2027ರ ರಜೆ ಪಟ್ಟಿ ರಿಲೀಸ್ ಎಷ್ಟು ದಿನ ರಜೆ ಸಿಗಲಿದೆ? ಇಲ್ಲಿದೆ ಹಬ್ಬ ಹರಿದಿನದ ಸಂಪೂರ್ಣ ವಿವರ
2027ನೇ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷದಲ್ಲಿ ಯಾವೆಲ್ಲಾ ದಿನ ರಜೆ ಸಿಗಲಿದೆ ಅನ್ನೋ ಕುತೂಹಲ ಸರ್ಕಾರಿ ನೌಕರರಿಗೆ ಇದ್ದೇ ಇರುತ್ತೆ.
karnataka government holidays list 2027: 2027ನೇ ವರ್ಷಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷದಲ್ಲಿ ಯಾವೆಲ್ಲಾ ದಿನ ರಜೆ ಸಿಗಲಿದೆ ಅನ್ನೋ ಕುತೂಹಲ ಸರ್ಕಾರಿ ನೌಕರರಿಗೆ ಇದ್ದೇ ಇರುತ್ತೆ. ಇದೀಗ ಕರ್ನಾಟಕ ಸರ್ಕಾರ 2027ನೇ ಸಾಲಿನ ಸರ್ಕಾರಿ ರಜೆಗಳ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 18 ಸಾರ್ವತ್ರಿಕ ರಜೆಗಳು, 19 ಪರಿಮಿತ ರಜೆಗಳನ್ನು ಘೋಷಿಸಲಾಗಿದೆ. ಹಾಗಾದ್ರೆ ಯಾವೆಲ್ಲಾ ದಿನ ರಜೆ ಇರಲಿದೆ? ಯಾವ ಹಬ್ಬಗಳಿಗೆ ಪ್ರತ್ಯೇಕ ರಜೆ ಇಲ್ಲ? ಕೊಡಗು ಜಿಲ್ಲೆಗೆ ಸಿಗಲಿರುವ ಸ್ಥಳೀಯ ರಜೆಗಳೇನು? ಸಂಪೂರ್ಣ ಮಾಹಿತಿ ಇಲ್ಲಿದೆ.
ಸಾರ್ವತ್ರಿಕ ರಜೆಗಳ ಜೊತೆಗೆ 19 ಪರಿಮಿತ ರಜೆಗಳನ್ನು ಸರ್ಕಾರ ಪ್ರಕಟಿಸಿದೆ. ಹೊಸ ವರ್ಷದ ದಿನ, ಮಧ್ವನವಮಿ, ಜುಮಾತ್-ಉಲ್-ವಿದಾ, ಶ್ರೀರಾಮನವಮಿ, ಬುದ್ಧ ಪೂರ್ಣಿಮೆ, ಶ್ರೀಕೃಷ್ಣ ಜನ್ಮಾಷ್ಟಮಿ, ವಿಶ್ವಕರ್ಮ ಜಯಂತಿ ಮತ್ತು ಕ್ರಿಸ್‌ಮಸ್ ಈವ್ ಸೇರಿದಂತೆ ಹಲವು ದಿನಗಳು ಈ ಪಟ್ಟಿಯಲ್ಲಿವೆ. ಇದರ ಜೊತೆಗೆ ವರಮಹಾಲಕ್ಷ್ಮಿ ವ್ರತ, ಸ್ವರ್ಣಗೌರಿ ವ್ರತ, ಋಗ್ ಉಪಾಕರ್ಮ, ಯಜುರ್ ಉಪಾಕರ್ಮ, ಅನಂತ ಪದ್ಮನಾಭ ವ್ರತ, ತುಲಾ ಸಂಕ್ರಮಣ ಹಾಗೂ ಹುತ್ತರಿ ಹಬ್ಬಗಳಿಗೂ ಪರಿಮಿತ ರಜೆ ನೀಡಲಾಗಿದೆ. ಸರ್ಕಾರಿ ನೌಕರರು ವರ್ಷದಲ್ಲಿ ಗರಿಷ್ಠ ಎರಡು ಪರಿಮಿತ ರಜೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಪೂರ್ವಾನುಮತಿ ಪಡೆದು ಬಳಸಿಕೊಳ್ಳಬಹುದು.
2027ರ ಸಾರ್ವತ್ರಿಕ ರಜಾದಿನಗಳು:
ಜನವರಿ 15ರಂದು ಮಕರ ಸಂಕ್ರಾಂತಿ, ಜನವರಿ 26ರಂದು ಗಣರಾಜ್ಯೋತ್ಸವ, ಮಾರ್ಚ್ 6ರಂದು ಮಹಾಶಿವರಾತ್ರಿ, ಮಾರ್ಚ್ 10ರಂದು ರಂಜಾನ್ ಹಾಗೂ ಮಾರ್ಚ್ 26ರಂದು ಗುಡ್ ಫ್ರೈಡೇ ರಜೆ ಇರಲಿದೆ. ಏಪ್ರಿಲ್ 7ರಂದು ಯುಗಾದಿ, ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ, ಮೇ 1ರಂದು ಕಾರ್ಮಿಕ ದಿನಾಚರಣೆ ಹಾಗೂ ಮೇ 17ರಂದು ಬಕ್ರಿದ್ ಅಂಗವಾಗಿ ರಜೆ ಘೋಷಿಸಲಾಗಿದೆ.
