• हिन्दीEnglishमराठीবাংলাதமிழ்മലയാളംગુજરાતીతెలుగుಕನ್ನಡଓଡ଼ିଶାZ BharatPHHBusinessWION
  • facebookyoutubetwitterwhatsapp
Zee News Kannada
  • ಹೋಮ್‌
  • ವಿಡಿಯೋ
  • ಫೋಟೋಗ್ಯಾಲರಿ
  • ನಗರ

Add Zee Business As A Preferred Source
App
  • Live TV
  • ಕರ್ನಾಟಕ
  • ರಾಷ್ಟ್ರೀಯ
  • ಅಂತರಾಷ್ಟ್ರೀಯ
  • ಕ್ರೀಡೆ
  • ಮನರಂಜನೆ
  • ಯುಟಿಲಿಟಿ
  • ಧರ್ಮ
  • ಜ್ಯೋತಿಷ್ಯ
  • ಜೀ ನ್ಯೂಸ್ ಕನ್ನಡ
  • /ಕರ್ನಾಟಕ
  • /ಕ್ಷೇತ್ರ ಪುನರ್‌ವಿಂಗಡಣೆ: ಕರ್ನಾಟಕಕ್ಕೆ 336 ಶಾಸಕರು, 42 ಸಂಸದರು; ಜಿಲ್ಲಾವಾರು ಸಂಭಾವ್ಯ ಪಟ್ಟಿ ಇಲ್ಲಿದೆ!

ಕ್ಷೇತ್ರ ಪುನರ್‌ವಿಂಗಡಣೆ: ಕರ್ನಾಟಕಕ್ಕೆ 336 ಶಾಸಕರು, 42 ಸಂಸದರು; ಜಿಲ್ಲಾವಾರು ಸಂಭಾವ್ಯ ಪಟ್ಟಿ ಇಲ್ಲಿದೆ!

ಕರ್ನಾಟಕದಲ್ಲಿ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಜಾರಿಯಾದರೆ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 224ರಿಂದ 336ಕ್ಕೆ ಹಾಗೂ ಲೋಕಸಭಾ ಕ್ಷೇತ್ರಗಳು 28ರಿಂದ 42ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳು 28ರಿಂದ 53ಕ್ಕೆ ಹೆಚ್ಚಾಗಬಹುದು. ಮಹಿಳೆಯರಿಗೆ 112 ವಿಧಾನಸಭಾ ಹಾಗೂ 14 ಲೋಕಸಭಾ ಸ್ಥಾನಗಳು ಮೀಸಲಾಗುವ ಅಂದಾಜಿದೆ. ಆದರೆ ಇವೆಲ್ಲವೂ 2011ರ ಜನಗಣತಿ ಆಧಾರಿತ ಸಂಭಾವ್ಯ ಲೆಕ್ಕಾಚಾರವಾಗಿದ್ದು, ಅಂತಿಮ ನಿರ್ಧಾರ ಇನ್ನಷ್ಟೇ ಆಗಬೇಕಿದೆ.

Written ByPuttaraj K Alur
Published: Nov 29, 2026, 07:07 IST|Updated: Nov 29, 2026, 07:16 IST
joinshare
ಕ್ಷೇತ್ರ ಪುನರ್‌ವಿಂಗಡಣೆ: ಕರ್ನಾಟಕಕ್ಕೆ 336 ಶಾಸಕರು, 42 ಸಂಸದರು; ಜಿಲ್ಲಾವಾರು ಸಂಭಾವ್ಯ ಪಟ್ಟಿ ಇಲ್ಲಿದೆ!
Image Credit: Karnataka Delimitation

About the Author

Puttaraj K Alur

Puttaraj K Alur

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 
Read More

ಟ್ರೆಂಡಿಂಗ್

  • ಹೋಮ್‌
  • ಫೋಟೋಗಳು
  • ವಿಡಿಯೋ
ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ!  ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

ಈ ಸ್ಟಾರ್‌ ನಟಿ ಅಂದು ಟಾಯ್ಲೆಟ್ ಕ್ಲೀನರ್‌.. ಇಂದು 170 ಕೋಟಿ ರೂಪಾಯಿ ಒಡತಿ! ಒಂದೇ ಸಿನಿಮಾದಿಂದ ಬದುಕೇ ಚೇಂಜ್‌

2

ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ತಡೆಯಲು ಏನೆಲ್ಲಾ ಕ್ರಮ ಕೈಗೊಳ್ಳಬಹುದು? ಪ್ಲಾಟ್‌ಫಾರಂ ಡೋರ್ ಹೊರತುಪಡಿಸಿ ಇರುವ ಪರ್ಯಾಯಗಳೇನು?

