:
ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ 2020 ರ ಸಾಲಿನ 12 ತಿಂಗಳ ವೇತನ ಹಿಂಬಾಕಿಯನ್ನು ಪಾವತಿಸುವುದು.
03. 15% ಗಿಂತಲೂ ಅಧಿಕ ವೇತನಕ್ಕೆ ಆಗ್ರಹ:
ರಾಜ್ಯ ಸರ್ಕಾರ ದಿನಾಂಕ: 18.02.2026 ಮತ್ತು 12.05.2026 ರಂದು ಏಕಪಕ್ಷೀಯವಾಗಿ ಹೊರಡಿಸಿರುವ ವೇತನ ಪರಿಷ್ಕರಣೆಯ ಆದೇಶದಲ್ಲಿ ತಿದ್ದುಪಡಿ ತಂದು, ನಮ್ಮ ಪರಿಷ್ಕೃತ ಬೇಡಿಕೆಯಂತೆ ಶೇ. 15 ಕ್ಕಿಂತ ಅಧಿಕ ಪ್ರಮಾಣದಲ್ಲಿ ವೇತನ ಹೆಚ್ಚಳ ಮಾಡುವುದು.
04. ಒಂದೇ ಕಂತಿನಲ್ಲಿ ವೇತನ ಹಿಂಬಾಕಿಗೆ ಆಗ್ರಹ:
ರಾಜ್ಯದ ಸಾರಿಗೆ ನೌಕರರಿಗೆ ಸುಮಾರು ರೂ. 1792.00 ಕೋಟಿಗಳಷ್ಟು ವೇತನ ಹಿಂಬಾಕಿ ನೀಡುವುದಾಗಿ ರಾಜ್ಯ ಸರ್ಕಾರವು 18.02.2026 ರ ಆದೇಶದಲ್ಲಿ ಒಪ್ಪಿಕೊಂಡಿದ್ದು, ಈ ವರೆಗೂ ಒಟ್ಟು ರೂ. 620.00 ಕೋಟಿಗಳನ್ನು ಮಾತ್ರ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಬಾಕಿ ರೂ. 1172.00 ಕೋಟಿಗಳನ್ನು ಒಂದೇ ಕಂತಿನಲ್ಲಿ ನೌಕರರಿಗೆ ಪಾವತಿಸಬೇಕು.
05. ಭತ್ಯೆ ಹೆಚ್ಚಳಕ್ಕೆ ಆಗ್ರಹ:
ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಮತ್ತಿತರ ನೌಕರರಿಗೆ ಹಾಲಿ ಇರುವ ಎಲ್ಲ ಮಾಸಿಕ/ ದಿನ ಭತ್ಯೆಗಳನ್ನೂ ಹೆಚ್ಚಿಸಬೇಕು.
06. ಉಚಿತ ವೈದ್ಯಕೀಯ ಚಿಕಿತ್ಸೆ:
ನಾಲ್ಕೂ ಸಾರಿಗೆ ನಿಗಮಗಳ ನೌಕರರು ಮತ್ತವರ ಕುಟುಂಬಗಳು ಉಚಿತವಾಗಿ ಹೊರರೋಗಿ ಹಾಗೂ ಒಳರೋಗಿ ವೈದ್ಯಕೀಯ ಚಿಕಿತ್ಸೆ ಪಡೆಯುವಂತಹ ಸೌಲಭ್ಯವನ್ನು ಕಲ್ಪಿಸಬೇಕು.
07. ನಿವೃತ್ತ ನೌಕರರಿಗೆ ಕೂಡಲೇ ಹಿಂಬಾಕಿ ಪಾವತಿಗೆ ಆಗ್ರಹ:
ನಾಲ್ಕೂ ಸಾರಿಗೆ ನಿಗಮಗಳ ನಿವೃತ್ತ ನೌಕರರಿಗೆ ಬಾಕಿ ಉಳಿಸಿಕೊಂಡಿರುವ ಪಿಎಫ್, ಗ್ರಾಚ್ಯುಟಿ, ತುಟ್ಟಿ ಭತ್ಯೆ ಹಿಂಬಾಕಿ, ಇತ್ಯಾದಿಗಳನ್ನು ಕೂಡಲೇ ಪಾವತಿಸಬೇಕು.
08. ಶಕ್ತಿ ಯೋಜನೆ ಬಾಬ್ತು ಸಂದಾಯಕ್ಕೆ ಆಗ್ರಹ:
ಸರ್ಕಾರ ನಾಲ್ಕೂ ಸಾರಿಗೆ ನಿಗಮಗಳಿಗೆ ಪಾವತಿ ಮಾಡಬೇಕಿರುವ ಶಕ್ತಿ ಯೋಜನೆಯ ಬಾಬ್ತು ಸುಮಾರು ಆರು ಸಾವಿರ ಕೋಟಿಗಳನ್ನು ತಕ್ಷಣವೇ ಸಂದಾಯ ಮಾಡಬೇಕು.
ಹೀಗೆ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಸಾರಿಗೆ ನೌಕರರು ಧರಣಿ ಸತ್ಯಾಗ್ರಹ ನಡೆಸಲು ಸಜ್ಜಾಗಿದ್ದಾರೆ. ಅಕ್ಟೋಬರ್ 7 ರಂದು ಬಸ್ ಸಂಚಾರ ಸ್ಥಗಿತವಾಗುತ್ತಾ...? ಸಾರಿಗೆ ನೌಕರರ ಬೇಡಿಕೆ ಈಡೇರದೆ ಇದ್ದಲ್ಲಿ ಬಸ್ ಸಂಚಾರ ಇರೋದಿಲ್ವಾ..? ಸಾರಿಗೆ ನೌಕರರ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಾ? ಎಂಬುದನ್ನು ಕಾದು ನೋಡಬೇಕಿದೆ.