ಕಾಂಗ್ರೆಸ್‌ಗೆ ಕುಬೇರಪ್ಪ ಶಾಕ್! ಅಹಿಂದ ಬಂಡಾಯ ಅಭ್ಯರ್ಥಿಯಾಗಿ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸ್ಪರ್ಧೆ
ಮುಂಬರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಆಘಾತ ಎದುರಾಗಿದೆ. ಪಕ್ಷದಲ್ಲಿ ಟಿಕೆಟ್ ಸಿಗದೇ ವಂಚಿತರಾದ ಹಿರಿಯ ನಾಯಕ ಕುಬೇರಪ್ಪ ಅವರು ಅಹಿಂದ ಸಂಘಟನೆಯ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಬಂಡಾಯದ ಬಾವುಟ ಹಾರಿಸಿದ್ದಾರೆ.. ಹೆಚ್ಚಿನ ಮಾಹಿತಿ ಇಲ್ಲಿದೆ..
ಧಾರವಾಡ: ಮುಂಬರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕಣ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದ್ದು, ಕಾಂಗ್ರೆಸ್‌ಗೆ ಬಿಗ್ ಶಾಕ್ ಎದುರಾಗಿದೆ. ಪಕ್ಷದ ಹಿರಿಯ ನಾಯಕ ಕುಬೇರಪ್ಪ ಅವರು ಕಾಂಗ್ರೆಸ್ ವಿರುದ್ಧವೇ ತೊಡೆತಟ್ಟಿ, ಅಹಿಂದ ಸಂಘಟನೆಯ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಮೋಹನ ಲಿಂಬಿಕಾಯಿ ವಿರುದ್ಧ ಕುಬೇರಪ್ಪ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಕೈ ಪಡಸಾಲೆಯಲ್ಲಿ ಭಾರಿ ಸಂಚಲನ ಮೂಡಿಸಿದೆ.
ಕಳೆದ ಚುನಾವಣೆಯಲ್ಲಿಯೂ ಪಕ್ಷದಿಂದ ಸ್ಪರ್ಧಿಸಿದ್ದ ಕುಬೇರಪ್ಪ ಅವರಿಗೆ ಈ ಬಾರಿಯೂ ಟಿಕೆಟ್ ನೀಡುವ ಭರವಸೆಯನ್ನು ಹೈಕಮಾಂಡ್ ನೀಡಿತ್ತು. ಆದರೆ ಕೊನೆ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದಾರೆ. ಈ ಕುರಿತು ಮಾತನಾಡಿದ ಕುಬೇರಪ್ಪ, "ಕಳೆದ ಬಾರಿ ಚುನಾವಣೆಗೆ ಸ್ಪರ್ಧಿಸಲು ಯಾರೂ ಮುಂದೆ ಬರಲಿಲ್ಲ. ಆಗ ಪಕ್ಷದ ನಾಯಕರೇ ನನ್ನ ಬಳಿ ಬಂದು ವಿನಂತಿಸಿಕೊಂಡು ಚುನಾವಣೆಗೆ ನಿಲ್ಲಿಸಿದ್ದರು. ಆದರೆ ಈಗ ಪಕ್ಷ ಅಧಿಕಾರದಲ್ಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರಿದ್ದರೂ ನನಗೆ ಟಿಕೆಟ್ ನಿರಾಕರಿಸಲಾಗಿದೆ" ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನಾಮಪತ್ರ ಹಿಂಪಡೆಯುವಂತೆ ಹಲವು ಸಚಿವರು ಹಾಗೂ ಶಾಸಕರು ಸ್ವತಃ ತಮ್ಮ ಮನೆಗೆ ಬಂದು ಮನವೊಲಿಸಲು ಯತ್ನಿಸಿದ್ದರು. ಅಷ್ಟೇ ಅಲ್ಲದೆ, ಸರ್ಕಾರದ ವಿವಿಧ ಹುದ್ದೆ ಅಥವಾ ಮಂಡಳಿ-ನಿಗಮಗಳಲ್ಲಿ ಸ್ಥಾನಮಾನ ನೀಡುವ ಆಶ್ವಾಸನೆಯನ್ನೂ ನೀಡಿದ್ದರು. ಆದರೆ ಮೂರು ತಿಂಗಳು ಕಳೆದರೂ ನೀಡಿದ ಮಾತು ಈಡೇರಲಿಲ್ಲ. ಇದರಿಂದ ಭ್ರಮನಿರಸನಗೊಂಡ ಕುಬೇರಪ್ಪ, ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ಹಾಗೂ ಪಕ್ಷಕ್ಕೆ ಬುದ್ಧಿ ಕಲ್ಪಿಸಲು ಚುನಾವಣಾ ಕಣಕ್ಕಿಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ಮೋಹನ ಲಿಂಬಿಕಾಯಿಗೆ ಮುಳುವಾಗುವ ಭೀತಿ: ಕುಬೇರಪ್ಪ ಅವರು ಚುನಾವಣಾ ಅಖಾಡದಲ್ಲೇ ಉಳಿದುಕೊಂಡರೆ, ಕಾಂಗ್ರೆಸ್ ಬೆಂಬಲಿತ ಮತಗಳು ವಿಭಜನೆಯಾಗುವ ಸಾಧ್ಯತೆ ದಟ್ಟವಾಗಿದೆ. ಇದು ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಗೆಲುವಿನ ಓಟಕ್ಕೆ ಬಹುದೊಡ್ಡ ಮುಳುವಾಗಲಿದೆ ಎಂಬ ಆತಂಕ ಕಾಂಗ್ರೆಸ್ ನಾಯಕರನ್ನು ಕಾಡುತ್ತಿದೆ. ಈ ಬಂಡಾಯದ ಬಿಸಿ ಮುಂಬರುವ ಮತದಾನದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.