3

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಪ್ಲಾಟ್‌ಫಾರಂ ಸ್ಕ್ರೀನ್ ಡೋರ್ ಅಳವಡಿಕೆಗೆ ತೇಜಸ್ವಿ ಸೂರ್ಯ ಆಗ್ರಹ!

4

ವಿಜಯ್ ಸೇತುಪತಿ ಕಾಲರ್ ಹಿಡಿದ ರಾಜ್ ಬಿ ಶೆಟ್ಟಿ

5

ಇಂದಿನಿಂದ ನಂದಿನಿ ಮೊಸರು ದರ ಇಳಿಕೆ; ಹೊಸ ಬೆಲೆ ಎಷ್ಟು ಗೊತ್ತಾ?

logo
  • contact us
  • privacy policy
  • legal
  • investor info
  • advertise with us
© 1998-2026 Indiadotcom Digital Private Limited, All Rights Reserved.

Karnataka Delimitation: ಕರ್ನಾಟಕದ ರಾಜಕೀಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆ ಎದುರಾಗಿದೆ. ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆ ಜಾರಿಯಾದರೆ ರಾಜ್ಯದ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯ 224 ಸದಸ್ಯ ಬಲ ಹೊಂದಿರುವ ಕರ್ನಾಟಕ ವಿಧಾನಸಭೆಯ ಸ್ಥಾನಗಳು 336ಕ್ಕೆ ಹೆಚ್ಚಾಗಬಹುದು. ಅದೇ ರೀತಿ ರಾಜ್ಯದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ 42ಕ್ಕೆ ಏರಿಕೆಯಾಗುವ ಸಂಭಾವ್ಯ ಲೆಕ್ಕಾಚಾರವನ್ನ ಪ್ರಕಟಿಸಲಾಗಿದೆ.

ಈ ಪ್ರಸ್ತಾವಿತ ಬದಲಾವಣೆಯಿಂದ ರಾಜ್ಯಕ್ಕೆ ಹೆಚ್ಚುವರಿಯಾಗಿ 112 ವಿಧಾನಸಭಾ ಕ್ಷೇತ್ರಗಳು ಹಾಗೂ 14 ಲೋಕಸಭಾ ಕ್ಷೇತ್ರಗಳು ಲಭ್ಯವಾಗುವ ಸಾಧ್ಯತೆಯಿದೆ. ವಿಶೇಷವೆಂದರೆ ರಾಜಧಾನಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ ಬರೋಬ್ಬರಿ 53ಕ್ಕೆ ಏರಿಕೆಯಾಗುವ ಅಂದಾಜಿದೆ. ಈ ಲೆಕ್ಕಾಚಾರ ಜಾರಿಯಾದರೆ ರಾಜ್ಯದ ರಾಜಕೀಯ ಸಮೀಕರಣದಲ್ಲಿಯೂ ಹಲವು ಬದಲಾವಣೆಗಳು ಸಂಭವಿಸಬಹುದು.

224ರಿಂದ 336ಕ್ಕೆ ವಿಧಾನಸಭಾ ಕ್ಷೇತ್ರಗಳು!

ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ 224 ಕ್ಷೇತ್ರಗಳಿವೆ. ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ ಅನ್ವಯ ಈ ಸಂಖ್ಯೆ 336ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ಅಂದರೆ ಈಗಿರುವ ಸ್ಥಾನಗಳಿಗೆ ಹೋಲಿಸಿದರೆ ಶೇ.50ರಷ್ಟು ಹೆಚ್ಚಳವಾಗಲಿದೆ. ಲೋಕಸಭಾ ಕ್ಷೇತ್ರಗಳ ಸಂಖ್ಯೆಯೂ 28ರಿಂದ 42ಕ್ಕೆ ಏರಿಕೆಯಾಗುವ ಅಂದಾಜಿದೆ. ಇದರೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸಲು ಅಗತ್ಯವಿರುವ ಬಹುಮತದ ಸಂಖ್ಯೆಯೂ ಬದಲಾಗಲಿದೆ. ಸದ್ಯ 224 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆಗೆ 113 ಶಾಸಕರ ಬೆಂಬಲ ಅಗತ್ಯವಿದೆ. ಆದರೆ ಸದಸ್ಯರ ಸಂಖ್ಯೆ 336ಕ್ಕೆ ಏರಿಕೆಯಾದರೆ ಬಹುಮತಕ್ಕೆ 169 ಶಾಸಕರ ಬೆಂಬಲ ಬೇಕಾಗುತ್ತದೆ. ಅಂದರೆ ಮ್ಯಾಜಿಕ್ ನಂಬರ್ 56 ಸ್ಥಾನಗಳಷ್ಟು ಹೆಚ್ಚಾಗಲಿದೆ.