ಇನ್ನು ಜೂನ್ 16ರಂದು ಮೊಹರಂ ಕಡೆ ದಿನ, ಸೆಪ್ಟೆಂಬರ್ 4ರಂದು ವರಸಿದ್ಧಿ ವಿನಾಯಕ ವ್ರತ, ಸೆಪ್ಟೆಂಬರ್ 29ರಂದು ಮಹಾಲಯ ಅಮಾವಾಸ್ಯೆ, ಅಕ್ಟೋಬರ್ 2ರಂದು ಗಾಂಧಿ ಜಯಂತಿ, ಅಕ್ಟೋಬರ್ 15ರಂದು ವಾಲ್ಮೀಕಿ ಜಯಂತಿ, ಅಕ್ಟೋಬರ್ 28ರಂದು ನರಕ ಚತುರ್ದಶಿ ಹಾಗೂ ಅಕ್ಟೋಬರ್ 30ರಂದು ದೀಪಾವಳಿ ಹಬ್ಬಕ್ಕೆ ರಜೆ ಇರಲಿದೆ.
ನವೆಂಬರ್ 11ರಂದು ಕನ್ನಡ ರಾಜ್ಯೋತ್ಸವ ಹಾಗೂ ನವೆಂಬರ್ 16ರಂದು ಕನಕದಾಸ ಜಯಂತಿ ಅಂಗವಾಗಿ ಸಾರ್ವತ್ರಿಕ ರಜೆ ನೀಡಲಾಗಿದೆ.
ಭಾನುವಾರ ಮತ್ತು ಎರಡನೇ ಶನಿವಾರ ಬರುವ ಹಬ್ಬಗಳು:
ಇನ್ನು ಕೆಲವು ಪ್ರಮುಖ ಹಬ್ಬಗಳು ವಾರಾಂತ್ಯದ ರಜೆ ದಿನಗಳಂದೇ ಬರಲಿವೆ. ಏಪ್ರಿಲ್ 18ರಂದು ಮಹಾವೀರ ಜಯಂತಿ, ಮೇ 9ರಂದು ಬಸವೇಶ್ವರ ಜಯಂತಿ, ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಹಾಗೂ ಈದ್ ಮಿಲಾದ್, ಅಕ್ಟೋಬರ್ 10ರಂದು ವಿಜಯದಶಮಿ ಭಾನುವಾರದಂದು ಬರಲಿವೆ.
ಭಾನುವಾರ ಬಂದ ಹಬ್ಬಗಳಿಗೆ ಪ್ರತ್ಯೇಕ ರಜೆ ಇಲ್ಲ
ಇನ್ನು ಕೆಲವು ಪ್ರಮುಖ ಹಬ್ಬಗಳು ಭಾನುವಾರ ಹಾಗೂ ಶನಿವಾರದಂದು ಬರುತ್ತಿವೆ. ಹೀಗಾಗಿ ಅವುಗಳಿಗೆ ಪ್ರತ್ಯೇಕ ಸಾರ್ವತ್ರಿಕ ರಜೆ ಘೋಷಿಸಿಲ್ಲ.
- ಏಪ್ರಿಲ್ 18ರಂದು ಮಹಾವೀರ ಜಯಂತಿ
- ಮೇ 9ರಂದು ಬಸವೇಶ್ವರ ಜಯಂತಿ
- ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಮತ್ತು ಈದ್-ಮಿಲಾದ್
- ಅಕ್ಟೋಬರ್ 9ರಂದು ಮಹಾನವಮಿ ಮತ್ತು ಆಯುಧ ಪೂಜೆ
- ಅಕ್ಟೋಬರ್ 10ರಂದು ವಿಜಯದಶಮಿ
- ಡಿಸೆಂಬರ್ 25ರಂದು ಕ್ರಿಸ್‌ಮಸ್
ಕೊಡಗು ಜಿಲ್ಲೆಗೆ 3 ವಿಶೇಷ ರಜೆ
ಇನ್ನು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಮೂರು ಸ್ಥಳೀಯ ರಜೆಗಳನ್ನು ಘೋಷಿಸಲಾಗಿದೆ.
* ಸೆಪ್ಟೆಂಬರ್ 3 – ಕೈಲ್ ಮುಹೂರ್ತ
* ಅಕ್ಟೋಬರ್ 18 – ತುಲಾ ಸಂಕ್ರಮಣ
*ಡಿಸೆಂಬರ್ 13 – ಹುತ್ತರಿ ಹಬ್ಬ
ಶಿಕ್ಷಣ ಇಲಾಖೆಯ ರಜೆಗಳ ಪ್ರತ್ಯೇಕ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ.
ಮುಸ್ಲಿಂ ಹಬ್ಬಗಳ ದಿನಾಂಕಗಳು ಚಂದ್ರದರ್ಶನವನ್ನು ಅವಲಂಬಿಸಿರುವುದರಿಂದ, ದಿನಾಂಕಗಳಲ್ಲಿ ವ್ಯತ್ಯಾಸವಾದರೆ ಅದಕ್ಕೆ ಅನುಗುಣವಾಗಿ ರಜೆ ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ.ಒಟ್ಟಿನಲ್ಲಿ 2027ರ ರಜೆಗಳ ಪಟ್ಟಿ ಪ್ರಕಟವಾಗಿದ್ದು, ಸರ್ಕಾರಿ ನೌಕರರು ತಮ್ಮ ಪ್ರವಾಸ, ವೈಯಕ್ತಿಕ ಕೆಲಸ ಹಾಗೂ ಕುಟುಂಬದ ಕಾರ್ಯಕ್ರಮಗಳನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳಲು ಈ ಪಟ್ಟಿ ಸಹಕಾರಿಯಾಗಲಿದೆ.