SOCIAL MEDIA

Newsletter

PARTNER SITES
Select Language Select State

SIR ಮುಕ್ತಾಯ, ಅಂತಿಮ ಮತದಾರರ ಪಟ್ಟಿ ಪ್ರಕಟ : ನಿಮ್ಮ ವೋಟರ್ ಐಡಿ ಪಟ್ಟಿಯಲ್ಲಿದೆಯಾ? ಕೂಡಲೇ ಹೀಗೆ ಚೆಕ್ ಮಾಡಿ

ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಹಾಗೂ ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.. ನಿಮ್ಮ ಹೆಸರು ಇದೆಯೇ.. ಇಲ್ವಾ ಅಂತ ಇಂದೇ ಪರೀಕ್ಷಿಸಿ..

Written By Krishna NK
Published: Oct 27, 2026, 02:07 PM IST | Updated: Oct 27, 2026, 02:12 PM IST
Image Credit: karnataka voter
Join

ಬೆಂಗಳೂರು : ಕರ್ನಾಟಕದಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಹಾಗೂ ಪ್ರಮುಖ ಸುದ್ದಿಯೊಂದು ಹೊರಬಿದ್ದಿದೆ. ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಸಂಪೂರ್ಣಗೊಂಡಿದ್ದು, ಚುನಾವಣಾ ಆಯೋಗವು ಅಂತಿಮ ಮತದಾರರ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಈ ಹೊಸ ಪಟ್ಟಿಯ ಪ್ರಕಾರ, ರಾಜ್ಯದಲ್ಲಿ ಬರೋಬ್ಬರಿ 99.32 ಲಕ್ಷಕ್ಕೂ ಅಧಿಕ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ. ಇದರಿಂದಾಗಿ ರಾಜ್ಯದ ಒಟ್ಟು ಮತದಾರರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಪರಿಷ್ಕರಣೆಗೆ ಮುಂಚಿತವಾಗಿ ಕರ್ನಾಟಕದಲ್ಲಿ ಒಟ್ಟು 5.54 ಕೋಟಿ ಮತದಾರರಿದ್ದರು. ಆದರೆ, ಈಗ ಈ ಸಂಖ್ಯೆ ಗಣನೀಯವಾಗಿ ಕುಸಿದು 4,55,00,011ಕ್ಕೆ (ಸುಮಾರು 4.55 ಕೋಟಿ) ತಲುಪಿದೆ. ವಿಶೇಷವೆಂದರೆ, ಅಂತಿಮ ಪಟ್ಟಿಯ ಪ್ರಕಾರ ರಾಜ್ಯದಲ್ಲಿ 2.29 ಕೋಟಿ ಮಹಿಳಾ ಮತದಾರರಿದ್ದರೆ, 2.25 ಕೋಟಿ ಪುರುಷ ಮತದಾರರಿದ್ದಾರೆ. ಇದರೊಂದಿಗೆ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿರುವುದು ಗಮನಾರ್ಹ ಅಂಶವಾಗಿದೆ.

ಕೆಲ ಮತದಾರರ ಹೆಸರುಗಳನ್ನು ಕೈ ಬಿಡಲು ಕಾರಣ?
ಸ್ಥಳಾಂತರ: ಸುಮಾರು 80 ಲಕ್ಷಕ್ಕೂ ಹೆಚ್ಚು ಜನರು ತಾವು ಮೊದಲು ನಮೂದಿಸಿದ್ದ ವಿಳಾಸದಲ್ಲಿ ವಾಸವಿಲ್ಲದಿರುವುದು ಅಥವಾ ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿರುವುದು ಪತ್ತೆಯಾಗಿದೆ.
ಮೃತಪಟ್ಟವರು: ಸುಮಾರು 16.39 ಲಕ್ಷ ಮೃತ ವ್ಯಕ್ತಿಗಳ ಹೆಸರುಗಳನ್ನು ಪಟ್ಟಿಯಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
ನಕಲಿ ಹಾಗೂ ದ್ವಿಪ್ರತಿ ಮತಗಳು: ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿದ್ದವರು ಅಥವಾ ನಕಲಿ ದಾಖಲೆಗಳನ್ನು ನೀಡಿದ್ದ ಸುಮಾರು 7 ಲಕ್ಷಕ್ಕೂ ಅಧಿಕ ಮತದಾರರ ಹೆಸರುಗಳನ್ನು ರದ್ದುಗೊಳಿಸಲಾಗಿದೆ.
ಇತರ ಕಾರಣಗಳು: ಬಿಎಲ್‌ಒ (ಮತಗಟ್ಟೆ ಮಟ್ಟದ ಅಧಿಕಾರಿ) ಭೇಟಿ ನೀಡಿದಾಗ ಸಹಿ ಮಾಡಲು ನಿರಾಕರಿಸಿದವರು ಹಾಗೂ ನಿಖರ ದಾಖಲೆಗಳನ್ನು ಒದಗಿಸದವರ ಹೆಸರುಗಳನ್ನೂ ಸಹ ಕೈಬಿಡಲಾಗಿದೆ.