ಬೆಂಗಳೂರಿಗೆ ಅತಿ ಹೆಚ್ಚು ಕ್ಷೇತ್ರಗಳ ಹೆಚ್ಚಳ!

ಪ್ರಸ್ತಾವಿತ ಕ್ಷೇತ್ರ ಹಂಚಿಕೆಯ ಲೆಕ್ಕಾಚಾರದಲ್ಲಿ ಬೆಂಗಳೂರು ನಗರ ಜಿಲ್ಲೆಗೆ ಹೆಚ್ಚಿನ ಸ್ಥಾನಗಳು ಸಿಗುವ ಸಾಧ್ಯತೆಯಿದೆ. ಪ್ರಸ್ತುತ 28 ವಿಧಾನಸಭಾ ಕ್ಷೇತ್ರಗಳನ್ನ ಹೊಂದಿರುವ ಬೆಂಗಳೂರು ನಗರಕ್ಕೆ ಹೊಸ ವ್ಯವಸ್ಥೆಯಲ್ಲಿ 53 ಕ್ಷೇತ್ರಗಳು ದೊರೆಯಬಹುದು. ಅಂದರೆ ಬರೋಬ್ಬರಿ 25 ಕ್ಷೇತ್ರಗಳು ಹೆಚ್ಚಾಗಲಿವೆ. ಇನ್ನು ಬೆಳಗಾವಿ ಜಿಲ್ಲೆಯಲ್ಲಿ 18ರಿಂದ 26ಕ್ಕೆ, ಮೈಸೂರು ಜಿಲ್ಲೆಯಲ್ಲಿ 11ರಿಂದ 17ಕ್ಕೆ, ತುಮಕೂರಿನಲ್ಲಿ 11ರಿಂದ 15ಕ್ಕೆ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವ ಅಂದಾಜಿದೆ. ಕಲಬುರಗಿ ಜಿಲ್ಲೆಯಲ್ಲಿ 9ರಿಂದ 14ಕ್ಕೆ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಒಟ್ಟಾಗಿ 9ರಿಂದ 13ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ. ವಿಜಯಪುರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತಲಾ 8ರಿಂದ 12ಕ್ಕೆ, ದಾವಣಗೆರೆಯಲ್ಲಿ 8ರಿಂದ 11ಕ್ಕೆ ಹಾಗೂ ರಾಯಚೂರಿನಲ್ಲಿ 7ರಿಂದ 11ಕ್ಕೆ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಸಂಭಾವ್ಯ ಲೆಕ್ಕಾಚಾರ ತಿಳಿಸುತ್ತದೆ.

ಯಾವ ಜಿಲ್ಲೆಗೆ ಎಷ್ಟು ಕ್ಷೇತ್ರಗಳು ಸಿಗಬಹುದು?

ಇತರ ಜಿಲ್ಲೆಗಳಲ್ಲಿಯೂ ವಿಧಾನಸಭಾ ಸ್ಥಾನಗಳ ಹೆಚ್ಚಳದ ಅಂದಾಜು ಪ್ರಕಟಿಸಲಾಗಿದೆ.

- ಬಾಗಲಕೋಟೆ: 7ರಿಂದ 10
- ಧಾರವಾಡ: 7ರಿಂದ 10
- ಮಂಡ್ಯ: 7ರಿಂದ 10
- ಹಾಸನ: 7ರಿಂದ 10
- ಶಿವಮೊಗ್ಗ: 7ರಿಂದ 10
- ಬೀದರ್: 6ರಿಂದ 9
- ಚಿತ್ರದುರ್ಗ: 6ರಿಂದ 9
- ಹಾವೇರಿ: 6ರಿಂದ 9
- ಕೋಲಾರ: 6ರಿಂದ 8
- ಉತ್ತರ ಕನ್ನಡ: 6ರಿಂದ 8
- ಕೊಪ್ಪಳ: 5ರಿಂದ 8
- ಚಿಕ್ಕಬಳ್ಳಾಪುರ: 5ರಿಂದ 7
- ಉಡುಪಿ: 5ರಿಂದ 6
- ಯಾದಗಿರಿ: 4ರಿಂದ 6
- ಚಿಕ್ಕಮಗಳೂರು: 5ರಿಂದ 6
- ರಾಮನಗರ: 4ರಿಂದ 6
- ಗದಗ: 4ರಿಂದ 6
- ಚಾಮರಾಜನಗರ: 4ರಿಂದ 6
- ಬೆಂಗಳೂರು ಗ್ರಾಮಾಂತರ: 4ರಿಂದ 5
- ಕೊಡಗು: 2ರಿಂದ 3

ಈ ಲೆಕ್ಕಾಚಾರದ ಪ್ರಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕ್ಷೇತ್ರಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಲೋಕಸಭಾ ಕ್ಷೇತ್ರಗಳು 28ರಿಂದ 42ಕ್ಕೆ!

ವಿಧಾನಸಭಾ ಕ್ಷೇತ್ರಗಳ ಜೊತೆಗೆ ಲೋಕಸಭಾ ಕ್ಷೇತ್ರಗಳ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದೆ. ಪ್ರಸ್ತುತ ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಪ್ರಸ್ತಾವಿತ ವ್ಯವಸ್ಥೆಯಲ್ಲಿ ಈ ಸಂಖ್ಯೆ 42ಕ್ಕೆ ಏರಿಕೆಯಾಗಬಹುದು. ಅಂದರೆ ರಾಜ್ಯಕ್ಕೆ ಹೆಚ್ಚುವರಿಯಾಗಿ 14 ಸಂಸದ ಸ್ಥಾನಗಳು ದೊರೆಯುವ ಅಂದಾಜಿದೆ. ದೊಡ್ಡ ಲೋಕಸಭಾ ಕ್ಷೇತ್ರಗಳನ್ನ ವಿಭಜಿಸಿ ಹೊಸ ಕ್ಷೇತ್ರಗಳನ್ನ ರಚಿಸುವ ಸಾಧ್ಯತೆ ಇದೆ. ಅದರಂತೆ ಬೆಂಗಳೂರು ಉತ್ತರದಿಂದ ಬೆಂಗಳೂರು ಉತ್ತರ ಮತ್ತು ಯಲಹಂಕ, ಬೆಂಗಳೂರು ಗ್ರಾಮಾಂತರದಿಂದ ಬೆಂಗಳೂರು ಗ್ರಾಮಾಂತರ ಮತ್ತು ಆನೇಕಲ್ ಕ್ಷೇತ್ರಗಳು ರೂಪುಗೊಳ್ಳುವ ಸಾಧ್ಯತೆಯಿದೆ.

ಅದೇ ರೀತಿ ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಕ್ಷೇತ್ರಗಳ ಬದಲಾಗಿ ಬೆಂಗಳೂರು ಪೂರ್ವ ಹಾಗೂ ಬೆಂಗಳೂರು ಪಶ್ಚಿಮ ಕ್ಷೇತ್ರಗಳು ರೂಪುಗೊಳ್ಳುವ ಅಂದಾಜಿದೆ. ಬೆಳಗಾವಿಯಿಂದ ಗೋಕಾಕ್, ಧಾರವಾಡದಿಂದ ಹುಬ್ಬಳ್ಳಿ ನಗರ ಮತ್ತು ಧಾರವಾಡ ಗ್ರಾಮೀಣ, ವಿಜಯಪುರದಿಂದ ಸಿಂದಗಿ, ಬಳ್ಳಾರಿಯಿಂದ ಹೊಸಪೇಟೆ, ಮೈಸೂರಿನಿಂದ ನಂಜನಗೂಡು, ತುಮಕೂರಿನಿಂದ ತಿಪಟೂರು, ಕಲಬುರಗಿಯಿಂದ ಶಹಾಪುರ ಹಾಗೂ ದಕ್ಷಿಣ ಕನ್ನಡದಿಂದ ಪುತ್ತೂರು ಹೊಸ ಲೋಕಸಭಾ ಕ್ಷೇತ್ರಗಳಾಗಿ ಹೊರಹೊಮ್ಮುವ ಸಾಧ್ಯತೆಯಿದೆ.

ಮಹಿಳೆಯರಿಗೆ 112 ವಿಧಾನಸಭಾ ಸ್ಥಾನ ಮೀಸಲು?

ಕ್ಷೇತ್ರ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಜಾರಿಗೆ ಬಂದರೆ ಮಹಿಳೆಯರ ರಾಜಕೀಯ ಪ್ರಾತಿನಿಧ್ಯದಲ್ಲಿಯೂ ಹೆಚ್ಚಳವಾಗುವ ಸಾಧ್ಯತೆಯಿದೆ. ಶೇ.33ರಷ್ಟು ಮಹಿಳಾ ಮೀಸಲಾತಿಯ ಲೆಕ್ಕಾಚಾರದ ಪ್ರಕಾರ, 336 ವಿಧಾನಸಭಾ ಕ್ಷೇತ್ರಗಳಲ್ಲಿ 112 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಲಿವೆ. ಅದೇ ರೀತಿ 42 ಲೋಕಸಭಾ ಕ್ಷೇತ್ರಗಳಲ್ಲಿ 14 ಸ್ಥಾನಗಳು ಮಹಿಳೆಯರಿಗೆ ಮೀಸಲಾಗುವ ಸಾಧ್ಯತೆಯಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲು ಕ್ಷೇತ್ರಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಗುವ ಅಂದಾಜಿದೆ. ಲೋಕಸಭೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಸ್ಥಾನಗಳು 5ರಿಂದ 7ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಸ್ಥಾನಗಳು 2ರಿಂದ 3ಕ್ಕೆ ಏರಿಕೆಯಾಗಬಹುದು.

ಇದು ಅಂತಿಮ ಪಟ್ಟಿ ಅಲ್ಲ!

ಈ ಕ್ಷೇತ್ರ ಮರುವಿಂಗಡಣೆಯ ಸಂಭಾವ್ಯ ಲೆಕ್ಕಾಚಾರವನ್ನ 2011ರ ಜನಗಣತಿಯ ಅಂಕಿ-ಅಂಶಗಳ ಆಧಾರದಲ್ಲಿ ರೂಪಿಸಲಾಗಿದೆ. ಜಿಲ್ಲೆಗಳ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರಗಳನ್ನ ಹಂಚಿಕೆ ಮಾಡಲು 'ಲಾರ್ಜೆಸ್ಟ್ ರಿಮೈಂಡರ್ ಮೆಥಡ್' ಬಳಸಲಾಗಿದೆ. ಆದರೆ ಈ ಪಟ್ಟಿಯನ್ನ ಅಂತಿಮ ಕ್ಷೇತ್ರ ಹಂಚಿಕೆ ಎಂದು ಪರಿಗಣಿಸುವಂತಿಲ್ಲ. ಕೇಂದ್ರ ಸರ್ಕಾರ ಅಧಿಕೃತವಾಗಿ ಕ್ಷೇತ್ರ ಮರುವಿಂಗಡಣೆ ಆಯೋಗವನ್ನ ರಚಿಸಿ, ಅಗತ್ಯ ಸಮೀಕ್ಷೆ ನಡೆಸಿ, ಗೆಜೆಟ್ ಅಧಿಸೂಚನೆ ಹೊರಡಿಸಿದ ಬಳಿಕವಷ್ಟೇ ಹೊಸ ಕ್ಷೇತ್ರಗಳ ಗಡಿ ಹಾಗೂ ಹೆಸರುಗಳು ಅಂತಿಮಗೊಳ್ಳಲಿವೆ. ಹೀಗಾಗಿ ಕರ್ನಾಟಕಕ್ಕೆ 336 ವಿಧಾನಸಭಾ ಕ್ಷೇತ್ರಗಳು, 42 ಲೋಕಸಭಾ ಕ್ಷೇತ್ರಗಳು ಹಾಗೂ ಬೆಂಗಳೂರಿಗೆ 53 ವಿಧಾನಸಭಾ ಸ್ಥಾನಗಳು ದೊರೆಯಲಿವೆ ಎಂಬುದು ಸದ್ಯದ ಸಂಭಾವ್ಯ ಲೆಕ್ಕಾಚಾರವಷ್ಟೇ.

Add Zee News as a Preferred Source
TAGS:
Karnataka Politics
Kannada News
BJP
Congress