ನಿಮ್ಮ ಹೆಸರು ಪಟ್ಟಿಯಲ್ಲಿದೆಯಾ ಎಂದು ಪರಿಶೀಲಿಸುವುದು ಹೇಗೆ?
ಮುಂಬರುವ ದಿನಗಳಲ್ಲಿ ಬರುವ ಎಲ್ಲ ಚುನಾವಣೆಗಳಲ್ಲಿ ನಿಮ್ಮ ಮತದಾನದ ಹಕ್ಕನ್ನು ಚಲಾಯಿಸಲು, ನಿಮ್ಮ ಹೆಸರು ಪ್ರಸ್ತುತ ಅಂತಿಮ ಪಟ್ಟಿಯಲ್ಲಿದೆಯೇ ಎಂಬುದನ್ನು ಈಗಲೇ ಪರಿಶೀಲಿಸಿಕೊಳ್ಳುವುದು ತುಂಬಾ ಅವಶ್ಯಕ. ಇದನ್ನು ನೀವು ಮನೆಯಲ್ಲಿಯೇ ಕುಳಿತು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

ವೆಬ್‌ಸೈಟ್ ಮೂಲಕ: ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ವೆಬ್‌ಸೈಟ್ ಅಥವಾ ಚುನಾವಣಾ ಆಯೋಗದ ಪೋರ್ಟಲ್ಗೆ ಭೇಟಿ ನೀಡಿ ನಿಮ್ಮ ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಮತಗಟ್ಟೆಯ ಪಿಡಿಎಫ್ ಪಟ್ಟಿಯನ್ನು ಡೌನ್‌ಲೋಡ್ ಮಾಡಿ ಪರಿಶೀಲಿಸಬಹುದು.

ವೋಟರ್ ಐಡಿ ನಂಬರ್ ಮೂಲಕ: ವೋಟರ್ಸ್ ಇಸಿಐ ವೆಬ್‌ಸೈಟ್ ತೆರೆದು, ಅಲ್ಲಿರುವ 'Search in Electoral Roll' ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ ವೋಟರ್ ಐಡಿ ಕಾರ್ಡ್ ಸಂಖ್ಯೆ (EPIC No.) ಹಾಗೂ ಅಗತ್ಯ ವಿವರಗಳನ್ನು ನಮೂದಿಸುವ ಮೂಲಕ ನಿಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಕ್ಷಣಾರ್ಧದಲ್ಲಿ ಖಚಿತಪಡಿಸಿಕೊಳ್ಳಬಹುದು.

ಹೆಸರು ಡಿಲೀಟ್ ಆಗಿದ್ದರೆ ಏನು ಮಾಡಬೇಕು?
ಒಂದು ವೇಳೆ ನಿಮ್ಮ ಹೆಸರು ಅಥವಾ ನಿಮ್ಮ ಮನೆಯವರ ಹೆಸರು ಈ ಹೊಸ ಪಟ್ಟಿಯಿಂದ ಕೈಬಿಡಲ್ಪಟ್ಟಿದ್ದರೆ ಆತಂಕಪಡುವ ಅಗತ್ಯವಿಲ್ಲ. ಚುನಾವಣಾ ಆಯೋಗವು ಹೆಸರು ಮರುಸೇರ್ಪಡೆಗೆ ಮುಕ್ತ ಅವಕಾಶ ನೀಡಿದೆ. ನೀವು voters.eci.gov.in ವೆಬ್‌ಸೈಟ್ ಅಥವಾ 'Voter Helpline App' ಮೂಲಕ ಆನ್‌ಲೈನ್‌ನಲ್ಲಿ ನಮೂನೆ-6 (Form-6) ಭರ್ತಿ ಮಾಡಿ ಆಧಾರ್ ಕಾರ್ಡ್ ಹಾಗೂ ವಾಸಸ್ಥಳದ ದಾಖಲೆಗಳೊಂದಿಗೆ ಸಲ್ಲಿಸಬಹುದು. ಅಥವಾ ನೇರವಾಗಿ ನಿಮ್ಮ ಬಡಾವಣೆಯ ಬಿಎಲ್‌ಒ (BLO) ಅವರನ್ನು ಸಂಪರ್ಕಿಸಿಯೂ ಆಫ್‌ಲೈನ್ ಮೂಲಕ ಮರುನೋಂದಣಿಗೆ ಅರ್ಜಿ ಸಲ್ಲಿಸಬಹುದಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES